Asianet Suvarna News Asianet Suvarna News

ಧರ್ಮಯುದ್ಧದಲ್ಲಿ ಗೆಲ್ಲುವರೇ ಎಂ.ಬಿ ಪಾಟೀಲ್

ಸಚಿವ ಎಂ.ಬಿ. ಪಾಟೀಲ ಪ್ರತಿನಿಧಿಸುತ್ತಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಇದೀಗ ರಾಜ್ಯವೇ ಕುತೂಹಲದಿಂದ ಕಣ್ಣು ನೆಟ್ಟಿರುವ ಕ್ಷೇತ್ರಗಳಲ್ಲೊಂದು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಅವರನ್ನು ಸೋಲಿಸಲೇಬೇಕೆಂದು ಬಿಜೆಪಿ ಹಟಕ್ಕೆ ಬಿದ್ದಿದ್ದರೆ, ತಂತ್ರ ನಿಷ್ಫಲ ಗೊಳಿಸಲು ಕಾಂಗ್ರೆಸ್ ಪ್ರತಿತಂತ್ರ ಹೆಣೆಯುತ್ತಿದೆ. 

MB Patil Contest From Vijayapura

ರುದ್ರಪ್ಪ ಆಸಂಗಿ

ವಿಜಯಪುರ

ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಪ್ರತಿನಿಧಿಸುತ್ತಿರುವ ವಿಜಯಪುರ ಜಿಲ್ಲೆಯ ಬಬಲೇ ಶ್ವರ ಇದೀಗ ರಾಜ್ಯವೇ ಕುತೂಹಲದಿಂದ ಕಣ್ಣು ನೆಟ್ಟಿರುವ ಕ್ಷೇತ್ರಗಳಲ್ಲೊಂದು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ. ಪಾಟೀಲ ಅವರನ್ನು ಸೋಲಿಸಲೇಬೇಕೆಂದು ಬಿಜೆಪಿ ಹಟಕ್ಕೆ ಬಿದ್ದಿದ್ದರೆ, ಅದರ ತಂತ್ರ ನಿಷ್ಫಲ ಗೊಳಿಸಲು ಕಾಂಗ್ರೆಸ್ ಪ್ರತಿತಂತ್ರ ಹೆಣೆ ಯುತ್ತಿದೆ. ಜೆಡಿಎಸ್ ಬೆಂಬಲಿತ ಬಿಎಸ್‌ಪಿ ಅಭ್ಯರ್ಥಿ ನಾಮಪತ್ರಹಿಂತೆಗೆದುಕೊಂಡಿರುವುದರಿಂದ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ತಮ್ಮ ತಂದೆ ಬಿ.ಎಂ. ಪಾಟೀಲ್ ಅವರ ಅಕಾಲಿಕ ನಿಧನದಿಂದ  1991 ರಲ್ಲಿ ನಡೆದ ಉಪಚುನಾವಣೆ ಯಲ್ಲಿ ಗೆಲ್ಲುವ ಮೂಲಕ ಸಚಿವ ಎಂ.ಬಿ. ಪಾಟೀಲ್ ಅವರು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 

ನಂತರ 2004 ರಲ್ಲಿ ತಿಕೋಟಾ ಮತ ಕ್ಷೇತ್ರದಿಂದ ಪುನರಾಯ್ಕೆಗೊಂಡರು. ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಬಬಲೇಶ್ವರ ಕ್ಷೇತ್ರದಲ್ಲಿ ಸತತ ಎರಡು ಬಾರಿ ಎಂ.ಬಿ. ಪಾಟೀಲ ಆಯ್ಕೆಯಾಗಿದ್ದಾರೆ. ಈಗ ಮೂರನೇ ಬಾರಿಗೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ಷೇತ್ರಗಳಲ್ಲಿ ಕೆರೆ-ಕಟ್ಟೆಗಳಿಗೆ ನೀರು ತುಂಬಿ ರೈತರ ಜಮೀನುಗಳಿಗೆ ನೀರು ಒದಗಿಸಿರುವುದೇ ಕಾಂಗ್ರೆಸ್ ಅಭ್ಯರ್ಥಿ ಗೆಲುವಿನ ಮಂತ್ರಗಳಾಗಿವೆ. ಇದರ ಜತೆಗೆ ಎಲ್ಲ ಜಾತಿ, ಜನಾಂಗಗಳಿಗೆ ಸಮುದಾಯ ಭವನ ನಿರ್ಮಾಣ, ರಸ್ತೆ ಕಾಮಗಾರಿಗಳು, ಸರ್ಕಾರಿ  ಶಾಲೆಗಳಲ್ಲಿ ಡಿಜಿಟಲ್ ಕ್ಲಾಸ್ ರೂಂ, ಟಾಕಿಂಗ್ ಟ್ರೀ ವ್ಯವಸ್ಥೆ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಎಂ.ಬಿ. ಪಾಟೀಲ್ ಅಖಾಡಕ್ಕೆ ಇಳಿದಿದ್ದಾರೆ. 

ಪತ್ನಿ, ಪುತ್ರರು, ಸಹೋದರ, ಸಹೋದರಿ ಅಲ್ಲದೆ  ಅವರ ಅಪಾರ ಬೆಂಬಲಿಗರು ಹಗಲಿರುಳು ಶ್ರಮ ವಹಿಸಿ ಪ್ರಚಾರದಲ್ಲಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸಾಥ್ ನೀಡುತ್ತಿದ್ದಾರೆ. ಮತದಾರರು ಅಭಿವೃದ್ಧಿಗೆ ಸೈ ಎನ್ನುವುದಾದರೆ  ಸಚಿವ ಪಾಟೀಲ್ ಅವರ ಗೆಲುವಿನ ದಾರಿ ಸುಗಮವಾಗುತ್ತದೆ. ಜೆಡಿಎಸ್ ನಿಂದ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿರುವ ವಿಜುಗೌಡ ಪಾಟೀಲ ಇಲ್ಲಿ ಬಿಜೆಪಿ ಅಭ್ಯರ್ಥಿ. ಎರಡು ಬಾರಿ ಸೋತಿದ್ದಾರೆ ಎನ್ನುವ ಅನುಕಂಪ ಮತದಾರರ ಮೇಲೆ ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರ ವರ್ಚಸ್ಸು ಇಲ್ಲಿ ಕೆಲಸ ಮಾಡಲಿದೆ. 

ಲಿಂಗಾಯತರೇ ನಿರ್ಣಾಯಕರು: ಪಂಚಮಸಾಲಿ ಸಮುದಾಯಕ್ಕೆ ಸೇರಿದ ವಿಜುಗೌಡ ಪಾಟೀಲ ಅವರು ಕ್ಷೇತ್ರದಲ್ಲಿರುವ 37,000 ಪಂಚಮಸಾಲಿ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಸಚಿವ ಎಂ.ಬಿ. ಪಾಟೀಲ ಕೂಡು ಒಕ್ಕಲಿಗರಾಗಿದ್ದು, ಅವರ ಜಾತಿಯ ಮತಗಳು ಕೇವಲ 4,000ದಷ್ಟಿವೆ. ಆದರೆ ಅವರು ಕಾಂಗ್ರೆಸ್‌ನ ಸಾಂಪ್ರದಾಯಿಕ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಆಧರಿಸಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಈ ಸಲ ಎಂ.ಬಿ. ಪಾಟೀಲ ಅವರು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ನಡೆಸಿದ್ದರಿಂದಾಗಿ ವೀರಶೈವರ ಮತಗಳಲ್ಲಿ ಒಡಕುಂಟು ಆಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಇದು ಬಿಜೆಪಿ ಗೆಲುವಿನ ಅಂತರ ದೂರ ಮಾಡುವ ಸಾಧ್ಯತೆ ಇದೆ. 

ಆರೋಪ-ಪ್ರತ್ಯಾರೋಪ: ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಪರಸ್ಪರ ಆರೋಪ- ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಪಂಚ ಪೀಠಾಧೀಶರು ಧರ್ಮದ ಹೆಸರಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದ್ದಾರೆ ಎಂಬ ಆರೋಪ ಕಾಂಗ್ರೆಸ್ಸಿನಿಂದ ಕೇಳಿ ಬಂದಿದೆ. ಶ್ರೀಗಳ ಧಾರ್ಮಿಕ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದವರು ಅಡ್ಡಿಪಡಿಸುತ್ತಿದ್ದಾರೆ ಎಂದು ಬಿಜೆಪಿಗರು ಪ್ರತ್ಯಾರೋಪ ಮಾಡುತ್ತಿದ್ದಾರೆ. ಕನಮಡಿಯಲ್ಲಿ ಜಗದ್ಗುರುಗಳ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ್ದೂ 
ಆಗಿದೆ. ಸಚಿವ ಎಂ.ಬಿ. ಪಾಟೀಲ ಅವರೇ ಸ್ವತಃ ಪತ್ರಿಕಾಗೋಷ್ಠಿ ಕರೆದು ಚುನಾವಣೆ ಮುಗಿಯುವವರೆಗೆ ಶ್ರೀಗಳಿಗೆ ಕ್ಷೇತ್ರದಲ್ಲಿ ನಿರ್ಬಂಧ ವಿಧಿಸಲು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದನ್ನು ಮೀರಿ ಶ್ರೀಗಳು ಧರ್ಮದ ಹೆಸರಿನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಿದರೆ ತಮ್ಮಕಾರ್ಯಕರ್ತರು ತಕ್ಕ ಉತ್ತರ ನೀಡುತ್ತಾರೆ ಎಂಬ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಇದನ್ನು ಗಮನಿಸಿದರೆ ಇಲ್ಲಿ ಪಕ್ಷ, ವ್ಯಕ್ತಿಗಳಿಗಿಂತ ಧರ್ಮ ಯುದ್ಧ ಶುರುವಾದಂತೆ ಕಾಣುತ್ತದೆ. ಇದರ ಲಾಭವನ್ನೇ ಉಭಯ ಪಕ್ಷಗಳ ಅಭ್ಯರ್ಥಿಗಳೇ ಪಡೆದುಕೊಳ್ಳಲು ಹವಣಿಸುತ್ತಿದ್ದಾರೆ. 

ಕಣದಿಂದ ಹಿಂದೆ ಸರಿದ ಬಿಎಸ್ಪಿ: ಈ ಕ್ಷೇತ್ರದಲ್ಲಿ ಜೆಡಿಎಸ್-ಬಿಎಸ್ಪಿ ಚುನಾವಣೆ ಮೈತ್ರಿ ಮಾಡಿಕೊಂಡಿದ್ದರಿಂದಾಗಿ ಜೆಡಿಎಸ್ ಪಕ್ಷವು ಈ ಸ್ಥಾನವನ್ನು ಬಿಎಸ್ಪಿಗೆ ಬಿಟ್ಟು ಕೊಟ್ಟಿತ್ತು. ಆರಂಭದಲ್ಲಿ ಬಿಎಸ್ಪಿ ರಾಜ್ಯ ಪದಾಧಿಕಾರಿ ಧರ್ಮಣ್ಣ ತೋಂಟಾಪುರ ಅವರು ಕಣಕ್ಕಿಳಿಯಲು ಮುಂದಾಗಿದ್ದರು. ಆದರೆ ಬಿ ಫಾರಂ ಅವರಿಗೆ ಸಿಗಲಿಲ್ಲ. ಹೀಗಾಗಿ ತೋಂಟಾಪುರ ಸೇರಿದಂತೆ 11ಕ್ಕೂ ಹೆಚ್ಚು ಪದಾಧಿಕಾರಿಗಳು ಬಿಎಸ್ಪಿಗೆ ರಾಜೀನಾಮೆ ನೀಡಿದರು. ಆದರೆ ಬಿಎಸ್ಪಿಗೆ ಯಾವುದೇ ರೀತಿಯ ಸಂಬಂಧವಿಲ್ಲದ ವ್ಯಕ್ತಿ ಅಡಿವೆಪ್ಪ ಸಾಲಗಲ್ ಎಂಬುವರಿಗೆ ಬಿಎಸ್ಪಿ ಬಿ ಫಾರಂ ದೊರೆಯಿತು. ಅವರು ನಾಮಪತ್ರವನ್ನು ಸಲ್ಲಿಸಿದರು. ಆದರೆ ನಾಮಪತ್ರ ವಾಪಸ್ ಪಡೆದು ಕಣದಿಂದ ಹಿಂದೆ ಸರಿದರು. ಹೀಗಾಗಿ ಈಗ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಭಾರಿ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.

Follow Us:
Download App:
  • android
  • ios