ಬೆಂಗಳೂರು: ಜಯನಗರ ವಿಧಾನಸಭಾ ಚುನಾವಣೆಯನ್ನು ಶತಾಯಗತಾಯ ಗೆಲ್ಲಲ್ಲೇಬೇಕೆಂಬ ಪಣತೊಟ್ಟಿರುವ ಬಿಜೆಪಿಗೆ ಇದೀಗ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ಅಭ್ಯರ್ಥಿ ಆಯ್ಕೆ ವಿಚಾರ ಸಂಬಂಧ ಸೋಮವಾರ ನಡೆಯಬೇಕಿದ್ದ ಸಭೆ ದಿಢೀರ್ ರದ್ದಾಗಿದೆ. ಮಾಜಿ ಶಾಸಕ ಬಿ.ಎನ್.ವಿಜಯಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಒಲವು ಹೊಂದಿದ್ದರೂ ಖುದ್ದು ಪ್ರಹ್ಲಾದ್ ಅವರೇ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. 

ಈ ನಡುವೆ ಅವರ ಪುತ್ರ ರಾಮು ಅವರ ಹೆಸರೂ ಕೇಳಿಬಂದಿದ್ದರೂ ಅವರ ಬಗ್ಗೆ ಸ್ಥಳೀಯ ಮುಖಂಡರ ಪ್ರತಿರೋಧ ವ್ಯಕ್ತವಾಗಿದೆ. ಪ್ರಹ್ಲಾದ್ ಅವರು ಒಪ್ಪದಿದ್ದರೆ ನಮ್ಮ ಪೈಕಿ ಒಬ್ಬರಿಗೆ ಟಿಕೆಟ್ ನೀಡಿ ಎಂದು ಸ್ಥಳೀಯ ಮುಖಂಡರು ಸ್ಪಷ್ಟವಾಗಿ ಪಕ್ಷದ ಮುಖಂಡರಿಗೆ ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳಾಗಿರುವ ಮಾಜಿ ಮೇಯರ್ ಎಸ್.ಕೆ.ನಟರಾಜ್, ಪಾಲಿಕೆ ಸದಸ್ಯರಾದ ಎನ್.ನಾಗರಾಜ್, ಸೋಮಶೇಖರ್, ಮಾಜಿ ಸದಸ್ಯ ರಾಮಮೂರ್ತಿ ಹಾಗೂ ಸ್ಥಳೀಯ ಮುಖಂಡರಾದ ಗೋವಿಂದನಾಯ್ಡು, ಮಂಜುನಾಥ್ ರೆಡ್ಡಿ ಸೋಮವಾರ ಅಜ್ಞಾತ ಸ್ಥಳದಲ್ಲಿ ಸಭೆ ನಡೆಸಿದರು. 

ಈ ಸಭೆಯಲ್ಲಿ ಜಯನಗರದ ಎಲ್ಲಾ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಯಾವುದೇ ಕಾರಣಕ್ಕೂ ಕ್ಷೇತ್ರದ ಹೊರಗಿನವರಿಗೆ ಟಿಕೆಟ್ ನೀಡುವುದು ಬೇಡ. ನಮ್ಮ ಪೈಕಿ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂಬ ಮಾತನ್ನು ಹೇಳಿದ್ದಾರೆ. ಹೀಗಾಗಿ, ಮಂಗಳವಾರ ಪಕ್ಷದ ಹಿರಿಯ ನಾಯಕರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು,
ಅಭ್ಯರ್ಥಿ ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಮಾಳವಿಕ ಹೆಸರೂ ಪ್ರಸ್ತಾಪ: ಈ ನಡುವೆ ಜಯನಗರ ಕ್ಷೇತ್ರದಿಂದ ನಟಿ ಹಾಗೂ ಪಕ್ಷದ ರಾಜ್ಯ ಸಹ ವಕ್ತಾರರಾಗಿರುವ ಮಾಳವಿಕ ಅವಿನಾಶ್ ಹೆಸರೂ ತೇಲಿಬಂದಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಾಳವಿಕ ಅವರನ್ನು ಕಣಕ್ಕಿಳಿಸುವುದರಿಂದ ಸಮುದಾಯವನ್ನೂ ಪರಿಗಣಿಸಿದಂತಾಗುತ್ತದೆ. ಜೊತೆಗೆ ಕಾಂಗ್ರೆಸ್ಸಿನ ಸೌಮ್ಯರೆಡ್ಡಿ ಅವರನ್ನು ಮಹಿಳಾ ಅಭ್ಯರ್ಥಿಯೇ ಎದುರಿಸಿದಂತಾಗುತ್ತದೆ ಎಂಬ  ಅಭಿ ಪ್ರಾಯ ಪಕ್ಷದ ಕೆಲವು ಮುಖಂಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಲ್ಲದೆ ಯುವ ಪೀಳಿಗೆಯನ್ನು ಸೆಳೆಯುವ ಉದ್ದೇಶದಿಂದ ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಸೂರ್ಯ ಪರವಾಗಿಯೂ ಸಂಘ ಪರಿವಾರ ಒಲವು ಹೊಂದಿದೆ ಎಂದು ಮೂಲಗಳು ತಿಳಿಸಿವೆ.