Asianet Suvarna News Asianet Suvarna News

ಈ ಬಾರಿ ಸರ್ಕಾರ ಯಾರದ್ದು ..? ಇಲ್ಲಿದೆ 5 ಸಾಧ್ಯತೆ

 ವಿವಿಧ ಮತದಾನೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ರಚನೆಯಾಗುವ ಭವಿಷ್ಯವಾಣಿ ನುಡಿದ ಬೆನ್ನಲ್ಲೇ ರಾಜ್ಯದಲ್ಲಿ ಯಾವ ಪಕ್ಷದ ನೇತೃತ್ವದ ಸರ್ಕಾರ ರಚನೆಯಾಗುತ್ತದೆ, ಯಾರು  ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲ ರಾಜಕಾರಣದಲ್ಲಿ ತೀವ್ರವಾಗಿದೆ. 

Karnataka election : Who will form the government

ಬೆಂಗಳೂರು (ಮೇ 14) : ವಿವಿಧ ಮತದಾನೋತ್ತರ ಸಮೀಕ್ಷೆಗಳು ಅತಂತ್ರ ವಿಧಾನಸಭೆ ರಚನೆಯಾಗುವ ಭವಿಷ್ಯವಾಣಿ ನುಡಿದ ಬೆನ್ನಲ್ಲೇ ರಾಜ್ಯದಲ್ಲಿ ಯಾವ ಪಕ್ಷದ ನೇತೃತ್ವದ ಸರ್ಕಾರ ರಚನೆಯಾಗುತ್ತದೆ, ಯಾರು  ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಕುತೂಹಲ ರಾಜಕಾರಣದಲ್ಲಿ ತೀವ್ರವಾಗಿದೆ. 

ಹಾಗಂತ ಅತಂತ್ರ ವಿಧಾನಸಭೆ ರಚನೆಯಾಗುವುದೇ ನಿಶ್ಚಿತ ಎಂದೂ ಹೇಳಲಿಕ್ಕಾಗುವುದಿಲ್ಲ. ಮತದಾನೋತ್ತರ ಸಮೀಕ್ಷೆಗಳು ಒಂದು ರೀತಿ ಸುಳಿವು ನೀಡಿವೆ ಅಷ್ಟೆ. ಅದೇ ರೀತಿ ಆಗಬೇಕು ಎಂದೇನೂ ಇಲ್ಲ. ಅಸಂಖ್ಯಾತ ಮತದಾರರು ತಮ್ಮ ಗುಪ್ತ ನಿಲುವು ಹೊರ ಹಾಕಿರುವುದಿಲ್ಲ. ಅಂಥವರ ನಿಲುವಿನ ಮೇಲೆ ಮತದಾನೋತ್ತರ ಸಮೀಕ್ಷೆಯ ನಿರೀಕ್ಷೆಯೇ ಉಲ್ಟಾಪಲ್ಟಾ ಆಗುವ ಸಾಧ್ಯತೆಯೂ ಇರುತ್ತದೆ.

ಮೇಲ್ನೋಟಕ್ಕೆ ಅತಂತ್ರ ವಿಧಾನಸಭೆ ಎನ್ನಲಾಗುತ್ತಿದ್ದರೂ ಮತದಾರರು ಕಾಂಗ್ರೆಸ್ ಅಥವಾ ಬಿಜೆಪಿಗೆ ಸರಳ ಬಹುಮತದ ಬೆಂಬಲ ನೀಡಿದರೂ ಅಚ್ಚರಿ ಪಡಬೇಕಾಗಿಲ್ಲ. ಅತಂತ್ರ ವಿಧಾನಸಭೆ ರಚನೆಯಾದಲ್ಲಿ ಜೆಡಿಎಸ್ ನಿಲುವು ಏನು ಎಂಬುದು ಕೊನೆಯ ಕ್ಷಣದವರೆಗೂ ಅರಿತುಕೊಳ್ಳುವುದು ಕಷ್ಟವೇ ಆಗಬಹುದು. 

ಮುಂಬರುವ ಲೋಕಸಭಾ ಚುನಾವಣೆ ಮತ್ತು ರಾಷ್ಟ್ರ ರಾಜಕಾರಣವನ್ನು ಆಧರಿಸಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ .ಡಿ.ದೇವೇಗೌಡರು ಕಾಂಗ್ರೆಸ್ ಕಡೆ ಒಲವು ತೋರಬಹುದು. ಕಾಂಗ್ರೆಸ್ ನಾಯಕರ ಜೊತೆಗಿನ ವಿರಸ ಮತ್ತು ಬಿಜೆಪಿ ನಾಯಕರ ಜೊತೆಗಿನ ಸ್ನೇಹದ ಕಾರಣಕ್ಕಾಗಿ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿಯತ್ತ ಸ್ನೇಹದ ಹಸ್ತ ಚಾಚಬಹುದು.

ಬಿಜೆಪಿಗೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕು ಎಂಬ ಸಂಕಲ್ಪ ಇದ್ದರೆ, ದೇಶದಲ್ಲಿ ಆಡಳಿತ ಸಿಗುವ ಒಂದು ರಾಜ್ಯವನ್ನು ಯಾಕೆ ಬಿಟ್ಟುಕೊಡಬೇಕು ಎಂಬ ಚಿಂತೆ ಕಾಂಗ್ರೆಸ್ ಪಕ್ಷಕ್ಕಿದೆ. ಹೀಗಾಗಿ, ಉಭಯ ಪಕ್ಷಗಳ ಈ ಪೈಪೋಟಿಯಲ್ಲಿ ಜೆಡಿಎಸ್‌ಗೆ ಲಾಭವಾಗುವ 
ಸಾಧ್ಯತೆಯೇ ಹೆಚ್ಚಿದೆ. ಒಟ್ಟಿನಲ್ಲಿ ಮತದಾರರ ಮನದ ಜಾಡನ್ನು ನಿಖರವಾಗಿ ಹೇಳುವುದು ಸುಲಭವಲ್ಲ. 

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮ ಸಮದ ಹೋರಾಟ ನಡೆದಿರುವುದಂತೂ ಸ್ಪಷ್ಟ. ಮಂಗಳವಾರ ಫಲಿತಾಂಶ ಹೊರಬಿದ್ದ ನಂತರವಷ್ಟೇ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಆದರೆ, ಅದಕ್ಕೂ ಮೊದಲೇ ಹೊಸ ಸರ್ಕಾರದ ಸಾಧ್ಯತೆಗಳ ಬಗ್ಗೆ ಹಲವು ರೀತಿಯ ಲೆಕ್ಕಾಚಾರಗಳು ತೆರೆಮರೆಯಲ್ಲಿ ಆರಂಭವಾಗಿವೆ.


ಕಾಂಗ್ರೆಸ್ ಅಥವಾ ಬಿಜೆಪಿ ಪೂರ್ಣ ಬಹುಮತ ಗಳಿಸಿದರೆ

* ತನ್ನ ಸ್ವಂತ ಬಲದ ಮೇಲೆ ಕಾಂಗ್ರೆಸ್ ಸರ್ಕಾರ ರಚನೆ ಖಚಿತವಾದರೆ ಸಿಎಂ ಆಗುವ ಮೊದಲ ಅವಕಾಶ ಸಹಜವಾಗಿಯೇ ಈಗ ನಾಯಕತ್ವ ವಹಿಸಿದ್ದ ಸಿದ್ದರಾಮಯ್ಯ ಅವರಿಗೇ ಒಲಿದು ಬರಲಿದೆ. ಒಂದು ವೇಳೆ 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರಿಂದ ಈಗ ಬೇರೊಬ್ಬರಿಗೆ ಅವಕಾಶ ನೀಡೋಣ ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾದಲ್ಲಿ ಮಾತ್ರ ಸಿದ್ದರಾಮಯ್ಯ ಬದಲಾಗಬಹುದು.

* ಲೋಕಸಭಾ ಚುನಾವಣೆವರೆಗೆ ಸಿದ್ದರಾಮಯ್ಯ ಅವರನ್ನೇ ಮುಂದುವರೆಸಿ ನಂತರ ಬೇರೊಬ್ಬರನ್ನು ಸಿಎಂ ಆಗಿಸುವ ಸಂಭವವನ್ನೂ ಅಲ್ಲಗಳೆಯುಂತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಕಡೆಗಣಿಸುವುದು ಕಾಂಗ್ರೆಸ್ ನಾಯಕತ್ವಕ್ಕೂ ಸುಲಭವಲ್ಲ.

* ಒಂದು ವೇಳೆ ಬಿಜೆಪಿ ಪೂರ್ಣ ಬಹುಮತ ಗಳಿಸಿದಲ್ಲಿ ಹಾಲಿ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ಎಸ್ .ಯಡಿಯೂರಪ್ಪ ಅವರೇ ಮುಖ್ಯ ಮಂತ್ರಿಯಾಗಲಿದ್ದಾರೆ. ಆ ಬಗ್ಗೆ ಯಾವುದೇ ಅನುಮಾನ ಈಗ ಉಳಿದಿಲ್ಲ. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ
ಮಾಡದಿದ್ದರೆ ನನ್ನ ವಿಶ್ವಾಸಾರ್ಹತೆಗೆ ಧಕ್ಕೆ ಬರುತ್ತದೆ ಎಂಬ ಮಾತನ್ನು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಹೇಳಿರುವುದರಿಂದ ನಿಚ್ಚಳವಾಗಿದೆ.

ಬಿಜೆಪಿ 100ಕ್ಕೂ ಅಧಿಕ ಸ್ಥಾನ ಪಡೆದರೆ

ಬಿಜೆಪಿ 100ಕ್ಕೂ ಹೆಚ್ಚು ಸ್ಥಾನ ಗಳಿಸಿದರೂ ಮ್ಯಾಜಿಕ್ ಸಂಖ್ಯೆಯಾದ 113 ದಾಟದಿದ್ದರೆ ಆಗ ಪಕ್ಷೇತರರು ಅಥವಾ ಜೆಡಿಎಸ್ ನೆರವು ಬೇಕಾಗುತ್ತದೆ. ಅದು ಬಿಜೆಪಿ 100ರ ಮೇಲೆ ಎಷ್ಟು ಸ್ಥಾನ ಗಳಿಸುತ್ತದೆ ಎಂಬುದರ ಮೇಲೆ ನಿರ್ಧರಿತವಾಗಲಿದೆ. 

* ಮ್ಯಾಜಿಕ್ ಸಂಖ್ಯೆಯಾದ 113 ಕ್ಕೆ ಸಮೀಪ ಬಂದಾಗ ಸಹಜವಾಗಿ ಯೇ 2008 ರಂತೆ ಪಕ್ಷೇತರರ ನೆರವು ಪಡೆಯಲು ಬಿಜೆಪಿ ಮುಂದಾಗಲಿದೆ. ಮೊದಲ ಆಯ್ಕೆ ಪಕ್ಷೇತರ ಶಾಸಕರೇ ಆಗುತ್ತಾರೆ. ಆದರೆ, 113  ತಲುಪಲು ಬೇಕಾದಷ್ಟು ಸಂಖ್ಯೆಯ ಪಕ್ಷೇತರರು ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ಜೆಡಿಎಸ್ ಬೆಂಬಲ ಕೋರಬೇಕಾಗುತ್ತದೆ.

*100ರ ಸಂಖ್ಯೆ ದಾಟಿರುವುದರಿಂದ ಮುಖ್ಯಮಂತ್ರಿ ಸ್ಥಾನವನ್ನು ಕೇಳುವುದು ಜೆಡಿಎಸ್‌ಗೆ ಕಷ್ಟವಾಗಬಹುದು. ಆದರೆ, ತಮಗೆ ಅನುಕೂಲವಾದವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂಬ ಷರತ್ತು ವಿಧಿಸಬಹುದು. ಜೊತೆಗೆ ತಲಾ ಎರಡೂವರೆ ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೊಳ್ಳುವ ಷರತ್ತನ್ನೂ ಹಾಕಬಹುದು.

ಬಿಜೆಪಿ 100ಕ್ಕೂ ಕಡಿಮೆ ಸ್ಥಾನ ಪಡೆದರೆ
*ಒಂದು ವೇಳೆ ಬಿಜೆಪಿ 100ಕ್ಕಿಂತ ಕಡಿಮೆ ಸ್ಥಾನ ಗಳಿಸಿದರೆ ಜೆಡಿಎಸ್ ಪಾಳೆಯಕ್ಕೆ ಡಿಮ್ಯಾಂಡ್ ಮಾಡುವ ಅಧಿಕಾರ ಹೆಚ್ಚಾಗಿರುತ್ತದೆ. ಆಗ ಜೆಡಿಎಸ್ ಪಕ್ಷ ಹೇಳಿದಂತೆ ಕೇಳುವ ಅನಿವಾರ್ಯತೆ ಬಿಜೆಪಿಗೆ ಬಂದೊದಗಬಹುದು.

*ತಮಗೇ ಸಿಎಂ ಸ್ಥಾನ ನೀಡಿ ಎಂಬ ಪಟ್ಟನ್ನು ಜೆಡಿಎಸ್ ಮುಂದಿಡ ಬಹುದು. ಎರಡೂವರೆ ವರ್ಷ ಅಧಿಕಾರ ಹಂಚಿಕೆ ಸೂತ್ರ ರಚಿಸಿ ಮೊದಲ ಅವಧಿಯ ಅಧಿಕಾರ ತಮಗೆ ನೀಡುವಂತೆ ಕೇಳಬಹುದು. ಬಿಜೆಪಿ ನಾಯಕರು ಕೇಂದ್ರ ಸಂಪುಟದಲ್ಲಿ ಜೆಡಿಎಸ್‌ಗೆ ಸ್ಥಾನ ಕಲ್ಪಿಸುವ ಆಮಿಷ ಒಡ್ಡಬಹುದು. ಐಟಿ ದಾಳಿಯ ಭೀತಿಯಿಂದ ಜೆಡಿಎಸ್ ನಾಯಕರು ಬಿಜೆಪಿ ಮಾತಿಗೆ ಸಹಮತವನ್ನೂ ವ್ಯಕ್ತಪಡಿಸಬಹುದು.

* ಹಾಗಾದಲ್ಲಿ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ಅವರೂ ಆಗಬಹುದು ಅಥವಾ ಬೇರೆಯವರಿಗೂ ಅವಕಾಶ ಒದಗಿಬರಬಹುದು. ಹಿಂದಿನ ವಚನ ದ್ರೋಹ ಕಳಂಕ ನಿವಾರಿಸಿಕೊಳ್ಳುವ ಸಲುವಾಗಿ ಜೆಡಿಎಸ್ ಯಡಿಯೂರಪ್ಪ ಅವರನ್ನೇ ಬೆಂಬಲಿಸುವ ಸಾಧ್ಯತೆಯೂ ಇರುತ್ತದೆ.

ಬಹುಮತ ಬದಲು ಕಾಂಗ್ರೆಸ್ 100ಕ್ಕೂ ಅಧಿಕ ಸ್ಥಾನ ಪಡೆದರೆ

*ಸರ್ಕಾರ ರಚಿಸಲು ಅಗತ್ಯವಾದ 113ಕ್ಕೆ ಸಮೀಪದಲ್ಲಿ ಕಾಂಗ್ರೆಸ್ ಸ್ಥಾನ ಗಳಿಸಿದರೆ ಮೊದಲ ಆಯ್ಕೆ ಪಕ್ಷೇತರರೇ ಆಗಿರುತ್ತಾರೆ. ಬಹುಮತದ ಕೊರತೆ ತುಂಬುವಷ್ಟು ಪಕ್ಷೇತರರು ಆಯ್ಕೆಯಾಗಿರಬೇಕು ಅಷ್ಟೆ.

* ಅದಾಗದಿದ್ದರೆ ಜೆಡಿಎಸ್‌ಗೆ ಮೊರೆ ಹೋಗಬೇಕಾಗುತ್ತದೆ. ಆಗ ರಾಹುಲ್ ಗಾಂಧಿ ಬದಲು ಸೋನಿಯಾ ಗಾಂಧಿ ಅವರೇ ರಂಗ ಪ್ರವೇಶ ಮಾಡಬಹುದು. ರಾಷ್ಟ್ರ ರಾಜಕಾರಣವನ್ನು ಗುರಿಯಾಗಿಸಿಕೊಂಡು ಬೆಂಬಲ ನೀಡುವಂತೆ ಕೋರಬಹುದು.

* ಹಾಗಾದಲ್ಲಿ ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಬಹುದು. ಪಕ್ಷ ವಿಭಜನೆ ಭೀತಿಯಿಂದ ಸಿದ್ದರಾಮಯ್ಯ ಬದಲು ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡುವಂತೆ ಸರಳವಾದ ಷರತ್ತು ವಿಧಿಸಬಹುದು.
 

ಕಾಂಗ್ರೆಸ್ ಗೆ 100ಕ್ಕೂ ಕಡಿಮೆ ಸ್ಥಾನ ಬಂದರೆ

* ಒಂದು ವೇಳೆ ಕಾಂಗ್ರೆಸ್ಸಿಗೆ ೧೦೦ಕ್ಕಿಂತ ಕಡಿಮೆ ಸ್ಥಾನಗಳು ಬಂದಲ್ಲಿ ಆಗ ಜೆಡಿಎಸ್ ಬೆಂಬಲ ಪಡೆಯುವುದು ಸುಲಭವಾಗುವುದಿಲ್ಲ.  ಅದರ ಎಲ್ಲ ಷರತ್ತುಗಳನ್ನೂ ಒಪ್ಪುವ ಅನಿವಾರ್ಯತೆ ಸೃಷ್ಟಿಯಾಗಬಹುದು.

* ಅಂಥ ಸನ್ನಿವೇಶದಲ್ಲಿ ತಲಾ ಎರಡೂವರೆ ವರ್ಷಗಳ ಅಧಿಕಾರ ಹಂಚಿಕೆ ಜೊತೆಗೆ ಮೊದಲ ಅವಧಿಗೇ ಮುಖ್ಯಮಂತ್ರಿ ಸ್ಥಾನವನ್ನು  ತಮಗೆ ನೀಡುವಂತೆ ಜೆಡಿಎಸ್ ಬೇಡಿಕೆ ಇಡಬಹುದು. ಕಾಂಗ್ರೆಸ್ಸಿಗೆ ಹೆಚ್ಚು ಬೇಡಿಕೆ ಇಡುವುದಕ್ಕೆ ಅವಕಾಶವೇ ಇರದಂತೆ ಆಗಬಹುದು.

* ಒಂದು ವೇಳೆ ಮೊದಲ ಅವಧಿಗೆ ಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ಸಿಗೆ ಬಿಟ್ಟು ಕೊಟ್ಟರೂ ತಮ್ಮೊಂದಿಗೆ ಹೊಂದಿಕೊಳ್ಳುವವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಜೆಡಿಎಸ್ ಪಟ್ಟು ಹಿಡಿಯುವ ಸಾಧ್ಯತೆ ಇರುತ್ತದೆ. ಅಂಥ ಸಂದರ್ಭ ಹಿಂದೆ 2004ರಲ್ಲಿ  ಧರ್ಮಸಿಂಗ್ ಅವರನ್ನು ಬೆಂಬಲಿಸಿ, ಉಪಮುಖ್ಯಮಂತ್ರಿ ಪಟ್ಟ ಪಡೆದಂತೆ ಈ ಬಾರಿ ಸಚಿವ ಆರ್.ವಿ.ದೇಶಪಾಂಡೆ ಅಂಥವರನ್ನು  ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಕೇಳಬಹುದು. ಜೊತೆಗೆ ತಮಗೆ ಆಗದವರನ್ನು ಸಂಪುಟದಿಂದ ಹೊರಗಿಡುವಂತೆಯೂ ಷರತ್ತು ವಿಧಿಸಬಹುದು.

Follow Us:
Download App:
  • android
  • ios