ಮಡಿಕೇರಿ : ವಿಧಾನಸಭೆ ಚುನಾವಣೆ ದಿನಾಂಕ ಸಮೀಪಿಸುತ್ತಿರುವಂತೆ ‘ದಕ್ಷಿಣದ ಕಾಶ್ಮೀರ’ ಕೊಡಗು ಜಿಲ್ಲೆಯಲ್ಲಿ ರಾಜಕೀಯ ಕಾವು ಬಿಸಿಯೇರಿದೆ. ಪುಟ್ಟಜಿಲ್ಲೆ ಕೊಡಗಿನಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ 15 ವರ್ಷಗಳಿಂದ ಬಿಜೆಪಿಯ ಭದ್ರಕೋಟೆ ಎಂದು ಬಿಂಬಿತವಾಗಿರುವ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಪಣತೊಟ್ಟಿದೆ. ಈ ನಡುವೆ ಜೆಡಿಎಸ್‌ ಕೂಡ ಭರ್ಜರಿ ತಯಾರಿ ಮಾಡುತ್ತಿದೆ.

1. ಮಡಿಕೇರಿ

ಬಿಜೆಪಿ- ಎಂ.ಪಿ. ಅಪ್ಪಚ್ಚು ರಂಜನ್‌

ಕಾಂಗ್ರೆಸ್‌- ಕೆ.ಪಿ. ಚಂದ್ರಕಲಾ

ಜೆಡಿಎಸ್‌- ಬಿ.ಎ. ಜೀವಿಜಯ

ಈಗಾಗಲೇ ನಾಲ್ಕು ಬಾರಿ ಶಾಸಕರಾಗಿರುವ ಮಾಜಿ ಸಚಿವ ಎಂ.ಪಿ. ಅಪ್ಪಚ್ಚುರಂಜನ್‌ ಐದನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು ಮತ್ತೊಮ್ಮೆ ಬಿಜೆಪಿಯಿಂದ ಅಖಾಡಕ್ಕೆ ಇಳಿದಿದ್ದಾರೆ. ಕಳೆದ ಎರಡೂ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಪರಾಭವಗೊಂಡಿರುವ ಮಾಜಿ ಸಚಿವ ಬಿ.ಎ. ಜೀವಿಜಯ ಇನ್ನೊಮ್ಮೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ ಪಕ್ಷ ವಕೀಲ ಚಂದ್ರಮೌಳಿ ಅವರಿಗೆ ಟಿಕೆಟ್‌ ನೀಡಿತ್ತು. ಆದರೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದ ನೀರವ್‌ ಮೋದಿ ಬಂಧು ಮೆಹುಲ್‌ ಚೌಕ್ಸಿ ಪರ ವಕಾಲತ್ತು ವಹಿಸಿದ್ದ ಕಾರಣಕ್ಕೆ ಬಿ ಫಾರಂ ಹಿಂಪಡೆದು ಜಿ.ಪಂ. ಸದಸ್ಯೆ ಚಂದ್ರಕಲಾ ಅವರಿಗೆ ನೀಡಿದೆ. ಕಳೆದ 15 ವರ್ಷಗಳಿಂದ ಮಡಿಕೇರಿ ಕ್ಷೇತ್ರ ಬಿಜೆಪಿ ಮಡಿಲಲ್ಲಿ ಇದೆ. ಕ್ಷೇತ್ರದಲ್ಲಿ ಗೌಡ ಹಾಗೂ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ನಿರ್ಣಾಯಕರಾಗಿದ್ದಾರೆ. ಕಾಂಗ್ರೆಸ್‌ಗೆ ಬಂಡಾಯ ಬಿಸಿಯೂ ತಟ್ಟುತ್ತಿದೆ. ಟಿಕೆಟ್‌ ವಂಚಿತ ಇಂಟಕ್‌ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಬಂಡಾಯವಾಗಿ ಸ್ಪರ್ಧಿಸಿದ್ದಾರೆ.

2. ವಿರಾಜಪೇಟೆ

ಬಿಜೆಪಿ- ಕೆ.ಜಿ. ಬೋಪಯ್ಯ

ಕಾಂಗ್ರೆಸ್‌- ಅರುಣ್‌ ಮಾಚಯ್ಯ

ಜೆಡಿಎಸ್‌- ಸಂಕೇತ್‌ ಪೂವಯ್ಯ

15 ವರ್ಷಗಳಿಂದ ಈ ಕ್ಷೇತ್ರ ಬಿಜೆಪಿ ಹಿಡಿತದಲ್ಲಿದೆ. ಬಿಜೆಪಿಯ ಕೆ.ಜಿ. ಬೋಪಯ್ಯ ಹಾಲಿ ಕ್ಷೇತ್ರದ ಶಾಸಕ. ಈ ಬಾರಿ ಅವರಿಗೆ ಟಿಕೆಟ್‌ ತಪ್ಪಿಸಿ ಬೇರೆಯವರಿಗೆ ನೀಡಲಾಗುತ್ತದೆ ಎಂಬ ಸುದ್ದಿ ಸಂಚಲನಕ್ಕೆ ಕಾರಣವಾಗಿತ್ತು. ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಎಂದು ಆರ್‌ಎಸ್‌ಎಸ್‌ ಕೂಡ ಪ್ರತಿಪಾದಿಸುತ್ತಿದೆ ಎಂದು ವರದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಬೋಪಯ್ಯ ಟಿಕೆಟ್‌ ಪಡೆದುಕೊಂಡಿದ್ದಾರೆ. ಈ ನಿರ್ಧಾರ ಕೈಗೊಳ್ಳುವ ಮುನ್ನ ಆರ್‌ಎಸ್‌ಎಸ್‌ ಅನ್ನು ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಂಡಿದೆ ಎಂದು ಹೇಳಲಾಗಿದೆ. ಬೋಪಯ್ಯ ಅವರಿಗೆ ಎದುರಾಳಿಯಾಗಿ ಮೇಲ್ಮನೆ ಮಾಜಿ ಸದಸ್ಯ ಚೆಪ್ಪುಡಿರ ಅರುಣ್‌ ಮಾಚಯ್ಯ ಕಾಂಗ್ರೆಸ್ಸಿನಿಂದ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಸಂಕೇತ್‌ ಪೂವಯ್ಯ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಈ ಕ್ಷೇತ್ರದಲ್ಲಿ ಕೊಡವ ಭಾಷಿಕರು ಹಾಗೂ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯುವ ನಿರೀಕ್ಷೆ ಇದೆ. ಈ ಕ್ಷೇತ್ರದಲ್ಲೂ ಕಾಂಗ್ರೆಸ್ಸಿಗೆ ಬಂಡಾಯ ಕಾಡುತ್ತಿದೆ. ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಸಚಿವ ಎಂ.ಆರ್‌. ಸೀತಾರಾಂ ಅವರ ಆಪ್ತ ಕದ್ದಣಿಯಂಡ ಹರೀಶ್‌ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ.