Asianet Suvarna News Asianet Suvarna News

ಲೋಕಸಭೆಯಲ್ಲಿ ಬಿಜೆಪಿ ಬಲ 272 ಕ್ಕೆ ಕುಸಿತ

ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ. ಶ್ರೀರಾಮುಲು ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿನ ಬಿಜೆಪಿ ಬಲ 272 ಕ್ಕೆ ಇಳಿಕೆಯಾಗಿದೆ. ಆದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ.
 

Karnataka MPs Yeddyurappa, Sreeramulu quit Lok Sabha

ನವದೆಹಲಿ:  ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿರುವ ಬಿ.ಎಸ್. ಯಡಿಯೂರಪ್ಪ ಹಾಗೂ ಬಿ. ಶ್ರೀರಾಮುಲು ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿನ ಬಿಜೆಪಿ ಬಲ 272 ಕ್ಕೆ ಇಳಿಕೆಯಾಗಿದೆ. ಆದರೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ.

ಯಡಿಯೂರಪ್ಪ ಅವರು ಶಿವಮೊಗ್ಗ, ರಾಮುಲು ಅವರು ಬಳ್ಳಾರಿ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಜೆಡಿಎಸ್‌ನ ಸಿ.ಎಸ್. ಪುಟ್ಟರಾಜು ಅವರು ಲೋಕಸಭೆಯಲ್ಲಿ ಮಂಡ್ಯ ಕ್ಷೇತ್ರವನ್ನು ಪ್ರತಿ ನಿಧಿಸುತ್ತಿದ್ದರು. ಈ ಮೂವರು ಇತ್ತೀಚೆಗೆ ನಡೆದ ಕರ್ನಾಟಕ ಚುನಾವಣೆಯಲ್ಲಿ ಕ್ರಮವಾಗಿ ಶಿಕಾರಿಪುರ, ಮೊಳಕಾಲ್ಮುರು ಹಾಗೂ ಮೇಲುಕೋಟೆ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಶನಿವಾರ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನ ಸಂಸದ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಅದು ಅಂಗೀಕಾರವಾಗಿದೆ. 543 ಸದಸ್ಯ ಬಲದ ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳು ಬೇಕು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನ ಗಳಿಸಿತ್ತಾದರೂ, ನಂತರ ನಡೆದ ಉಪಚುನಾವಣೆಗಳಲ್ಲಿ ಸ್ಥಾನಗಳನ್ನು ಕಳೆದುಕೊಂಡು 274ಕ್ಕೆ ಕುಸಿದಿತ್ತು. ಈಗ ಮತ್ತಿಬ್ಬರು ಸಂಸದರು ರಾಜೀನಾಮೆ ನೀಡುವುದರೊಂದಿಗೆ ಬಿಜೆಪಿಯ ಬಲ ‘ಮ್ಯಾಜಿಕ್ ಸಂಖ್ಯೆ’ಯಾದ 272ಕ್ಕೆ ಸರಿಯಾಗಿ ಬಂದು ನಿಂತಿದೆ.

ಆದರೆ ಮೂವರು ಸಂಸದರ ತ್ಯಾಗಪತ್ರದಿಂದಾಗಿ ಲೋಕಸಭೆಯ ಬಲ 543 ರಿಂದ 540 ಕ್ಕೆ ಇಳಿಕೆಯಾಗುತ್ತದೆ. ಹೀಗಾಗಿ ಬಹುಮತಕ್ಕೆ 271 ಸ್ಥಾನಗಳು ಬೇಕು. ಬಿಜೆಪಿಗೆ ಅದಕ್ಕಿಂತ ಒಂದು ಹೆಚ್ಚು ಸ್ಥಾನವೇ ಇದೆ. ಲೋಕಸಭೆಯಲ್ಲಿ ಎಚ್.ಡಿ. ದೇವೇಗೌಡ ಸೇರಿ ಜೆಡಿಎಸ್‌ನ ಇಬ್ಬರು ಸದಸ್ಯರಿದ್ದರು. ಪುಟ್ಟರಾಜು ರಾಜೀನಾಮೆಯಿಂದ ಜೆಡಿಎಸ್ ಒಬ್ಬರೇ ಸಂಸದರನ್ನಾಗಿ ಹೊಂದಿದಂತಾಗಿದೆ. 

ಮೂವರು ಸಂಸದರ ರಾಜೀನಾಮೆಯಿಂದ ತೆರವಾಗಿರುವ ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಉಪಚುನಾವಣೆ ಪ್ರಕಟಿಸುವ ಸಾಧ್ಯತೆ ಇದೆ.

Follow Us:
Download App:
  • android
  • ios