ಬೆಂಗಳೂರು : ಚುನಾವಣೆ ಕಾಲ ಎಂದರೆ ಧ್ರುವೀಕರಣ ಆಗುವ ಸಮಯ. ಅಸಮಾಧಾನ, ಟಿಕೆಟ್ ನಿರಾಕರಣೆ, ಭವಿಷ್ಯದ ಹಿತದೃಷ್ಟಿಯಿಂದ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಸೇರುವುದು ಮಾಮೂಲಿ. ಇದಕ್ಕೆ ಕಾಂಗ್ರೆಸ್ ಸಹ ಹೊರತಲ್ಲ. ಈ ಬಾರಿ ಜೆಡಿಎಸ್, ಬಿಜೆಪಿಯ ಅನೇಕ ಮುಖಂಡರು ಕಾಂಗ್ರೆಸ್ ಸೇರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಕೆಲವರು ಮಾತ್ರ ಗೆಲುವಿನ ಸಹಿ ಕಂಡರೆ, ಅನೇಕರು ಕಹಿ ಅನುಭವಿಸಿದರು. ಕಾಂಗ್ರೆಸ್ ತೊರೆದು ಜೆಡಿಎಸ್ ಮತ್ತು ಬಿಜೆಪಿಗೆ ಆಗಮಿಸಿದ ನಾಯಕರು ಸಹ ಸಿಹಿ-ಕಹಿ ಅನುಭವಿಸಿದ್ದಾರೆ. 

ತೀವ್ರ ವಿರೋಧದ ನಡುವೆಯೂ ಗಣಿ ಅಕ್ರಮ ಆರೋಪ ಎದುರಿಸುತ್ತಿದ್ದ ಆನಂದ್ ಸಿಂಗ್ (ವಿಜಯನಗರ), ಬಿ.ನಾಗೇಂದ್ರ(ಬಳ್ಳಾರಿ ಗ್ರಾಮಾಂತರ), ಸತೀಶ್ ಸೈಲ್ (ಕಾರವಾರ), ನೈಸ್ ಯೋಜನೆ ಅಕ್ರಮ ಆರೋಪ ಎದುರಿಸುತ್ತಿರುವ ಅಶೋಕ್ ಖೇಣಿ (ಬೀದರ್ ದಕ್ಷಿಣ) ಹಾಗೂ ಬಹಳ ವರ್ಷಗಳ ಕಾಲ ಬಿಜೆಪಿ ಜತೆ ಗುರುತಿಸಿಕೊಂಡಿದ್ದ ಮೂಲತಃ ತುಮಕೂರಿನ ತುರುವೇಕೆರೆಯ ಎಂ.ಡಿ.ಲಕ್ಷ್ಮೀನಾರಾಯಣ (ಬೆಳಗಾವಿಯ ದಕ್ಷಿಣ), ಕೆಜೆಪಿಯಿಂದ ಆಯ್ಕೆಯಾಗಿದ್ದ ಬಿ.ಆರ್. ಪಾಟೀಲ್ (ಆಳಂದ), ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದ ಮಂಕಾಳ ಸುಬ್ಬವೈದ್ಯ (ಭಟ್ಕಳ) ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಈ ಪೈಕಿ ಬಳ್ಳಾರಿ ಆನಂದಸಿಂಗ್, ಬಿ. ನಾಗೇಂದ್ರ ಮಾತ್ರ ಗೆಲುವು ಸಾಧಿಸಿದ್ದಾರೆ, ಆದರೆ ಸತೀಶ್ ಸೈಲ್, ಎಂ.ಡಿ. ಲಕ್ಷ್ಮೀನಾರಾಯಣ, ಅಶೋಕ್ ಖೇಣಿ, ಬಿ.ಆರ್. ಪಾಟೀಲ್ ಪರಾಭವ ಗೊಂಡಿದ್ದಾರೆ. 

ಆಳಂದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿ.ಆರ್. ಪಾಟೀಲ್ ಕೇವಲ 697 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೇದಾರ ವಿರುದ್ಧ ಸೋಲು ಅನುಭವಿಸಿದ್ದರೆ, ಎಂ.ಡಿ.ಲಕ್ಷ್ಮೀನಾರಾಯಣ ಸುಮಾರು 58 ಸಾವಿರ ಮತಗಳ ಅಂತರದಿಂದ ಸೋತಿದ್ದಾರೆ.
ಜೆಡಿಎಸ್‌ನಲ್ಲಿದ್ದರೆ ರಾಜಕೀಯ ಭವಿಷ್ಯವಿಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಕಣಕ್ಕಿಳಿದಿದ್ದ ಲಿಂಗಸುಗೂರು ಕ್ಷೇತ್ರದ ಮಾನಪ್ಪ ವಜ್ಜಲ್, ಬಸವಕಲ್ಯಾಣ ಕ್ಷೇತ್ರದ ಮಲ್ಲಿಕಾರ್ಜುನ ಖೂಬಾ ಸೋಲುಂಡಿದ್ದಾರೆ. 

ಆದರೆ, ರಾಯಚೂರು ಕ್ಷೇತ್ರದ ಡಾ.ಶಿವರಾಜ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಹೊಸದುರ್ಗ ಕ್ಷೇತ್ರದಿಂದ ಗೂಳಿಹಟ್ಟಿ ಶೇಖರ್ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯಿಂದ ಜೆಡಿಎಸ್‌ಗೆ ಬಂದು ಕಾರವಾರದಿಂದ ಸ್ಪರ್ಧಿಸಿದ್ದ ಆನಂದ್ ಅಸ್ನೋಟಿಕರ್ ಮತ್ತು ಟಿಕೆಟ್ ಸಿಗದೆ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡು ಬಿಜೆಪಿಗೆ ವಲಸೆ ಬಂದಿದ್ದ ಮಾಲೀಕಯ್ಯ ಗುತ್ತೇದಾರ್ ಅವರು ಈ ಬಾರಿಯ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ.

https://kannada.asianetnews.com/karnataka-assembly-election-2018/karnataka-election-congress-win-more-seats-p8swdd

https://kannada.asianetnews.com/karnataka-assembly-election-2018/karnataka-assembly-election-resort-politics-in-karnataka-p8sudi