ಕಾಂಗ್ರೆಸ್ಸಲ್ಲಿ ಮಂತ್ರಿಗಿರಿಗೆ ಲಾಭಿ

Karnataka Election  Congress MLA Lobby for Ministry
Highlights

ಹಾಲಿ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ಗೆ ಇಬ್ಬರು ಪಕ್ಷೇತರರು ಸೇರಿದಂತೆ 20 ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಆದರೆ, ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ 40ಕ್ಕೂ ಹೆಚ್ಚಿದೆ. ಕೆಲವರು ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರೆ, ಮತ್ತೆ ಕೆಲವರು ಪ್ರಾದೇಶಿಕ ಹಾಗೂ ಜಾತಿ ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸ್ಥಾನಕ್ಕಾಗಿ ನಾಯಕರ ಮೇಲೆ ಒತ್ತಡ ನಿರ್ಮಾಣ ಮಾಡತೊಡಗಿದ್ದಾರೆ.

ಬೆಂಗಳೂರು[ಮೇ.21]: ಎಚ್.ಡಿ. ಕುಮಾರಸ್ವಾಮಿ ಅವರ ಸಚಿವ ಸಂಪುಟದ ಸದಸ್ಯರಾಗಲು ಕಾಂಗ್ರೆಸ್ ಶಾಸಕರಿಂದ ಭಾರಿ ಲಾಬಿ ಆರಂಭಗೊಂಡಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್, ಪ್ರಭಾವಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಅವರ ಮನೆಗೆ ಶಾಸಕರು ಹಾಗೂ ಅವರ ಆಪ್ತರ ದಂಡು ಎಡತಾಕತೊಡಗಿದೆ.
ಹಾಲಿ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್‌ಗೆ ಇಬ್ಬರು ಪಕ್ಷೇತರರು ಸೇರಿದಂತೆ 20 ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ. ಆದರೆ, ಸಚಿವ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ 40ಕ್ಕೂ ಹೆಚ್ಚಿದೆ. ಕೆಲವರು ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರೆ, ಮತ್ತೆ ಕೆಲವರು ಪ್ರಾದೇಶಿಕ ಹಾಗೂ ಜಾತಿ ಪ್ರಾತಿನಿಧ್ಯದ ಆಧಾರದ ಮೇಲೆ ಸಚಿವ ಸ್ಥಾನಕ್ಕಾಗಿ ನಾಯಕರ ಮೇಲೆ ಒತ್ತಡ ನಿರ್ಮಾಣ ಮಾಡತೊಡಗಿದ್ದಾರೆ.
ಲಿಂಗಾಯತರ ಪೈಕಿ ರಾಜಶೇಖರ ಪಾಟೀಲ್ ಹುಮ್ನಾಬಾದ್, ಎಸ್.ಆರ್.ಪಾಟೀಲ, ಶಿವಾನಂದ ಪಾಟೀಲ್ ಮೊದಲಾದ ಶಾಸಕರು ಈ ಬಾರಿ ತಮಗೆ ಸಚಿವ ಸ್ಥಾನ ನೀಡಲೇಬೇಕು ಎಂದು ನಾಯಕರ ಮೇಲೆ ಒತ್ತಡ ನಿರ್ಮಾಣ ಮಾಡಿದ್ದಾರೆ. ಬಿಜೆಪಿ ನಡೆಸಿದ ಆಪರೇಷನ್ ಕಮಲದ ವೇಳೆ ಒಡ್ಡಲಾಗಿದ್ದ ಆಮಿಷಗಳನ್ನು ಲೆಕ್ಕಿಸದ ಕಾರಣ ಈ ಬಾರಿ ಲಿಂಗಾಯತರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಸಂಘಟಿತ ಪ್ರಯತ್ನವೂ ಆರಂಭವಾಗಿದೆ. ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ.ಪಾಟೀಲರು ನೇರವಾಗಿ ಡಿಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನು ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಅವರು ಸಚಿವ ಸ್ಥಾನದ ಪೈಪೋಟಿಯಲ್ಲಿದ್ದು, ಇವರ ಪರ ಸಿದ್ದರಾಮಯ್ಯ ನಿಂತಿದ್ದಾರೆ ಎನ್ನಲಾಗಿದೆ.
ಉಳಿದಂತೆ ಕಳೆದ ಸಂಪುಟದಲ್ಲಿದ್ದ ಡಿ.ಕೆ. ಶಿವಕುಮಾರ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ರೋಷನ್ ಬೇಗ್, ತನ್ವೀರ್ ಸೇಠ್ ಮೊದಲಾದವರು ತಮಗೆ ಹಿರಿತನದ ಆಧಾರದ ಮೇಲೆ ನೇರವಾಗಿ ಸಚಿವ ಸ್ಥಾನ ದೊರೆಯುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಕಿರಿಯರ ಪೈಕಿ ಮಿತ್ರರಾದ ಅಜಯ ಸಿಂಗ್ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ಪೈಪೋಟಿ ನಿರ್ಮಾಣವಾಗಿದೆ. ಸೀಮಿತ ಸಚಿವ ಸ್ಥಾನಗಳಿರುವ ಕಾರಣಕ್ಕಾಗಿ ಈ ಇಬ್ಬರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಬೆಂಗಳೂರಿನಲ್ಲಿ ಕೃಷ್ಣ ಬೈರೇಗೌಡ ಅವರಿಗೆ ಸಚಿವ ಸ್ಥಾನ ದೊರೆಯುವುದು ಸುಲಭವಿದ್ದರೂ, ಅವರನ್ನು ಈ ಬಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವ ಉದ್ದೇಶ ಕಾಂಗ್ರೆಸ್ ಹೈಕಮಾಂಡ್‌ಗೆ ಇದೆ ಎನ್ನಲಾಗಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಕೃಷ್ಣ ಬೈರೇಗೌಡ ಅವರ ಬದಲು ಬೆಂಗಳೂರಿನ ಒಕ್ಕಲಿಗ ಶಾಸಕರೊಬ್ಬರಿಗೆ ಸಚಿವ ಸ್ಥಾನ ಒಲಿಯಬಹುದು ಎನ್ನಲಾಗುತ್ತಿದೆ. ಈ ಮಾಹಿತಿ ಹಿನ್ನೆಲೆಯಲ್ಲಿ ಎಸ್.ಟಿ. ಸೋಮಶೇಖರ್ ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ. ಇನ್ನು ವಿ.ಮುನಿಯಪ್ಪ, ಶಿವಶಂಕರರೆಡ್ಡಿ, ಆರ್.ನರೇಂದ್ರ, ಅಮರೇಗೌಡ ಬಯ್ಯಾಪುರ, ಶಿವಾನಂದ ಪಾಟೀಲ್ ಅವರು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ತೀವ್ರ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

loader