Asianet Suvarna News Asianet Suvarna News

ಮತ ಸಮರಾಂಗಣದಲ್ಲಿ ಸ್ತ್ರೀಶಕ್ತಿ ಹೆಚ್ಚಳ : ಈ ಬಾರಿ ಚುನಾವಣೆ ವಿಶೇಷಗಳೇನು..?

ವಿಧಾನಸಭಾ ಚುನಾವಣಾ ರಣಾಂಗಣದಲ್ಲಿ ಕಳೆದ ಬಾರಿಗಿಂತ ಈ ಬಾರಿ ಸ್ತ್ರೀ ಶಕ್ತಿ ಹೆಚ್ಚಳ.. ಒಟ್ಟಾರೆ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ.. ರಾಜ್ಯದಲ್ಲಿ ಮೊದಲ ಬಾರಿಗೆ ಮೂರು ಬ್ಯಾಲೆಟ್‌ ಯೂನಿಟ್‌ ಬಳಕೆ... ಎರಡು ಕ್ಷೇತ್ರಗಳಲ್ಲಿ ನಾಲ್ಕು ಅಭ್ಯರ್ಥಿಗಳು ಮಾತ್ರ ಕಣಕ್ಕೆ. ಇದೆಲ್ಲಾ ಈ ಬಾರಿ ಚುನಾವಣೆಯ ವಿಶೇಷತೆಗಳು.

Karnataka Election Specialties

ಬೆಂಗಳೂರು:  ವಿಧಾನಸಭಾ ಚುನಾವಣಾ ರಣಾಂಗಣದಲ್ಲಿ ಕಳೆದ ಬಾರಿಗಿಂತ ಈ ಬಾರಿ ಸ್ತ್ರೀ ಶಕ್ತಿ ಹೆಚ್ಚಳ.. ಒಟ್ಟಾರೆ ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಇಳಿಮುಖ.. ರಾಜ್ಯದಲ್ಲಿ ಮೊದಲ ಬಾರಿಗೆ ಮೂರು ಬ್ಯಾಲೆಟ್‌ ಯೂನಿಟ್‌ ಬಳಕೆ... ಎರಡು ಕ್ಷೇತ್ರಗಳಲ್ಲಿ ನಾಲ್ಕು ಅಭ್ಯರ್ಥಿಗಳು ಮಾತ್ರ ಕಣಕ್ಕೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಂಡುಬಂದಿರುವ ಪ್ರಮುಖ ವಿಶೇಷತೆಗಳು.

ಕಳೆದ 2013ರ ಚುನಾವಣೆಯಲ್ಲಿ ಒಟ್ಟು 2948 ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಈ ಬಾರಿ ಚುನಾವಣೆಯಲ್ಲಿ 2655 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಒಟ್ಟಾರೆ 293 ಅಭ್ಯರ್ಥಿಗಳ ಇಳಿಮುಖವಾಗಿದೆ.

ರಾಜಕೀಯದಿಂದ ದೂರ ಉಳಿದಿರುವ ಮಹಿಳೆಯರು ಇತ್ತೀಚೆಗೆ ರಾಜಕೀಯದತ್ತ ಮುಖ ಮಾಡುತ್ತಿರುವುದು ಚುನಾವಣಾ ಕಣಕ್ಕಿಳಿದಿರುವ ಸಂಖ್ಯೆಯನ್ನು ಗಮನಿಸಿದರೆ ಗೊತ್ತಾಗುತ್ತದೆ. ಕಳೆದ ಚುನಾವಣೆಯಲ್ಲಿ 170 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದರೆ ಈ ಬಾರಿ 219 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 49 ಮಹಿಳಾ ಅಭ್ಯರ್ಥಿಗಳು ಹೆಚ್ಚಾಗಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ‘ಈ ಸಲದ ವಿಧಾನಸಭಾ ಚುನಾವಣೆಗೆ 3509 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. 583 ನಾಮಪತ್ರಗಳು ಹಿಂಪಡೆದರೆ, 271 ನಾಮಪತ್ರಗಳು ತಿರಸ್ಕೃತಗೊಂಡಿವೆ. ಒಟ್ಟು 854 ತಿರಸ್ಕೃತ ಮತ್ತು ಹಿಂಪಡೆದಿರುವ ನಾಮಪತ್ರಗಳಾಗಿವೆ. 2013ರ ವಿಧಾನಸಭಾ ಚುನಾವಣೆಗೆ 3692 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 744 ನಾಮಪತ್ರಗಳು ತಿರಸ್ಕೃತ ಮತ್ತು ಹಿಂಪಡೆಯಲಾಗಿತ್ತು’ ಎಂದು ಹೇಳಿದರು.

2013ರಲ್ಲಿ 2778 ಪುರುಷ ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ ಈ ಬಾರಿ 2436 ಪುರುಷ ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ.6ರಷ್ಟುಮಹಿಳೆ ಕಣಕ್ಕಿಳಿದ್ದರೆ ಈ ಬಾರಿ ಶೇ.9ಕ್ಕೆ ಏರಿಕೆಯಾಗಿದೆ. 2013ರಲ್ಲಿ 170 ಮಹಿಳೆ ಅಭ್ಯರ್ಥಿಗಳು ಸ್ಪರ್ಧಿಸಿದರೆ, ಈ ಬಾರಿ 219 ಮಂದಿ ಕಣಕ್ಕಿಳಿದಿದ್ದಾರೆ ಎಂದು ವಿವರಿಸಿದರು.

ಚಳ್ಳಕೆರೆ, ಸೇಡಂನಲ್ಲಿ ಕನಿಷ್ಠ:

ಚಳ್ಳಕೆರೆ ಮತ್ತು ಸೇಡಂ ಕ್ಷೇತ್ರದಲ್ಲಿ ಅತಿ ಕಡಿಮೆ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎರಡು ಕ್ಷೇತ್ರದಲ್ಲಿ ತಲಾ 4 ಮಂದಿ ಸ್ಪರ್ಧಿಸಿದ್ದಾರೆ. 583 ನಾಮಪತ್ರಗಳು ಹಿಂಪಡೆದಿದ್ದು, ಮುಳಬಾಗಿಲಿನಲ್ಲಿ 17 ನಾಮಪತ್ರ ಹಿಂಪಡೆಯಲಾಗಿದೆ. ಈ ಮೂಲಕ ಅತಿ ಹೆಚ್ಚು ನಾಮಪತ್ರಗಳನ್ನು ಹಿಂಪಡೆದಿರುವ ಕ್ಷೇತ್ರವಾಗಿದೆ. 25 ಕ್ಷೇತ್ರದಲ್ಲಿ 15ಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ನಿಂದ 222, ಬಿಜೆಪಿ 224, ಜೆಡಿಎಸ್‌ 210, ಬಿಎಸ್‌ಪಿ 18, ಸಿಪಿಐ 2, ಎನ್‌ಸಿಪಿ 14 ಕ್ಷೇತ್ರದಲ್ಲಿ ಸ್ಪರ್ಧಿಸಿವೆ. ಪಕ್ಷೇತರರು 1155 ಮಂದಿ ಮತ್ತು 800 ಇತರೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಮಾಹಿತಿ ನೀಡಿದರು.


ಮುಳಬಾಗಿಲಿನಲ್ಲಿ 3 ಬ್ಯಾಲೆಟ್‌ ಯೂನಿಟ್‌ ಬಳಕೆ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಮುಳಬಾಗಿಲು ಕ್ಷೇತ್ರದಲ್ಲಿ ಮೂರು ಬ್ಯಾಲೆಟ್‌ ಯೂನಿಟ್‌ಗಳನ್ನು ಬಳಸಲಾಗುತ್ತಿದೆ. ಮುಳಬಾಗಿಲು ಕ್ಷೇತ್ರದಲ್ಲಿ ಅತಿ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದ್ದು, ಒಟ್ಟು 61 ನಾಮಪತ್ರ ಸಲ್ಲಿಕೆಯಾಗಿದ್ದು, 39 ಮಂದಿ ಕಣದಲ್ಲಿ ಉಳಿದಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಮೂರು ಬ್ಯಾಲೆಟ್‌ ಯೂನಿಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios