Asianet Suvarna News Asianet Suvarna News

ಜಗತ್ತಿನಲ್ಲಿ ಮೋದಿಯನ್ನು ವಿರೋಧಿಸೋದು ಪಾಕ್, ಸಿದ್ದು ಮಾತ್ರ!

ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಸಮರ ಸಾರಿದ್ದ ಈಶ್ವರಪ್ಪ ಈಗ ಚುನಾವಣಾ ಕಣದಲ್ಲಿದ್ದಾರೆ. ಈಗ ಬ್ರಿಗೇಡ್ ಸಹವಾಸ ಬಿಟ್ಟು ಎಂದಿನಂತೆ ಯಡಿಯೂರಪ್ಪ ಅವರೊಂದಿಗೆ ‘ಭಾಯಿ.. ಭಾಯಿ’ ಆಗಿದ್ದಾರೆ. ಕಳೆದ ಸೋಲಿನ ಹಿನ್ನೆಲೆಯಲ್ಲಿ ಈ ಬಾರಿ ಬಿರುಸಿನ ಪ್ರಚಾರ ಕೈಗೊಂಡಿರುವ ಅವರು ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದ್ದಾರೆ.
 

KS Eswarappa special Interview and slam Siddaramaiah

ಬೆಂಗಳೂರು(ಮೇ.01):‘ಫೈರ್ ಬ್ರ್ಯಾಂಡ್’ ಖ್ಯಾತಿಯ ರಾಜ್ಯ ಬಿಜೆಪಿ ನಾಯಕರ ಪೈಕಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರೂ ಪ್ರಮುಖರು. ಹಿಂದೆ ಹೊಡಿ, ಬಡಿ, ಕಡಿ ಎಂಬ ಪದಗಳನ್ನೇ ಬಳಸುತ್ತಿದ್ದ ಈಶ್ವರಪ್ಪ ಅವರು ಈಗ ತುಸು ಸುಧಾರಿಸಿದಂತೆ ಕಂಡು ಬಂದರೂ ಆಗಾಗ ಹಿಂದಿನದನ್ನು ನೆನಪಿಸುತ್ತಲೇ ಇರುತ್ತಾರೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿಕೊಂಡು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ಸಮರ ಸಾರಿದ್ದ ಈಶ್ವರಪ್ಪ ಈಗ ಚುನಾವಣಾ ಕಣದಲ್ಲಿದ್ದಾರೆ. ಈಗ ಬ್ರಿಗೇಡ್ ಸಹವಾಸ ಬಿಟ್ಟು ಎಂದಿನಂತೆ ಯಡಿಯೂರಪ್ಪ ಅವರೊಂದಿಗೆ ‘ಭಾಯಿ.. ಭಾಯಿ’ ಆಗಿದ್ದಾರೆ. ಕಳೆದ ಸೋಲಿನ ಹಿನ್ನೆಲೆಯಲ್ಲಿ ಈ ಬಾರಿ ಬಿರುಸಿನ ಪ್ರಚಾರ ಕೈಗೊಂಡಿರುವ ಅವರು ಕನ್ನಡಪ್ರಭ’ಕ್ಕೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಂಕಿಯುಗುಳಿದ್ದಾರೆ.

1. ನೀವು ಹುಟ್ಟು ಹಾಕಿದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಈಗ ಎಲ್ಲಿದೆ?
- ಬ್ರಿಗೇಡ್ ಇದೆ. ಅದು ತನ್ನ ಪಾಡಿಗೆ ಕೆಲಸ ಮಾಡುತ್ತಿದೆ. ನಾನು ಮೊದಲಿನಿಂದಲೂ ಅದರ ಪದಾಧಿಕಾರಿಯಾಗಿಲ್ಲ. ಸ್ಥಾಪನೆ ವೇಳೆ ನನ್ನನ್ನು ಕರೆದಿದ್ದರು. ನಂತರದ ದಿನಗಳಲ್ಲಿ ಅದರ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದೆ ಅಷ್ಟೆ. ಸಂಘಟನೆಯ ಉದ್ದೇಶ ಉತ್ತಮವಾಗಿತ್ತು. ಚುನಾವಣೆ ನಂತರ ಆ ಬಗ್ಗೆ ಗಮನಹರಿಸುತ್ತೇನೆ.


2. ನೀವು ಶಿವಮೊಗ್ಗ ಕ್ಷೇತ್ರದ ಟಿಕೆಟ್ ಪಡೆಯುವುದಕ್ಕಾಗಿಯೇ ಬ್ರಿಗೇಡ್ ಸ್ಥಾಪಿಸಿದ್ದಿರಿ ಎಂಬ ಆರೋಪ ಕೇಳಿಬಂದಿತ್ತು?
- ಅದೆಲ್ಲ ಸುಳ್ಳು. ರಾಜಕೀಯ ಕಾರಣಕ್ಕಾಗಿ ಬ್ರಿಗೇಡ್ ಸ್ಥಾಪನೆಯಾಗಿರಲಿಲ್ಲ. ನನಗೆ ಟಿಕೆಟ್ ಸಿಗುವ ಬಗ್ಗೆ ಮೊದಲಿನಿಂದಲೂ ಸ್ಪಷ್ಟತೆ ಇತ್ತು. ಟಿಕೆಟ್ ಸಿಗುವುದಿಲ್ಲ ಎಂದು ಯಾರೂ ಹೇಳಿರಲಿಲ್ಲ.

3. ಈ ಬಾರಿ ರಾಜ್ಯದ ಜನತೆ ಬಿಜೆಪಿಯನ್ನು ಪೂರ್ಣ ಪ್ರಮಾಣದಲ್ಲಿ ಬೆಂಬಲಿಸುವ ಬಗ್ಗೆ ಹಲವು ಸಮೀಕ್ಷೆಗಳು ಅನುಮಾನ ವ್ಯಕ್ತಪಡಿಸಿವೆ?
- ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿದ ವೇಳೆ, ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣ ನಡೆದ ವೇಳೆ, ಗೋಹತ್ಯೆಗೆ ಕುಮ್ಮಕ್ಕು ನೀಡಿದ ವೇಳೆ ಸಿದ್ದರಾಮಯ್ಯ ಸರ್ಕಾರ ತೋರಿದ ತಾತ್ಸಾರ ಜನರ ಮನಸ್ಸಲ್ಲಿ ಆಕ್ರೋಶ ತುಂಬಿದೆ. ಐದು ವರ್ಷಗಳಲ್ಲಿ ಹಿಡಿ ಮರಳನ್ನೂ ನ್ಯಾಯವಾಗಿ ಕೊಡಲು ಆಗಲಿಲ್ಲ. ಹಿಂದುಳಿದವರು ಮತ್ತು ದಲಿತರ ಹೆಸರಿನಲ್ಲಿ ಅಧಿಕಾರದ ಗದ್ದುಗೆ ಏರಿದ ಸಿದ್ದರಾಮಯ್ಯ ಅವರು ನಂತರದ ದಿನಗಳಲ್ಲಿ ಆ ವರ್ಗದ ಜನರ ಕಲ್ಯಾಣಕ್ಕಾಗಿ ಯಾವ ಪ್ರಮುಖ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಿಲ್ಲ. ಒಂದೆಡೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧದ ಆಕ್ರೋಶವಾದರೆ ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿರುವ ಅತೀವ ವಿಶ್ವಾಸ. ಇವೆರಡರ ಕಾರಣಕ್ಕಾಗಿ ಜನರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ.

4. ರಾಜ್ಯ ಬಿಜೆಪಿಗೆ ನಾಯಕರು ಮೋದಿ ಅವರ ಸಾಧನೆ ಮುಂದಿಟ್ಟುಕೊಂಡೇ ಮತ ಕೇಳುತ್ತಿದ್ದಾರೆಯೇ ಹೊರತು ಹಿಂದಿನ ರಾಜ್ಯ ಸರ್ಕಾರದ ಸಾಧನೆಗಳನ್ನು ಹೆಚ್ಚು ಪ್ರಸ್ತಾಪಿಸುತ್ತಿಲ್ಲವಲ್ಲ?
- ನಾವು ಐದು ವರ್ಷಗಳಲ್ಲಿ ಮಾಡಿರುವ ಸಾಧನೆಗಳು ಸಾಕಷ್ಟಿವೆ. ಆ ವೇಳೆ ದೇಶದಲ್ಲೇ ಕರ್ನಾಟಕ ಅಭಿವೃದ್ಧಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ರಾಜ್ಯದ ಜನರು ಹಿಂದಿನ ಬಿಜೆಪಿ ಸರ್ಕಾರದ ಸಾಧನೆಗಳನ್ನುಇಂದಿಗೂ ಮರೆತಿಲ್ಲ. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮೊದಲ ಬಾರಿ ಹೆಚ್ಚು ಅನುದಾನ ನಿಗದಿಪಡಿಸಿ ವೆಚ್ಚ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ಸಿದ್ದರಾಮಯ್ಯ ಸಿಎಂ ಆಗುವವರೆಗೆ ಕನಕದಾಸ, ಕಾಳಿದಾಸ, ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ ಹೆಸರನ್ನು ಹೇಳುತ್ತಿದ್ದರು. ಆದರೆ, ಸಿಎಂ ಆದ ಮೇಲೆ ಅವೆಲ್ಲವನ್ನೂ ಮರೆತು ಬಿಟ್ಟರು. ಅವರ ಹೆಸರಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಲಿಲ್ಲ. ಬಿಜೆಪಿ ಅವಧಿಯಲ್ಲಿ ಕಾಗಿನೆಲೆ ಅಭಿವೃದ್ಧಿ ಮುಂದಡಿ ಇಟ್ಟಿತು. ಕನಕದಾಸ ಜಯಂತಿ, ವಾಲ್ಮೀಕಿ ಜಯಂತಿ ಆಚರಣೆ ನಿರ್ಧಾರ ಕೈಗೊಂಡಿತು. ಇವತ್ತು ಮೋದಿ ಅವರನ್ನು ವಿಶ್ವವೇ ಮೆಚ್ಚಿದೆ. ಅವರು ಪ್ರಧಾನಿಯಾಗಿ ಮಾಡಿರುವ ಸಾಧನೆಗಳನ್ನು ಬಳಸಿಕೊಳ್ಳುತ್ತೇವೆ.

KS Eswarappa special Interview and slam Siddaramaiah

5. ನೀವು ಮೋದಿ ಅವರನ್ನು ವಿಶ್ವವೇ ಮೆಚ್ಚಿಕೊಂಡಿದೆ ಎನ್ನುತ್ತೀರಿ. ಆದರೆ, ಸಿದ್ದರಾಮಯ್ಯ ಅವರು ಮೋದಿ ವಿರುದ್ಧ ತೀಕ್ಷ್ಣ ಟೀಕಾಪ್ರಹಾರ ಆರಂಭಿಸಿದ್ದಾರೆ?
- ನೋಡಿ, ಇವತ್ತು ಜಗತ್ತಿನಲ್ಲಿ ಮೋದಿ ಅವರನ್ನು ವಿರೋಧಿಸುತ್ತಿರು ವುದು ಒಂದು ಪಾಕಿಸ್ತಾನ, ಮತ್ತೊಂದು ಸಿದ್ದರಾಮಯ್ಯ. ಹೀಗಾಗಿ, ಸಿದ್ದರಾಮಯ್ಯ ಅವರ ಟೀಕೆಗಳಿಗೆ ಹೆಚ್ಚು ಬೆಲೆ ಕೊಡಬೇಕಾಗಿಲ್ಲ.

6. ಬಿಜೆಪಿಗೆ ರಾಜ್ಯದಲ್ಲಿ ನಾಯಕರ ಕೊರತೆ ಇರುವುದರಿಂದ ಉತ್ತರ ಭಾರತದ ನಾಯಕರನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರಲ್ಲ?
- ಉತ್ತರ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ. 22ನೇ ರಾಜ್ಯವಾಗಿ ಕರ್ನಾಟಕವನ್ನು ಗೆಲ್ಲಬೇಕು ಎಂಬ ಗುರಿ ಹೊಂದಲಾಗಿದೆ. ಇಡೀ ದೇಶ ಒಂದು ಎಂಬುದನ್ನು ತೋರಿಸು ವುದಕ್ಕಾಗಿ ಉತ್ತರ ಭಾರತದ ನಾಯಕರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಅದರಲ್ಲಿ ತಪ್ಪೇನಿದೆ? ನಮ್ಮ ಪಕ್ಷದಲ್ಲಿ ನಾಯಕರಿಗೆ ಕೊರತೆಯಿಲ್ಲ. ಆದರೆ, ಕಾಂಗ್ರೆಸ್ಸಿನಲ್ಲಿ ಅದೇ ರಾಹುಲ್ ಗಾಂಧಿ ಅವರೊಬ್ಬರನ್ನೇ ಕರೆತಂದು ಅದೇ ಕೆಟ್ಟ ಮುಖವನ್ನು ತೋರಿಸಬೇಕು. ಅವರಿಗೆ ಬೇರೆ ಮುಖಗಳೇ ಇಲ್ಲ. ರಾಹುಲ್ ಗಾಂಧಿ ಬಿಟ್ಟರೆ ಕಾಂಗ್ರೆಸ್ಸಿಗೆ ಬೇರೆ ಯಾರೂ ಗತಿಯಿಲ್ಲ.

7. ಚುನಾವಣಾ ಪ್ರಕ್ರಿಯೆ ಆರಂಭವಾಗುವ ಮೊದಲು ಅಹಿಂದಕ್ಕೆ ಪ್ರತಿಯಾಗಿ ಹಿಂದುತ್ವದ ಅಸ್ತ್ರ ಬಳಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿ ನಂತರ ಹಿಂದೆ ಸರಿದಂತಿದೆ?
- ಅಹಿಂದ ಮತ್ತು ಹಿಂದುತ್ವ ಬೇರೆ ಬೇರೆ ಅಲ್ಲ. ಹಿಂದುತ್ವದೊಳಗೆ ಅಹಿಂದ ಸೇರಿಕೊಂಡಿದೆ. ಹಿಂದುತ್ವ ಎನ್ನುವುದು ಧರ್ಮ ಅಷ್ಟೇ ಅಲ್ಲ. ಅದೊಂದು ಜೀವನ ಪದ್ಧತಿ. ಹೀಗಾಗಿ, ಈಗ ಚುನಾವಣಾ ಪ್ರಚಾರದಲ್ಲಿ ಹಿಂದುತ್ವದ ಜೊತೆಗೆ ಅಭಿವೃದ್ಧಿಯನ್ನೂ ಬಳಸಿಕೊಂಡಿದ್ದೇವೆ.

8. ಕಳಂಕಿತರು, ಭ್ರಷ್ಟಾಚಾರದ ಆರೋಪ ಹೊತ್ತವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ?
- ಇಂಥವರಿಗೆ ಟಿಕೆಟ್ ನೀಡಬಾರದು ಎಂಬ ನಿರ್ಧಾರವೇನೂ ಪಕ್ಷದಲ್ಲಿ ಆಗಿರಲಿಲ್ಲ. ವ್ಯಕ್ತಿಯಾದವನು ಎಡವಿಯೇ ಎಡವುತ್ತಾನೆ. ಆದರೆ, ಹಾಗೆ ಎಡವಿರುವವನು ಸರಿಪಡಿಸಿಕೊಂಡಿರುತ್ತಾನೆ. ಯಾರು ಸತ್ಯ ಹರಿಶ್ಚಂದ್ರರು ಇದ್ದಾರೆ ಹೇಳಿ. ಹಾಗೊಂದು ವೇಳೆ ಯಾರಾದರೂ ತಪ್ಪು ದಾರಿ ತುಳಿದಿದ್ದರೆ ಅಂಥವರನ್ನು ಸರಿದಾರಿಗೆ ತರುತ್ತೇವೆ.

9. ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಅಧಿಕೃತವಾಗಿಯೇ ಪ್ರವೇಶ ಪಡೆದಂತಾಗಿದೆ?
- ಕಾಂಗ್ರೆಸ್‌ನಂತೆ ಹೋಲ್‌ಸೇಲ್ ಆಗಿ ನೆಹರು ಕುಟುಂಬದಿಂದ ರಾಹುಲ್ ಗಾಂಧಿವರೆಗೆ ಕುಟುಂಬ ರಾಜಕಾರಣ ಮಾಡಿದಂತೆ ಬಿಜೆಪಿಯಲ್ಲಿ ಅದಕ್ಕೆ ಅವಕಾಶವಿಲ್ಲ. ಎಲ್ಲೋ ಒಂದು ಕಡೆ ಗೆಲುವಿನ ಮಾನದಂಡ ಇಟ್ಟುಕೊಂಡು ಒಂದೇ ಕುಟುಂಬದವರಿಗೆ ಎರಡು ಟಿಕೆಟ್ ನೀಡಲಾಗಿದೆ. ಆದರೆ, ಕಾಂಗ್ರೆಸ್ಸಿನ ಕುಟುಂಬ ರಾಜಕಾರಣಕ್ಕೆ ಇದನ್ನು ಹೋಲಿಸುವುದು ಸರಿಯಲ್ಲ. ಕಾಂಗ್ರೆಸ್ ಎಂದರೆ ಒಂದೇ ಕುಟುಂಬ ನೇತೃತ್ವ ವಹಿಸಿರುವ ಪಕ್ಷ. ಬಿಜೆಪಿಗೂ ಕಾಂಗ್ರೆಸ್ಸಿಗೂ ಅಜಗಜಾಂತರ ವ್ಯತ್ಯಾಸವಿದೆ.

10. ನಿಮ್ಮ ಪ್ರಕಾರ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ವರುಣಾದಿಂದ ಕೊನೆ ಹಂತದಲ್ಲಿ ಟಿಕೆಟ್ ತಪ್ಪಿರುವುದು ಯಾಕೆ?
- ವಿಜಯೇಂದ್ರನಿಗೆ ವರುಣಾದಿಂದ ಟಿಕೆಟ್ ನೀಡಿದ್ದರೆ ನೂರಕ್ಕೆ ನೂರರಷ್ಟು ಗೆಲ್ಲುತ್ತಿದ್ದ. ಬಹುಶಃ ಯಡಿಯೂರಪ್ಪ ಅವರು ಶಾಸಕರಾಗಿ ಗೆದ್ದ ಮೇಲೆ ತೆರವಾಗುವ ಲೋಕಸಭಾ ಸದಸ್ಯ ಸ್ಥಾನವನ್ನು ಅವರ ಹಿರಿಯ ಪುತ್ರ, ಮಾಜಿ ಸಂಸದ ರಾಘವೇಂದ್ರ ಅವರಿಗೆ ನೀಡಬೇಕಾಗುತ್ತದೆ. ಈಗ ಅವರ ಮತ್ತೊಬ್ಬ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡುವುದು ಸರಿಯಾಗಲಿಕ್ಕಿಲ್ಲ ಎಂಬ ಕಾರಣದಿಂದ ಟಿಕೆಟ್ ನಿರಾಕರಿಸಿರಬಹುದು. ಇದು ನನ್ನ ವೈಯಕ್ತಿಕ ಅಭಿಪ್ರಾಯ.

11. ರಾಜ್ಯ ಬಿಜೆಪಿಯ ಕೆಲವು ನಾಯಕರು ಮತ್ತು ಸಂಘ ಪರಿವಾರದ ಮುಖಂಡರು ವಿಜಯೇಂದ್ರ ಅವರಿಗೆ ಟಿಕೆಟ್ ನೀಡದಂತೆ ಹೈಕಮಾಂಡ್‌ಗೆ ಒತ್ತಡ
ಹೇರಿದರಂತೆ?
- ಹೈಕಮಾಂಡ್‌ನ ನಾಯಕರು ಯಾರೋ ಹೇಳಿದರು ಎಂಬ ಕಾರಣಕ್ಕೆ ಟಿಕೆಟ್ ನಿರಾಕರಿಸಿರುವುದಿಲ್ಲ. ಅವರಿಗೆ ಯೋಚನೆ ಮಾಡುವ ಶಕ್ತಿಯಿದೆ. ಹಲವರು ಸಲಹೆ ನೀಡಿರಬಹುದು. ಆದರೆ ಅಂತಿಮ ನಿರ್ಧಾರ ಕೈಗೊಂಡಿದ್ದು ವರಿಷ್ಠರ ವಿವೇಚನೆ ಹೊರತು ಬೇರೇನೂ ಅಲ್ಲ.

12. ಕುರುಬ ಸಮುದಾಯಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಿದ ಕಾರಣಕ್ಕೆ ಸಿದ್ದರಾಮಯ್ಯ ಬಾದಾಮಿಯಲ್ಲಿನ ಕುರುಬ ಮತದಾರರ ಬೆಂಬಲ ನಿರೀಕ್ಷಿಸಿದ್ದಾರಾ?
- ವಾಸ್ತವವಾಗಿ ಕುರುಬ ಸಮುದಾಯದ ಅಭಿವೃದ್ಧಿಗೆ ಸಿದ್ದರಾಮಯ್ಯ ಏನೂ ಮಾಡಿಲ್ಲ. ಅವರು ಬಾದಾಮಿಯಲ್ಲಿ ಕುರುಬ ಸಮುದಾಯಕ್ಕೆ ಏನೇನು ಮಾಡಿದ್ದೀನಿ ಎಂಬುದನ್ನು ಹೇಳಲಿ. ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕುರುಬ ಸಮುದಾಯಕ್ಕೆ ಏನೇನು ಮಾಡಿದ್ದೇವು ಎಂಬುದನ್ನು ನಾವು ಹೇಳುತ್ತೇವೆ. ನಮ್ಮ ಜಾತಿಯಲ್ಲಿ ಹುಟ್ಟಿದ್ದಾನೆ ಎಂಬ ಕಾರಣಕ್ಕೆ ಕುರುಬರು ಮತ ಹಾಕಬಹುದೇನೊ. ಆದರೆ, ನಾನು ಸಮುದಾಯಕ್ಕೆ ಇಂಥ ಕಲ್ಯಾಣ ಕಾರ್ಯಕ್ರಮ ಮಾಡಿದ್ದೇನೆ ಎಂದು ಹೇಳಿ ಮತ ಪಡೆಯಲಿ ನೋಡೋಣ.

13. ಬಿಜೆಪಿಯವರು ಕೋಮುವಾದಿಗಳು, ಜಾತಿವಾದಿಗಳು ಎಂದು ಸಿದ್ದರಾಮಯ್ಯ ಅವರು ಪದೇ ಪದೇ ಆಪಾದನೆ ಮಾಡುತ್ತಿದ್ದಾರಲ್ಲ?
- ಸಿದ್ದರಾಮಯ್ಯ ಅವರೇ ಮಹಾನ್ ಜಾತಿವಾದಿ. ಚಾಮುಂಡೇಶ್ವರಿಯಲ್ಲಿ ಸೋಲುತ್ತಾರೆ ಎಂಬ ಭೀತಿಯಿಂದ ಬಾದಾಮಿಗೆ ಹೋಗಿದ್ದು ಯಾಕೆ? ಆ ಕ್ಷೇತ್ರದಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅಂತ ಅಲ್ಲವೇ. ಸಮಾಜವಾದದ ಹಿನ್ನೆಲೆಯಿಂದ ಬಂದ ಅವರು ತಮ್ಮ ಅಭಿವೃದ್ಧಿ ಕೆಲಸಗಳನ್ನು ನೆಚ್ಚಿಕೊಂಡು ರಾಜ್ಯದ ಇನ್ನುಳಿದ 222 ಕ್ಷೇತ್ರಗಳ ಪೈಕಿ ಯಾವುದಾದರೊಂದು ಕ್ಷೇತ್ರಕ್ಕೆ ಹೋಗಬಹುದಿತ್ತು. ಬಾದಾಮಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಸಿದ್ದರಾಮಯ್ಯ ಹೇಳುವುದೊಂದು ಮಾಡುವುದೊಂದು. ಹಿಂದೊಮ್ಮೆ ಲೋಕಸಭಾ ಚುನಾವಣೆ ವೇಳೆ ಕೊಪ್ಪಳದಿಂದ ಸ್ಪರ್ಧಿಸಿದ್ದರು. ಆಗಲೂ ಅಲ್ಲಿ ಕುರುಬರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಉದ್ದೇಶದಿಂದ ಹೊರತು ಬೇರೇನೂ ಅಲ್ಲ. ಹೀಗಾಗಿ ಬಿಜೆಪಿಯನ್ನು ಕೋಮುವಾದಿ, ಜಾತಿವಾದಿ ಎಂದು ಹೇಳಲು ಸಿದ್ದರಾಮಯ್ಯ ಅವರಿಗೆ ಅರ್ಹತೆಯೇ ಇಲ್ಲ.

-ವಿಜಯ್ ಮಲಗಿಹಾಳ

Follow Us:
Download App:
  • android
  • ios