ಕಡೇದಿನ 7 ಬಂಡಾಯ ಶಾಸಕರ ರಕ್ಷಿಸಿದ ಕೋಳಿವಾಡ

First Published 19, May 2018, 11:00 AM IST
Koliwad has disposed of disqualification of 7 JDS rebels
Highlights

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಏಳು ಮಂದಿ ಜೆಡಿಎಸ್ ಬಂಡಾಯ ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಪ್ರಸ್ತಾಪ ಕೈಬಿಟ್ಟು ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
 

ಬೆಂಗಳೂರು :  ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಏಳು ಮಂದಿ ಜೆಡಿಎಸ್ ಬಂಡಾಯ ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಪ್ರಸ್ತಾಪ ಕೈಬಿಟ್ಟು ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಶುಕ್ರವಾರದವರೆಗೆ ವಿಧಾನಸಭಾಧ್ಯಕ್ಷರಾಗಿ ಅಧಿಕಾರದಲ್ಲಿದ್ದ ಕೆ.ಬಿ. ಕೋಳಿವಾಡ ಅವರು, ಕೆ.ಜಿ. ಬೋಪಯ್ಯ ಹಂಗಾಮಿ ವಿಧಾನಸಭಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಕೆಲವೇ ಗಂಟೆಗಳ ಮೊದಲು ಈ ವಿವಾದಿತ ಆದೇಶ ಹೊರಡಿಸಿದ್ದಾರೆ. ಇದರಿಂದ ಹಾಲಿ ಕಾಂಗ್ರೆಸ್ ಶಾಸಕರಾಗಿರುವ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯಕ್, ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್‌ಖಾನ್, ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅನರ್ಹತೆ ಭೀತಿಯಿಂದ ಪಾರಾಗಿದ್ದಾರೆ.

14 ನೇ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದ ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯಕ್, ಜಮೀರ್ ಅಹ್ಮದ್ ಖಾನ್, ಶ್ರೀರಂಗ ಪಟ್ಟಣದ ರಮೇಶ ಬಂಡಿಸಿದ್ದೇಗೌಡ, ಮಾಗಡಿಯ ಎಚ್.ಸಿ. ಬಾಲಕೃಷ್ಣ, ನಾಗಮಂಗಲದ ಚೆಲುವರಾಯಸ್ವಾಮಿ, ಗಂಗಾವತಿಯ ಶಾಸಕ ಇಕ್ಬಾಲ್ ಅನ್ಸಾರಿ ಅವರು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದರು.

ಇದರಿಂದ ಪಕ್ಷಾಂತರ ಕಾಯ್ದೆ ಉಲ್ಲಂಘನೆ ಆರೋಪದಡಿ ಏಳು ಮಂದಿಯ ಶಾಸಕತ್ವ ಅನರ್ಹಗೊಳಿಸುವಂತೆ ಜೆಡಿಎಸ್ ಪಕ್ಷವು ಸ್ಪೀಕರ್ ಮೊರೆ ಹೋಗಿತ್ತು. ಸ್ಪೀಕರ್ ಆಗಿದ್ದ ಕೋಳಿವಾಡ ಅವರು ಹಲವು ಹಂತದ ವಿಚಾರಣೆ ನಡೆಸಿಯೂ ತೀರ್ಪು ಪ್ರಕಟಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಹೈಕೋರ್ಟ್ ಮೆಟ್ಟಿಲೇರಿತ್ತು. 

ಹೈಕೋರ್ಟ್ ಮೇ 27 ರ ಒಳಗಾಗಿ ಶಾಸಕರ ಅನರ್ಹಕ್ಕೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸುವಂತೆ ಸ್ಪೀಕರ್ ಅವರಿಗೆ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೆ.ಜಿ.ಬೋಪಯ್ಯ ಅವರ ಪ್ರಮಾಣವಚನ ಸ್ವೀಕಾರ ಕ್ಕೂ ಕೆಲವೇ ಗಂಟೆಗಳ ಮೊದಲು, ‘14ನೇ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿದ್ದ ಏಳು ಮಂದಿಯ ಅವಧಿ ಮುಕ್ತಾಯಗೊಂಡಿದೆ. ಇದೀಗ 15ನೇ ವಿಧಾನಸಭೆ ಆಯ್ಕೆಯಾಗಿದ್ದು, ಈ  ಹಂತದಲ್ಲಿ 14 ನೇ ಅವಧಿಯ ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಪ್ರಶ್ನೆ ಉದ್ಭವಿಸುವುದಿಲ್ಲ.  ಹೀಗಾಗಿ ಪ್ರಕರಣವನ್ನು ವಜಾಗೊಳಿಸಲಾಗುತ್ತಿದೆ’ ಎಂದು ತೀರ್ಪು ನೀಡಿದ್ದಾರೆ.

loader