ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ಆರು ದಿನಗಳು ಬಾಕಿ ಇದ್ದು, ಮೇ 11 ರಂದು ರಾಜಧಾನಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳುವ ಕೆಎಸ್ ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಶೇ.೮೦ರಷ್ಟು ಸೀಟುಗಳು ಭರ್ತಿಯಾಗಿವೆ. 

ರಾಜ್ಯದ ನಾನಾ ಭಾಗಗಳಿಂದ ಉದ್ಯೋಗ ಆರಿಸಿ ಲಕ್ಷಾಂತರ ಮಂದಿ ಬೆಂಗಳೂರು ನಗರಕ್ಕೆ ಬಂದಿದ್ದಾರೆ. ಐಟಿ-ಬಿಟಿ, ಕಂಪನಿಗಳು,  ಗಾರ್ಮೆಂಟ್ಸ್, ಕಟ್ಟಡ ನಿರ್ಮಾಣ, ಹೋಟೆಲ್ ಸೇರಿದಂತೆ ವಿವಿಧ ವಲಯಗಳಲ್ಲಿ ದುಡಿಯುತ್ತಿದ್ದಾರೆ. ಇದೀಗ ಮೇ 12ರಂದು ಮತದಾನ ಮಾಡಲು ದೊಡ್ಡ ಪ್ರಮಾಣದಲ್ಲಿ ಜನರು ತೆರಳಲಿದ್ದಾರೆ. ಮತದಾನದ ದಿನ ಸರ್ಕಾರಿ ಮತ್ತು ಖಾಸಗಿ ವಲಯಗಳಿಗೆ ಸಾರ್ವತ್ರಿಕ ರಜೆ ಘೋಷಿಸಿರುವುದರಿಂದ ದೂರದಲ್ಲಿರುವ ತಮ್ಮ ಊರುಗಳಿಗೆ ತೆರಳಲು ಮೇ ೧೧ರಂದು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ್ದಾರೆ. 

ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸಲು ಒಂದು ತಿಂಗಳು ಮುಂಚಿತವಾಗಿ  ಟಿಕೆಟ್  ಕಾಯ್ದಿರಿಸಲು ಅವಕಾಶವಿರುವುದರಿಂದ ಏಪ್ರಿಲ್ ಮೊದಲ ವಾರದಿಂದಲೇ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಮುಂದಾಗಿದ್ದಾರೆ. ಇದುವರೆಗೆ ಶೇ.೮೦ರಷ್ಟು ಸೀಟುಗಳು ಬುಕ್ಕಿಂಗ್ ಆಗಿದ್ದು, ಮತದಾನಕ್ಕೆ ಇನ್ನು ಆರು ದಿನಗಳು ಇರುವುದರಿಂದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಎಲ್ಲ ಆಸನಗಳು ಬುಕ್ಕಿಂಗ್ ಆಗುವ ಸಾಧ್ಯತೆ ಇದೆ. 

ಬೆಂಗಳೂರಿನಿಂದ ಮಂಗಳೂರು, ಉಡುಪಿ, ಚಿಕ್ಕಮಗಳೂರು,  ಶಿವಮೊಗ್ಗ, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಮಡಿಕೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಮೊದಲಾದ ಜಿಲ್ಲೆಗಳಿಗೆ ತೆರಳುವ ಬಸ್‌ಗಳ ಟಿಕೆಟ್ ಬುಕ್ಕಿಂಗ್ ಹೆಚ್ಚಾಗಿದೆ. ಇದರ ಜತೆಗೆ ಮೇ ೧೦ರಂದು ಮಂಗಳೂರು, ಹುಬ್ಬಳ್ಳಿ-ಧಾರವಾಡ, ಗದಗ  ಮೊದಲಾದ ದೂರದ ಜಿಲ್ಲೆಗಳಿಗೆ ತೆರಳುವ ಎಲ್ಲ ಬಗೆಯ ರೈಲುಗಳ ಟಿಕೆಟ್ ಬುಕ್ಕಿಂಗ್ ಕೂಡ ಬಹುತೇಕ ಭರ್ತಿಯಾಗಲಿದೆ.

ಮೇ ೧೧ರಂದು ನಗರದಿಂದ ದೂರದ ಜಿಲ್ಲೆಗಳಿಗೆ ತೆರಳುವ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಐರಾವತ ಗೋಲ್ಡ್, ರಾಜಹಂಸ  ಬಸ್ ಗಳ ಶೇ.೮೦ರಷ್ಟು ಆಸನಗಳು ಭರ್ತಿಯಾಗಿವೆ. ಇನ್ನು ಸಾಮಾನ್ಯ ಬಸ್ ಗಳಿಗೂ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಏಪ್ರಿಲ್ ಮೊದಲ ವಾರದಿಂದಲೇ ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಲು ಮುಂದಾಗಿದ್ದಾರೆ. ಮತದಾನಕ್ಕೆ ಇನ್ನು ಐದು ದಿನ ಇರುವುದರಿಂದ ಉಳಿದ ಸೀಟುಗಳು ಭರ್ತಿಯಾಗುವ ಸಾಧ್ಯತೆಯಿದೆ. ಒಂದು ವೇಳೆ ಹೆಚ್ಚುವರಿ ಬಸ್‌ಳಿಗೆ ಬೇಡಿಕೆ ಬಂದಲ್ಲಿ ಒದಗಿಸಲು ನಿಗಮ ಸಿದ್ಧವಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ಅಭ್ಯರ್ಥಿಗಳಿಂದ ವಾಹನ ವ್ಯವಸ್ಥೆ: ನಗರದಲ್ಲಿರುವ ತಮ್ಮ ಮತದಾರರನ್ನು ಊರುಗಳಿಗೆ ಕರೆದೊಯ್ಯಲು ಕೆಲ ಅಭ್ಯರ್ಥಿಗಳೇ ವಾಹನ ವ್ಯವಸ್ಥೆ ಮಾಡುತ್ತಿದ್ದಾರೆ.  ಮತದಾನಕ್ಕೆ ಕರೆದೊಯ್ದು ಬಳಿಕ ಬೆಂಗಳೂರಿಗೆ ವಾಪಸು ಬಿಡುವ ಭರವಸೆ ನೀಡಿದ್ದು, ಟೆಂಪೋ ಟ್ರಾವೆಲರ್, ಮಿನಿ ಬಸ್‌ಗಳು, ಕಾರುಗಳ ಬುಕ್ಕಿಂಗ್‌ನಲ್ಲಿ ತೊಡಗಿದ್ದಾರೆ.