Asianet Suvarna News Asianet Suvarna News

ಪ್ರಜ್ವಲ್ ಮೌನ, ನಿಖಿಲ್ ದಿಢೀರ್ ಚುರುಕು!

ಹಾಸನ ಜಿಲ್ಲೆಯ ಪ್ರಚಾರದಲ್ಲೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿಲ್ಲ. ಅಷ್ಟರ ಮಟ್ಟಿಗೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಬ್ಬರೂ ಪಕ್ಷದ ಸ್ಟಾರ್ ಪ್ರಚಾರಕರು. ಆದರೆ, ನಿಖಿಲ್ ಮಾತ್ರ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸುತ್ತಿದ್ದರೆ, ಪ್ರಜ್ವಲ್ ಹಾಸನ ಬಿಟ್ಟು ಹೊರಗೆ ಕಾಲಿಡುತ್ತಿಲ್ಲ. 

NIkil Active and  Prajwal silent JDS Family Politics

ಬೆಂಗಳೂರು(ಮೇ.01): ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರಿನ ರಾಜಕೀಯ ಪ್ರವೇಶ ಕುರಿತ ಗೊಂದಲ ಮತ್ತೊಂದು ಹಂತದ ಅಸಮಾಧಾನಕ್ಕೆ ನಾಂದಿ ಹಾಡಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಬಲ ಆಕಾಂಕ್ಷೆ ಹೊಂದಿದ್ದ ಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ತನಗೆ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಹಾಸನ ಬಿಟ್ಟು ಬೇರೆಡೆ ಪ್ರಚಾರಕ್ಕೆ ತೆರಳದೆ ಮೌನಕ್ಕೆ ಶರಣಾಗಿದ್ದಾರೆ. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸುವ ಆಕಾಂಕ್ಷೆಯನ್ನೇ ಹೊಂದಿಲ್ಲದ ಮತ್ತೊಬ್ಬ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ದಿಢೀರನೆ ಕ್ರಿಯಾಶೀಲಗೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಕ್ಷದ ಪರ ಸಕ್ರಿಯ ಪ್ರಚಾರದಲ್ಲಿ ತೊಡಗಿರುವುದು ಕುತೂಹಲ ಮೂಡಿಸಿದೆ. ಪ್ರಜ್ವಲ್ ಈಗ ಮಾಧ್ಯಮಗಳ ಪ್ರತಿಕ್ರಿಯೆಗೂ ಸಿಗದೆ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. 
ಹಾಸನ ಜಿಲ್ಲೆಯ ಪ್ರಚಾರದಲ್ಲೂ ಹೆಚ್ಚಿಗೆ ಕಾಣಿಸಿಕೊಳ್ಳುತ್ತಿಲ್ಲ. ಅಷ್ಟರ ಮಟ್ಟಿಗೆ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ವಾಸ್ತವವಾಗಿ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಬ್ಬರೂ ಪಕ್ಷದ ಸ್ಟಾರ್ ಪ್ರಚಾರಕರು. ಆದರೆ, ನಿಖಿಲ್ ಮಾತ್ರ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸುತ್ತಿದ್ದರೆ, ಪ್ರಜ್ವಲ್ ಹಾಸನ ಬಿಟ್ಟು ಹೊರಗೆ ಕಾಲಿಡುತ್ತಿಲ್ಲ.

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬೆನ್ನಲ್ಲೇ ದೂರದ ರಾಯಚೂರು ಮತ್ತಿತರ ಜಿಲ್ಲೆಗಳಿಗೆ ತೆರಳಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಪ್ರಜ್ವಲ್ ಅವರು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ನಂತರ ಪಕ್ಷದ ಸಭೆ ಸಮಾರಂಭಗಳಿಂದ ಮಾಯವಾಗಿದ್ದಾರೆ. ದೂರದ ಊರುಗಳಿರಲಿ, ರಾಜಧಾನಿ ಬೆಂಗಳೂರಿನತ್ತಲೂ ಹೆಚ್ಚು ತಲೆ ಹಾಕುತ್ತಿಲ್ಲ. ಹಾಸನ ಜಿಲ್ಲೆಗೆ ಸೀಮಿತಗೊಳಿಸಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್‌ಗೆ ಈ ಬಾರಿ ಟಿಕೆಟ್ ನಿರಾಕರಿಸುವುದರ ಹಿಂದೆ ನಿಖಿಲ್‌ಗೆ ಹಿನ್ನಡೆ ಆಗಬಹುದೇನೊ ಎಂಬ ಆತಂಕ ಕುಟುಂಬದಲ್ಲಿ ಇದ್ದಿರಬಹುದು ಎಂಬ ಮಾತು ಜೆಡಿಎಸ್ ಪಾಳೆಯದಲ್ಲಿ ಕೇಳಿಬಂದಿತ್ತು. ಅಂದರೆ, ಪ್ರಜ್ವಲ್ ಮತ್ತು ನಿಖಿಲ್ ಪೈಕಿ ಯಾರೊಬ್ಬರೂ ಹಿಂದೆ ಮುಂದೆ ಆಗದಂತೆ ಸರಿದೂಗಿಸಿಕೊಂಡು ಮುನ್ನಡೆಯುವ ಪ್ರಯತ್ನ ನಡೆದಿತ್ತು. ಎಲ್ಲಿಯವರೆಗೆ ಸರಿದೂಗಿಸಿಕೊಳ್ಳಲಾಗಿದೆ ಎಂಬುದಕ್ಕೆ ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವುದೇ ಸಾಕ್ಷಿ.
ಚನ್ನಪಟ್ಟಣದಿಂದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರು ಅಭ್ಯರ್ಥಿಯಾಗಲು ತೀವ್ರ ಆಸಕ್ತಿ ಹೊಂದಿದ್ದರು.ಅದಕ್ಕಾಗಿ ಕ್ಷೇತ್ರದಲ್ಲಿ ಸಾಕಷ್ಟು ಬಾರಿ ಪ್ರವಾಸವನ್ನೂ ಕೈಗೊಂಡಿದ್ದರು. ಆದರೆ, ಅನಿತಾ ಅವರಿಗೆ ಟಿಕೆಟ್ ನೀಡಿದರೆ ಪ್ರಜ್ವಲ್‌ಗೂ ಟಿಕೆಟ್ ನೀಡಬೇಕಾಗುತ್ತದೆ ಎಂಬ ಬೇಡಿಕೆ ರೇವಣ್ಣ ಕುಟುಂಬದಿಂದ ಕೇಳಿಬಂದಿದ್ದರಿಂದ ಅಂತಿಮವಾಗಿ ಅನಿತಾಗೆ ಟಿಕೆಟ್ ನಿರಾಕರಿಸಲಾಯಿತು ಎಂದು ಮೂಲಗಳು ತಿಳಿಸಿವೆ. ದೇವೇಗೌಡರಿಗೆ ಮೊಮ್ಮಗ ಪ್ರಜ್ವಲ್‌ನನ್ನು ಲೋಕಸಭೆಗೆ ಕಳುಹಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಮುಂದುವರೆಸಬೇಕು ಎಂಬ ಆಶಯ ಆಸೆಯಿದ್ದರೂ ಒಂದು ಹಂತದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿ ಎಂಬ ಒಲವನ್ನೂ ಹೊಂದಿದ್ದರು.

ಆದರೆ, ಇದಕ್ಕೆ ಕುಮಾರಸ್ವಾಮಿ ಕುಟುಂಬ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ರಾಜರಾಜೇಶ್ವರಿ ನಗರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಸಾಕಷ್ಟು ಒತ್ತಡ ಹೇರಿದರೂ ಗೌಡರ ಕುಟುಂಬ ಪ್ರಜ್ವಲ್ ಸ್ಪರ್ಧೆಗೆ ಹಸಿರು ನಿಶಾನೆ ತೋರಲಿಲ್ಲ. ಅದರಾಚೆಗೆ ಪ್ರಜ್ವಲ್ ಯಾವುದೇ ಹೇಳಿಕೆ ನೀಡದೆ ತಮ್ಮ ಪಾಡಿಗೆ ತಾವು ಎಂಬಂತಾಗಿದ್ದಾರೆ.

Follow Us:
Download App:
  • android
  • ios