ಭಿನ್ನಮತದ ನಡುವೆ ಗೆಲುವಿಗಾಗಿ ಹೋರಾಟ : ಚಿಕ್ಕಬಳ್ಳಾಪುರದಲ್ಲಿ ಯಾರಿಗೆ ವಿಜಯ..?

karnataka-assembly-election-2018 | Thursday, April 26th, 2018
Suvarna Web Desk
Highlights

ರಾಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಬಾರಿ ಕಾಂಗ್ರೆಸ್, ಜೆಡಿಎಸ್ ತಲಾ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದವು. ಒಂದರಲ್ಲಿ ಪಕ್ಷೇತರರು ಚುನಾಯಿತರಾಗಿದ್ದರು. ಐದು ಕ್ಷೇತ್ರಗಳ ಪೈಕಿ ಹೆಚ್ಚಿನ ಸ್ಥಾನ ಗೆಲ್ಲಲು ಮೂರೂ ಪಕ್ಷಗಳು ಪ್ರಯತ್ನಿಸುತ್ತಿವೆಯಾದರೂ, ಕಾಂಗ್ರೆಸ್ಸಿಗೆ ಬಂಡಾಯದ ಬಿಸಿ ತುಸು ಹೆಚ್ಚಾಗಿಯೇ ತಟ್ಟಿದೆ. ಅದರ ಲಾಭವನ್ನು ಪಡೆಯಲು ಜೆಡಿಎಸ್ ತಂತ್ರ ಹೆಣೆಯುತ್ತಿದೆ.
 

ಆಸ್ವತ್ಥನಾರಾಯಣ ಎಲ್.

ಚಿಕ್ಕಬಳ್ಳಾಪುರ : ಜಧಾನಿ ಬೆಂಗಳೂರಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಬಾರಿ ಕಾಂಗ್ರೆಸ್, ಜೆಡಿಎಸ್ ತಲಾ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದವು. ಒಂದರಲ್ಲಿ ಪಕ್ಷೇತರರು ಚುನಾಯಿತರಾಗಿದ್ದರು. ಐದು ಕ್ಷೇತ್ರಗಳ ಪೈಕಿ ಹೆಚ್ಚಿನ ಸ್ಥಾನ ಗೆಲ್ಲಲು ಮೂರೂ ಪಕ್ಷಗಳು ಪ್ರಯತ್ನಿಸುತ್ತಿವೆಯಾದರೂ, ಕಾಂಗ್ರೆಸ್ಸಿಗೆ ಬಂಡಾಯದ ಬಿಸಿ ತುಸು ಹೆಚ್ಚಾಗಿಯೇ ತಟ್ಟಿದೆ. ಅದರ ಲಾಭವನ್ನು ಪಡೆಯಲು ಜೆಡಿಎಸ್ ತಂತ್ರ ಹೆಣೆಯುತ್ತಿದೆ. ಬಿಜೆಪಿ ಗೌರಿಬಿದನೂರಿನಲ್ಲಿ ಮಾತ್ರ ಪ್ರಬಲವಾಗಿದೆ. 1 ಕಡೆ ಸಿಪಿಎಂ ಕೂಡ ಬಲಿಷ್ಠವಾಗಿದೆ.

ಬಿಜೆಪಿ ಮತ ಹೋಳಾದರೆ ಕಾಂಗ್ರೆಸ್ಸಿಗೆ ಲಾಭ

ಗೌರಿ ಬಿದನೂರು : ಸತತ 5 ನೇ ಬಾರಿ ಶಾಸಕರಾಗಲು ಉಪಸ್ಪೀಕರ್ ಎನ್.ಎಚ್. ಶಿವಶಂಕರರೆಡ್ಡಿ ಮತ್ತೆ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದ ಜೈಪಾಲರೆಡ್ಡಿ ಬಿಜೆಪಿಯಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ ಮುಖಂಡ ರವಿನಾರಾಯಣರೆಡ್ಡಿ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ ನರಸಿಂಹಮೂರ್ತಿ ಬಿಜೆಪಿ ತೊರೆದು ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಬಿಜೆಪಿ ಅತ್ಯಂತ ಪ್ರಬಲವಾಗಿರುವುದು ಈ ಕ್ಷೇತ್ರದಲ್ಲಿ ಮಾತ್ರ. ಆದರೆ ಹೊರಗಿನಿಂದ ಬಂದ ಜೈಪಾಲ ರೆಡ್ಡಿ ಅವರಿಗೆ ಟಿಕೆಟ್ ನೀಡಿರುವುದು ಮೂಲ ಬಿಜೆಪಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಜೆಡಿಎಸ್ ಅಭ್ಯರ್ಥಿಗೆ ಮೂಲ ಬಿಜೆಪಿಗರ ಪರೋಕ್ಷ ಕೃಪಾಕಟಾಕ್ಷ ಇದೆ
ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ. ಜೆಡಿಎಸ್ ಏನಾದರೂ ಕಾಂಗ್ರೆಸ್ ವಿರೋಧಿ ಮತಗಳನ್ನು ವಿಭಜಿಸಿದರೆ ಶಿವಶಂಕರ ರೆಡ್ಡಿ ಅವರಿಗೆ ಹಾದಿ
ಸುಗಮವಾಗಬಹುದು. ಪ್ರಭುತ್ವ ವಿರೋಧಿ ಅಲೆ ಎದ್ದರೆ ಕಷ್ಟವಾಗಬಹುದು.


ಸುಧಾಕರ್ ಮುನಿಯಪ್ಪ ಪರೋಕ್ಷ ಸಮರ

ಚಿಂತಾಮಣಿ: ಕಾಂಗ್ರೆಸ್ ಟಿಕೆಟ್ ಸಿಕ್ಕರೂ ನಿರಾಕರಿಸಿ ಪಕ್ಷೇತರರಾಗಿ ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಸ್ಪರ್ಧಿಸಿದ್ದಾರೆ. ಅವರಿಗೆ ಪ್ರತಿಸ್ಪರ್ಧಿಯಾಗಿ ಹಾಲಿ ಜೆಡಿಎಸ್ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ
ಕಣದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ವಾಣಿ ಕೃಷ್ಣಾರೆಡ್ಡಿ ಸ್ಪರ್ಧೆಯಲ್ಲಿದ್ದಾರಾದರೂ, ಪ್ರಬಲ ಪೈಪೋಟಿ ಒಡ್ಡುವ ಸಂಭವ ಕಡಿಮೆ. ಎನ್. ಶಂಕರ್ ಅವರು ಬಿಜೆಪಿ ಅಭ್ಯರ್ಥಿ. ಆದರೆ ಆ
ಪಕ್ಷ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕೋಲಾರ ಸಂಸದ ಕೆ.ಎಚ್. ಮುನಿಯಪ್ಪ ಅವರ ಹಿಡಿತ ಇರುವ ಕ್ಷೇತ್ರ ಇದಾಗಿದೆ. ಡಾ. ಎಂ.ಸಿ. ಸುಧಾಕರ್ ಮತ್ತು ಮುನಿಯಪ್ಪ ಬದ್ಧ ವೈರಿಗಳಾಗಿದ್ದಾರೆ.
ಇಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗಿಂತ ಡಾ.ಎಂ.ಸಿ. ಸುಧಾಕರ್ ಸೋಲಿಸುವುದನ್ನೇ ಪ್ರತಿಷ್ಠೆಯಾಗಿಸಿಕೊಂಡಿರುವ ಮುನಿಯಪ್ಪ ಇದಕ್ಕೆ ಅಗತ್ಯವಿರುವ ಎಲ್ಲ ತಂತ್ರಗಳನ್ನೂ ಈಗಾಗಲೇ ಹೆಣೆದಿದ್ದಾರೆ. ಹಾಗಾಗಿಯೇ ಕಳೆದ ಬಾರಿ ಠೇವಣಿ ಕಳೆದುಕೊಂಡಿದ್ದರೂ ಮತ್ತೆ ವಾಣಿಕೃಷ್ಣಾರೆಡ್ಡಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದಾರೆ. ಇಲ್ಲಿ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ನೇರ ಹಣಾಹಣಿ ನಡೆಯಲಿದೆ. 

ಕಾಂಗ್ರೆಸ್ - ಜೆಡಿಎಸ್ ನಡುವೆ ಭಾರಿ ಕದನ

ಶಿಡ್ಲಘಟ್ಟ: ಜೆಡಿಎಸ್ ಮೊದಲ ಪಟ್ಟಿಯಲ್ಲೇ ಹಾಲಿ ಶಾಸಕ ಎಂ. ರಾಜಣ್ಣ ಅವರಿಗೆ ಟಿಕೆಟ್ ಸಿಕ್ಕಿತ್ತು. ಆದರೆ ಮೇಲೂರು ರವಿಕುಮಾರ್‌ಗೆ ಬಿಫಾರ್ಮ್ ಲಭಿಸಿ ಅವರೇ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿದ್ದಾರೆ. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳೂ ಅದೇ ಸಮುದಾಯದವರಾಗಿರುವುದರಿಂದ ಮತಗಳು ವಿಭಜನೆಯಾಗುವ ಸಂಭವ ಹೆಚ್ಚಿದೆ. ಮತ್ತೊಂದೆಡೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಅಲ್ಪಸಂಖ್ಯಾತರು ಹೆಚ್ಚಿರುವುದು ಶಿಡ್ಲಘಟ್ಟದಲ್ಲಿ. ಆದರೆ ಕಾಂಗ್ರೆಸ್ಸಿಗೆ ಇಲ್ಲಿ ಆ ಮತಗಳು ಕೈಕೊಡುವ ಸಾಧ್ಯತೆ ಅಧಿಕವಾಗಿದೆ. ಕಾಂಗ್ರೆಸ್ಸಿನ ಅಭ್ಯರ್ಥಿ ಮುನಿಯಪ್ಪ ಅವರು ಸಚಿವರಾಗಿದ್ದಾಗ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಲಿಲ್ಲ, ಬೆಂಗಳೂರಿನಲ್ಲಿ ನೆಲೆಸಿರುವ ಅವರು ಜನರ ಕೈಗೆ ಸಿಗುವುದಿಲ್ಲ ಎಂಬ ಆರೋಪಗಳು ಇವೆ. ಹೀಗಾಗಿ ಆ ಮತಗಳು ಜೆಡಿಎಸ್‌ಗೆ ವರ್ಗವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಈ ನಡುವೆ ಮುನಿಯಪ್ಪ ಅವರು ಇದೇ ತಮ್ಮ ಕೊನೆಯ ಚುನಾವಣೆ ಎಂಬ ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ಬಿಜೆಪಿಯಿಂದ ಎಚ್. ಸುರೇಶ್ ಕಣದಲ್ಲಿದ್ದಾರೆ.


ಜೆಡಿಎಸ್ - ಸಿಪಿಎಂ ನಡುವೆ ನೇರ ಹಣಾಹಣಿ

ಬಾಗೇಪಲ್ಲಿ : ಶತಕೋಟ್ಯಧೀಶ್ವರರ ನಡುವಣ ಕಾಳಗಕ್ಕೆ ಈ ಕ್ಷೇತ್ರ ಸಾಕ್ಷಿಯಾಗುತ್ತಿದೆ. ಕಳೆದ ಬಾರಿ ಪಕ್ಷೇತರರಾಗಿ ಗೆದ್ದಿದ್ದ ಎಸ್.ಎನ್. ಸುಬ್ಬಾರೆಡ್ಡಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಅವರ ಆಸ್ತಿ 145 ಕೋಟಿ. ಜೆಡಿಎಸ್‌ನಿಂದ 136 ಕೋಟಿ ರು. ಒಡೆಯ, ಚಿತ್ರ ನಿರ್ಮಾಪಕ ಸಿ.ಆರ್. ಮನೋಹರ್‌ಗೆ ಟಿಕೆಟ್ ನೀಡಲಾಗಿದೆ. ಇವರಿಬ್ಬರ ನಡುವೆ ಹಣ, ಆಸ್ತಿ ಎರಡೂ ಇಲ್ಲದ ಜಿ.ವಿ. ಶ್ರೀರಾಮರೆಡ್ಡಿ ಸಿಪಿಎಂ ಅಭ್ಯರ್ಥಿ. ಬಹುಭಾಷಾ ನಟ ಸಾಯಿಕುಮಾರ್ ಬಿಜೆಪಿಯಿಂದ ಕಣದಲ್ಲಿದ್ದಾರೆ. ಜಾತಿ ರಾಜಕಾರಣವೇ ಪ್ರಮುಖವಾಗಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಾಲಿಗೆ ಬಂಡಾಯವೇ ಮುಳುವಾಗಲಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ಎನ್. ಸಂಪಂಗಿ ಜೆಡಿಎಸ್ ಅಭ್ಯರ್ಥಿಗೆ ಪರೋಕ್ಷ ಬೆಂಬಲ ನೀಡಲಿದ್ದಾರೆ ಎಂಬ ಮಾತುಗಳು ಇದಕ್ಕೆ ಕಾರಣ. ಕ್ಷೇತ್ರದಲ್ಲಿ ಬಲಿಜಿಗ ಹಾಗೂ ಒಕ್ಕಲಿಗರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಜೆಡಿಎಸ್‌ನ ಮನೋಹರ್ ಹಾಗೂ ಮಾಜಿ ಶಾಸಕ ಸಂಪಂಗಿ ಬಲಿಜಿಗರು. ಕಾಂಗ್ರೆಸ್‌ನ ಸುಬ್ಬಾರೆಡ್ಡಿ ಹಾಗೂ ಸಿಪಿಎಂನ ಶ್ರೀರಾಮರೆಡ್ಡಿ ಒಕ್ಕಲಿಗರು. ಆದರೆ ಅವರಿಬ್ಬರ ಒಳಪಂಗಡ ಬೇರೆ ಬೇರೆ. ಕೊಡತಿ ಒಕ್ಕಲಿಗರು ಸುಬ್ಬಾರೆಡ್ಡಿ ಅವರನ್ನು ಬೆಂಬಲಿಸಿದರೆ, ಮರಸು ಒಕ್ಕಲಿಗರು ಶ್ರೀರಾಮರೆಡ್ಡಿ ಪರವಾಗಿ ನಿಲ್ಲಲಿದ್ದಾರೆ
ಎನ್ನಲಾಗುತ್ತಿದೆ. ಒಂದು ವೇಳೆ ಒಕ್ಕಲಿಗರ ಮತ ವಿಭಜನೆಯಾಗಿ ಬಲಿಜಿಗರಲ್ಲಿ ಒಗ್ಗಟ್ಟು ಮೂಡಿದರೆ ಜೆಡಿಎಸ್ ಹಾದಿ ಸುಗಮವಾಗಬಹುದು. ಈ ಎಲ್ಲರನ್ನೂ ಹಿಂದಿಕ್ಕಿ ಜಯ ಸಾಧಿಸುವ ವಿಶ್ವಾಸದಲ್ಲಿ ಚಿತ್ರ ನಟ ಸಾಯಿಕುಮಾರ್ ಇದ್ದಾರೆ. ಒಟ್ಟಿನಲ್ಲಿ ಜೆಡಿಎಸ್- ಸಿಪಿಎಂ ನಡುವೆ ನೇರ ಹಣಾಹಣಿ ಇದೆ. ದಲಿತರ ಮುನಿಸು, ಆಡಳಿತ ವಿರೋಧಿ ಅಲೆ, ಬಲಿಜಿಗರ ಒಗ್ಗಟ್ಟು ಪ್ರದರ್ಶನ ಎಲ್ಲವೂ ಮಿಶ್ರಿತವಾಗಿರುವ ಕ್ಷೇತ್ರದಲ್ಲಿ ಗೆಲವು ಯಾರಿಗೆ ಎಂಬುದನ್ನು ಮಾ.೧೫ರಂದು ಮಾತ್ರ ತಿಳಿಯಲು ಸಾಧ್ಯ.


ಸುಧಾಕರ್ 2 ನೇ ಸಲ ಗೆದ್ದರೆ ಇತಿಹಾಸ

ಚಿಕ್ಕಬಳ್ಳಾಪುರ : ಹಾಲಿ ಶಾಸಕ ಡಾ| ಕೆ. ಸುಧಾಕರ್ ಅತ್ತ ಪಕ್ಷದಲ್ಲಿ, ಇತ್ತ ಕ್ಷೇತ್ರದಲ್ಲಿ ಪ್ರಬಲರಾಗಿದ್ದಾರೆ. ಹಾಗಾಗಿಯೇ ಮೊದಲ ಪಟ್ಟಿಯಲ್ಲಿಯೇ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಜೆಡಿಎಸ್‌ನಿಂದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ ಕಣದಲ್ಲಿದ್ದಾರೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ಕೈತಪ್ಪಿದ ಕಾರಣ ಕೆ.ವಿ. ನವೀನ್‌ಕಿರಣ್ ಅವರು ಬಂಡೆದ್ದು, ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಇವರ ಜೊತೆಗೆ ಬಿಜೆಪಿಯಿಂದ ಡಾ.ಜಿ.ವಿ. ಮಂಜುನಾಥ್ ಸ್ಪರ್ಧಾಕಣದಲ್ಲಿದ್ದಾರೆ. ಬಿಜೆಪಿ ಈಗಷ್ಟೇ ಪ್ರಬಲವಾಗುತ್ತಿರುವ ಕಾರಣ ಗೆಲುವಿನ ನಿರೀಕ್ಷೆ ಕಷ್ಟಸಾಧ್ಯ. ಹಾಗಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಜಾತಿ ರಾಜಕಾರಣ ಮೇಳೈಸಿದ್ದು, ಒಕ್ಕಲಿಗ ಮತ್ತು ಬಲಿಜಿಗ ಸಮುದಾಯದ ಮತಗಳು ನಿರ್ಣಾಯಕವಾಗಲಿದೆ. ಇವರ ಜೊತೆಗೆ ಪರಿಶಿಷ್ಟರ ಮತಗಳು ಅಧಿಕ ಸಂಖ್ಯೆಯಲ್ಲಿದ್ದು, ಅವು ಯಾರ ಪಾಲಾಗುತ್ತವೋ ಅವರ ಗೆಲವು ಖಚಿತ. ಜೆಡಿಎಸ್ ಅಭ್ಯರ್ಥಿ ಕೆ.ಪಿ. ಬಚ್ಚೇಗೌಡ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ. ಸುಧಾಕರ್ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ವಿ. ನವೀನ್‌ಕಿರಣ್ ಮತ್ತು ಬಿಜೆಪಿ ಅಭ್ಯರ್ಥಿ ಡಾ.ಜಿ.ವಿ. ಮಂಜುನಾಥ್ ಬಲಿಜಿಗ ಸಮುದಾಯಕ್ಕೆ
ಸೇರಿದವರಾಗಿದ್ದಾರೆ. ಹಾಗಾಗಿ ಎರಡೂ ಸಮುದಾಯಗಳ ಮತಗಳು ವಿಭಜನೆಯಾಗುವ ಸಂಭವವಿದೆ. ಇದರ ಲಾಭ ಯಾರಿಗೆಂಬುದನ್ನು ನೋಡಬೇಕು. ಒಮ್ಮೆ ಗೆದ್ದ ಅಭ್ಯರ್ಥಿ ಮತ್ತೊಮ್ಮೆ ಆರಿಸಿ ಬಂದ ಉದಾಹರಣೆಯೇ ಇಲ್ಲದ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮತ್ತೊಮ್ಮೆ ಸುಧಾಕರ್ ಗೆದ್ದರೆ ಇತಿಹಾಸವೇ ಸೃಷ್ಟಿಯಾಗಲಿದೆ. ಈ ದಾಖಲೆ ನಿರ್ಮಿಸುವ ಸಲುವಾಗಿ ಈಗಾಗಲೇ ಸುಧಾಕರ್ ಅವರು ತಮ್ಮ ವಿರೋಧಿಗಳ ಮನವೊಲಿಕೆ ಮಾಡಿ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ದಿನೇದಿನೇ ಬಲವೃದ್ಧಿಸಿಕೊಳ್ಳುತ್ತಿದ್ದಾರೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk