ಬೆಂಗಳೂರು (ಮೇ. 09):  ತನ್ನ ಅಧ್ಯಯನಕ್ಕೆ ಮೂರು ಲಕ್ಷ ರು. ಸಾಲ ಮಂಜೂರು ಮಾಡಲು ನೆರವಾಗಿದ್ದಕ್ಕಾಗಿ ಮಂಡ್ಯದ ಮುಸ್ಲಿಂ ಯುವತಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿ  ಅವರಿಗೆ ಕೃತಜ್ಞತೆ ಹೇಳಿದ್ದಲ್ಲದೆ, ಎರಡು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಪ್ರಸಂಗ ನಡೆದಿದೆ.

ಮಂಗಳವಾರ ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಸಮಾವೇಶದ ಆರಂಭಕ್ಕೂ ಮುನ್ನ ತನ್ನ ಪಾಲಕರೊಂದಿಗೆ ಆಗಮಿಸಿದ ಯುವತಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದಳು. ಮಂಡ್ಯ ನಗರದ ಅಬ್ದುಲ್ ಇಲಿಯಾಸ್ ಮತ್ತು ಸಬಿರಾ ಜಾನ್ ದಂಪತಿಯ ಪುತ್ರಿ ಬೇಬಿ ಸಾರಾ ಬಿ.ಕಾಂ. ನಲ್ಲಿ ಶೇ.84 ಅಂಕ ಗಳಿಸಿದ್ದಳು. ಹೆಚ್ಚಿನ ಅಧ್ಯಯನಕ್ಕಾಗಿ ಎಂಬಿಎ ಕೋರ್ಸ್ ಮಾಡುವುದಕ್ಕೆ ₹3 ಲಕ್ಷ ಬೇಕಾಗಿತ್ತು. ಇದಕ್ಕಾಗಿ ಕೆನರಾ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದರೂ ತಾಂತ್ರಿಕ ಕಾರಣದಿಂದ ಸಾಲ ಲಭ್ಯವಾಗಲಿಲ್ಲ. ನಂತರ ಪ್ರಧಾನಿಗೆ ಪತ್ರ ಬರೆದು ತಮ್ಮ ತಂದೆ ಮೈಶುಗರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರು ತಮ್ಮಂದಿರ ಜೊತೆ ವಿದ್ಯಾಭ್ಯಾಸ ಮಾಡಿದ್ದೇನೆ. ಎಂಬಿಎ ಅಧ್ಯಯನಕ್ಕಾಗಿ ಸಾಲ ಪಡೆ ಯಲು ಅರ್ಜಿ ಹಾಕಿದರೂ ಸಿಗಲಿಲ್ಲ. ಈ ವಿಷಯದಲ್ಲಿ ನೀವು ನೆರವು ನೀಡಬೇಕು ಎಂದು ಕೇಳಿದ್ದಳು.

ತಕ್ಷಣ ಪ್ರಧಾನಿ ಕಚೇರಿಯಿಂದ  ಕೆನರಾ ಬ್ಯಾಂಕ್‌ಗೆ ಸೂಚನೆ ರವಾನೆಯಾಗಿ ಸಾಲ ಮಂಜೂರಾಯಿತು.  ನಂತರ ಆಕೆ ಎಂಬಿಎ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿ ಇದೀಗ ಬೆಂಗಳೂರಿನ  ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‌ನಲ್ಲಿ (ಐಐಎಂಬಿ) ಕೆಲಸ ಗಿಟ್ಟಿಸಿಕೊಂಡಿದ್ದಾಳೆ.