ಪ್ರಭುಸ್ವಾಮಿ ನಟೇಕರ್

ಬೆಂಗಳೂರು :  ತನ್ನ ಒಡಲಿನಲ್ಲಿಟ್ಟುಕೊಂಡಿರುವ ಬಹುರಾಷ್ಟ್ರೀಯ ಕಂಪನಿಗಳು. ಚರ್ಚೆಗೆ ಗ್ರಾಸವಾಗಿರುವ ಕೆರೆಗಳು. ಬಿಬಿಎಂಪಿಗೆ ಹೆಚ್ಚು ತೆರಿಗೆ ಪಾವತಿಸುವ ಕ್ಷೇತ್ರ. ಕಳೆಗುಂದದ ಗ್ರಾಮೀಣ ಸೊಗಡು. ಮೂಲ ನಿವಾಸಿಗಳ ಜತೆಗೆ ವಲಸಿಗರ, ದಲಿತರ ಮತಗಳೇ ನಿರ್ಣಾಯಕ. ಇದು ಮೀಸಲು ಕ್ಷೇತ್ರ ಮಹದೇವಪುರ ವಿಧಾನಸಭಾ ಕ್ಷೇತ್ರದ ಚಿತ್ರಣ.

ಅತಿಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿರುವ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಹಾಗಂತ  ಎಎಪಿ ಸವಾಲನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಜೆಡಿಎಸ್ ಸ್ಪರ್ಧೆ ನೀಡುವ ನಿರೀಕ್ಷೆ ಇದೆಯಾದರೂ ಜನರ ಒಲವು ಅಷ್ಟಕಷ್ಟೇ. ಬೆಳ್ಳಂದೂರು, ವರ್ತೂರು ಕೆರೆ ನೊರೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಪಡೆದಿರುವಷ್ಟೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೆಚ್ಚು ತೆರಿಗೆ ಪಾವತಿಸುವ ಕ್ಷೇತ್ರ ಎಂಬ ಖ್ಯಾತಿಯನ್ನೂ ಪಡೆದಿದೆ.

ಕ್ಷೇತ್ರದಲ್ಲಿ ಚುನಾವಣಾ ಕಾವು ಏರಿದ್ದು,  2 ಬಾರಿ ಕ್ಷೇತ್ರದಿಂದ ಜಯಗಳಿಸಿರುವ ಬಿಜೆಪಿ ಅಭ್ಯರ್ಥಿ ಅರವಿಂದ್ ಲಿಂಬಾವಳಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು ಕಾಂಗ್ರೆಸ್‌ನ ಅಭ್ಯರ್ಥಿ ಎ.ಸಿ.ಶ್ರೀನಿವಾಸ್ ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದರು. ಕೇವಲ 6 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಇದರ ಸೇಡು ತೀರಿಸಿಕೊಳ್ಳಲು ತೀವ್ರ ಸೆಣಸಾಟ ಆರಂಭಿಸಿದ್ದಾರೆ. 

ಜೆಡಿಎಸ್ ಅಭ್ಯರ್ಥಿ ಸತೀಶ್ ತಮ್ಮ ಬಲ ಪ್ರದರ್ಶನ ದೊಂದಿಗೆ ರಾಷ್ಟ್ರೀಯ ಪಕ್ಷಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಆಮ್ ಆದ್ಮಿ ಪಕ್ಷದ ಬಿ.ಆರ್ .ಭಾಸ್ಕರ್ ಪ್ರಸಾದ್ ಸಹ ಪೈಪೋಟಿ ನೀಡಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 4,04,850 ಮತದಾರರಿದ್ದಾರೆ. 2,74,162 ಪುರುಷರು, 2,30,531ಮಹಿಳಾ ಮತದಾರರು ಮತ್ತು ೧೫೭ ತೃತೀಯ ಲಿಂಗಿಗಳಿದ್ದಾರೆ. ಐಟಿ ಬಿಟಿ ಸಂಸ್ಥೆಗಳು ಯಥೇಚ್ಛವಾಗಿರುವ ಹಿನ್ನೆಲೆಯಲ್ಲಿ ವಲಸಿಗರು ಸಹಜವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ತಮಿಳುನಾಡು, ಆಂಧ್ರಪ್ರದೇಶ ವಲಸಿಗರು ಕ್ಷೇತ್ರದಲ್ಲಿ ನೆಲೆಸಿದರೂ, ಉತ್ತರ ಭಾರತದಿಂದ ಬಂದವರು ಹೆಚ್ಚಾಗಿದ್ದಾರೆ. ಮೂಲ ನಿವಾಸಿಗಳು ಸಹ ಹೆಚ್ಚು. ಆದರೆ, ಕನ್ನಡಿಗರೇ ನಿರ್ಣಾಯಕರು, ಅದರಲ್ಲೂ ದಲಿತ ಮತಗಳು ಪ್ರಮುಖ ಪಾತ್ರವಹಿಸಲಿವೆ.  ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಅಭ್ಯರ್ಥಿ ಗಳು ಭೋವಿ ಜನಾಂಗಕ್ಕೆ  ಸೇರಿದರಾಗಿದ್ದಾರೆ.

ಆದರೆ, ಕ್ಷೇತ್ರದಲ್ಲಿ 15-20 ಸಾವಿರ ಮಾತ್ರ ಭೋವಿ ಜನಾಂಗದವರಿದ್ದಾರೆ. ಎಡ ಮತ್ತು ಬಲ ಜನಾಂಗದ ಒಂದೂವರೆ ಲಕ್ಷ ಮಂದಿ ಇದ್ದಾರೆ. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ನಾಗೇಶ್ ಮತ್ತು ಆಮ್ ಆದ್ಮಿ ಪಕ್ಷದ ಭಾಸ್ಕರ್ ಪ್ರಸಾದ್ ಅಸ್ಪಶ್ಯ ಬಣಕ್ಕೆ ಸೇರಿರುವ ಕಾರಣ ಆ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ. ಹೀಗಾಗಿ, ಮೂರೂ ಪಕ್ಷದ ಅಭ್ಯರ್ಥಿಗಳು ಅಸ್ಪಶ್ಯರ ಒಲೈಕೆಗೆ ಆದ್ಯತೆ ನೀಡಿದ್ದಾರೆ ಎಂಬ ಮಾತುಗಳಿವೆ. ಇಲ್ಲಿ ನೆಲೆಸಿರುವ ಟೆಕ್ಕಿ ಮತಗಳನ್ನು ಸೆಳೆಯುವಲ್ಲಿ ಇನ್ನಿಲ್ಲದ ಕಸರತ್ತು ನಡೆಸಲಾಗುತ್ತಿದೆ. ಇನ್ನು ಕ್ಷೇತ್ರದ 8 ವಾರ್ಡ್‌ಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಸದಸ್ಯರಿದ್ದಾರೆ. 3 ವಾರ್ಡ್‌ಗಳು ಕಾಂಗ್ರೆಸ್ ತೆಕ್ಕೆಯಲ್ಲಿವೆ. ಮಾರತ್‌ಹಳ್ಳಿ ವಾರ್ಡ್‌ನ ಸ್ವತಂತ್ರ ಅಭ್ಯರ್ಥಿ ರಮೇಶ್ ಕಾಂಗ್ರೆಸ್‌ನಲ್ಲಿದ್ದಾರೆ. 

11ಪಂಚಾಯಿತಿಗಳಲ್ಲಿ ಕಾಂಗ್ರೆಸ್‌ನದ್ದೇ ಮೆಲುಗೈ. ಇದು ಕೈ ಪಾಳೆಯದಲ್ಲಿ ಗೆಲುವಿನ ನಿರೀಕ್ಷೆ  ಹುಟ್ಟಿಸಿದೆ. ಕ್ಷೇತ್ರದಲ್ಲಿ ಟ್ರಾಫಿಕ್, ವಸತಿ ಸಮಸ್ಯೆ, ಕಾಲೇಜು, ಆಸ್ಪತ್ರೆಗಳ ನಿರ್ವಹಣೆ, ಕಟ್ಟಡ ಕುಸಿತ ಪ್ರಕರಣ ಜನ ರನ್ನು ನಿದ್ದೆಗೆಡಿಸಿದೆ. ಮಳೆ ನೀರು ನಿರ್ವಹಣೆಯಲ್ಲಿ ವೈಫಲ್ಯ, ಐಟಿಉದ್ಯೋಗಿಗಳ ಸುರಕ್ಷತೆ, ಕೆರೆ ತ್ಯಾಜ್ಯ ನಿರ್ವಹಣೆ ಸೇರಿ ಸಮಸ್ಯೆಗಳ ಪಟ್ಟಿಯೇ ಇದೆ. ಬಿಜೆಪಿ ಗೆಲುವಿಗೆ ಬ್ರೇಕ್ ಹಾಕಲು ಕಾಂಗ್ರೆಸ್‌ನ ಶ್ರೀನಿವಾಸ್ ಓಡಾಡುತ್ತಿದ್ದರೆ, ಮತ ವಿಭಜಿಸಲು ಭಾಸ್ಕರ್ ಪ್ರಸಾದ್, ಪಕ್ಷೇತರ ಅಭ್ಯರ್ಥಿ ನಾಗೇಶ್ ಅಡ್ಡಿಗಾಲಾಗುವ ಸಾಧ್ಯತೆ ಹೀಗಾಗಿ, ಲಿಂಬಾವಳಿ ಅವರಿಗೆ ಹ್ಯಾಟ್ರಿಕ್ ಸಾಧನೆ ಕಷ್ಟದ ಹಾದಿಯಾಗಿದೆ.