ನಾಮಪತ್ರ: ಹಲವು ಘಟಾನುಘಟಿಗಳಿಗೆ ಢವಢವ

Karnataka Assembly Election Nomination Letters
Highlights

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಮರು ಬಯಸಿ ಜೆಡಿಎಸ್‌ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಶಾಸಕ ಪಿಳ್ಳಮುನಿಶಾಮಪ್ಪ ಅವರ ನಾಮಪತ್ರ ತಿರಸ್ಕೃತವಾಗಿದೆ

ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಮರು ಬಯಸಿ ಜೆಡಿಎಸ್‌ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದ ಶಾಸಕ ಪಿಳ್ಳಮುನಿಶಾಮಪ್ಪ ಅವರ ನಾಮಪತ್ರ ತಿರಸ್ಕೃತವಾಗಿದೆ.

ಜೆಡಿಎಸ್‌ನಿಂದ ಕೊನೇ ಕ್ಷಣದಲ್ಲಿ ನಿಸರ್ಗ ನಾರಾಯಣ್‌ ಅವರಿಗೆ ಎ ಮತ್ತು ಬಿ ಫಾರಂ ದೊರಕಿತ್ತು. ಹೀಗಾಗಿ ಪಿಳ್ಳಮುನಿಶಾಮಪ್ಪ ಅವರನ್ನು ಪಕ್ಷೇತರ ಅಭ್ಯರ್ಥಿಯೆಂದು ಪರಿಗಮಿಸಲು 8 ಮಂದಿ ಸೂಚಕರ ಸಹಿ ಅಗತ್ಯವಿತ್ತು. ಆದರೆ ಅವರು ಕೇವಲ ಒಬ್ಬ ಸೂಚಕರ ಸಹಿಯೊಂದಿಗೆ ನಾಮಪತ್ರ ಸಲ್ಲಿಸಿದ್ದರು. ಈ ಕಾರಣದಿಂದಾಗಿ ಶಾಸಕರ ನಾಮಪತ್ರ ತಿರಸ್ಕೃತಗೊಂಡಿದೆ.

ಕೊತ್ತೂರು ಹಣೆಬರಹ ತೀರ್ಮಾನ ಇಂದು

ಕೋಲಾರ: ಮುಳಬಾಗಲು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ರ ಅವರು 2013ರಲ್ಲಿ ಸಲ್ಲಿಸಿದ್ದ ಜಾತಿ ಪ್ರಮಾಣಪತ್ರ ಅಸಿಂಧುಗೊಳಿಸಿ ಹೈಕೋರ್ಟ್‌ ಬುಧವಾರ ಆದೇಶ ಹೊರಡಿಸಿದೆ. ಹೀಗಾಗಿ ಅವರು ಈ ಬಾರಿ ಸಲ್ಲಿಸಿರುವ ನಾಮಪತ್ರ ಅಂಗೀಕಾರಕ್ಕೆ ಸಂಬಂಧಿಸಿದ ನಿರ್ಣಯವನ್ನು ಚುನಾವಣಾಧಿಕಾರಿ ಗುರುವಾರಕ್ಕೆ ಕಾಯ್ದಿರಿಸಿದ್ದಾರೆ. ಬೈರಾಗಿ ಜಾತಿಯ ಮಂಜುನಾಥ್‌ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದು ಚುನಾವಣಾ ಆಯೋಗಕ್ಕೆ ಪರಿಶಿಷ್ಟಜಾತಿಯ ಬುಡಗ ಜಂಗಮ ಎಂದು ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅವರ ಪ್ರತಿಸ್ಪರ್ಧಿ ಜೆಡಿಎಸ್‌ನ ಮುನಿ ಆಂಜಿನಪ್ಪ ತಹಸೀಲ್ದಾರ್‌ಗೆ ದೂರು ಕೊಟ್ಟಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ತಹಸೀಲ್ದಾರ್‌, ಮಂಜುನಾಥ್‌ ನೀಡಿದ್ದ ಜಾತಿ ಪ್ರಮಾಣಪತ್ರ ರದ್ದುಪಡಿಸಿದ್ದರು. ತಹಸೀೕಲ್ದಾರ್‌ ಕ್ರಮವನ್ನು ಪ್ರಶ್ನಿಸಿ ಮಂಜುನಾಥ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಾಲಯದಲ್ಲಿ ವ್ಯತಿರಿಕ್ತ ಆದೇಶ ಬಂದರೆ ನಾಮಪತ್ರ ತಿರಸ್ಕೃತವಾಗಿ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕೈತಪ್ಪುತ್ತದೆ ಎಂಬ ಕಾರಣಕ್ಕೆ ಮಂಜುನಾಥ್‌, ಕೋಲಾರ ಸಾಮಾನ್ಯ ಕ್ಷೇತ್ರದಲ್ಲಿ ಮಂಗಳವಾರ (ಏ.24) ಕೊನೆ ಕ್ಷಣದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದರು. ಕೋಲಾರ ಕ್ಷೇತ್ರದಲ್ಲಿ ಅವರ ನಾಮಪತ್ರ ಊರ್ಜಿತವಾಗಿದ್ದು, ಮುಳಬಾಗಿಲಿನಲ್ಲಿ ನಾಮಪತ್ರ ತಿರಸ್ಕೃತವಾದರೆ ಕೋಲಾರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಅವರು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

ಕೊನೆಗೂ ಕೆ.ಆರ್‌.ಪೇಟೆ ಜೆಡಿಎಸ್‌

ನಾಮಪತ್ರ ಗೊಂದಲ ನಿವಾರಣೆ

ಮಂಡ್ಯ:ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಶಾಸಕ ಕೆ.ಸಿ.ನಾರಾಯಣಗೌಡ ಮತ್ತು ಜಿ.ಪಂ.ಸದಸ್ಯ ಬಿ.ಎಲ್‌.ದೇವರಾಜ್‌ ಇಬ್ಬರಿಗೂ ಬಿ ಫಾರಂ ಕೊಟ್ಟಿದ್ದ ಹಿನ್ನೆಲೆಯಲ್ಲಿ ಉಂಟಾಗುದ್ದ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದ್ದು ಕೆ.ಸಿ.ನಾರಾಯಣ ಗೌಡ ಅವರೇ ಅಧಿಕೃತ ಅಭ್ಯರ್ಥಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಇಬ್ಬರಿಗೆ ಜೆಡಿಎಸ್‌ ಬಿ ಫಾರಂ ನೀಡಲಾಗಿದ್ದ ಸಮಸ್ಯೆಯನ್ನು ಹೇಗೆ ಇತ್ಯರ್ಥಪಡಿಸಬೇಕು ಎಂದು ಬುಧವಾರ ಸಂಜೆವರೆಗೂ ಚುನಾವಣಾಧಿಕಾರಿಗಳು ಚರ್ಚೆಯಲ್ಲೇ ತೊಡಗಿದ್ದರು. ಈ ಬಗ್ಗೆ ಬುಧವಾರ ರಾತ್ರಿವೇಳೆ ಅಂತಿಮವಾಗಿ ನಿರ್ಧಾರ ತಿಳಿಸಿದ ಜಿಲ್ಲಾಧಿಕಾರಿ ಮಮತಾ ಅವರು ಶಾಸಕ ಕೆ.ಸಿ.ನಾರಾಯಣಗೌಡ ಅವರೇ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಿದರು. ಬಿ.ಎಲ್‌.ದೇವರಾಜು ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ಮೇಲೂರು ರವಿ ಶಿಡ್ಲಘಟ್ಟ

ಜೆಡಿಎಸ್‌ ಅಧಿಕೃತ ಅಭ್ಯರ್ಥಿ

ಶಿಡ್ಲಘಟ್ಟ: ಶಿಡ್ಲಘಟ್ಟವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ನಿಂದ ಇಬ್ಬರಿಗೆ ಬಿ ಫಾರಂ ನೀಡಲಾಗಿದ್ದ ಗೊಂದಲ ಬುಧವಾರ ನಿವಾರಣೆಯಾಗಿದ್ದು, ಮೇಲೂರು ರವಿ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯೆಂಬುದಾಗಿ ಚುನಾವಣಾಧಿಕಾರಿಗಳು ಅಂಗೀಕರಿಸಿದ್ದಾರೆ. ಇದರಿಂದಾಗಿ ಹಾಲಿ ಶಾಸಕ ರಾಜಣ್ಣ ಪಕ್ಷೇತರ ಅಭ್ಯರ್ಥಿಯಾಗಿ ಪರಿಗಣಿಸಲ್ಪಟ್ಟರು. ನಾಮಪತ್ರಗಳ ಪರಿಶೀಲನಾ ವೇಳೆ ಅಧಿಕಾರಿಗಳು, ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಎರಡು ಗುಂಪುಗಳ ನಡುವೆ ಬಿ ಫಾರಂ ಕುರಿತು ವಾಗ್ವಾದ ನಡೆಯಿತು. ಜಿಲ್ಲಾಧಿಕಾರಿಗಳು ಅಧಿಕಾರಿಗಳ ಜೊತೆ ಚರ್ಚಿಸಿ ಅಂತಿಮವಾಗಿ ಅಧಿಕೃತ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸುವ ಸಮಯದಲ್ಲಿ ಮತ್ತೆ ರಾಜಣ್ಣ ಗುಂಪಿನವರು ತಕರಾರು ತೆಗೆದರು. ಈ ಎಲ್ಲಾ ಕಾರಣಗಳಿಂದಾಗಿ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು 1 ಗಂಟೆಗಳ ಕಾಲ ತಡವಾಯಿತೆನ್ನಲಾಗಿದೆ.

ಎಸ್ಸೆಸ್ಸೆಲ್ಸಿ ಪಾಸೆಂದು ನಮೂದಿಸಿದ್ದ

ಕೃಷ್ಣಾರೆಡ್ಡಿ; ಸರಿಪಡಿಸಲು ಸೂಚನೆ

ಚಿಂತಾಮಣಿ:ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಂ. ಕೃಷ್ಣಾರೆಡ್ಡಿ ತಾವು ಸಲ್ಲಿಸಿರುವ ನಾಮಪತ್ರದಲ್ಲಿ ವಿದ್ಯಾಭ್ಯಾಸ ತಪ್ಪಾಗಿ ನಮೂದಿಸಿರುವುದು ಬಹಿರಂಗವಾಗಿದೆ. ಅವರು ವಿದ್ಯಾಭ್ಯಾಸ ಮಾಡಿರುವ ಬೆಂಗಳೂರು ದಕ್ಷಿಣ ಜಿಲ್ಲೆಯ ವರ್ತೂರು ಪೂರ್ವ ತಾಲೂಕಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಪ್ರೌಢಶಾಲೆಯಲ್ಲಿ ಒದಿದ್ದ ಅವರು ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಅವರು ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ಸಲ್ಲಿಸಿರುವ ನಾಮಪತ್ರದಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವುದಾಗಿ ತಪ್ಪು ಮಾಹಿತಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಇದು ತಾಲೂಕು ಚುನಾವಣಾಧಿಕಾರಿಗಳ ಗಮನಕ್ಕೂ ಬಂದಿದ್ದು, ಅದನ್ನು ಸರಿಪಡಿಸಿಕೊಳ್ಳುವಂತೆ ಸಂಬಂಧಪಟ್ಟಜೆಡಿಎಸ್‌ ಅಭ್ಯರ್ಥಿಗೆ ತಿಳಿಸಿರುವುದಾಗಿ ಚುನಾವಣಾಧಿಕಾರಿ ಪಿ.ಸವಿತ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕೆಎಚ್‌ಎಂ ಪುತ್ರಿ ರೂಪಾ ಶಶಿಧರ್‌

ನಾಮಪತ್ರ ಇತ್ಯರ್ಥ ಇಂದು

ಕೋಲಾರ: ಸಂಸದ ಕೆ.ಎಚ್‌.ಮುನಿಯಪ್ಪ ಪುತ್ರಿಯಾಗಿರುವ ಕೆಜಿಎಫ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರೂಪಾಶಶಿಧರ್‌ ಅವರು ಸಲ್ಲಿಸಿರುವ ನಾಮಪತ್ರದ ಬಗೆಗಿನ ನಿರ್ಣಯವನ್ನು ಚುನಾವಣಾಧಿಕಾರಿಗಳು ಗುರುವಾರಕ್ಕೆ ಕಾಯ್ದಿರಿಸಿದ್ದಾರೆ. ರೂಪಾ ಶಶಿಧರ್‌ ಅವರ ಹೆಸರು ಎರಡು ಕಡೆ ಮತದಾರರ ಪಟ್ಟಿಯಲ್ಲಿದರಿಂದ ಅವರ ನಾಮಪತ್ರ ತಿರಸ್ಕರಿಸಬೇಕೆಂದು ಜೆಡಿಎಸ್‌ ಅಭ್ಯರ್ಥಿ ಭಕ್ತವತ್ಸಲಂ ತಕರಾರು ಅರ್ಜಿ ಸಲ್ಲಿಸಿದ್ದರು. ರೂಪಾಶಶಿಧರ್‌ ಹೆಸರು ತುಮಕೂರು ಮತ್ತು ಕೆಜಿಎಫ್‌ ತಾಲೂಕುಗಳ ಮತದಾರರ ಪಟ್ಟಿಯಲ್ಲಿ ಈಗಲೂ ಇದೆ ಎಂದು ಭಕ್ತವತ್ಸಲಂ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಈ ತಕರಾರಿನ ಬಗ್ಗೆ ಸ್ಥಳೀಯ ಚುನಾವಣಾ ಅಧಿಕಾರಿಗಳು ರಾಜ್ಯ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು ಮಾರ್ಗದರ್ಶನ ಕೋರಿದ್ದಾರೆ.

ಪಕ್ಷಾಂತರ ಕಾಯಿದೆ ಉಲ್ಲಂಘನೆ: ಆಕ್ಷೇಪಣೆ ತಿರಸ್ಕಾರ

ರಾಯಚೂರು: ಪಕ್ಷಾಂತರ ಕಾಯಿದೆ ಉಲ್ಲಂಘಟನೆಯ ಪ್ರಕರಣ ಎದುರಿಸುತ್ತಿರುವ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ ಪಾಟೀಲ್‌ ಅವರ ನಾಮಪತ್ರಗಳನ್ನು ತಿರಸ್ಕರಬೇಕು ಎಂದು ಜೆಡಿಎಸ್‌ ಸಲ್ಲಿಸಿದ್ದ ಆಕ್ಷೇಪಣಾ ಅರ್ಜಿವನ್ನು ಬುಧವಾರ ತಿರಸ್ಕರಗೊಂಡಿತು. ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಸಮಯದಲ್ಲಿ ಜೆಡಿಎಸ್‌ ಪಕ್ಷದ ಎನ್‌.ಶಿವಶಂಕರ ವಕೀಲ ಆಕ್ಷೇಪಣೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಪರಾಮರ್ಶೆ ನಡೆಸಿದ ಚುನಾವಣಾಧಿಕಾರಿ ವೀರಮಲ್ಲಪ್ಪ ಪೂಜಾರ್‌ ಪಕ್ಷಾಂತರ ಉಲ್ಲಂಘನೆ ಕಾಯಿದೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದ್ದು , ಅಲ್ಲಿಂದ ಯಾವುದೇ ರೀತಿಯ ನೋಟಿಸ್‌ ಬಂದಿಲ್ಲ. ಪಕ್ಷ ಸಲ್ಲಿಸಿರುವ ಆಕ್ಷೇಪಣೆ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದರು.

ಅಶೋಕ ಖೇಣಿ ನಾಮಪತ್ರ ಇಂದು ಇತ್ಯರ್ಥ

ಬೀದರ್‌: ಬೀದರ್‌ ದಕ್ಷಿಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಅಶೋಕ್‌ ಖೇಣಿ ಅವರ ಭಾರತೀಯ ಪೌರತ್ವವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಚಿ.ಜೆ. ಅಬ್ರಹಾಂ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿರುವುದರಿಂದ ಅವರು ನಾಮಪತ್ರ ಗುರುವಾರ ಬೆಳಗ್ಗೆ ಇತ್ಯರ್ಥಗೊಳ್ಳಲಿದೆ. ಟಿ.ಜೆ.ಅಬ್ರಹಾಂ ಅವರು ಖೇಣಿ ಅವರ ಭಾರತೀಯ ಪೌರತ್ವವನ್ನು ಪ್ರಶ್ನಿಸಿದ್ದಲ್ಲದೆ ಅವರು ಕರ್ನಾಟಕ ಸರ್ಕಾರದೊಂದಿಗೆ ಗುತ್ತಿಗೆ ಕಾಮಗಾರಿಯೊಂದಕ್ಕೆ ಒಪ್ಪಂದ ಮಾಡಿಕೊಂಡಿದ್ದು ಅವರು ಗುತ್ತಿಗೆದಾರರಾಗಿದ್ದಾರೆ ಎಂಬ ಮತ್ತೊಂದು ದೂರನ್ನೂ ಸಲ್ಲಿಸಿದ್ದಾರೆ. ಈ ಕುರಿತಂತೆ ಬುಧವಾರ ಚುನಾವಣಾಧಿಕಾರಿಗಳು ಅಬ್ರಹಾಂ ಅವರ ವಾದ ಹಾಗೂ ದಾಖಲೆಗಳನ್ನು ಪರಿಶೀಲಿಸಿ ಮಧ್ಯಾಹ್ನ 3ಕ್ಕೆ ವಿಚಾರಣೆ ನಿಗದಿಪಡಿಸಿದ್ದರಾದರೆ ಖೇಣಿ ಪರ ವಕೀಲರು ದಾಖಲೆಗಳನ್ನು ಒದಗಿಸಲು ಒಂದು ದಿನ ಕಾಲಾವಕಾಶ ಕೋರಿದ್ದರಿಂದ ಗುರುವಾರ ಬೆಳಿಗ್ಗೆ 11ಕ್ಕೆ ವಿಚಾರಣೆ ನಿಗದಿಪಡಿಸಿ ಆದೇಶಿಸಿದ್ದಾರೆ.

loader