ಕರಾವಳಿ : ಹಿಂದುತ್ವದ ಅಲೆಯಿಂದ ಕೊಚ್ಚಿಹೋದ ಕಾಂಗ್ರೆಸ್

Karnataka Election Result : BJP Sweeps Coastal Karnataka
Highlights

ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯ ಪ್ರತಿಧ್ವನಿ, ಬಿಜೆಪಿಯ ಪ್ರಬಲ ಹಿಂದುತ್ವವಾದ ಹಾಗೂ ರಾಜ್ಯ ಸರ್ಕಾರದ ಆಡಳಿತ ವಿರೋಧಿ ಅಲೆಗೆ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಯ ಮೋಡಿ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಲಾಭ ತಂದುಕೊಟ್ಟಿದೆ.

ಆತ್ಮಭೂಷಣ್

ಮಂಗಳೂರು : ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯ ಪ್ರತಿಧ್ವನಿ, ಬಿಜೆಪಿಯ ಪ್ರಬಲ ಹಿಂದುತ್ವವಾದ ಹಾಗೂ ರಾಜ್ಯ ಸರ್ಕಾರದ ಆಡಳಿತ ವಿರೋಧಿ ಅಲೆಗೆ ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಯ ಮೋಡಿ ಕರಾವಳಿ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಲಾಭ ತಂದುಕೊಟ್ಟಿದೆ.  ಇದರ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯಲ್ಲಿ 2013 ರ ಫಲಿತಾಂಶ ತಿರುವುಮುರುವಾದರೆ, ಉಡುಪಿ ಜಿಲ್ಲೆಯಲ್ಲಿ ಐದು ಸ್ಥಾನ ಕೂಡ ಬಿಜೆಪಿ ಪಾಲಾಗಿದೆ. 

ಉತ್ತರ ಕನ್ನಡದಲ್ಲಿ 6 ಸ್ಥಾನಗಳ ಪೈಕಿ 4 ಸ್ಥಾನಕ್ಕೆ ಬಿಜೆಪಿ ಜಿಗಿದಿದೆ. ಕಳೆದ ಬಾರಿ ಈ ಜಿಲ್ಲೆಗಳಲ್ಲಿ ಬಿಜೆಪಿ ತಲಾ ಒಂದೊಂದು ಸ್ಥಾನ ಗಳಿಸಿತ್ತು. 2013 ರಲ್ಲಿ ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 19 ಸ್ಥಾನಗಳ ಪೈಕಿ ಕಾಂಗ್ರೆಸ್ 13 ಹಾಗೂ ಬಿಜೆಪಿ ಕೇವಲ 3 ಸ್ಥಾನಗಳಲ್ಲಿ ಜಯಿಸಿತ್ತು. ಈ ಬಾರಿ ಬಿಜೆಪಿ 16 ಸ್ಥಾನಕ್ಕೆ ಏರಿಕೆಯಾದರೆ, ಕಾಂಗ್ರೆಸ್ ಕೇವಲ ೩ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್‌ಗೆ ೧೬ ಸ್ಥಾನ ನಷ್ಟ ಉಂಟಾದರೆ, ಬಿಜೆಪಿ ೩ ಸ್ಥಾನಗಳನ್ನು ಉಳಿಸಿಕೊಂಡಿದೆ. ಜೆಡಿಎಸ್‌ನದು ಈ ಬಾರಿಯೂ ಶೂನ್ಯ ಸಂಪಾದನೆ.

ದ.ಕ. ಜಿಲ್ಲೆಯಲ್ಲಿ ಧರ್ಮಾಧರಿತ ಬೆಂಬಲ?: ದ.ಕ. ಜಿಲ್ಲೆಯ ಒಟ್ಟು 8 ಕ್ಷೇತ್ರಗಳ ಪೈಕಿ 7  ಕ್ಷೇತ್ರಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಈ ಮೂಲಕ 2013 ರ ಫಲಿತಾಂಶವನ್ನು ಕಾಂ ಗ್ರೆಸ್‌ಗೆ ತಿರುಗೇಟು ನೀಡಿದೆ. ಆಗ ಕಾಂಗ್ರೆಸ್ 7 ಸ್ಥಾನಗಳಲ್ಲಿ ಗೆದ್ದು, ಒಂದರಲ್ಲಿ ಬಿಜೆಪಿ ಜಯಗಳಿಸಿತ್ತು. ಈ ಬಾರಿ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮಾನ ಉಳಿಸಿಕೊಂಡಿದೆ. 

ದ.ಕ.ಜಿಲ್ಲೆಯಲ್ಲಿ ಕಳೆದ ಐದು ವರ್ಷ ಅವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಹತ್ಯೆ, ಜಿಲ್ಲೆಯಲ್ಲಿ ಸುದೀರ್ಘ ಅವಧಿಯ  ನಿಷೇಧಾಜ್ಞೆ, ಸಂಘ-ಪರಿವಾರದ ಆಡಳಿತದ ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದ ಬಿಸಿಯೂಟ ಅನುದಾನ ಸ್ಥಗಿತಗೊಳಿಸಿದ್ದು, ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ನಿಂದನೆ, ಕಣ್ಣೀರು, ಅಲ್ಪಸಂಖ್ಯಾತರ ಓಲೈಕೆ, ಗೋಹತ್ಯೆ ವಿಚಾರ ಇಲ್ಲಿ ಕಾಂಗ್ರೆಸ್ ಮುಳುವಿಗೆ ಕಾರಣವಾಗಿದೆ ಎಂದೇ ವಿಶ್ಲೇಷಿಸಲಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಮತ ವಿಭಜನೆಯಾಗದಂತೆ  ನೋಡಿ ಕೊಳ್ಳಲು ಎಸ್‌ಡಿಪಿಐ ಜೊತೆಗಿನ ಕಾಂಗ್ರೆಸ್ ಒಳಒಪ್ಪಂದ ಮಾಡಿಕೊಂಡಿತ್ತು. 

ಇದು ಕೂಡ ಬಿಜೆಪಿ ಪರವಾಗಿ ಹಿಂದೂ ಮತಗಳ ಕ್ರೋಡೀಕರಣಕ್ಕೆ ಕಾರಣವಾಯಿತು ಎಂದು ತರ್ಕಿಸಲಾಗಿದೆ. ಜಿಲ್ಲೆಯಲ್ಲಿ ಹಿಂದೂ ವರ್ಸಸ್ ಕಾಂಗ್ರೆಸ್ ಎಂದೇ ಬಿಜೆಪಿ ಚುನಾವಣಾ ಪ್ರಚಾರ ನಡೆಸಿದ್ದು, ಇದು ಯಶಸ್ವಿಯಾಗಿದೆ. ಕಾಂಗ್ರೆಸ್ ಸಚಿವರು, ಶಾಸಕರು ನಡೆಸಿದ ಅಭಿವೃದ್ಧಿ ಕಾರ್ಯ ಈ ಗೆಲುವಿನ ಅಲೆಯಲ್ಲಿ ಕೊಚ್ಚಿಹೋದಂತಾಗಿದೆ. ಇಲ್ಲಿ ಉಸ್ತುವಾರಿ ಸಚಿವ ರಮಾನಾಥ ರೈ, ಮಾಜಿ ಸಚಿವ ಅಭಯಚಂದ್ರ ಜೈನ್, ಹಿರಿಯ ಕಾಂಗ್ರೆಸಿಗ ವಸಂತ ಬಂಗೇರ, ಏಕೈಕ ಮಹಿಳಾ ಶಾಸಕಿ ಶಕುಂತಳಾ ಶೆಟ್ಟಿ, ಸರ್ಕಾರಿ ಕೆಲಸಬಿಟ್ಟು ಕಾಂಗ್ರೆಸ್ ಸೇರಿ ಶಾಸಕರಾಗಿದ್ದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ ಎಲ್ಲರೂ ದಯನೀಯವಾಗಿ ಸೋಲು ಕಂಡಿದ್ದಾರೆ. 

ಮುಸ್ಲಿಂ ಬಾಹುಳ್ಯ ಕ್ಷೇತ್ರದ ಸಚಿವರಾಗಿದ್ದ ಯು.ಟಿ.ಖಾದರ್ ಮಾತ್ರ ಗೆದ್ದಿದ್ದಾರೆ. ಕೊನೆಕ್ಷಣದಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದರೂ ಸಂಘ-ಪರಿವಾರ ಹಾಗೂ ಬಿಜೆಪಿಯ ತಳಮಟ್ಟದ ಪ್ರಚಾರ ತಂತ್ರಕ್ಕೆ ಮತದಾರರು  ಶರಣಾಗಿದ್ದಾರೆ. ಉಡುಪಿಯಲ್ಲಿ ಶೇ.100 ಬಿಜೆಪಿ: ಕಳೆದ ಅವಧಿಯಲ್ಲಿ 5 ಸ್ಥಾನಗಳ ಪೈಕಿ ಕೇವಲ ಒಂದರಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಕ್ಲೀನ್ ಸ್ವೀಪ್ ಮಾಡಿದೆ. ಈ ಮೂಲಕ 2004 ರ ಫಲಿತಾಂಶ ಪುನರಾವರ್ತನೆಯಾಗಿದೆ. ಆಗ ಕೂಡ ಬಿಜೆಪಿ 5 ಸ್ಥಾನಗಳಲ್ಲಿ ಗೆದ್ದಿತ್ತು. ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಬೈಂದೂರಿನ ಗೋಪಾಲ ಪೂಜಾರಿ ಸೋಲು ಕಂಡಿದ್ದಾರೆ.

ಕಾರ್ಕಳದಲ್ಲಿ ಹಾಲಿ ಶಾಸಕ ಸುನಿಲ್ ಕುಮಾರ್ 4 ನೇ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಪಕ್ಷೇತರನಾಗಿದ್ದು ಬಿಜೆಪಿ ಸೇರಿದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಉತ್ತರ ಕನ್ನಡದಲ್ಲಿ ಹಿಂದುತ್ವ ಅಲೆ: ಕಳೆದ ಅವಧಿಯಲ್ಲಿ 6 ಸ್ಥಾನಗಳಲ್ಲಿ 3 ಸ್ಥಾನಗಳಲ್ಲಿ ಕಾಂಗ್ರೆಸ್, 2  ಸ್ಥಾನಗಳಲ್ಲಿ ಪಕ್ಷೇತರ ಹಾಗೂ 1 ಸ್ಥಾನದಲ್ಲಿ ಬಿಜೆಪಿ ಜಯಗಳಿಸಿತ್ತು. ನಂತರ ಪಕ್ಷೇತರರು ಕಾಂಗ್ರೆಸ್ ಸೇರಿದ್ದರು. ಈ ಬಾರಿ ಕಾಂಗ್ರೆಸ್ ಸೇರಿದ್ದ ಕಾರವಾರ ಕ್ಷೇತ್ರದ ಸತೀಶ್ ಸೈಲ್ ಮತ್ತು ಭಟ್ಕಳದಲ್ಲಿ ಮಾಂಕಾಳ ವೈದ್ಯ, ಕುಮಟಾದಲ್ಲಿ ಹಾಲಿ ಶಾಸಕಿ ಶಾರದಾ ಶೆಟ್ಟಿ ಸೋತಿದ್ದಾರೆ. 

ಆದರೆ, ಹಳಿಯಾಲದಲ್ಲಿ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ 8 ನೇ ಬಾರಿ ಗೆಲುವು ಸಾಧಿಸಿದ್ದಾರೆ. ಯಲ್ಲಾಪುರದಲ್ಲಿ ಕಾಂಗ್ರೆಸ್‌ನ ಶಿವರಾಮ ಹೆಬ್ಬಾರ್ 2ನೇ ಬಾರಿ ಗೆದ್ದಿದ್ದಾರೆ. ಭಟ್ಕಳದಲ್ಲಿ ಸುನಿಲ್ ನಾಯ್ಕ್, ಕುಮಟಾದಲ್ಲಿ ದಿನಕರ ಶೆಟ್ಟಿ, ಕಾರವಾರದಲ್ಲಿ ರೂಪಾಲಿ ನಾಯಕ್ ಮೊದಲ ಬಾರಿಗೆ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ. ಶಿರಸಿಯಲ್ಲಿ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 6 ನೇ ಬಾರಿ ಗೆದ್ದಿದ್ದಾರೆ. ಹೊನ್ನಾವರ ಮತ್ತುಭಟ್ಕಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಘಟನೆಯ ನಂತರದ ಅನುಕಂಪ ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಅಲ್ಲದೆ ಹಿಂದುತ್ವ ಮತ್ತು ಮೋದಿ ಅಲೆ ಬಿಜೆಪಿ ಗೆಲುವಿಗೆ ಸಾಕಷ್ಟು ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ. 

loader