ತುಮಕೂರು(ಮೇ.05): ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಜೆಡಿಎಸ್ - ಕಾಂಗ್ರೆಸ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ. 
ಕಲ್ಪತರು ನಾಡು ತುಮಕೂರು ಪಟ್ಟಣದಲ್ಲಿ ಭಾಷಣ ಮಾಡಿದ ಅವರು, ಜೆಡಿಎಸ್ - ಕಾಂಗ್ರೆಸ್ ವಿರುದ್ಧ ಕೌಂಟರ್ ಶುರುವಿಟ್ಟುಕೊಂಡರು. ಜನರ ಮುಂದೆ ಸತ್ಯ ಹೇಳುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಧೈರ್ಯ ಬೇಕು. ಜೆಡಿಎಸ್ ಸಹಕಾರ ಪಡೆದು ಬಿಬಿಎಂಪಿಯಲ್ಲಿ ಕಾಂಗ್ರೆಸ್'ಗೆ ಮೇಯರ್ ಸ್ಥಾನ ಪಡೆದಿದೆ. ತುಮಕೂರಿನಲ್ಲಿ ಕಾಂಗ್ರೆಸ್ ಪಕ್ಷವು ಜೆಡಿಎಸ್ ದೋಸ್ತಿ ಬಗ್ಗೆ ತಿಳಿಸಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಒಳ ಒಪ್ಪಂದ ಮಾಡಿಕೊಂಡಿವೆ ಎಂದರು.
ನಿಮಗೆ ಆಶ್ಚರ್ಯ ಆಗಬಹುದು. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ನೆರವು ನೀಡುತ್ತಿದೆ. ಎಲ್ಲಾ ಸಮೀಕ್ಷೆಗಳಲ್ಲಿಯೂ ಜೆಡಿಎಸ್ ಪಕ್ಷಕ್ಕೆ ಮೂರನೇ ಸ್ಥಾನದ ಭಾಗ್ಯ. ಜೆಡಿಎಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಸೋಲಿಸಲು ಸಾಧ್ಯವೇ ಇಲ್ಲ. ಇಲ್ಲಿ ಸರ್ಕಾರ ರಚಿಸಲು ಬಿಜೆಪಿಯಿಂದ ಮಾತ್ರವೇ ಸಾಧ್ಯ ಎಂದರು.
ಮತ್ತೆ ಮಾಜಿ ಪ್ರಧಾನಿ ಬಗ್ಗೆ ಪ್ರಸ್ತಾಪ
ಮೋದಿ ಅಧಿಕಾರಕ್ಕೆ ಬಂದರೆ ನಾನು ಆತ್ಮಹತ್ಯೆಮಾಡಿಕೊಳ್ಳುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದರು. ದೇವೇಗೌಡರೇ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ.100 ವರ್ಷ ಬದುಕಬೇಕೆಂದು ನಾನು ದೇವೇಗೌಡರಿಗೆ ಹೇಳಿದ್ದೆ. ಜೆಡಿಎಸ್ ಹಾಗೂ ಬಿಜೆಪಿ ರಾಜಕಾರಣ ಏನೇ ಇರಬಹುದೆಂದು. ಲೋಕಸಭಾ ಚುನಾವಣಾ ಸಮಯದಲ್ಲೇ ನಾನು ದೇವೇಗೌಡರಿಗೆ ತಿಳಿಸಿದ್ದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಪ್ರಸ್ತಾಪಿಸಿದ ಅವರು, ಅವರ ಆಧಿಕಾರವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.