ವಿಫಲವಾಯ್ತು ನೋಟಾ ಅಭಿಯಾನ

Karnataka Election Result : Over three lakh voters opt for NOTA
Highlights

ಈ ಬಾರಿ ನೋಟಾ (ತಟಸ್ಥ ಮತ) ಚಲಾಯಿಸಬೇಕು ಎಂದು ಪ್ರಮುಖವಾಗಿ ಮೂರು ಕಡೆ ಕರೆ ನೀಡಲಾಗಿತ್ತು. ಆದರೆ ನೋಟಾ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿ ವಿಫಲವಾಗಿವೆ

ಈ ಬಾರಿ ನೋಟಾ (ತಟಸ್ಥ ಮತ) ಚಲಾಯಿಸಬೇಕು ಎಂದು ಪ್ರಮುಖವಾಗಿ ಮೂರು ಕಡೆ ಕರೆ ನೀಡಲಾಗಿತ್ತು. ಆದರೆ ನೋಟಾ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವಲ್ಲಿ ವಿಫಲವಾಗಿವೆ.

ಬೆಂಗಳೂರು : ನೋಟಾ ಮತಗಳನ್ನು ಚಲಾಯಿಸಬೇಕು ಎಂದು ಗದಗ ಜಿಲ್ಲೆಯ ನರಗುಂದದಲ್ಲಿ ಮಹದಾಯಿ ಹೋರಾಟ ಗಾರರು ಕರೆ ನೀಡಿದರು. ಮಹದಾಯಿ ಹೋರಾಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಸ್ಪಂದನೆ ಮಾಡುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿ ವೀರೇಶ ಸೊಬರದಮಠ ಅವರ ನೇತೃ ತ್ವದ ಮಹದಾಯಿ ಹೋರಾಟ ಗಾರರು ‘ನೋಟಾ’ ಮತ ಚಲಾವಣೆಗೆ ಕರೆ ನೀಡಿದರು. 

ಆದರೆ ಮಹದಾಯಿ ಹೋರಾಟದ ಕೇಂದ್ರ ಬಿಂದು ವಾದ ನರಗುಂದದಲ್ಲಿ ಇದಕ್ಕೆ ನೀರಸ ಸ್ಪಂದನೆ ವ್ಯಕ್ತವಾಗಿದೆ. ಇಲ್ಲಿ ಬಿದ್ದ ‘ನೋಟಾ’ ಮತಗಳು ಕೇವಲ 1173. ನರಗುಂದದ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲರ ಗೆಲುವಿನ ಅಂತರ 8 ಸಾವಿರ. ಇನ್ನು ನವಲಗುಂದದಲ್ಲಿ ಕೂಡ ನೋಟಾ ಮತ 1900 ಮಾತ್ರ. 

ಮೂರು ಲಕ್ಷಕ್ಕೂ ಅಧಿಕ ನೋಟಾ
ಬೆಂಗಳೂರು: ರಾಜಕೀಯ ಪಕ್ಷ ಹಾಗೂ ಅವುಗಳ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ, ಸಿಟ್ಟು, ಆಕ್ರೋಶವನ್ನು ರಾಜ್ಯದ ಮತದಾರರು ದೊಡ್ಡ ಪ್ರಮಾಣದಲ್ಲಿ ವ್ಯಕ್ತಪಡಿಸಿದ್ದಾರೆ. ಕಣದಲ್ಲಿರುವ ಯಾವುದೇ ಅಭ್ಯರ್ಥಿಗಳ ಬಗ್ಗೆ ತಮ್ಮ ಒಲವಿಲ್ಲ ಎಂದು ಮತ ಯಂತ್ರದಲ್ಲಿ ದಾಖಲು ಮಾಡುವ ‘ನೋಟಾ’ ಮತವನ್ನು ಬರೋಬ್ಬರಿ 308451 ಮಂದಿ ಚಲಾಯಿಸಿದ್ದಾರೆ. ಒಟ್ಟು ಶೇ.0.9ರಷ್ಟು ನೋಟಾ ಮತದಾನವಾಗಿದೆ.

ನೇತ್ರಾವತಿ ತಿರುವಿನಲ್ಲೂ ಫಲಿಸದ ನೋಟಾ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎತ್ತಿನಹೊಳೆ-ನೇತ್ರಾವತಿ ಹೋರಾಟಗಾರರು ಕಳೆದ ಬಾರಿಯಂತೆ ಈ ಬಾರಿಯೂ ನೋಟಾ ಅಭಿಯಾನ ಹಮ್ಮಿಕೊಂಡಿದ್ದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಬಗ್ಗೆ ಇಲ್ಲಿ ನೋಟಾ ಹೋರಾಟಗಾರರಿಗೆ ಸಮಾನ ಸಿಟ್ಟಿತ್ತು. ಆದರೆ ಈ ಸಿಟ್ಟು ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ. ಒಟ್ಟಾರೆ ಜಿಲ್ಲೆಯ 8 ಕ್ಷೇತ್ರಗಳಲ್ಲಿ 7994 ನೋಟಾ ಮತಗಳು ಚಲಾವಣೆ ಯಾಗಿವೆ. ಮಂಗಳೂರಲ್ಲಿ 821  ಮಂಗಳೂರು ಉತ್ತರದಲ್ಲಿ 1166, ಮಂಗಳೂರು ದಕ್ಷಿಣದಲ್ಲಿ 1063, ಪುತ್ತೂರಿನಲ್ಲಿ 1127, ಬಂಟ್ವಾಳದಲ್ಲಿ 946, ಬೆಳ್ತಂಗಡಿಯಲ್ಲಿ 1245, ಸುಳ್ಯದಲ್ಲಿ 1310, ಮೂಡುಬಿದಿರೆಯಲ್ಲಿ 1037 ನೋಟಾ ಮತಗಳು ಬಿದ್ದಿವೆ. ಆದರೆ ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲವಿನ ಅಂತರ ಕ್ರಮವಾಗಿ 19739, 26648, 16075, 18946, 15971, 22648, 26068, 29654 ಆಗಿರುವುದರಿಂದ ನೋಟಾ ಯಾವುದೇ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. 

ವರುಣಾದಲ್ಲಿಲ್ಲ ನೋಟಾ ಪರಿಣಾಮ : ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಣೆ ಖಂಡಿಸಿ, ವಿಜಯೇಂದ್ರ ಅವರ ಅಭಿಮಾನಿಗಳು ಎನ್ನಲಾದ ಕೆಲವರು ‘ನೋಟಾ’ ಮತಗಳ ಚಲಾವಣೆಗೆ ಕರೆ ನೀಡಿ ಕರಪತ್ರಗಳನ್ನು ಹಂಚಿದ್ದರು. ಆದರೆ ಇಲ್ಲಿ ಬಿದ್ದ ನೋಟಾ ಮತಗಳು ಕೇವಲ 1497.

ಬಿಜೆಪಿಗಿಂತ ಕಾಂಗ್ರೆಸ್ ಗೆ ಹೆಚ್ಚು ವೋಟ್ ಶೇರ್ 
ಬೆಂಗಳೂರು: ಬಿಜೆಪಿ 104  ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಮತಗಳಿಕೆ ಪ್ರಮಾಣದಲ್ಲಿ ಎರಡನೇ ಸ್ಥಾನದಲ್ಲಿದೆ. ಬಿಜೆಪಿಗೆ ಒಟ್ಟು 130,85,311 ಮತಗಳು ದೊರಕಿದ್ದು, ಅದರ ಪ್ರಮಾಣ ಶೇ.36.2ರಷ್ಟು. ಇದೇ ವೇಳೆ ಕಾಂಗ್ರೆಸ್ ಪಕ್ಷ  1,37,27,470 ಮತ ಗಳಿಸಿದ್ದು, ಅದರ ಪ್ರಮಾಣ ಶೇ.38ರಷ್ಟು. ಜೆಡಿಎಸ್‌ಗೆ 66, 41,885 ಮತ ಸಿಕ್ಕಿದ್ದು, ಕೇವಲ ಶೇ.18.4ರಷ್ಟು ಮತ ಪಡೆದಿದೆ. ಪಕ್ಷೇತರರು ಒಟ್ಟಾರೆ 14,34,217 ಮತ ಗಳಿಸಿದ್ದು, ಶೇ.4 ರಷ್ಟು ಮತ ಪಡೆದಿದ್ದಾರೆ. ಮೊದಲ ಬಾರಿಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಮಹಿಳಾ ಎಂಪವರ್‌ಮೆಂಟ್ ಪಾರ್ಟಿಗೆ (ಎಂಇಪಿ) 97,645 ಮತಗಳು ಲಭ್ಯವಾಗಿದೆ. ಈ ಮೂಲಕ ಶೇ.0.3ರಷ್ಟು ಮತ ಗಳಿಸಿದೆ.

loader