ಬೆಂಗಳೂರು/ ನವದೆಹಲಿ (ಮೇ. ೧೭): ಬಿ.ಎಸ್.ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ನೀಡಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿರುವ ಮನವಿಯನ್ನು ತಳ್ಳಿಹಾಕಿರುವ  ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.  ನಿಗದಿಯಂತೆ ಗುರುವಾರ ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಜ್ಯಪಾಲರು ಬಿಜೆಪಿಗೆ ಬಹುಮತವಿಲ್ಲದಿದ್ದರೂ ಸರ್ಕಾರ ರಚಿಸಲು ಆಹ್ವಾನಿಸಿದ್ದು, ಗುರುವಾರ ಬೆಳಗ್ಗೆ 9ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಂತೆ  ಯಡಿಯೂರಪ್ಪಗೆ ಸೂಚಿಸಿದ್ದರು. ರಾಜ್ಯಪಾಲರ ನಿರ್ಧಾರವನನ್ನು ಪ್ರಶ್ನಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ರಾತೋರಾತ್ರಿ ಸುಪ್ರೀಂ ಕೋರ್ಟ್ ಕದತಟ್ಟಿದ್ದವು.   

ರಾತ್ರಿ 1.45ಕ್ಕೆ ವಾದವನ್ನು ಆಲಿಸಲು ಆರಂಭಿಸಿದ ಸುಪ್ರೀಂನ ತ್ರಿಸದಸ್ಯ ಪೀಠ, ಮೂರುವರೆ ಗಂಟೆಗಳ ಕಾಲ ವಿಚಾರಣೆ ನಡೆಸಿತು. ವಿಚಾರಣೆ ಬಳಿಕ, ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. ಅದರೊಳಗೆ ಶಾಸಕರ ಬೆಂಬಲಪತ್ರವನ್ನು ಸಲ್ಲಿಸಬೇಕೆಂದು ಬಿಎಸ್‌ವೈಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.