ಕುಟುಂಬ ರಾಜಕಾರಣ ತಿರಸ್ಕರಿಸಿದ ಮತದಾರ

karnataka-assembly-election-2018 | Wednesday, May 16th, 2018
Sujatha NR
Highlights

ರಾಜ್ಯ ವಿಧಾನಸಭೆ ಚುನಾವಣೆ ಕಣದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ರಕ್ತಸಂಬಂಧಿ ರಾಜಕಾರಣಿಗಳ ಹಣೆಬರಹ ಬಯಲಾಗಿದ್ದು, ಕೆಲವರಿಗೆ ಸಿಹಿ-ಮತ್ತೆ ಕೆಲವರಿಗೆ ಕಹಿಯಾಗಿದೆ. ಅಪ್ಪ-ಮಗ, ಅಣ್ಣ-ತಮ್ಮ, ಗಂಡ-ಹೆಂಡತಿ ಸೇರಿದಂತೆ ಒಂದೇ ಕುಟುಂಬದ ಸದಸ್ಯರ ಪೈಕಿ ಒಬ್ಬರನ್ನು ಗೆಲ್ಲಿಸಿ,ಮತ್ತೊಬ್ಬರಿಗೆ ಸೋಲಿನ ರುಚಿಯನ್ನು ಮತದಾರರು ಉಣಿಸಿದ್ದಾರೆ.

ಬೆಂಗಳೂರು :  ರಾಜ್ಯ ವಿಧಾನಸಭೆ ಚುನಾವಣೆ ಕಣದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ರಕ್ತಸಂಬಂಧಿ ರಾಜಕಾರಣಿಗಳ ಹಣೆಬರಹ ಬಯಲಾಗಿದ್ದು, ಕೆಲವರಿಗೆ ಸಿಹಿ-ಮತ್ತೆ ಕೆಲವರಿಗೆ ಕಹಿಯಾಗಿದೆ. ಅಪ್ಪ-ಮಗ, ಅಣ್ಣ-ತಮ್ಮ, ಗಂಡ-ಹೆಂಡತಿ ಸೇರಿದಂತೆ ಒಂದೇ ಕುಟುಂಬದ ಸದಸ್ಯರ ಪೈಕಿ ಒಬ್ಬರನ್ನು ಗೆಲ್ಲಿಸಿ,ಮತ್ತೊಬ್ಬರಿಗೆ ಸೋಲಿನ ರುಚಿಯನ್ನು ಮತದಾರರು ಉಣಿಸಿದ್ದಾರೆ.

 ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿ, ಈ ಪೈಕಿ ಬಾದಾಮಿ ಕ್ಷೇತ್ರದಲ್ಲಿ ಜಯಗಳಿಸಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. ಜತೆಗೆ ಸಿದ್ದರಾಮಯ್ಯ ಅವರು ತಮ್ಮ ಪುತ್ರ ಯತೀಂದ್ರ ಗಾಗಿ ಸ್ವಕ್ಷೇತ್ರವಾದ ವರುಣಾ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಕ್ಷೇತ್ರದ ಮತದಾರರು ಯತೀಂದ್ರ ಅವರನ್ನು ಗೆಲ್ಲಿಸಿದ್ದಾರೆ. ವಿಜಯನಗರದಲ್ಲಿ ಕಾಂಗ್ರೆಸ್ ಪಕ್ಷದ ಎ.ಕೃಷ್ಣಪ್ಪ ಮತ್ತು ಅವರ ಮಗ ಪ್ರಿಯಕೃಷ್ಣ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

2013 ರ ಚುನಾವಣೆಯಲ್ಲಿ ಇಬ್ಬರನ್ನೂ ಗೆಲ್ಲಿಸಿದ್ದ ಇಲ್ಲಿನ ಮತದಾರರು ಈ ಬಾರಿ ಎಂ.ಕೃಷ್ಣಪ್ಪಗೆ ಮಾತ್ರ ವಿಜಯಮಾಲೆ ಹಾಕಿದ್ದಾರೆ. ಪ್ರಿಯಕೃಷ್ಣ ಅವರನ್ನು ಸೋಲಿಸಿರುವ ಮತದಾರರು ಸೋಮಣ್ಣ ಅವರಿಗೆ ಜೈ ಎಂದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅತ್ಯಂತ ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಗೆಲುವು ಸಾಧಿಸಿದ್ದರೆ, ಅವರ ಮಗ ಎಸ್.ಎಸ್. ಮಲ್ಲಿಕಾರ್ಜುನ್ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ ರವೀಂದ್ರನಾಥ್ ವಿರುದ್ಧ ಪರಾಭವ ಗೊಂಡಿದ್ದಾರೆ.

ಶಿರಾ ಮತ್ತು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಚಿತ್ರಣವೇ ಭಿನ್ನ. ಕಾನೂನು ಮಂತ್ರಿಯಾಗಿ ತಮ್ಮ ಪುತ್ರ ಸಂತೋಷ್‌ಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ಜಯ ಚಂದ್ರ, ಸ್ವತಃ ತಾವೂ ಸೋತಿದ್ದು, ಪುತ್ರ ಸಂತೋಷ್ ಜಯಚಂದ್ರ ಅವರನ್ನು ಗೆಲ್ಲಿಸುವಲ್ಲಿಯೂ ವಿಫಲರಾಗಿದ್ದಾರೆ. 

ಬಳ್ಳಾರಿ ಜಿಲ್ಲೆಯ ವಿಜಯನಗರದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂ ಡಿದ್ದ ಆನಂದಸಿಂಗ್ ಬಿಜೆಪಿ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಅವರ ವಿರುದ್ಧ ಜಯಗಳಿಸಿದ್ದಾರೆ. ಆದರೆ, ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಅವರ
ಸಹೋದರ ದೀಪಕ್‌ಸಿಂಗ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅಪ್ಪ-ಮಕ್ಕಳ ರಾಜಕೀಯ ಬಿಜೆಪಿಯಲ್ಲೂ ಇದ್ದು, ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಚಿನ್ನಪ್ಪ ವಿರುದ್ಧ ಗೋವಿಂದ ಕಾರಜೋಳ ಗೆಲುವು ಸಾಧಿಸಿದ್ದರೆ, ಅವರ ಮಗ ಡಾ.ಗೋಪಾಲ ಕಾರಜೋಳ ನಾಗಠಾಣ ಕ್ಷೇತ್ರದಲ್ಲಿ ಪರಾಭವಗೊಂಡಿದ್ದಾರೆ. 

ನಿಪ್ಪಾಣಿ ಕ್ಷೇತ್ರದಲ್ಲಿ ಬಿಜೆಪಿಯ ಶಶಿಕಲಾ ಜೊಲ್ಲೆ ಅವರು ಗೆಲುವು ಸಾಧಿಸಿದ್ದರೆ, ಅವರ ಪತಿ ಅಣ್ಣಾ ಸಾಹೇಬ್ ಶಂಕರ್ ಜೊಲ್ಲೆ ತಮ್ಮ ಪ್ರತಿ ಸ್ಪರ್ಧಿ ಕಾಂಗ್ರೆಸ್ ನ ಗಣೇಶ್ ಹುಕ್ಕೇರಿ ಅವರ ವಿರುದ್ಧ ಸೋತಿದ್ದಾರೆ. ಕುಣಿಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೃಷ್ಣಕುಮಾರ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಅವರ ಸಹೋದರ ಡಿ.ನಾಗರಾಜಯ್ಯ ಸ್ಪರ್ಧಿಸಿದ್ದರು. ಇವರಿಬ್ಬರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಎಚ್.ಡಿ.ರಂಗ ನಾಥ್ ಗೆಲುವು ಸಾಧಿಸಿದ್ದಾರೆ. ರಾಮನಗರ, ಚನ್ನಪಟ್ಟಣದಿಂದ ಸ್ಪರ್ಧಿಸಿ ಎಚ್.ಡಿ. ಕುಮಾರಸ್ವಾಮಿ ಗೆಲುವಿನ ಪತಾಕೆ ಹಾರಿಸಿದ್ದು, ಅವರ ಸಹೋದರ ಎಚ್.ಡಿ.ರೇವಣ್ಣ ಹೊಳೆನರಸೀಪುರದಲ್ಲಿ ಗೆದ್ದಿದ್ದಾರೆ. 

ಇನ್ನು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರರಾದ ಕುಮಾರ ಬಂಗಾರಪ್ಪ ಮತ್ತು ಮಧುಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಸೊರಬ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದು, ತಮ್ಮ ಮಧು ಬಂಗಾರಪ್ಪ ಅವರನ್ನು ಅಣ್ಣ ಕುಮಾರ್ ಸೋಲಿಸಿದ್ದಾರೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR