ದುರ್ಗದ ಕಾಂಗ್ರೆಸ್ ಕೋಟೆ ಛಿದ್ರ; ಕೋಟೆ ನಾಡಲ್ಲಿ ಕಮಲ ಕಿಲಕಿಲ

First Published 16, May 2018, 3:16 PM IST
Karnataka Assembly Election 2018 Chitradurga Results
Highlights

ಕೇವಲ ಒಂದೂವರೆ ತಿಂಗಳ ಹಿಂದಿನ ವಾತಾವರಣ ಜಿಲ್ಲೆ ಮತ್ತೆ ಕಾಂಗ್ರೆಸ್ ಭದ್ರಕೋಟೆಯಾಗುವ ಎಲ್ಲ ಸಂದೇಶಗಳ ರವಾನಿಸಿತ್ತು. ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಮಾಡಿಕೊಂಡ ಯಡವಟ್ಟು, ಶ್ರೀರಾಮುಲು ಪ್ರವೇಶದಿಂದಾಗಿ ಇಡೀ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಲು ಸಾಧ್ಯವಾಗಿದೆ.

ಚಿಕ್ಕಪ್ಪನಹಳ್ಳಿ ಷಣ್ಮುಖ ಕನ್ನಡಪ್ರಭ
ಚಿತ್ರದುರ್ಗ[ಮೇ.16]: ಈ ಬಾರಿಯ ವಿಧಾನಸಭೆ ಚುನಾವಣೆ ಚಿತ್ರದುರ್ಗ ಜಿಲ್ಲೆಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದು ಕಾಂಗ್ರೆಸ್ ಭದ್ರ ಕೋಟೆ ಛಿದ್ರವಾಗಿದೆ. ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆಲವು ಸಾಧಿಸಿದ್ದು ಕಾಂಗ್ರೆಸ್ ಚಳ್ಳಕೆರೆಯಲ್ಲಿ ಮಾತ್ರ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಇದೇ ಮೊದಲ ಬಾರಿಗೆ ಕೋಟೆ ನಾಡಲ್ಲಿ ಕಮಲ ಅರಳಿದೆ. ಸಚಿವ ಆಂಜನೇಯ ಅತ್ಯಧಿಕ ಮತಗಳ ಅಂತರದಿಂದ ಸೋಲುಂಡಿರುವುದು ಜಿಲ್ಲೆಯ ಮಟ್ಟಿಗೆ ಆಘಾತಕಾರಿ ಸಂಗತಿಯಾಗಿದೆ.
ಕೇವಲ ಒಂದೂವರೆ ತಿಂಗಳ ಹಿಂದಿನ ವಾತಾವರಣ ಜಿಲ್ಲೆ ಮತ್ತೆ ಕಾಂಗ್ರೆಸ್ ಭದ್ರಕೋಟೆಯಾಗುವ ಎಲ್ಲ ಸಂದೇಶಗಳ ರವಾನಿಸಿತ್ತು. ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಮಾಡಿಕೊಂಡ ಯಡವಟ್ಟು, ಶ್ರೀರಾಮುಲು ಪ್ರವೇಶದಿಂದಾಗಿ ಇಡೀ ಜಿಲ್ಲೆಯ ರಾಜಕೀಯ ಚಿತ್ರಣವೇ ಬದಲಾಗಲು ಸಾಧ್ಯವಾಗಿದೆ. ಜಿಲ್ಲೆಯ ವಿಧಾಸಭೆ ಕ್ಷೇತ್ರಗಳ ಪೈಕಿ ಅರ್ಧದಷ್ಟು ಮೀಸಲು. ಚಳ್ಳಕೆರೆ, ಮೊಳಕಾಲ್ಮುರು ಪರಿಶಿಷ್ಟ ಪಂಗಡಕ್ಕೂ ಹಾಗೂ ಹೊಳಲ್ಕೆರೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಹಿರಿಯೂರು, ಚಿತ್ರದುರ್ಗ ಮತ್ತು ಹೊಸದುರ್ಗ ಮಾತ್ರ ಸಾಮಾನ್ಯ ಕ್ಷೇತ್ರಗಳಾಗಿದ್ದವು.
ಇಡೀ ಜಿಲ್ಲೆಯ ಫಲಿತಾಂಶ ಗಮನಿಸಿದರೆ ಲಿಂಗಾಯಿತರು ಸಾರಾಸಗಟಾಗಿ ಇಡಿಯಾಗಿ ಮತಗಳನ್ನು ಬಿಜೆಪಿಗೆ ಹಾಕಿರುವುದು ವೇದ್ಯ. ಹೊಸದುರ್ಗದ ಸಾಮಾನ್ಯ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯ ಗೂಳಿಹಟ್ಟಿ ಶೇಖರ್ ಅವರನ್ನು ಕಣಕ್ಕಿಳಿಸಿ ಲಿಂಗಾಯಿತರು ಪೂರ್ಣ ಪ್ರಮಾಣದಲ್ಲಿ ಬೆಂಬಲ ನೀಡುವುದರ ಮೂಲಕ ಬಿಜೆಪಿ ತನ್ನ ನಗೆ ಬೀರಿರುವುದು ಇಡೀ ಜಿಲ್ಲೆಯ ಫಲಿತಾಂಶಕ್ಕೆ ದಿಕ್ಸೂಚಿಯಾಗಿದೆ.
ಶ್ರೀರಾಮುಲು, ಶಾಸಕ ತಿಪ್ಪಾರೆಡ್ಡಿ ಒಳಗೊಂಡಂತೆ ಎಲ್ಲರೂ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವುದೇ ನಮ್ಮ ಪ್ರಮುಖ ಧ್ಯೇಯ ಎಂದಿದ್ದರು. ಚಿತ್ರದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್, ಜಿಡಿಎಸ್’ನಿಂದ ಇಬ್ಬರು ಲಿಂಗಾಯಿತ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಮುಸ್ಲೀಮರು, ಲಿಂಗಾಯಿತರು ಅಧಿಕವಾಗಿರುವ ಕ್ಷೇತ್ರದಲ್ಲಿ ತಿಪ್ಪಾರೆಡ್ಡಿ ಮತಗಳಿಗಾಗಿ ತಿಣುಕಾಡಬೇಕಾಗಿತ್ತು. ಆದರೆ ಅತ್ಯಧಿಕ ಅಂತರದಿಂದ ಗೆಲವು ಸಾಧಿಸಿರುವುದು ಲಿಂಗಾಯತರು ಬಿಜೆಪಿ ಬೆಂಬಲಿಸಿರುವುದು ಗೋಚರ. 
ಹಿರಿಯೂರು ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಲಿಂಗಾಯತರು ಶಾಸಕ ಡಿ. ಸುಧಾಕರ್ ಅವರ ಬೆಂಬಲಕ್ಕೆ ನಿಂತಿದ್ದರು. ಆದರೆ ಈ ಬಾರಿ ಯಡಿಯೂರಪ್ಪ ಅನ್ನುವ ಕಾರಣಕ್ಕೆ ಬಿಜೆಪಿ ಬೆಂಬಲಿಸಿದ್ದರಿಂದ ಬೆಂಗಳೂರಿನ ಕಾರ್ಪೋರೇಟರ್ ಪೂರ್ಣಿಮ ಶ್ರೀನಿವಾಸ್ ಗೆಲವಿನ ನಗೆ ಬೀರಲು ಸಾಧ್ಯವಾಗಿದೆ.
ಹೊಳಲ್ಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಕೂಡಾ ಲಿಂಗಾಯಿತರು ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಬೆಂಬಲಿಸಿರುವುದು ಸ್ಪಷ್ಟವಾಗಿದೆ. ಮಾಜಿ ಶಾಸಕ ಎಂ. ಚಂದ್ರಪ್ಪ ಸಚಿವ ಆಂಜನೇಯ ಅವರನ್ನು ಇಷ್ಟೊಂದು ಅಗಾಧ ಪ್ರಮಾಣದ ಅಂತರದಲ್ಲಿ ಸೋಲಿಸುತ್ತೇನೆ ಎಂಬ ನಂಬಿಕೆ ಇಟ್ಟುಕೊಂಡಿರಲಿಲ್ಲ. ಅಷ್ಟೊಂದು ಲಿಂಗಾಯತರ ಬೆಂಬಲ ಚಂದ್ರಪ್ಪ ಅವರಿಗೆ ಸಿಕ್ಕಿದೆ. ಕುಂಚಿಟಿಗ, ಸಾಧು ಲಿಂಗಾಯತರ ಪ್ರಾಬಲ್ಯ ಇಲ್ಲಿ ಇದ್ದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಮನದಾಳದ ಇಂಗಿತಗಳಿಗೆ ಕ್ಷೇತ್ರ ಸ್ಪಂದಿಸಿದೆ.
ಅಭಿವೃದ್ಧಿ ಕಲ್ಪನೆಗಳಿಗೆ ಚಿತ್ರದುರ್ಗ ಜಿಲ್ಲೆಯ ಮತದಾರ ಮಣೆ ಹಾಕದೇ ಇರುವುದು ಈ ಬಾರಿಯ ಚುನಾವಣೆಯ ಮತ್ತೊಂದು ಹೆಗ್ಗುರುತು. ಹೊಸದುರ್ಗ, ಹಿರಿಯೂರು, ಹೊಳಲ್ಕೆರೆಯಲ್ಲಿ ಸಾವಿ
ರಾರು ಕೋಟಿ ರುಪಾಯಿ ಅಭಿವೃದ್ಧಿ ಕೆಲಸಗಳಾಗಿದ್ದು ಮತದಾರ ಅದನ್ನು ಪರಿಗಣನೆ ಮಾಡಿಲ್ಲ. ಇದರೊಟ್ಟಿಗೆ ಹೊಸದುರ್ಗದಲ್ಲಿ ಮರಳು ಮಾಫಿಯಾದ ವಿರುದ್ಧ ಮತದಾರ ನಿರ್ಣಯ ಕೈಗೊಂಡಿರುವುದು ವೇದ್ಯವಾಗಿದೆ.
ಕ್ಷೇತ್ರ                  ಅಭ್ಯರ್ಥಿ                    ಪಕ್ಷ        ಗೆಲುವಿನ ಅಂತರ
ಮೊಳಕಾಲ್ಮೂರು    ಬಿ. ಶ್ರೀರಾಮುಲು         ಬಿಜೆಪಿ        42045
ಚಳ್ಳಕೆರೆ               ಟಿ ರಘುಮೂರ್ತಿ         ಕಾಂಗ್ರೆಸ್    13539
ಚಿತ್ರದುರ್ಗ           G.H ತಿಪ್ಪಾರೆಡ್ಡಿ          ಬಿಜೆಪಿ        32985
ಹಿರಿಯೂರು          ಕೆ. ಪೂರ್ಣಿಮಾ           ಬಿಜೆಪಿ        12875
ಹೊಸದುರ್ಗ         ಗೂಳಿಹಟ್ಟಿ ಡಿ. ಶೇಖರ್  ಬಿಜೆಪಿ        26192
ಹೊಳಲ್ಕೆರೆ          ಎಂ. ಚಂದ್ರಪ್ಪ              ಬಿಜೆಪಿ        38940

loader