ಮಂತ್ರಿ ಸ್ಥಾನಕ್ಕೆ ಗೌಡರ ಬಳಿ ಲಾಬಿ

Leaders Meet HD Devegowda
Highlights

ದಶಕಗಳ ನಂತರ ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ ಎಚ್ .ಡಿ. ದೇವೇಗೌಡ ಅವರ ನಿವಾಸ ಪದ್ಮನಾಭನಗರದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಹಲವು ನಾಯಕರು ಭೇಟಿ ನೀಡಿ ಸಮಾಲೋಚನೆ ನಡೆಸಿದರು. 
 

ಬೆಂಗಳೂರು : ದಶಕಗಳ ನಂತರ ಜೆಡಿಎಸ್ ಅಧಿಕಾರದ ಗದ್ದುಗೆ ಹಿಡಿಯುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ ಎಚ್ .ಡಿ. ದೇವೇಗೌಡ ಅವರ ನಿವಾಸ ಪದ್ಮನಾಭನಗರದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಹಲವು ನಾಯಕರು ಭೇಟಿ ನೀಡಿ ಸಮಾಲೋಚನೆ ನಡೆಸಿದರು. 

ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್. ಸಿಂಧ್ಯಾ, ಶಾಸಕ ಜಿ.ಟಿ. ದೇವೇಗೌಡ, ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ,  ರಾಜ ರಾಜೇಶ್ವರಿ ನಗರ ಕ್ಷೇತ್ರದ ಅಭ್ಯರ್ಥಿ ರಾಮಚಂದ್ರ ಸೇರಿದಂತೆ ಇತರರು ಭೇಟಿ ನೀಡಿ ದೇವೇಗೌಡ ರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಜಿ.ಟಿ. ದೇವೇಗೌಡ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಈ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ದೇವೇಗೌಡರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಜಿ.ಟಿ.ದೇವೇಗೌಡ, ಸಂಪುಟ ರಚನೆ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ನನಗೆ ಸಚಿವ ಸ್ಥಾನದ ಬಗ್ಗೆ ಆಸೆ ಇಲ್ಲ. ಆದರೆ, ಅದು ಜನರ ಆಸೆಯಾಗಿದೆ. ಸಚಿವ ಸ್ಥಾನ ಕೊಟ್ಟರೆ ಪಕ್ಷಕ್ಕೆ ನಿಷ್ಠಾವಂತನಾಗಿ ಕೆಲಸ ಮಾಡುತ್ತೇನೆ. ಸಚಿವ ಸಂಪುಟದ ಕುರಿತು ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತುಕತೆ ನಡೆಸಲಾಗುವುದು. ಕಾಂಗ್ರೆಸ್ ಹೈಕಮಾಂಡ್ ಕೂಡ ಇದನ್ನೇ ಹೇಳಿದೆ ಎಂದು ಹೇಳಿದರು. ಗುರುವಾರ ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯ ಲಿದ್ದು, ಮಧ್ಯಾಹ್ನ ವಿಶ್ವಾಸಮತ ಯಾಚನೆ ಮಾಡಲಾ ಗುವುದು. ತರುವಾಯ ಸಚಿವ ಸಂಪುಟದ ಕುರಿತು ಚರ್ಚೆ ನಡೆಸಲಾಗುತ್ತದೆ. ಪ್ರಮಾಣವಚನ ಕಾರ್ಯ ಕ್ರಮಕ್ಕೆ ಪಕ್ಷದ ಕಾರ್ಯಕರ್ತರಿಗೆ ಪಾಸ್  ನೀಡುವಂತೆ ದೇವೇಗೌಡರ ಬಳಿ ಚರ್ಚಿಸಲಾಗಿದೆ ಎಂದರು. 

30 - 30 ತಿಂಗಳು ಹಂಚಿಕೆ ಇಲ್ಲ- ಸಿಂಧ್ಯಾ: ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ, ಮುಖ್ಯಮಂತ್ರಿ ಹುದ್ದೆ ಹಂಚಿಕೆ ಬಗ್ಗೆಯಾಗಲೀ, 30 - 30 ಆಡಳಿತ ನಡೆಸುವ ಕುರಿತಾಗಲೀ ಚರ್ಚೆ ನಡೆದಿಲ್ಲ. ಆಸರೆ, ಸಚಿವ ಸ್ಥಾನ ಹಂಚಿಕೆಗೆ ಲಾಬಿ ನಡೆಯುತ್ತಿರುವುದು ನಿಜ. ನಾವು ಕಾಂಗ್ರೆಸ್‌ನ ಆಂತರಿಕ ವಿಚಾರಕ್ಕೆ ಕೈಹಾಕುವುದಿಲ್ಲ. ಸಮನ್ವಯ ಸಮಿತಿ ರಚನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಸಮನ್ವಯ ಸಮಿತಿಯು ಕುಮಾರ ಸ್ವಾಮಿಯವರ ಮುಖ್ಯಮಂತ್ರಿ ಸ್ಥಾನದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ತಿಳಿಸಿದರು. ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಬೇಕು ಎಂದು ಹೋರಾಟನಡೆಸಿದ್ದೆವು. 5 ವರ್ಷ ಸುಭದ್ರ ಸರ್ಕಾರ ನೀಡಬೇಕು ಎಂಬುದು ನಮ್ಮ ಆಶಯ. ನನಗೆ ಪಕ್ಷವು ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ ಎಂದರು.

ರೋಷನ್ ಬೇಗ್ ಭೇಟಿ: ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದು, ಇದೀಗ ಮತ್ತೆ ಶಾಸಕರಾಗಿ ಚುನಾಯಿತರಾಗಿರುವ ರೋಷನ್ ಬೇಗ್ ಅವರು ಹಲವು ಮುಸ್ಲಿಂ ಮುಖಂಡರೊಂದಿಗೆ ದೇವೇ ಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಮತ್ತೊಮ್ಮೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಈ ಭೇಟಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. 

loader