ಮೈಸೂರು :  ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇ 1ರಿಂದ 8ರವರೆಗೆ ರಾಜ್ಯಾದ್ಯಂತ ಆಯೋಜಿಸಿರುವ ಬಿಜೆಪಿಯ 15  ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಮೇ 1ರ ಬೆಳಗ್ಗೆ 11ಕ್ಕೆ ಚಾಮರಾಜನಗರ ಜಿಲ್ಲೆಯ ಸಂತೆಮರಳ್ಳಿಯಲ್ಲಿ  ರ್ಯಾಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿರುವುದರಿಂದ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಶಕ್ತಿ ಬರಲಿದ್ದು, ಸಂತೇಮರಹಳ್ಳಿಯಲ್ಲಿ ಮೈಸೂರು ಭಾಗದ 20 ಕ್ಷೇತ್ರಗಳ ಅಭ್ಯರ್ಥಿಗಳು ರಾರ‍ಯಲಿಯಲ್ಲಿ ಪಾಲ್ಗೊಳ್ಳಲಿದ್ದು, 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಮೇ 1ರ ಮಧ್ಯಾಹ್ನ 3ಕ್ಕೆ ಉಡುಪಿಯಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಿ ಸಂಜೆ 6ಕ್ಕೆ ಚಿಕ್ಕೋಡಿಗೆ ತೆರಳಲಿದ್ದಾರೆ. ಮೇ 3ರ ಬೆಳಗ್ಗೆ 11ಕ್ಕೆ ಕಲಬುರಗಿ, ಮಧ್ಯಾಹ್ನ 3ಕ್ಕೆ ಬಳ್ಳಾರಿ, ಸಂಜೆ 6ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮೇ 5ರ ಬೆಳಗ್ಗೆ 11ಕ್ಕೆ ತುಮಕೂರು, ಮಧ್ಯಾಹ್ನ 3ಕ್ಕೆ ಶಿವಮೊಗ್ಗ ಮತ್ತು ಸಂಜೆ 6ಕ್ಕೆ ಗದಗ, ಮೇ 7ರ ಬೆಳಗ್ಗೆ 11ಕ್ಕೆ ರಾಯಚೂರು, ಮಧ್ಯಾಹ್ನ 3ಕ್ಕೆ ಚಿತ್ರದುರ್ಗ ಮತ್ತು ಸಂಜೆ 6ಕ್ಕೆ ಕೋಲಾರ ಹಾಗೂ ಮೇ 8 ಬೆಳಗ್ಗೆ 11ಕ್ಕೆ ವಿಜಯಪುರ, ಮಧ್ಯಾಹ್ನ 3ಕ್ಕೆ ಮಂಗಳೂರು ಮತ್ತು ಸಂಜೆ 6ಕ್ಕೆ ಬೆಂಗಳೂರಿನಲ್ಲಿ ನಡೆಯುವ ರಾರ‍ಯಲಿಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಿದ್ದರಾಮಯ್ಯಗೆ ಕನ್ನಡದ ಅರಿವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡದ ಅರಿವಿಲ್ಲ. ಬೆಳಗಾವಿಯಲ್ಲಿ ನನಗೆ ಮರಾಠಿ ಬರುವುದಿಲ್ಲ. ಕ್ಷಮಿಸಿ ಎಂದು ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ. ಸಿದ್ದರಾಮಯ್ಯ ಈ ಕೂಡಲೇ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಟೀಕಿಸಿದರು.

ಕಾಂಗ್ರೆಸ್‌ ಪಕ್ಷದವರಿಗೆ ‘ಪ್ರಣಾಳಿಕೆ’, ‘ಪ್ರನಾಳಿಕೆ’ ಪದಗಳಿಗೆ ವ್ಯತ್ಯಾಸವೇ ಗೊತ್ತಿಲ್ಲ. ಬೆಳಗಾವಿಯಲ್ಲಿ ನಿಂತು ಮರಾಠಿ ಪ್ರೇಮ ಮೆರೆಯುವ ಸಿದ್ದರಾಮಯ್ಯ ಅವರು ಕನ್ನಡ ಅಸ್ಮಿತೆ ಬಗ್ಗೆ ಮಾತನಾಡುತ್ತಾರೆ. ಇವರದ್ದು ಕೇವಲ ರಾಜಕೀಯಕ್ಕಾಗಿ ಕನ್ನಡ ಪ್ರೇಮ. ನಿಜವಾದ ಕನ್ನಡ ಪ್ರೇಮ ಇದ್ದಿದ್ದರೆ ಬೆಳಗಾವಿಯಲ್ಲಿ ಮರಾಠಿಗರ ಕ್ಷಮೆ ಕೇಳುತ್ತಿರಲಿಲ್ಲ. ರಾಜ್ಯದ ಜನರಿಗೆ ಸಿದ್ದರಾಮಯ್ಯ ಅವರ ಬೋಗಸ್‌ ಕನ್ನಡ ಪ್ರೇಮ ಅರ್ಥವಾಗಿದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯರಿಗೆ ಕನ್ನಡಿಗರೇ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಿಂದಿಯಲ್ಲಿ ಟ್ವೀಟ್‌ ಮಾಡಿದ್ದಕ್ಕೆ ಸಿದ್ದರಾಮಯ್ಯ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಟ್ವೀಟ್‌ ಮಾಡಿ ಎಂದು ಮರು ಟ್ವೀಟ್‌ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದೀಚಿಗೆ ಕನ್ನಡ ಅಸ್ಮಿತೆಯ ಬಗ್ಗೆ ಹೆಚ್ಚು ಒಲವನ್ನು ತೋರುತ್ತಿದ್ದಾರೆ. ಅವರಿಗೆ ಕನ್ನಡ ಹಾಗೂ ಇಂಗ್ಲಿಷ್‌ ಎರಡು ಭಾಷೆ ಸರಿಯಾಗಿ ಬರುವುದಿಲ್ಲ ಎಂದರು.

ರಮ್ಯಾಗೆ ಟಾಂಗ್‌:

ನಟಿ ರಮ್ಯಾ ಅವರು ವಿಜಯ್ ಮಲ್ಯ ಅವರನ್ನು ಟ್ವಿಟರ್‌ನಲ್ಲಿ ಒಳ್ಳೆಯ ವ್ಯಕ್ತಿ ಎಂದು ಹಾಡಿ ಹೊಗಳಿ, ನನ್ನನ್ನು ಹಾಂಗ್‌ಕಾಂಗ್‌ ಹಾಲಿಡೇಗೆ ಕಳುಹಿಸಿದ್ದೀರಿ. ನಿಮಗೆ ಥ್ಯಾಂಕ್ಯೂ ಎಂದಿದ್ದಾರೆ. ಅವರಿಂದ ಅನುಕೂಲ ಪಡೆದು ಅವರನ್ನು ಹೊಗಳುತ್ತಿರುವ ಇವರೆಂಥ ಕಾಂಗ್ರೆಸ್‌ ನಾಯಕಿ ಎಂದು ಟಾಂಗ್‌ ನೀಡಿರುವ ಅವರು, ಅವರದ್ದೆ ಯುಪಿಎ ಸರ್ಕಾರದಲ್ಲಿ ಕೊಳ್ಳೆ ಹೊಡೆದ ವಿಜಯ್‌ ಮಲ್ಯ ಅವರಿಗೆ ಒಳ್ಳೆಯ ವ್ಯಕ್ತಿ ಆಗುತ್ತಾರೆ. ಐಷಾರಾಮಿ ಬೋಟ್‌ನಲ್ಲಿ ಮಜಾ ಮಾಡುವ ಸಾಲಗಾರರು ಇವರಿಗೆ ಪ್ರಮಾಣಿಕರು. ಮೋದಿ ಬಂದ ಮೇಲೆ ಇವರಿಗೆಲ್ಲ ಭಯ ಶುರುವಾಗಿ ದೇಶ ಬಿಟ್ಟರು. ಭಾಷಣಗಳಲ್ಲಿ ಮಾತನಾಡುವ ಸಿದ್ದರಾಮಯ್ಯ ಅವರೇ ರಮ್ಯಾ ಟ್ವಿಟ್‌ ಬಗ್ಗೆ ಮಾತನಾಡಿ. ಊರಿಗೆಲ್ಲ ಬುದ್ಧಿ ಹೇಳುವ ರಮ್ಯಾ ಅವರಿಗೆ ಕಾಂಗ್ರೆಸ್‌ ಬುದ್ಧಿ ಹೇಳಲಿ ಎಂದು ಕಿಡಿಕಾರಿದರು.

ರಾಹುಲ್‌ ಮುತ್ತಜ್ಜನಿಂದ ಭ್ರಷ್ಟಾಚಾರ:

ಕಾಂಗ್ರೆಸ್‌ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಮೊದಲು ಹಗರಣ ಶುರುವಾಗಿದ್ದೆ ರಾಹುಲ… ಮುತ್ತಜ್ಜನಿಂದ. ಜೀಪ್‌ ಹಗರಣದಿಂದ 2ಜಿ ವರೆಗೂ ಹಗರಗಳು ಇವೆ. ಮೊದಲು ಈ ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ. ನಿಮ್ಮ ಯೋಗ್ಯ, ಯೋಗ್ಯತೆ ಜನಕ್ಕೆ ಗೊತ್ತಾಗುತ್ತದೆ. ಸಿದ್ದರಾಮಯ್ಯ ಹಾಗೂ ಅವರ ಪುತ್ರನ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಹೇಳಿ. ಮಾಟ್ರಿಕ್ಸ್‌ ಲ್ಯಾಬ್‌ಗಾಗಿ ಸಿಎಂ ಪುತ್ರನ ಆಸ್ಪತ್ರೆಗೆ ಟೆಂಡರ್‌ ನೀಡಲಾಗಿದೆ. ಹ್ಯೂಬ್ಲೆಟ್‌ ವಾಚ್‌ ಎಲ್ಲಿಂದ ಬಂತು ಎಂಬುದನ್ನು ಸಿಎಂ ಮೊದಲು ಹೇಳಲಿ ಎಂದು ಪ್ರಶ್ನಿಸಿದರು.