ಮಹದಾಯಿ ಬಗ್ಗೆ ಮೌನ ಮುರಿದ ಪ್ರಧಾನಿ ಮೋದಿ

Modi Breaks Silence Over Mahadayi
Highlights

ಗದಗದಲ್ಲಿಂದು ಚುನಾವಣಾ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಹದಾಯಿ ವಿವಾದದ ಬಗ್ಗೆ ಮೌನ ಮುರಿದಿದ್ದಾರೆ. ಮಹದಾಯಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆಯೆಂದು ಮೋದಿ ಆರೋಪಿಸಿದ್ದಾರೆ.

ಗದಗ (ಮೇ.05) : ಗದಗದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಕೊನೆಗೂ ಮಹದಾಯಿ ಬಗ್ಗೆ ಮೌನ ಮುರಿದಿದ್ದಾರೆ. ಮಹದಾಯಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ರಾಜಕಾರಣ ಮಾಡುತ್ತಿದೆಯೆಂದು ಮೋದಿ ಆರೋಪಿಸಿದ್ದಾರೆ.

ಮಹದಾಯಿ ಹಿಂದೆ ಕಾಂಗ್ರೆಸ್’ನ ರಾಜಕಾರಣವನ್ನು ನಾನು ಬಿಚ್ಚಿಡುತ್ತೇನೆ. 2007ರಲ್ಲಿ ಗೋವಾ ವಿಧಾನಸಭೆಗೆ ಚುನಾವಣೆ ನಡೆದ ಸಂದರ್ಭದಲ್ಲಿ ಮತಗಳನ್ನು ಪಡೆಯುವ ಉದ್ದೇಶದಿಂದ ಕಾಂಗ್ರೆಸ್ ಅಧ್ಯಕ್ಷೆ ಗೋವಾ ಜನರನ್ನು ಮಹದಾಯಿ ನೀರಿಗಾಗಿ ಪ್ರಚೋದಿಸಿದ್ದರು. ಸಿದ್ದರಾಮಯ್ಯನವರೇ ನಿಮಗಿದು ಗೊತ್ತಿಲ್ಲ. ಏಕೆಂದರೆ 2007ರಲ್ಲಿ ನೀವು  ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ. ನಿಮಗೆ ಪಕ್ಷ ಬದಲಿಸುವುದು  ಹೊಸ ವಿಷಯವೇನಲ್ಲ, ಆ ಸಮಯದಲ್ಲಿ ನೀವು ಯಾವ ಪಕ್ಷದಲ್ಲಿದ್ರಿ ಎಂದು ಕೂಡಾ ನಿಮಗೆ ಗೊತ್ತಿರಲಿಕ್ಕಿಲ್ಲ, ಎಂದು ವಾಗ್ದಾಳಿ ನಡೆಸಿದ್ದಾರೆ.

ಗದಗ ಜನರನ್ನು ದಾರಿ ತಪ್ಪಿಸುವ ಮೊದಲು, ಸೋನಿಯಾ ಗಾಂಧಿ ನಿಲುವೇನು ಎಂದು ಸಿದ್ದರಾಮಯ್ಯ ಮೊದಲು ಕೇಳಬೇಕಿತ್ತು. ಕರ್ನಾಟಕಕ್ಕೆ ಮಹದಾಯಿ ನೀರು ಸಿಗಬಾರದೆಂದು ಸೋನಿಯಾ ಗಾಂಧಿ, 2007ರಲ್ಲಿ ಚುನಾವಣಾ ಭಾಷಣದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ರಾಜ್ಯದಲ್ಲಿ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಈ ವಿವಾದ ಬಗೆಹರಿಸಲು ಏನೂ ಮಾಡಿಲ್ಲ. ಇದೀಗ ಇಲ್ಲಿನ ಜನರನ್ನು ಪ್ರಚೋದಿಸುತ್ತಿದ್ದಾರೆ, ಎಂದು ಮೋದಿ ಹರಿಹಾಯ್ದಿದ್ದಾರೆ.

ಕುಡಿಯುವ ನೀರು ಎಲ್ಲರಿಗೆ ಬೇಕಾದುದ್ದು. ಆದುದರಿಂದ ಎಲ್ಲರೂ ಒಟ್ಟಿಗೆ ಕೂತು ಸೌಹಾರ್ದ ರೀತಿಯಲ್ಲಿ ಬಗೆಹರಿಸಲು ಬಿಜೆಪಿಯು ಬದ್ಧವಾಗಿದೆ, ಎಂದು ಮೋದಿ ಹೇಳಿದ್ದಾರೆ. 

 

 

loader