ಬೆಂಗಳೂರು/ ನವಲಗುಂದ :  ‘ಕಳೆದ ಲೋಕಸಭಾ ಚುನಾವಣೆ ವೇಳೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳುಹಿಸಿ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ ಅದೇ ದೇವೇಗೌಡರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿವೆ ಎಂಬುದಕ್ಕೆ ಇದೇ ಸಾಕ್ಷಿ.’ ‘ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಹಿರಿಯರಿಗೆ ಗೌರವ ನೀಡುವುದು ಕಾಂಗ್ರೆಸ್ಸಿಗೆ ಚೆನ್ನಾಗಿ ತಿಳಿದಿದೆ. ಹತ್ತಿ ಬಂದ ಏಣಿಗೆ ಗೌರವ ನೀಡುವುದನ್ನು ನೀವು ಮರೆಯಬೇಡಿ. ನೀವು ಅಡ್ವಾಣಿ  ಅವರನ್ನು ಹೇಗೆ ನಡೆಸಿಕೊಂಡರಿ ಎಂಬುದನ್ನು ಇಡೀ ದೇಶ ನೋಡಿದೆ.’

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೇವೇಗೌಡರನ್ನು ಗೌರವಯುತವಾಗಿ ಕಾಣುತ್ತಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ವಾಗ್ದಾಳಿಗೆ ಕಾಂಗ್ರೆಸ್ ನಾಯಕರು ನೀಡಿದ ತಿರುಗೇಟುಗಳಿವು.
ನಾನು ಕೂಡ ಕನ್ನಡಿಗ ಎನ್ನುವ ಪ್ರಧಾನಮಂತ್ರಿಯವರು ಕನ್ನಡ ನಾಡು, ನುಡಿ, ಜಲದ ವಿಷಯಕ್ಕೆ ಸ್ಪಂದಿಸುವುದಿಲ್ಲ. ಅವರ ತೋರಿಕೆಯ ಭಾಷಣಕ್ಕೆ ಕನ್ನಡಿಗರು ಮರುಳಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕಾವೇರಿ ನದಿ ನೀರು, ಮಹದಾಯಿ ವಿಚಾರ ಮತ್ತು ರಾಜ್ಯದ ರೈತರ ಸಾಲ ಮನ್ನಾ ಮಾಡುವ ವಿಷಯ ಬಂದಾಗ ನಾನು ಕನ್ನಡಿಗ ಎನ್ನುವ ಪ್ರಧಾನಿ ಮೋದಿ ಅವರು ಮೌನ ವಹಿಸುತ್ತಾರೆ. ಬರೀ ತೋರಿಕೆಗಾಗಿ ಮಾತನಾಡುವ ಪ್ರಧಾನಿಗಳು ಕರ್ನಾಟಕ ರಾಜ್ಯಕ್ಕೆ ರೈಲ್ವೆ ಯೋಜನೆಗಳಿಗೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರದ ಅನುದಾನ ನೀಡುವಲ್ಲಿ ತಾರತಮ್ಯ ಎಸಗಿದ್ದಾರೆ. ಅವರ ಮಾತು ಕೇವಲ ಭಾಷಣಕ್ಕಷ್ಟೇ ಸೀಮಿತ ಎಂಬುದು ನಾಡಿನ 6.50 ಕೋಟಿ ಜನರಿಗೆ ಮನದ ಟ್ಟಾಗಿದೆ ಎಂದಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಬರೀ ಬಹಿರಂಗ ಸಮಾವೇಶದಲ್ಲಿ ಮಾತ್ರ ಅಬ್ಬರಿಸಿ ಬೊಬ್ಬಿರಿದು ಮಾತನಾಡುತ್ತಾರೆ. ಸಂಸತ್ತಿನಲ್ಲಿ ಯಾವುದೇ ಸ್ಪಷ್ಟ ಹಾಗೂ ನಿಖರವಾದ ಉತ್ತರವನ್ನು ದೇಶದ ಜನತೆಗೆ ಕೊಡದೆ ನುಣುಚಿಕೊಳ್ಳುತ್ತಾರೆ. ದೇಶದ 4 ಕೋಟಿ ಕುಟುಂಬಕ್ಕೆ ವಿದ್ಯುತ್ ಒದಗಿಸಿದ್ದೇವೆ ಎನ್ನುವ ಪ್ರಧಾನಿ, ಉಳಿದ ಕುಟುಂಬಗಳಿಗೆ ವಿದ್ಯುತ್ ನೀಡಿದವರು ಯಾರು ಎಂಬುದನ್ನು ಮರೆಮಾಚುತ್ತಿದ್ದಾರೆ. ಪ್ರಧಾನಮಂತ್ರಿಗಳು ಜನತೆಗೆ ಸತ್ಯವನ್ನು ಹೇಳಲಿ ಎಂದು ವ್ಯಂಗ್ಯವಾಡಿದ್ದಾರೆ.