ಬೆಂಗಳೂರು: ಅಧಿಕಾರದ ಹೊಸ್ತಿನಲ್ಲಿ ನಿಂತು ಗದ್ದುಗೆಗೇರಲು ಸಾಧ್ಯವಾಗದೆ ಕೈ-ಕೈ ಹಿಸುಕಿಕೊಳ್ಳುತ್ತಿರುವ ಬಿಜೆಪಿ, ಸ್ವಯಂ ಕೃತಾಪರಾಧದಿಂದ ಗೆಲ್ಲಬಹುದಾದ ಐದಾರು ಕ್ಷೇತ್ರಗಳನ್ನು ಕಳೆದುಕೊಂಡಿದೆ. ಟಿಕೆಟ್ ಗೊಂದಲಗಳಿಂದ ವರುಣ, ಹನೂರು, ಚಾಮರಾಜನಗರ, ಗುಬ್ಬಿ, ಅರಸಿಕೆರೆ ಹಾಗೂ ನೆಲಮಂಗಲ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಾಣುವಂತಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕಿಳಿದ ಬಿಜೆಪಿ, ವರುಣ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪುತ್ರನ ಎದುರಾಳಿಯಾಗಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಅಖಾಡಕ್ಕಿಳಿಸಲು ಯತ್ನಿಸಿತು. 

ಇನ್ನು ವಿಜಯೇಂದ್ರ ಸಹ, ಕೆಲವೇ ದಿನಗಳಲ್ಲಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಅಖಾಡವನ್ನು ಹದಗೊಳಿಸಿಕೊಂಡಿದ್ದರು. ಆದರೆ  ಕೊನೆ ಗಳಿಗೆಯಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಿಸಿದ ಬಿಜೆಪಿ, ಆ ಕ್ಷೇತ್ರದಲ್ಲಿ ಅನಾಮಧೇಯ ವ್ಯಕ್ತಿಯನ್ನು ಕಣಕ್ಕಿಳಿಸಿತು. 

ಇದು ಲಿಂಗಾಯತ ಸಮುದಾಯದ ಕೋಪಕ್ಕೂ ಕಾರಣವಾಯಿತು. ಅದೇ ರೀತಿ ಗುಬ್ಬಿಯಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು ಒತ್ತಡಕ್ಕೆ ಮಣಿದು ದಿಲೀಪ್ ಕುಮಾರ್‌ಗೆ ಟಿಕೆಟ್ ನೀಡದ ಯಡಿಯೂರಪ್ಪ, ಅಲ್ಲಿ ಬೆಟ್ಟಸ್ವಾಮಿ ಅವರ ಸ್ಪಧೆರ್ಗೆ ಹಸಿರು ನಿಶಾನೆ ತೋರಿದ್ದರು. 

ಆ ಕ್ಷೇತ್ರದ ವ್ಯಾಪ್ತಿಯಲ್ಲಿ ಜಿ.ಪಂ.-ತಾ.ಪಂ. ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಬಿಜೆಪಿ, ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಶ್ರೀನಿವಾಸ್ ಗೆಲುವಿನ ಓಟ ತಡೆಯುವಲ್ಲಿ ವಿಫಲವಾಯಿತು. ಅದೇ ರೀತಿ ನೆಲಮಂಗಲದಲ್ಲೂ ಸಹ ಸ್ಥಳೀಯ ಘಟಕದ ವಿರೋಧದ ನಡುವೆ ಮಾಜಿ ಶಾಸಕ ಎಂ.ವಿ.ನಾಗರಾಜ್ ಅವರನ್ನೇ ಅಭ್ಯರ್ಥಿ ಮಾಡಲಾಯಿತು. ಇನ್ನು ಸೋಮಣ್ಣ ಮತ್ತು ಅವರ ಪುತ್ರ ಅರುಣ್ ಸೋಮಣ್ಣ ಅವರಿಗೆ ಟಿಕೆಟ್ ನೀಡುವಲ್ಲಿನ ಗೊಂದಲದ ಪರಿಣಾಮ ಚಾಮರಾಜನಗರ, ಹನೂರು ಮತ್ತು ಅರಸೀಕೆರೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲಾಯಿತು.

https://kannada.asianetnews.com/karnataka-assembly-election-2018/karnataka-election-who-will-form-the-government-in-karnataka-p8stqj

https://kannada.asianetnews.com/karnataka-assembly-election-2018/karnataka-assembly-election-resort-politics-in-karnataka-p8sudi