ಕೊನೆಗೂ ತುಮಕೂರಿನಲ್ಲಿ ನೆಲೆ ಕಂಡುಕೊಂಡ ಬಿಜೆಪಿ

karnataka-assembly-election-2018 | Wednesday, May 16th, 2018
Naveen Kodase
Highlights

ಕಡೆಗೂ ಜಿಲ್ಲೆಯಲ್ಲಿ ಬಿಜೆಪಿ ನೆಲೆ ಕಂಡುಕೊಂಡಿದ್ದು, ಕಳೆದ ಬಾರಿ ಇದ್ದ 1 ಸ್ಥಾನದಿಂದ ನಾಲ್ಕಕ್ಕೆ ಜಿಗಿದಿದೆ. ಹಾಗೆಯೇ ಜೆಡಿಎಸ್ ಎರಡು ಸ್ಥಾನ ಕಳೆದುಕೊಂಡರೆ ಕಾಂಗ್ರೆಸ್ 1 ಸ್ಥಾನ ಕಳೆದು ಕೊಂಡಂತಾಗಿದೆ. ಕಳೆದ ಬಾರಿ ತುಮಕೂರು ಗ್ರಾಮಾಂತರದಲ್ಲಿ ಮಾತ್ರ ಬಿಜೆಪಿ, ಇದ್ದು ಈ ಬಾರಿ ಸುರೇಶ ಗೌಡ ಪರಾಭವಗೊಂಡಿದ್ದಾರೆ.

* ಉಗಮ ಶ್ರೀನಿವಾಸ್, ಕನ್ನಡಪ್ರಭ ವಾರ್ತೆ 
ತುಮಕೂರು[ಮೇ.16]: ಕಡೆಗೂ ಜಿಲ್ಲೆಯಲ್ಲಿ ಬಿಜೆಪಿ ನೆಲೆ ಕಂಡುಕೊಂಡಿದ್ದು, ಕಳೆದ ಬಾರಿ ಇದ್ದ 1 ಸ್ಥಾನದಿಂದ ನಾಲ್ಕಕ್ಕೆ ಜಿಗಿದಿದೆ. ಹಾಗೆಯೇ ಜೆಡಿಎಸ್ ಎರಡು ಸ್ಥಾನ ಕಳೆದುಕೊಂಡರೆ ಕಾಂಗ್ರೆಸ್ 1 ಸ್ಥಾನ ಕಳೆದು ಕೊಂಡಂತಾಗಿದೆ. ಕಳೆದ ಬಾರಿ ತುಮಕೂರು ಗ್ರಾಮಾಂತರದಲ್ಲಿ ಮಾತ್ರ ಬಿಜೆಪಿ, ಇದ್ದು ಈ ಬಾರಿ ಸುರೇಶ ಗೌಡ ಪರಾಭವಗೊಂಡಿದ್ದಾರೆ. ಹಾಗೆಯೇ ತಿಪಟೂರು, ತುಮಕೂರು ನಗರ, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿ ಜಯಗಳಿಸುವುದರೊಂದಿಗೆ ಜಿಲ್ಲೆಯಲ್ಲಿ ಬಿಜೆಪಿ ಬೇರು ಬಿಟ್ಟಂತಾಗಿದೆ.
ಈ ಹಿಂದೆ 2008ರಲ್ಲಿ ತುಮಕೂರು ನಗರ, ತುಮಕೂರು ಗ್ರಾಮಾಂತರ ಹಾಗೂ ತಿಪಟೂರಿನಲ್ಲಿ ಗೆದ್ದಿದ್ದ ಬಿಜೆಪಿ 2013ರಲ್ಲಿ ಕೇವಲ ಒಂದು ಸ್ಥಾನ ಗೆದ್ದು ನಿರಾಶೆ ಹುಟ್ಟಿಸಿತ್ತು. ಈಗ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವುದರ ಮೂಲಕ ಬಿಜೆಪಿ ಗಣನೀಯ ಸಾಧನೆ ಮಾಡಿದೆ. ಇನ್ನು ಕಳೆದ ಸಾಲಿನಲ್ಲಿ 6 ಕ್ಷೇತ್ರಗಳಲ್ಲಿ ಗೆದ್ದಿದ್ದು ಜೆಡಿಎಸ್ ಈ ಬಾರಿ ನಾಲ್ಕು ಕ್ಷೇತ್ರಗಳಲ್ಲಿ ಗೆಲ್ಲುವುದರ ಮೂಲಕ 2 ಸ್ಥಾನ ಕಳೆದುಕೊಂಡಿದೆ. ಕಳೆದ ಬಾರಿ ಜೆಡಿಎಸ್ ಗುಬ್ಬಿ, ಪಾವಗಡ,ಕೊರಟಗೆರೆ, ಕುಣಿಗಲ್, ಚಿಕ್ಕನಾಯಕನಹಳ್ಳಿ ಹಾಗೂ ತುರುವೇ ಕೆರೆಯಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ಹಾಲಿ 5 ಶಾಸಕರು ಪರಾಭವಗೊಂಡಿದ್ದಾರೆ. ಆದರೆ ಹೊಸದಾಗಿ ಮೂರು ಶಾಸಕರು ಆಯ್ಕೆಯಾಗಿದ್ದಾರೆ. ಇನ್ನು ಕಾಂಗ್ರೆಸ್ ಕಳೆದ ಬಾರಿ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ಒಂದು ಕ್ಷೇತ್ರ ಕಳೆದುಕೊಂಡಿದೆ.
ಆದರೆ ಹೊಸದಾಗಿ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಕುಣಿಗಲ್‌'ನಿಂದ ಸ್ಪರ್ಧಿಸಿದ್ದ ಡಾ. ರಂಗನಾಥ್ ಅವರು ಗೆದ್ದಿದ್ದಾರೆ. ಹಾಗೆಯೆ ಪಾವಗಡದಲ್ಲಿ ವೆಂಕಟರಮಣಪ್ಪ ಜಯ ಸಾಧಿಸಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ರೇಸ್‌'ನಲ್ಲಿದ್ದೂ ಸೋತಿದ್ದ ಪರಮೇಶ್ವರ್ ಈ ಬಾರಿ ಜಯ ಸಾಧಿಸಿದ್ದಾರೆ.

ಜಯಚಂದ್ರ ಸೋಲು.....: ಸತತ ಎರಡು ಬಾರಿ ಶಿರಾ ಕ್ಷೇತ್ರದಿಂದ ಜಯಗಳಿಸಿದ್ದ ಟಿ.ಬಿ. ಜಯಚಂದ್ರ ಅವರು ಸೋತಿದ್ದಾರೆ. ಕಾಂಗ್ರೆಸ್‌ನ ಹಿರಿಯ ಶಾಸಕರಲ್ಲಿ ಒಬ್ಬರಾಗಿದ್ದ ಜಯಚಂದ್ರ ಸೋಲುವುದರೊಂದಿಗೆ ಅಚ್ಜರಿಗೆ ಕಾರಣವಾಯಿತು.

ತಿಪಟೂರಿನಲ್ಲಿ ದಾಖಲೆ ಗೆಲುವು......: ತಿಪಟೂರಿನಲ್ಲಿ ಕಾಂಗ್ರೆಸ್‌ನಲ್ಲಿ ಟಿಕೆಟ್ ಗೊಂದಲ ದೊಡ್ಡ ನಷ್ಟವನ್ನೇ ಉಂಟು ಮಾಡಿದೆ. ಮೊದಲು ಬಿ. ನಂಜಾರಿಗೆ ಟಿಕೆಟ್ ಘೋಷಿಸಿ ಬಳಿಕ ಕೆ. ಷಡಕ್ಷರಿಗೆ ಟಿಕೆಟ್ ನೀಡಿ ಗೊಂದಲಕ್ಕೆ ಕಾರಣವಾಗಿತ್ತು. ಇದರ ಪರಿಣಾಮ ಚುನಾವಣೆ ಮೇಲೆ ಬೀರಿದ್ದು ಬಿಜೆಪಿಯ ಬಿ.ಸಿ. ನಾಗೇಶ್ ಭರ್ತಿ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲು ಸಾಧ್ಯವಾಯಿತು.

ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಚೇತರಿಕೆ.....: ಹಿಂದೆಲ್ಲಾ ಕೇವಲ 3 ಸಾವಿರ ಮತಗಳನ್ನಷ್ಟೆ ಪಡೆದಿದ್ದ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಸಮಾಧಾನಕರ ಸಾಧನೆ ಮಾಡಿತ್ತು. ಆದರೆ ಈ ಬಾರಿ ಜಯಚಂದ್ರ ಪುತ್ರ ಸಂತೋಷ್ ಜಯಚಂದ್ರ 45 ಸಾವಿರ ಮತಗಳನ್ನು ಪಡೆಯುವುದರೊಂದಿಗೆ ಕಾಂಗ್ರೆಸ್ ನೆಲೆ ಕಂಡುಕೊಂಡಿದೆ. ಇನ್ನು ಗ್ರಾಮಾಂತರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಂತಾಗಿದೆ. 2013 ರಲ್ಲಿ ವೆಂಕಟರಮಣಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸಿದ್ದರು. ಆದರೆ ಅವರ ಮಗ ವೆಂಕಟೇಶ್ ಪರಾಭವಗೊಂಡಿದ್ದರು. ಈ ಬಾರಿ ಸ್ವತಃ ವೆಂಕಟರಮಣಪ್ಪ ಅವರೇ ನಿಂತು ಕೇವಲ 300 ಮತಗಳ ಅಂತರದೊಂದಿಗೆ ಜಯಸಾಧಿಸಿದ್ದಾರೆ.
ಇನ್ನು ಗುಬ್ಬಿಯಲ್ಲಿ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿಗಳ ಒಡಕಿನ ಲಾಭ ಸ್ಪಷ್ಟವಾಗಿ ಜೆಡಿಎಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ದಿಲೀಪ್ ಕುಮಾರ್ 30 ಸಾವಿರ ಮತಗಳನ್ನು ಪಡೆದಿದ್ದು ಬಿಜೆಪಿಯ ಮತಗಳನ್ನು ಕಸಿದುಕೊಂಡಿದ್ದಾರೆ. ಹೀಗಾಗಿ ಸಹಜವಾಗಿ ಜೆಡಿಎಸ್‌'ನ ಶ್ರೀನಿವಾಸ್‌'ಗೆ ಲಾಭ ಮಾಡಿಕೊಟ್ಟಂತಾಯಿತು.
ಇನ್ನು ಪಾವಗಡದಲ್ಲಿ ನಿರೀಕ್ಷೆಯಂತೆ ವೆಂಕಟರಮಣಪ್ಪ ಗೆದ್ದಿದ್ದಾರೆ. ಕೆ.ಎಂ. ತಿಮ್ಮರಾಯಪ್ಪ ವಿರುದ್ಧ ಅಲ್ಲಲ್ಲಿ ಸಣ್ಣ ಅಸಮಾಧಾನವಿತ್ತು. ಆದರೆ ಬೋವಿ ಸಮುದಾಯದ ವೆಂಕಟರಮಣಪ್ಪ ಅವರು ಅದೇ ಸಮುದಾಯದ ಬಲರಾಮ್ ಬಿಜೆಪಿಯಿಂದ ಸ್ಪರ್ಧಿಸಿದ್ದು ಒಂದಿಷ್ಟು ಹಿನ್ನೆಡೆಗೆ ಕಾರಣವಾಯಿತು.
ಪಾವಗಡದಲ್ಲಿ ಬಲರಾಮ್ 14 ಸಾವಿರ ಮತಗಳನ್ನು ಪಡೆಯುವುದರೊಂದಿಗೆ ವೆಂಕಟರಮಣಪ್ಪ ಅವರ ಗೆಲುವಿನ ಅಂತರ ಕಡಿಮೆ ಮಾಡಿದರು. ಇನ್ನು ಜಿಲ್ಲೆಯಲ್ಲಿ ಹೈ ಓಲ್ಟೇಜ್ ಪಂದ್ಯ ಎಂದೇ ಬಿಂಬಿತವಾಗಿದ್ದ ತುಮಕೂರು ಗ್ರಾಮಾಂತರ ನೇರ ಹಣಾಹಣೆಯಲ್ಲಿ ಜೆಡಿಎಸ್ ಜಯಗಳಿಸಿದೆ. ಸತತ ಎರಡು ಬಾರಿ ಬಿಜೆಪಿಯ ಸುರೇಶಗೌಡ ಇಲ್ಲಿ ಗೆಲುವು ಸಾಧಿಸಿದ್ದರು. ಕಳೆದ ಬಾರಿ ಕೇವಲ 1700 ಮತಗಳ ಅಂತರದಿಂದ ಜೆಡಿಎಸ್‌'ನ ಗೌರಿಶಂಕರ್ ಪರಾಭವಗೊಂಡಿದ್ದರು. ಅಲ್ಲಿಂದಲೇ ಎಚ್ಚೆತ್ತುಕೊಂಡ ಗೌರಿ ಶಂಕರ್ ನಿರಂತರವಾಗಿ ಕ್ಷೇತ್ರದ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಪರಿಣಾಮ ಈ ಬಾರಿ ಗೆಲುವಿಗೆ ಕಾರಣವಾಗಿದೆ.
ಇನ್ನು ತುರುವೇಕೆರೆಯಲ್ಲಿ ದೊಡ್ಡ ಪ್ರತಿರೋಧ ಕೊಟ್ಟೇ ಜೆಡಿಎಸ್‌ನ ಎಂ.ಟಿ. ಕೃಷ್ಣಪ್ಪ ಸೋತಿದ್ದಾರೆ. ಕಳೆದೆರೆಡು ಚುನಾವಣೆಯಲ್ಲಿ ಗೆದ್ದಿದ್ದ ಎಂ.ಟಿ. ಕೃಷ್ಣಪ್ಪ ಈ ಬಾರಿ ಕೇವಲ 2 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ ಮಸಾಲೆ ಜಯರಾಂ ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ. 2 ಬಾರಿ ಸೋತು ಒಂದು ಬಾರಿ ಗೆದ್ದಿದ್ದ ಮಧುಗಿರಿಯ ಕೆ.ಎನ್. ರಾಜಣ್ಣ ಈ ಬಾರಿ ಭರ್ತಿ 18 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಆರಂಭದಲ್ಲೂ ವಿವಾದಕ್ಕೆ ಗುರಿಯಾಗಿದ್ದ ರಾಜಣ್ಣ ಅವರು ಡಿಸಿಸಿ ಬ್ಯಾಂಕ್ ಮೂಲಕ ಒಂದಿಷ್ಟು ಕೆಲಸಗಳನ್ನು ಮಾಡಿದ್ದರು. ಆದರೆ ಜೆಡಿಎಸ್ ಬಗೆಗಿನ ಜನರ ಒಲುವು ವೀರಭದ್ರಯ್ಯ ಗೆಲ್ಲುವಂತೆ ಮಾಡಿದೆ.
ಕಳೆದ ಬಾರಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಪರಮೇಶ್ವರ್ ಸೋಲುವುದರೊಂದಿಗೆ ಅವಕಾಶ ಕಳೆದುಕೊಂಡರು. ಆದರೆ ಈ ಬಾರಿ ಕಳೆದ ಮೂರು ತಿಂಗಳಿನಿಂದ ಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದರು. ಅಲ್ಲದೇ ಎಲ್ಲಾ ಮುಖಂಡರೊಂದಿಗೆ ಸಂಪರ್ಕ ಸಾಧಿಸುವುದರ ಜೊತೆಗೆ ಗ್ರಾಮವಾಸ್ತವ್ಯದ ಮೂಲಕ ಗಮನಸೆಳೆದಿದ್ದರು. ಜೊತೆಗೆ ಅನುಕಂಪ ಕೂಡ ಅವರ ಜಯಕ್ಕೆ ಕಾರಣವಾಯಿತು.
ಇನ್ನು ತುಮಕೂರು ನಗರದಲ್ಲಿ ಬಿಜೆಪಿ ಒಳಜಗಳದಿಂದ ನರಳಿತ್ತು. ಒಂದು ಕಡೆ ಮಾಜಿ ಸಚಿವ ಸೊಗಡು ಶಿವಣ್ಣ ತಟಸ್ಥರಾಗಿದ್ದರು. ಇಷ್ಟೆಲ್ಲಾ ವಿರೋಧದ ನಡುವೆ ನಡೆದ ಚುನಾವಣೆಯಲ್ಲಿ ಕಡೆಗೂ ಬಿಜೆಪಿಯ ಜ್ಯೋತಿ ಗಣೇಶ್ ಗೆಲುವು ಸಾಧಿಸಿದ್ದಾರೆ. ಒಂದಿಷ್ಟು ಕೆಲಸ ಮಾಡಿದ್ದ ರಫೀಕ್ ಅಹಮದ್ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಕ್ಷೇತ್ರ                          ಅಭ್ಯರ್ಥಿ                     ಪಕ್ಷ          ಗೆಲುವಿನ ಅಂತರ
ಚಿಕ್ಕನಾಯಕನಹಳ್ಳಿ        J.C ಮಧುಸ್ವಾಮಿ          ಬಿಜೆಪಿ        10277
ತಿಪಟೂರು                  B.C ನಾಗೇಶ್              ಬಿಜೆಪಿ         25563
ತುರುವೇಕೆರೆ               ಮಸಾಲ ಜಯರಾಮ್      ಬಿಜೆಪಿ          2049
ಕುಣಿಗಲ್                   ಡಾ. H.D ರಘುನಾಥ್     ಕಾಂಗ್ರೆಸ್      5599 
ತುಮಕೂರು ನಗರ       G.B ಜ್ಯೋತಿ ಗಣೇಶ್     ಬಿಜೆಪಿ           5293
ತುಮಕೂರು (ಗ್ರಾ)       D.C ಗೌರಿ ಶಂಕರ್        ಜೆಡಿಎಸ್        5640
ಕೊರಟಗೆರೆ                ಡಾ. G ಪರಮೇಶ್ವರ್     ಕಾಂಗ್ರೆಸ್        7619
ಗುಬ್ಬಿ                       S.R ಶ್ರೀನಿವಾಸ್          ಜೆಡಿಎಸ್         9081
ಶಿರಾ                       B. ಸತ್ಯನಾರಾಯಣ      ಜೆಡಿಎಸ್         10365
ಪಾವಗಡ                 ವೆಂಕಟರಮಣಪ್ಪ           ಕಾಂಗ್ರೆಸ್            409
ಮಧುಗಿರಿ                M.V ವೀರಭದ್ರಯ್ಯ        ಜೆಡಿಎಸ್          18574

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Naveen Kodase