Asianet Suvarna News Asianet Suvarna News

ಕಾಂಗ್ರೆಸ್ ನೆಲದಲ್ಲಿ ಅರಳುತ್ತದೆಯಾ ಕಮಲ ?

ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ. ಕಳೆದ ಎರಡು ಚುನಾವಣೆಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಜಿಲ್ಲೆಯಲ್ಲಿ ಜೆಡಿಎಸ್ ಬಲ ಕುಗ್ಗಿಸಿದ್ದಾರೆ. ‘ಕಮಲ’ ಅರಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ವೀರಶೈವರು, ಅಹಿಂದ ಮತ ವಿಭಜನೆಯಿಂದ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದ್ದರೆ, ಕಾಂಗ್ರೆಸ್ ಅಹಿಂದ ವರ್ಗವನ್ನು ಗಟ್ಟಿಯಾಗಿ ನೆಚ್ಚಿಕೊಂಡಿದೆ.

Karnataka Assembly Election Chamarajanagar Election

ದೇವರಾಜು ಕಪ್ಪಸೋಗೆ

ಚಾಮರಾಜನಗರ : ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ. ಕಳೆದ ಎರಡು ಚುನಾವಣೆಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಜಿಲ್ಲೆಯಲ್ಲಿ ಜೆಡಿಎಸ್ ಬಲ ಕುಗ್ಗಿಸಿದ್ದಾರೆ. ‘ಕಮಲ’ ಅರಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ಕಂಡುಬರುತ್ತಿದೆ. ವೀರಶೈವರು, ಅಹಿಂದ ಮತ ವಿಭಜನೆಯಿಂದ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದ್ದರೆ, ಕಾಂಗ್ರೆಸ್ ಅಹಿಂದ ವರ್ಗವನ್ನು ಗಟ್ಟಿಯಾಗಿ ನೆಚ್ಚಿಕೊಂಡಿದೆ.

ಕಾಂಗ್ರೆಸಿಗೆ ಸಾಲು - ಸಾಲು ತಲೆನೋವು

ಚಾಮರಾಜನಗರ : ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಳೆದ ಬಾರಿ ಕೆಜೆಪಿ ಅಭ್ಯರ್ಥಿಯಾಗಿದ್ದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ.
ಹಾಲಿ ಕಾಂಗ್ರೆಸ್ ಶಾಸಕ ಪುಟ್ಟರಂಗಶೆಟ್ಟಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವೀರಶೈವರು ಬಿಜೆಪಿ ಪರವಾಗಿ ಹಾಗೂ ಅಹಿಂದ ವರ್ಗ ಕಾಂಗ್ರೆಸ್ ಪರವಾಗಿ ನಿಲ್ಲುವ ಸಾಧ್ಯತೆ ಇದೆ. ಆದರೆ ವಿವಿಧ ನಾಯಕರ ಬಿಜೆಪಿ ಸೇರ್ಪಡೆಯಿಂದ ಅಹಿಂದ ಮತ ವಿಭಜನೆಯಾಗುವ ಸಂಭವವಿದೆ. ಜತೆಗೆ ತಳವಾರ, ಪರಿವಾರ, ನಾಯಕ ಸಮುದಾಯವನ್ನು ಕೇಂದ್ರ ಸರ್ಕಾರ ಎಸ್‌ಟಿಗೆ ಸೇರಿಸಿದ್ದೂ ಬಿಜೆಪಿಗೆ ವರದಾನವಾಗುವ ನಿರೀಕ್ಷೆ ಇದೆ. ಮೂರನೇ ಬಾರಿಗೆ ಶಾಸಕರಾಗಲು ಯತ್ನಿಸುತ್ತಿರುವ ಪುಟ್ಟರಂಗಶೆಟ್ಟಿ ವಿರುದ್ಧ ಪ್ರಭುತ್ವ ವಿರೋಧಿ ಅಲೆ ಇದೆ. ಬಂಡಾಯ ಅಭ್ಯರ್ಥಿ ಕಣದಲ್ಲಿರುವುದು ಅವರಿಗೆ ತಲೆನೋವು. ಆದರೂ ಕೈಗೆ ಸುಲಭವಾಗಿ ಸಿಗುವ ಶಾಸಕ ಎಂಬ ಹೆಗ್ಗಳಿಕೆ ಪ್ಲಸ್ ಪಾಯಿಂಟ್. ಚುನಾವಣೆ ಸಮಯದಲ್ಲಿ ಮಾತ್ರ ಕ್ಷೇತ್ರ ನೆನಪು ಮಾಡಿಕೊಳ್ಳುವ ವಾಟಾಳ್ ನಾಗರಾಜ್‌ಗೆ ಪರಿಸ್ಥಿತಿ ಸುಲಭವಿಲ್ಲ.


ಮತ್ತೆ ೨ ಕುಟುಂಬಗಳ ನಡುವೆ ಕಾಳಗ 

ಹನೂರು : ಕುಟುಂಬ ರಾಜಕಾರಣಕ್ಕೆ ಹೆಸರಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ಇದೆ. ಹಾಲಿ ಶಾಸಕ ಆರ್. ನರೇಂದ್ರ ಮತ್ತೆ ಕಾಂಗ್ರೆಸ್ಸಿಂದ ಸ್ಪರ್ಧಿಸಿದ್ದಾರೆ. ಮಾಜಿ
ಶಾಸಕಿ ಪರಿಮಳಾ ನಾಗಪ್ಪ ಪುತ್ರ ಡಾ| ಪ್ರೀತನ್ ನಾಗಪ್ಪ ಬಿಜೆಪಿ ಅಭ್ಯರ್ಥಿ. ಕುರುಬ ಜನಾಂಗದ ಮಂಜುನಾಥ್ ಜೆಡಿಎಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದಿದ್ದಾರೆ. ಹಾಲಿ ಶಾಸಕ ನರೇಂದ್ರ ಅವರಿಗೆ ಬಂಡಾಯ ಅಭ್ಯರ್ಥಿಗಳು ಅಡ್ಡಿಯಾಗಿದ್ದಾರೆ. ಬಿಜೆಪಿಗೆ ಅನುಕಂಪದ ಜೊತೆಗೆ, ಆಡಳಿತ ವಿರೋಧಿ ಅಲೆ ಲಾಭ ತಂದು ಕೊಡುವ ಲೆಕ್ಕಾಚಾರವಿದೆ. ಏನೇ ಆದರೂ ಈ ಬಾರಿಯೂ ನರೇಂದ್ರ- ಪರಿಮಳಾ ಕುಟುಂಬಗಳ ಪೈಕಿಯೇ ಕದನ ನಡೆಯುತ್ತಿದೆ.
ಹನೂರಿನಲ್ಲಿ ದಲಿತರ ಮತಗಳು ಹೆಚ್ಚು. ಎಡಗೈ- ಬಲಗೈ ಮತ ವಿಭಜನೆಯಾಗುವ ಸಂಭವವಿದೆ. ಕೇಂದ್ರ ಎಸ್‌ಟಿ ಮೀಸಲಿನ ಹಿನ್ನೆಲೆಯಲ್ಲಿ ನಾಯಕ ಸಮುದಾಯದ ಮತಗಳು ಒಲಿಯಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿದೆ. ಅಹಿಂದ ಮತಗಳನ್ನು ಕಾಂಗ್ರೆಸ್ ನೆಚ್ಚಿಕೊಂಡಿದೆ. ಜೆಡಿಎಸ್ ಸ್ಪರ್ಧೆಯಿಂದ ಆ ಮತಗಳು ವಿಭಜನೆಯಾದರೆ ಕಷ್ಟವಾಗಲಿದೆ. 


ಗೀತಾಗೆ ಮತ್ತೆ ಬಿಜೆಪಿ ಪ್ರಬಲ ಪೖಪೋಟಿ

ಗುಂಡ್ಲುಪೇಟೆ : ವೀರಶೈವ ಸಮುದಾಯದ ಪ್ರಾಬಲ್ಯವಿರುವ ಕ್ಷೇತ್ರವಿದು. ಪತಿ ಮಹದೇವಪ್ರಸಾದ್ ಕಾಲದಲ್ಲಿ ಅನುಷ್ಠಾನಗೊಳಿಸಿದ್ದ ಕಾರ್ಯಕ್ರಮಗಳನ್ನು ಸಚಿವೆ ಗೀತಾ ಸಮರ್ಪಕವಾಗಿ
ಜಾರಿಗೊಳಿಸಿದ್ದಾರೆ. ಮತದಾರರೊಂದಿಗೆ ಪುತ್ರನ ಮೂಲಕ ಪತಿಯ ರೀತಿಯಲ್ಲೇ ಸಂಪರ್ಕ ಇಟ್ಟುಕೊಂಡಿದ್ದಾರೆ. ಇದು ಪ್ಲಸ್ ಪಾಯಿಂಟ್. ಗೀತಾ ಎದುರಾಳಿ ನಿರಂಜನ್ ಕುಮಾರ್
ಅವರು ೫ ಬಾರಿ ಸೋತಿದ್ದಾರೆ. ಹೀಗಾಗಿ ಅವರು ಈಗ ಅನುಕಂಪದ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿ ಡಾ.ಗೀತಾ ಅವರ ಗೆಲುವಿಗೆ ಶ್ರಮಿಸಿದ್ದ ೧೦ ಮಂದಿ ಪುರಸಭಾ ಸದಸ್ಯರು ಈ
ಬಾರಿ ನಿರಂಜನ್ ಪರ ಇರುವುದು ಅವರಿಗೆ ವರವಾಗುವ ಲೆಕ್ಕಚಾರವೂ ಇದೆ. ವೀರಶೈವರು ಈ ಬಾರಿ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಎಸ್‌ಟಿ ಮೀಸಲಿನ ಹಿನ್ನೆಲೆಯಲ್ಲಿ
ತಳವಾರ, ಪರಿವಾರ, ನಾಯಕರ ಮತಗಳೂ ಆ ಪಕ್ಷಕ್ಕೇ ಸಿಗಬಹುದು. ಅಹಿಂದ ಮತಗಳನ್ನು ಗೀತಾ ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್- ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಈ ಕ್ಷೇತ್ರವನ್ನು ಬಿಎಸ್ಪಿಗೆ ಜೆಡಿಎಸ್ ಬಿಟ್ಟುಕೊಟ್ಟಿದೆ. ಗುರುಪ್ರಸಾದ್ ಕಣಕ್ಕಿಳಿದಿದ್ದಾರೆ.


ಕಾಂಗ್ರೆಸ್ - ಬಿಜೆಪಿ ಜೊತೆ  ಬಿಎಸ್’ಪಿ ಸೆಣಸಾಟ

ಕೊಳ್ಳೆಗಾಲ : ದಲಿತರ ಪ್ರಾಬಲ್ಯದ ಮೀಸಲು ಕ್ಷೇತ್ರದಲ್ಲಿ ತ್ರಿಕೋನ ಸರ್ಧೆಯಿದ್ದು, ಸತತ ಸೋಲು ಅನುಭವಿಸಿರುವ ಬಿಎಸ್ಪಿಯ ಎನ್. ಮಹೇಶ್ ಈ ಬಾರಿ ಗೆಲ್ಲಲೇಬೇಕು ಎಂದು ಹಠಕ್ಕೆ ಬಿದ್ದಿದ್ದು, ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್‌ನ ಹಾಲಿ ಶಾಸಕ ಎಸ್.ಜಯಣ್ಣ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಈ ಬಾರಿ ಕಣಕ್ಕಿಳಿದಿದ್ದಾರೆ. ೧೪  ವರ್ಷಗಳ ವನವಾಸದಿಂದ ಪಾರು ಮಾಡಿ ಎಂದು ಅನುಕಂಪಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ೨೦೦೯ರ ಉಪ ಚುನಾವಣೆಯಲ್ಲಿ ಆಯ್ಕೆಯಾಗಿ ಗಮನ ಸೆಳೆದಿದ್ದ ಬಿಜೆಪಿಯ ಜಿ.ಎನ್.  ನಂಜುಂಡಸ್ವಾಮಿ ಕಳೆದ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದರು. ಆದರೂ ಈ ಬಾರಿ ಟಿಕೆಟ್ ಪಡೆದಿದ್ದು, ಸ್ವಲ್ಪ ಮಟ್ಟಿಗೆ ಬಂಡಾಯದ ಕಾವು ಹೊಗೆಯಾಡುತ್ತಿದೆ. ಬಿಜೆಪಿ-ಕೆಜೆಪಿ  ಒಂದಾಗಿರುವುದರಿಂದ ಇದರ ಲಾಭ ನನಗೆ ದಕ್ಕಲಿದೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಸತತ ೩ ಸೋಲು ಅನುಭವಿಸಿರುವ ಮಹೇಶ್ ಅನುಕಂಪದ ನಿರೀಕ್ಷೆಯಲ್ಲಿದ್ದಾರೆ.

Follow Us:
Download App:
  • android
  • ios