ನಾನು ನಿಮಗೆ ವೋಟ್‌ ಹಾಕಲ್ಲ! : ಸಿದ್ದರಾಮಯ್ಯಗೆ ನೇರವಾಗಿ ಹೇಳಿದ ಹಳೆ ಶಿಷ್ಯ

Mariswamy Slam CM Siddaramaiah
Highlights

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವರ ಹಳೆಯ ಅನುಯಾಯಿ ನನ್ನ ವೋಟು ಜೆಡಿಎಸ್‌ಗೆ, ನಾನು ನಿಮಗೆ ವೋಟ್‌ ಹಾಕಲ್ಲ!ಎಂದು ಎಲ್ಲರ ಎದುರೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವರ ಹಳೆಯ ಅನುಯಾಯಿ ‘ನನ್ನ ವೋಟು ಜೆಡಿಎಸ್‌ಗೆ, ನಾನು ನಿಮಗೆ ವೋಟ್‌ ಹಾಕಲ್ಲ!’ ಎಂದು ಎಲ್ಲರ ಎದುರೇ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಗ್ರಾಮ ಪಂಚಾಯಿತಿ ಸದಸ್ಯ, ಹಳೆಕೆಸರೆಯ ಮರಿಸ್ವಾಮಿ ತರಾಟೆಗೆ ತೆಗೆದುಕೊಂಡ ಪರಿಗೆ ಮುಜುಗರಗೊಂಡ ಸಿದ್ದರಾಮಯ್ಯ ‘ನಿನ್ನಿಷ್ಟದಂತೆ ಮಾಡು, ನಿನ್ನನ್ನು ಮಾತನಾಡಿಸಿದ್ದೇ ತಪ್ಪಾಯ್ತು’ ಎಂದು ಹೇಳಿ ಮುಂದುವರಿದರು.

ಘಟನೆ ವಿವರ:

ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತೆರೆದ ವಾಹನದಲ್ಲಿ ಸಂಚರಿಸುತ್ತಾ ಪ್ರಚಾರ ಮಾಡುತ್ತಿದ್ದರು. ಹಳೆಕೆಸರೆಯಲ್ಲಿ ಸಿದ್ದರಾಮಯ್ಯ, ‘ಏಯ್‌ ಮರಿಸ್ವಾಮಿ ಲೀಡರ್‌ ಎಲ್ಲಿ ಕೈ ಎತ್ರಿ’ ಎಂದು ಕೂಗಿ ಕರೆದು ಮಾತನಾಡಿಸಿದರು. ಮರಿಸ್ವಾಮಿ ಕಾಣುತ್ತಿದ್ದಂತೆ ‘ಏನೋ ಕಾಂಗ್ರೆಸ್‌ ಬಿಟ್ಟು ಜೆಡಿಎಸ್‌ಗೆ ಹೋಗಿದ್ದಿಯ? ಬಿಜೆಪಿಯವರ ಜತೆ ಯಾಕೆ ಸೇರ್ಕೋತಿಯಾ?’ ಎಂದು ಸಲುಗೆಯಿಂದಲೇ ಮೈಕ್‌ ಹಿಡಿದೇ ಮಾತನಾಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮರಿಸ್ವಾಮಿ, ‘ನಾನು ಜೆಡಿಎಸ್‌ನಲ್ಲಿಯೇ ಇದ್ದೀನಿ, ನೀವೇ ಕಾಂಗ್ರೆಸ್‌ಗೆ ಹೋಗಿರೋದು’ ಎಂದು ಮಾರುತ್ತರ ಕೊಟ್ಟರು. ಮತ್ತೆ ಮಾತನಾಡಿದ ಸಿಎಂ, ‘ಮರಿಸ್ವಾಮಿ ಈಗ ನಾನು ಕಾಂಗ್ರೆಸ್‌. ಕಾಂಗ್ರೆಸ್‌ಗೆ ವೋಟ್‌ ಹಾಕು. ಬಿಜೆಪಿ-ಜೆಡಿಎಸ್‌ ಒಂದೇ ನಾಣ್ಯದ ಎರಡು ಮುಖಗಳು’ ಎಂದಾಗ, ‘ನೀವು ದಲಿತರನ್ನು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಮಾಡಲಿಲ್ಲ ಎಂದು ಗೊಣಗುತ್ತಲೇ ನಾನು ಜೆಡಿಎಸ್‌ಗೆ ವೋಟ್‌ ಹಾಕೋದು’ ಎಂದು ಪ್ರತಿಕ್ರಿಯಿಸಿದರು.

ಇದನ್ನು ಕೇಳಿಸಿಕೊಂಡ ಸಿದ್ದರಾಮಯ್ಯ ಸ್ವಲ್ಪ ಗರಂ ಆಗಿಯೇ, ‘ಆಯ್ತು ನಿನ್ನಿಷ್ಟಬಂದಂಗೆ ಮಾಡು. ಹೋಗಿ ಅಲ್ಲಿ ಉಪ ಮುಖ್ಯಮಂತ್ರಿ ಮಾಡಿಸ್ಕೊ. ಆಯ್ತು, ನಡಿ’ ಎಂದರು. ಈ ಮಾತು ಕೇಳಿಸಿಕೊಂಡು ಮುಖ ತಿರುಗಿಸಿದ ಮರಿಸ್ವಾಮಿ ‘ನಡಿ ಅನ್ನೋಕೆ ನೀನು ಯಾರು? ನಾನು ಇಲ್ಲಿರೋನು, ಹೋಗಿ ನೀವು...’ಎಂದು ತುಸು ಸಿಡುಕಿನಿಂದಲೇ ಪ್ರತಿಕ್ರಿಯಿಸಿದರು.

ಕೊನೆಗೆ ಸಿಎಂ ‘ನಿನ್‌ ಮಾತಾಡಿಸಿದ್ದೇ ತಪ್ಪಾಯ್ತು. ನೀವೆಲ್ಲಾ ವೋಟ್‌ ಮಾಡ್ರಪ್ಪ’ ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.

loader