ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ 2018, ಏ.13ರಂದು ಪಾಕಿಸ್ತಾನದ ಕರಾಚಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. 
ಗೌರವ್ ಪ್ರಧಾನ್ ಎಂಬುವವರು 1.23 ಲಕ್ಷ ಫಾಲೋವರ್ಸ್‌ಗಳನ್ನು ಹೊಂದಿರುವ ಟ್ವೀಟರ್ ಹ್ಯಾಂಡಲ್‌ನಿಂದ ‘ಕರ್ನಾಟಕ ಪೊಲಿಟಿಕಲ್ ನೆಟ್‌ವರ್ಕ್’ ಪ್ರಕಟಿಸಿದ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.
ಸಿದ್ದರಾಮಯ್ಯ ಮತ್ತು ಜಮೀರ್ ಅಹಮ್ಮದ್ ಪಾಕಿಸ್ತಾನಕ್ಕೆ ರಹಸ್ಯವಾಗಿ ಭೇಟಿ ನೀಡಿದ್ದೇಕೆ? ಎಂಬ ಶೀರ್ಷಿಕೆಯಡಿಯಲ್ಲಿ ಈ ಸುದ್ದಿಯನ್ನು ಪ್ರಕಟಿಸಿದ್ದು ಅದರಲ್ಲಿ ಸಿದ್ದರಾಮಯ್ಯ ಏ.13ರಂದು ಕರಾಚಿಗೆ ಅಲ್ಲಿಂದ ದೆಹಲಿಗೆ ಪ್ರಯಾಣಿಸಿದ್ದ ವಿವರಗಳಿವೆ. ವಿಆರ್‌ಎಸ್ ವರ್ಚೆಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಈ ವಿಮಾನದಲ್ಲಿ ಸಿದ್ದರಾಮಯ್ಯ ಪ್ರಯಾಣಿಸಿದ್ದು ಏಕೆ ಎಂದೂ ಕೂಡ ಈ ವೆಬ್ ತಾಣದಲ್ಲಿ ಪ್ರಶ್ನಿಸಲಾಗಿದೆ. '

ಗೌರವ್ ಪ್ರಧಾನ್ ಅವರ ಟ್ವೀಟನ್ನು ರೀಟ್ವೀಟ್ ಮಾಡಿರುವ ನಟ ಗಣೇಶ್ ಪತ್ನಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾದ ನಾಯಕಿ ಶಿಲ್ಪಾ ಗಣೇಶ್ ‘ಏನೋ ಅನುಮಾನಾಸ್ಪದವಾಗಿದೆ’ ಎಂದಿದ್ದಾರೆ. 
ಆದರೆ ಸಿದ್ದರಾಮಯ್ಯ ಕರಾಚಿಗೆ ರಹಸ್ಯ ಭೇಟಿ ನೀಡಿದ್ದಾರೆ ಎಂಬ ಊಹಾಪೋಹಕ್ಕೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ಸತ್ಯಾಂಶ ಬಿಚ್ಚಿಟ್ಟ ನಂತರದಲ್ಲಿ ಇದೊಂದು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ಬಳಿಕ  ಟ್ವೀಟನ್ನು ಅಳಿಸಿ ಹಾಕಲಾಗಿದೆ.

ಟ್ವೀಟ್ ಮಾಡಿರುವ ಪತ್ರದಲ್ಲಿ ವಿಎಸ್‌ಆರ್ ಗ್ರೂಪ್ ಆಫ್ ಆಪರೇಷನ್‌ನ ಆಶೀಶ್ ಭಡೌರಿಯಾ ಅವರ ಸಹಿ ಇದ್ದು, ಬೂಮ್ ಲೈವ್ ಅವರನ್ನೇ ಸಂಪರ್ಕಿಸಿದಾಗ ಅವರು ‘ಈ ಪತ್ರದಲ್ಲಿರುವುದು ಸಂಪೂರ್ಣ ಸುಳ್ಳು. ಅಲ್ಲದೆ ಕಳೆದ ಕೆಲವು ತಿಂಗಳುಗಳಿಂದ ಯಾವುದೇ ಚಾರ್ಟ್‌ರ್ಡ್ ಫ್ಲೈಟ್‌ಗಳು ಪಾಕಿಸ್ತಾನಕ್ಕೆ ಪ್ರಯಾಣಿಸಿಲ್ಲ’ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಆ ಸಮಯದಲ್ಲಿ ಮುಖ್ಯಮಂತ್ರಿಗಳು ದೆಹಲಿ ನಾಯಕರೊಂದಿಗೆ ಹಲವು ಸಭೆಗಳಲ್ಲಿ ಪಾಲ್ಗೊಂಡಿದ್ದರು.