ಬೆಂಗಳೂರು (ಮೇ 18) : ಅಧಿಕಾರದ ದಾಹದಿಂದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗೂಂಡಾಗಿರಿ ಮೂಲಕ ಸರ್ಕಾರ ರಚನೆಗೆ ಅಗತ್ಯವಾದಷ್ಟು ಸಂಖ್ಯಾಬಲ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಸರ್ಕಾರ ರಚನೆಗೆ ಬೇಕಾದಷ್ಟು ಸಂಖ್ಯಾಬಲ ಇಲ್ಲದ ಕಾರಣ ಯಡಿಯೂರಪ್ಪ ವಿಚಲಿತರಾಗಿದ್ದಾರೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನ ಹಿಂದೆಯೇ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಂತಹ ಪ್ರಕ್ರಿಯೆಗಳಿಗೆ ಮುಂದಾಗಿದ್ದಾರೆ ಎಂದು ಡಿಕೆಶಿ ಕಿಡಿಕಾರಿದರು. 

ಈಗ ಮುಖ್ಯಮಂತ್ರಿಗಳ ಅಧೀನದಲ್ಲೇ ಗುಪ್ತಚರ ಇಲಾಖೆ ಹಾಗೂ ಪೊಲೀಸ್ ಇಲಾಖೆ ಇದೆ. ವಿಧಾನಸೌಧ ದಲ್ಲಿ ಕಾಂಗ್ರೆಸ್ ಶಾಸಕರ ಪ್ರತಿಭಟನೆ ವೇಳೆ ಬಂದೋಬಸ್ತ್ ಒದಗಿಸಿದ್ದ ಪೊಲೀಸ್ ಅಧಿಕಾರಿ ಹಾಗೂ ರೆಸಾರ್ಟ್‌ಗೆ ಬಂದೋಬಸ್ತ್ ಕಲ್ಪಿಸಿದ್ದ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು. 

ಕಾಂಗ್ರೆಸ್‌ನ 117 ಶಾಸಕರು, ವಿಧಾನ ಪರಿ ಷತ್ ಸದಸ್ಯರು, ಸಂಸದರು ಸೇರಿ 150 ಕ್ಕೂ ಹೆಚ್ಚು ಜನಪ್ರತಿ ನಿಧಿಗಳಿದ್ದ ಕಾರಣ ಪೊಲೀಸ್ ಅಧಿಕಾರಿಗಳು ರಕ್ಷಣೆ ಒದಗಿಸಿ ಕರ್ತವ್ಯ ನಿರ್ವಹಿಸಿದ್ದರು. ಈ ಕಾರಣಕ್ಕಾಗಿಯೇ ಅವರನ್ನು ವರ್ಗಾವಣೆ ಮಾಡಿದ್ದಾರೆ. ಇದೆಲ್ಲ ಒಂದು ವಾರ ನಡೆಯಬಹುದು ಹೆಚ್ಚಿನ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.

ರೆಸಾರ್ಟ್‌ಗೆ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ನಾವ್ಯಾರೂ ಕೇಳಿರಲಿಲ್ಲ. ಜನಪ್ರತಿನಿಧಿಗಳು ಇರುವ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದರು. ನಮ್ಮ ರಕ್ಷಣೆಗೆ ಪೊಲೀಸರು ಅಥವಾ ಕಾರ್ಯಕರ್ತರು ಬೇಕಾಗಿಲ್ಲ. ರಾಮನಗರ ಜನರು ಒಳ್ಳೆಯವರಿದ್ದು, ಅವರೇ ಸಾಕು ಎಂದರು. 

ಕಾಂಗ್ರೆಸ್ ಶಾಸಕರ ಮೇಲೆ ಒತ್ತಡಗಳಿವೆ. ಬಿಜೆಪಿಯವರು ಆಪರೇಷನ್ ನಡೆಸಲು ಮುಂದಾಗಿದ್ದಾರೆ. ಜನಾರ್ದನರೆಡ್ಡಿ ಆಪ್ತರು ಹಾಗೂ ಬೇರೆಯವರ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ನಮ್ಮ ಯಾವ ಶಾಸಕರೂ ಹೋಗುವುದಿಲ್ಲ. ಹೋಗಿರುವ ಶಾಸಕರು ಯಾರೂ ರಾಜಿನಾಮೆ ನೀಡುವುದಕ್ಕೂ ಆಗುವುದಿಲ್ಲ. ಏಕೆಂದರೆ ಆ ಶಾಸಕರ ಕ್ಷೇತ್ರದಲ್ಲಿ ಜನರು ದಂಗೆ ಏಳುತ್ತಾರೆ ಎಂದು ಹೇಳಿದರು. 

ಈ ಸರ್ಕಾರಕ್ಕೆ ಬಲ ಇಲ್ಲ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಬಲವಿದೆ. ಇಬ್ಬರು ಸೇರಿ ಸರ್ಕಾರ ರಚನೆ ಮಾಡುವುದಾಗಿ ರಾಜ್ಯಪಾಲರಿಗೆ ಅರ್ಜಿ ನೀಡಿದ್ದೇವೆ. ಹಾಗಾಗಿ ಎರಡೂ ಪಕ್ಷಗಳ ಶಾಸಕರು ಒಟ್ಟಿಗೆ ಇರಲಿದ್ದೇವೆ. ಹೈದರಾಬಾದ್, ಗೋವಾ, ತಮಿಳುನಾಡಿನಿಂದಲೂ ಕಾಂಗ್ರೆಸ್ ಶಾಸಕರಿಗೆ ಆಹ್ವಾನ ಬಂದಿದೆ. ಎಲ್ಲಿಗೆ ಹೋಗಬೇಕೆಂಬುದನ್ನು ಚರ್ಚಿಸಿ ಫ್ಲೈಟ್, ಟಿಕೆಟ್ ಸೌಲಭ್ಯ ನೋಡಿಕೊಂಡು ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಶಿವಕುಮಾರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.