ಶಿವಮೊಗ್ಗ : ಒಂದು ಕಾಲದಲ್ಲಿ ಸಮಾಜವಾದಿ ನೆಲವಾಗಿದ್ದ ಶಿವಮೊಗ್ಗ ಜಿಲ್ಲೆಯು ಈಗ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಪೈಪೋಟಿಯ ತಾಣವಾಗಿದೆ. ಈ ಬಾರಿ ಮೂರೂ ಪಕ್ಷಗಳಿಗೆ ಸಮಬಲದ ಗೆಲವು ನಿರೀಕ್ಷಿಸಲಾಗಿದೆ. ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ, ಸೊರಬದಲ್ಲಿ ಬಂಗಾರಪ್ಪ ಪುತ್ರರು, ಸಾಗರದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರ ಭವಿಷ್ಯ ನಿರ್ಧಾರವಾಗಲಿದೆ.

ಹೊನ್ನಾಳಿ ಚಂದ್ರಶೇಖರ್
ಭದ್ರಾವತಿ
: ಕಳೆದ ಮೂರು ದಶಕಗಳಿಂದ ವ್ಯಕ್ತಿ ಪ್ರತಿಷ್ಠೆ ಕ್ಷೇತ್ರವಿದು. ಪಕ್ಷ ಯಾವುದೇ ಇರಲಿ, ಪಕ್ಷೇತರರೇ ಆಗಿರಲಿ ಎಂ.ಜೆ. ಅಪ್ಪಾಜಿಗೌಡ ಹಾಗೂ ಬಿ.ಕೆ. ಸಂಗಮೇಶ್ವರ ಅವರ ನಡುವೆ ಸ್ಪರ್ಧೆ ಖಚಿತ. ಈ ಬಾರಿ ಎಂ.ಜೆ. ಅಪ್ಪಾಜಿಗೌಡ ಅವರು ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಸಿ.ಎಂ.ಇಬ್ರಾಹಿಂ ಅವರ ಕಾರಣದಿಂದ ಕಾಂಗ್ರೆಸ್ ಟಿಕೆಟ್ ವಂಚಿತರಾಗಿದ್ದ ಬಿ.ಕೆ.ಸಂಗಮೇಶ್ವರ, ಈ ಸಲ ಅದೇ ಪಕ್ಷದಿಂದ  ರ್ಧಿಸುತ್ತಿದ್ದಾರೆ. ಇಬ್ಬರೂ ರಾಜಕಾರಣದ ಕಾಲಚಕ್ರದಲ್ಲಿ ಮಾಗಿದ್ದಾರೆ. ಮೊದಲಿನ ಆಕ್ರಮಣಶೀಲತೆ ಕಡಿಮೆಯಾಗಿದೆ. ಆದರೆ ಕಾರ‌್ಯಕರ್ತರು, ಅಭಿಮಾನಿಗಳು ಅವರಿಂದ ಅದೇ ನಡವಳಿಕೆ ಬಯಸುತ್ತಿದ್ದಾರೆ. ಇನ್ನು ಬಿಜೆಪಿಯು ಹೊಸ ಅಭ್ಯರ್ಥಿ ಪ್ರವೀಣ್ ಪಟೇಲ್‌ರಿಗೆ ಪಕ್ಷ ಸೇರಿದ ಕೆಲವೇ ದಿನಗಳಲ್ಲಿ ಅಭ್ಯರ್ಥಿಯಾಗಿ ನಿಲ್ಲಿಸಿದೆ. ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರ ದಲ್ಲಿ ವಿಐಎಸ್‌ಎಲ್, ಎಂಪಿಎಂ ಕಾರ್ಖಾನೆಗಳು ಎಲ್ಲರಿಗೂ ರಾಜಕೀಯ ಅಸ್ತ್ರ


ಸೊರಬ : ಬಂಗಾರಪ್ಪ ಅವರ ಪರಂಪರೆ ಮುಂದುವರಿಸ ಬಯಸುವ ಅವರ ಇಬ್ಬರು ಪುತ್ರರು 4ನೇ ಬಾರಿ ಸೊರಬದಲ್ಲಿ  ಮುಖಾಮುಖಿಯಾಗಿದ್ದಾರೆ. ಇದುವರೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿರುತ್ತಿದ್ದ ಕುಮಾರ್ ಬಂಗಾರಪ್ಪ ಅವರು ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಮತ್ತೊಬ್ಬ ಪುತ್ರ ಹಾಲಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿ. ಅಭ್ಯರ್ಥಿ ಕೊರತೆ ಎದುರಿಸುತ್ತಿದ್ದ ಕಾಂಗ್ರೆಸ್ ಪಕ್ಷವು ಡಿಸೆಂಬರ್‌ನಲ್ಲಿ ಬಿಜೆಪಿ ತೊರೆದು ಪಕ್ಷ ಸೇರಿದ್ದ ರಾಜು ಎಂ.ತಲ್ಲೂರು ಅವರನ್ನು ಕಣಕ್ಕಿಳಿಸಿದೆ. ಈ ಬಾರಿ ಸೊರಬ ಜನತೆ ಅಭಿವೃದ್ಧಿ ವಿಷಯ ಪ್ರಮುಖವಾಗಿಟ್ಟುಕೊಂಡಿದ್ದಾರೆ. ಎಷ್ಟು ಬಾರಿ ಬಂಗಾರಪ್ಪ ಅವರ ಋಣ ತೀರಿಸಬೇಕು, ನಮಗೆ ಅಭಿವೃದ್ಧಿ ಬೇಕು ಎನ್ನುತ್ತಿದ್ದಾರೆ. ಅದಕ್ಕೆ ಮೂವರು ಅಭ್ಯರ್ಥಿಗಳಲ್ಲೂ ವಿಷಯಗಳಿವೆ. ಇಲ್ಲಿ ಈಡಿಗರೇ ಬಹುಸಂಖ್ಯಾತರು. ಲಿಂಗಾಯತರೂ ನಿರ್ಣಾಯಕರೇ. ಮಡಿವಾಳ, ಗಂಗಾಮತಸ್ಥರ ಸಂಖ್ಯೆಯೂ ಕಡಿಮೆ ಏನಿಲ್ಲ.

ತೀರ್ಥಹಳ್ಳಿ :  ಹಾಲಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್‌ಗೆ ಗೆಲವು ಪ್ರತಿಷ್ಠೆ, ಜೆಡಿಎಸ್‌ನ ಆರ್.ಎಂ. ಮಂಜುನಾಥ ಗೌಡರಿಗೆ ಗೆಲವು ಎಂಬುದು ಹಠ. ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಅವರಿಗೆ ಅಳಿವು-ಉಳಿವಿನ ಪ್ರಶ್ನೆ. ಹಾಗಾಗಿ ಮೂವರೂ ಗೆಲವಿನ ಕುದುರೆ ಏರಲು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ, ಗೆಲವಿನ ಹತ್ತಿರ ಬಂದು ಸೋತಿದ್ದ ಮಂಜುನಾಥ ಗೌಡರು ಈ ಬಾರಿ ‘ಸರ್ವ’ ಪ್ರಯತ್ನದಲ್ಲಿದ್ದಾರೆ. ಇನ್ನೆರಡು ಅಭ್ಯರ್ಥಿಗಳೂ ಹಿಂದೆ ಬಿದ್ದಿಲ್ಲ. ಮಂಜುನಾಥ ಗೌಡರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ನಡೆದಿದ್ದ ಅಡಮಾನ ಸಾಲ ಹಗರಣವನ್ನು ಎದುರಾಳಿಗಳು ಪ್ರಸ್ತಾಪಿಸುತ್ತಿದ್ದಾರೆ. ಅದಕ್ಕೆ ಪ್ರತಿಯಾಗಿ ಗೌಡರು ಕೇಸ್‌ನಲ್ಲಿ ತಾವಿಲ್ಲದಿರುವುದಕ್ಕೆ ದಾಖಲೆ ಇಡುತ್ತಿದ್ದಾರೆ. ಬೇರೆಲ್ಲಾ ಅಂಶಗಳಿಗಿಂತ ಇದೇ ಪ್ರಮುಖ ವಿಷಯವಾಗಿದೆ. ಒಕ್ಕಲಿಗ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಅವರೇ ನಿರ್ಣಾಯಕರು.

ಸಾಗರ : ಸ್ವತಂತ್ರ ಭಾರತ ಕಂಡ ೩ನೇ ಚುನಾವಣೆಯಿಂದಲೂ ರಾಜಕೀಯದಲ್ಲಿರುವ ಹಿರಿಯ ರಾಜಕಾರಣಿ ಹಾಲಿ ಶಾಸಕ ಕಾಗೋಡು ತಿಮ್ಮಪ್ಪ ಅವರೀಗ ಅಂತಿಮ ಕದನದಲ್ಲಿ ದಿಗ್ವಿಜಯ ಸಾಧಿಸುವ ತವಕದಲ್ಲಿದ್ದಾರೆ. ಬಿಜೆಪಿ ಟಿಕೆಟ್ ವಂಚಿತ ಅವರ ಸೋದರಳಿಯ ಬೇಳೂರು ಗೋಪಾಲಕೃಷ್ಣ ಅವರು ಕಾಂಗ್ರೆಸ್ ಸೇರಿ ಮಾವನ ಜತೆಯಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಜೋರಾಗಿ ಓಡುತ್ತಿದೆ. ಆದರೆ ಬೇಳೂರು ಅವರ ಜತೆಗಿದ್ದ ಎಲ್ಲರೂ ಕಾಂಗ್ರೆಸ್‌ಗೆ ಅವರನ್ನು ಹಿಂಬಾಲಿಸಿ ಹೋಗಿಲ್ಲ ಎನ್ನುವುದು ದಿಟ. ಹರತಾಳು ಹಾಲಪ್ಪ ಅವರು ಈಗಾಗಲೇ  ಗರ ಕ್ಷೇತ್ರದ ಭಾಗವೇ ಆಗಿರುವ ಹೊಸನಗರ ಕ್ಷೇತ್ರದಿಂದ ಒಮ್ಮೆ ಶಾಸಕರಾಗಿದ್ದವರು. ಈಡಿಗ ಸಮುದಾಯದ ನಾಯಕತ್ವಕ್ಕೆ ಈ ಮೂವರ ಹೋರಾಟ. ಈ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ ಪ್ರಬಲ ನೆಲೆಯನ್ನೇನೂ ಹೊಂದಿಲ್ಲ. ಈ ಪಕ್ಷದಿಂದ ವಕೀಲ ಗಿರೀಶ್ ಗೌಡ ಕಣದಲ್ಲಿದ್ದಾರೆ. ಯಾರಿಗೆ ಈಡಿಗರು ಒಲಿಯುತ್ತಾರೋ ಅವರಿಗೆ ಗೆಲವು ಖಚಿತ.

ಶಿವಮೊಗ್ಗ ಗ್ರಾಮೀಣ : ಮೀಸಲು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕಿ ಶಾರದಾ ಪೂರ‌್ಯಾನಾಯ್ಕ್ ಮರು ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ನ ಡಾ.ಶ್ರೀನಿವಾಸ್ ಎಸ್.ಕೆ. ಹಾಗೂ ಬಿಜೆಪಿಯ ಕೆ.ಬಿ. ಅಶೋಕ ನಾಯ್ಕ್ ಅವರು ಪೈಪೋಟಿ ಒಡ್ಡುತ್ತಿದ್ದಾರೆ. ದಿಢೀರ್ ಟಿಕೆಟ್ ಪಡೆದ ಡಾ. ಶ್ರೀನಿವಾಸ್ ಅವರು ಆರಂಭದಲ್ಲಿ ಪಕ್ಷದ ಇತರೆ ಆಕಾಂಕ್ಷಿಗಳಿಂದ ಭಾರಿ ಪ್ರತಿರೋಧ ಎದುರಿಸಿದರು. ಈ ಭಿನ್ನಮತ ಶಮನಕ್ಕೆ ರಾಹುಲ್ ಗಾಂಧಿಯೇ ಮಧ್ಯೆ ಪ್ರವೇಶಿಸಬೇಕಾಯಿತು. ಸದ್ಯ ಕಾಂಗ್ರೆಸ್‌ನಲ್ಲಿ ಶಾಂತಿ ನೆಲೆಸಿದೆ. ಇನ್ನು ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದಿರುವ ಬಿಜೆಪಿಯು ಈ ಬಾರಿ ಶಾರದಾ  ವರ ಸಮುದಾಯಕ್ಕೆ ಸೇರಿದವರೇ ಆದ ಅಶೋಕ ನಾಯ್ಕ್ ಅವರನ್ನು ಕಣಕ್ಕಿಳಿಸಿದೆ. ಪರಿಶಿಷ್ಟ ಮತಗಳ ಜತೆಗೆ ಯಡಿಯೂರಪ್ಪರ ನೆರವಿನಿಂದ ಲಿಂಗಾಯತ ಮತಗಳನ್ನೂ ಒಗ್ಗೂಡಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆದರೆ ಮೆದುಮಾತಿನ, ಸುಲಭವಾಗಿ ಸಿಗುವ ಶಾಸಕಿ ಎನಿಸಿಕೊಂಡಿರುವ ಶಾರದಾ ಅವರನ್ನು ಮಣಿಸಲು ಇಬ್ಬರು ಅಭ್ಯರ್ಥಿಗಳು ಬೆವರು ಹರಿಸಬೇಕಿದೆ. 

ಶಿಕಾರಿಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು 9 ನೇ ಬಾರಿ ಕಣಕ್ಕಿಳಿದಿರುವ ಕ್ಷೇತ್ರವಿದು. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿರುವ ಅವರನ್ನು ಅವರದೇ ನೆಲದಲ್ಲಿ ಶಿಕಾರಿ ಮಾಡಲು ಜೆಡಿಎಸ್‌ನ ಎಚ್.ಟಿ. ಬಳಿಗಾರ್, ಕಾಂಗ್ರೆಸ್ ಅಭ್ಯರ್ಥಿ ಗೋಣಿ ಮಾಲತೇಶ್ ಶ್ರಮ ಪಡುತ್ತಿದ್ದಾರೆ.  ಒಮ್ಮೆ ಮಾತ್ರ ಸೋತಿರುವ ಯಡಿಯೂರಪ್ಪ 1983 ರಿಂದ ಆಯ್ಕೆಯಾಗುತ್ತಿದ್ದಾರೆ. ಪ್ರಯಾಸದ ಗೆಲವು, ಭರ್ಜರಿ ಗೆಲವಿನ ಅನುಭವಗಳು ಒಮ್ಮೊಮ್ಮೆ ಆಗಿವೆ. ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಹಣೆಪಟ್ಟಿ ಇದ್ದಾಗಲೆಲ್ಲಾ ನಿರಾತಂಕವಾಗಿ ಗೆದ್ದಿದ್ದಾರೆ. ಈ ಬಾರಿಯೂ ಅದೇ ಟ್ರಂಪ್ ಕಾರ್ಡ್. ಕಾಲಿಗೆ ಚಕ್ರ ಕಟ್ಟಿಕೊಂಡು ಇಡೀ ರಾಜ್ಯ ಸುತ್ತುತ್ತಿರುವ ಅವರು ಈ ಬಾರಿ ಕ್ಷೇತ್ರದ  ಜವಾಬ್ದಾರಿಯನ್ನು ಪುತ್ರ ಬಿ.ವೈ. ರಾಘವೇಂದ್ರರಿಗೆ ಬಿಟ್ಟಿದ್ದಾರೆ. ಯಡಿಯೂರಪ್ಪ ವಿರೋಧಿ ಮತಗಳು ಒಗ್ಗೂಡಿದರಷ್ಟೇ ಅವರಿಗೆ ಕಷ್ಟ. ಆದರೆ ಅಂತಹ ಸಂದರ್ಭ ಕಡಿಮೆ. ಅಂತಹದ್ದೊಂದು ಸನ್ನಿವೇಶಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಶ್ರಮಿಸುತ್ತಿವೆ.


ಶಿವಮೊಗ್ಗ : ಎಲ್ಲರ ಗಮನ ಸೆಳೆದಿರುವ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಜಾತಿಯೇ ಪ್ರಮುಖ ಅಜೆಂಡಾ ಆಗಿದೆ. ಜತೆಗೆ ಅಭಿವೃದ್ಧಿಯ  ಅಂಶಗಳೂ ಇವೆ. ವಿಪ್ರ ಹಾಗೂ ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ವಿಪ್ರ ನೇತಾರರನ್ನು ಕರೆಸಿ ತಮ್ಮ ಪರ ಬೆಂಬಲಕ್ಕೆ ವೇದಿಕೆ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿಯ ಸಾಂಪ್ರದಾಯಿಕ ಮುಖವನ್ನು ಮುಂದಿಡುತ್ತಿದ್ದಾರೆ.ಅವಕಾಶ  ಕ್ಕಾಗಲೆಲ್ಲಾ ಗೋಹತ್ಯೆ ನಿಷೇಧ ಕಾಯ್ದೆ ಚರ್ಚೆಯನ್ನು ನಡೆಸುತ್ತಿದ್ದಾರೆ. ಮುಸ್ಲಿಂ ಮತಗಳು ಒಟ್ಟಾಗಿರುವ ಮುನ್ಸೂಚನೆ ಸಿಗುತ್ತಿದೆ. ಆದರೆ ಯಡಿಯೂರಪ್ಪ ಅವರು ಸಭೆ ನಡೆಸಿದ ನಂತರವೂ ಲಿಂಗಾಯತ ಮತಗಳ ನಡೆ ಇನ್ನೂ ನಿಗೂಢವಾಗಿದೆ. ಈ ಮತಗಳ ವಿಭಜನೆಗೆ ಜೆಡಿಎಸ್ ಅಭ್ಯರ್ಥಿ ಎಚ್.ಎನ್. ನಿರಂಜನ್ ಕೈ ಹಾಕಿದ್ದಾರೆ. ಈ ಬಾರಿ ತೀವ್ರ ಹಣಾಹಣಿ ಏರ್ಪಡುವುದರಲ್ಲಿ ಅನುಮಾನವಿಲ್ಲ.