ಪ್ರಜಾಕೀಯ ನಿಂತಿಲ್ಲ, ಶೀಘ್ರ ಹೊಸ ಪಕ್ಷ ಕಟ್ಟುವೆ: ಉಪ್ಪಿ

Kannada actor Upendra says he will launch New political party
Highlights

ಆರು ತಿಂಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ದಿಢೀರನೆ ಉಪ್ಪಿ ಹವಾ ಸೃಷ್ಟಿಯಾಗಿತ್ತು. ನಟ ಉಪೇಂದ್ರ ಅವರು ತಮ್ಮದೇ ಆದ ಪ್ರಜಾಕೀಯಎನ್ನುವ ವಿಶಿಷ್ಟರಾಜಕೀಯ ಪರಿಕಲ್ಪನೆ ಇಟ್ಟುಕೊಂಡು ಆರಂಭಿಸಿದ ಪ್ರಯತ್ನ ಸಾಕಷ್ಟುಚರ್ಚೆಯನ್ನೂ ಹುಟ್ಟು ಹಾಕಿತ್ತು. ಆದರೆ, ಪ್ರಸಕ್ತ ರಾಜಕೀಯ ವ್ಯವಸ್ಥೆಯ ಹೊಡೆತದ ಪರಿಣಾಮ ಪ್ರಜಾಕೀಯದ ಅಬ್ಬರ ಬಂದಷ್ಟೇ ವೇಗದಲ್ಲಿ ತಣ್ಣಗಾಗಿರುವಂತಿದೆ.

ವಿಜಯ್‌ ಮಲಗಿಹಾಳ

ಬೆಂಗಳೂರು : ಆರು ತಿಂಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ದಿಢೀರನೆ ಉಪ್ಪಿ ಹವಾ ಸೃಷ್ಟಿಯಾಗಿತ್ತು. ನಟ ಉಪೇಂದ್ರ ಅವರು ತಮ್ಮದೇ ಆದ ‘ಪ್ರಜಾಕೀಯ’ ಎನ್ನುವ ವಿಶಿಷ್ಟರಾಜಕೀಯ ಪರಿಕಲ್ಪನೆ ಇಟ್ಟುಕೊಂಡು ಆರಂಭಿಸಿದ ಪ್ರಯತ್ನ ಸಾಕಷ್ಟುಚರ್ಚೆಯನ್ನೂ ಹುಟ್ಟು ಹಾಕಿತ್ತು. ಆದರೆ, ಪ್ರಸಕ್ತ ರಾಜಕೀಯ ವ್ಯವಸ್ಥೆಯ ಹೊಡೆತದ ಪರಿಣಾಮ ಪ್ರಜಾಕೀಯದ ಅಬ್ಬರ ಬಂದಷ್ಟೇ ವೇಗದಲ್ಲಿ ತಣ್ಣಗಾಗಿರುವಂತಿದೆ.

ತಾವೇ ರಾಜಕೀಯ ಪಕ್ಷ ಸ್ಥಾಪಿಸುವ ಬದಲು ಬೇರೊಬ್ಬರು ಸ್ಥಾಪಿಸಿದ್ದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಹೊಣೆ ಹೊತ್ತುಕೊಂಡು ಇನ್ನೇನು ಅಭ್ಯರ್ಥಿಗಳು ಕಣಕ್ಕಿಳಿಯಲು ಸಜ್ಜಾಗಬೇಕು ಎನ್ನುವಷ್ಟರಲ್ಲಿ ಉಪೇಂದ್ರ ಅವರು ಆ ಪಕ್ಷದಿಂದಲೇ ಹೊರಬರುವ ಅನಿವಾರ್ಯತೆ ನಿರ್ಮಾಣವಾಯಿತು. ಪರಿಣಾಮ, ಅವರು ಹುಟ್ಟಿಸಿದ್ದ ಭರವಸೆಗಳೂ ಈಗ ಅತಂತ್ರ ಸ್ಥಿತಿಯಲ್ಲಿವೆ.

ಹಿಂದೆಂದೂ ಕಾಣದಂಥ ಚುನಾವಣೆಯ ಕಾವು ರಾಜ್ಯದಲ್ಲಿ ಕಂಡು ಬರುತ್ತಿರುವ ಈ ಹೊತ್ತಿನಲ್ಲಿ ರಾಜಕೀಯದ ಮೂಲಕ ಇಡೀ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತೇನೆ ಎಂದು ಹೊರಟಿದ್ದ ಉಪೇಂದ್ರ ಅವರು ‘ಕನ್ನಡಪ್ರಭ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಪ್ರಜಾಕೀಯ ಜೀವಂತವಾಗಿರುವ ಹಾಗೂ ಸೋಲೋಪ್ಪಿಕೊಳ್ಳದೆ ಸಿದ್ಧತೆ ನಡೆಸಿರುವ ಅಂಶವನ್ನು ಹೊರಹಾಕಿದ್ದಾರೆ.

* ಆರು ತಿಂಗಳ ಹಿಂದೆ ಸಂಚಲನ ಮೂಡಿಸಿದ್ದ ಪ್ರಜಾಕೀಯ ಈಗ ತಣ್ಣಗಾದಂತಿದೆ?

-ಇಲ್ಲ. ಅದು ತಣ್ಣಗಾಗಿಲ್ಲ. ಈ ಉದ್ದೇಶಕ್ಕಾಗಿ ಹೊಸದಾಗಿ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆ ಪ್ರಕ್ರಿಯೆ ನಡೆದಿದೆ. ಶೀಘ್ರ ನೋಂದಣಿಯೂ ಸಿಗುವ ನಿರೀಕ್ಷೆಯಿದೆ. ಈಗ ಎಲ್ಲ ರೀತಿಯ ಮುಂಜಾಗ್ರತೆ ತೆಗೆದುಕೊಂಡು, ಯೋಜನಾ ವರದಿ ಸಿದ್ಧಪಡಿಸಿಕೊಂಡೇ ಮುಂದೆ ಸಾಗುತ್ತೇವೆ. ಸಿನಿಮಾ ನನ್ನ ದಾರಿ. ಪ್ರಜಾಕೀಯ ನನ್ನ ಗುರಿ.

* ನೀವು ಅಧ್ಯಕ್ಷರಾಗಿದ್ದ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಅಡ್ಡ ದಾರಿ ಹಿಡಿಯಿತಲ್ಲ?

-ಆ ಪಕ್ಷದ ಸಂಸ್ಥಾಪಕರು ನಮ್ಮನ್ನು ಬಿಟ್ಟು ಹೋಗಿರುವುದಕ್ಕೆ ಎರಡು ಕಾರಣಗಳಿರಬಹುದು. ಒಂದು ಹಣದ ಆಮಿಷಕ್ಕೆ ಬಲಿಯಾಗಿರಬಹುದು. ಮತ್ತೊಂದು ರಾಜಕೀಯ ಒತ್ತಡಕ್ಕೆ ಮಣಿದಿರಬಹುದು. ನಾವು ಪಕ್ಷಕ್ಕೆ ಸೇರಿಸಿಕೊಳ್ಳುವ ಮುಖಂಡರು ಅಥವಾ ಅಭ್ಯರ್ಥಿಗಳು ಇವೆರಡಕ್ಕೂ ಬಲಿಯಾಗಬಹುದು ಎಂಬುದು ನಮಗೆ ಗೊತ್ತಾಯಿತು. ಸಂಬಳಕ್ಕೆ ಕೆಲಸ ಮಾಡುತ್ತೇವೆ ಎಂದು ಹೇಳಿ ಮುಂದೆ ಸ್ವಲ್ಪ ಲೈಮ್‌ ಲೈಟ್‌ಗೆ ಬರುತ್ತಿದ್ದಂತೆಯೇ ಬೇರೆ ಪಕ್ಷದವರ ಆಮಿಷಕ್ಕೆ ಒಳಗಾಗಬಹುದು. ಇದೆಲ್ಲ ನಮಗೆ ಗೊತ್ತೇ ಇರಲಿಲ್ಲ.

* ಈ ಬೆಳವಣಿಗೆ ನಿಮಗೆ ಹಿನ್ನಡೆ ಉಂಟು ಮಾಡಿತಲ್ಲವೇ?

-ನನ್ನ ಪ್ರಕಾರ ನಾವು ಮೈನಸ್‌ ಅಂದುಕೊಂಡರೆ ಪ್ಲಸ್‌. ಪ್ಲಸ್‌ ಅಂದುಕೊಂಡರೆ ಮೈನಸ್‌. ಈಗ ಮೈನಸ್‌ ಆಗಿರುವುದೇ ಪ್ಲಸ್‌ ಆಗಿದೆ. ಒಂದು ಅನುಭವ ಆಗಿದೆ. ಈಗ ಎದುರಾಗಿರುವ ಅಡಚಣೆಗಳೆಲ್ಲ ಆರಂಭಿಕ ಹಂತ. ಹಾಗಂತ ನಾವು ಹಿಂದೆ ಸರಿಯುವ ಮಾತೇ ಇಲ್ಲ. ಕೆಪಿಜೆಪಿಯಲ್ಲೇ ಮುಂದುವರಿದಿದ್ದರೆ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೆವು. ಹೊರಬಂದಿದ್ದರಿಂದ ಸಾಧ್ಯವಾಗಲಿಲ್ಲ. ಮುಂದೆ ಸ್ಪರ್ಧೆ ಮಾಡುತ್ತೇವೆ.

* ಹಾಗಾದರೆ ನಿಮಗೆ ರಾಜಕೀಯ ಪ್ರವೇಶಿಸುವ ಮೊದಲು ಅದರ ಬಗ್ಗೆ ತಿಳಿವಳಿಕೆ ಕಡಮೆ ಇತ್ತೇ?

-ರಾಜಕೀಯವನ್ನು ಎಲ್ಲರೂ ನೋಡುತ್ತಿದ್ದಾರೆ. ಒಳಗಡೆ ಹೋಗಿ ಕಲಿಯುವಂಥದ್ದು ಏನೂ ಇಲ್ಲ. ಗೊತ್ತಿಲ್ಲದೇ ಇರುವುದು ಈಗ ಗೊತ್ತಾಯಿತು. ಕೆಲವರು ಇನ್ನೊಬ್ಬರ ಅನುಭವ ನೋಡಿ ಕಲಿಯುತ್ತಾರೆ. ನಾನು ನನ್ನ ಅನುಭವದಿಂದಲೇ ಪಾಠ ಕಲಿಯುವಂಥವನು.

* ಹಾಗಿದ್ದರೆ ಕೆಪಿಜೆಪಿ ಪಕ್ಷದಿಂದ ಹೊರಬಂದ ಬೆಳವಣಿಗೆಯಿಂದ ಬದಲಾವಣೆ ತರಲು ಹೊರಟಿದ್ದ ನಿಮಗೆ ನಿರಾಸೆ ಆಗಲಿಲ್ಲವೇ?

-ಇಲ್ಲವೇ ಇಲ್ಲ. ಜೊತೆಯಲ್ಲಿರುವವರ ಪೈಕಿ ಯಾರು ಏನು, ಹೇಗೆ ಎಂಬುದು ಗೊತ್ತಾಯಿತು. ಮುಂಚಿನಿಂದಲೂ ಇದು ನನಗೆ ಗೊತ್ತಿತ್ತು. ಯಾವುದೇ ಬದಲಾವಣೆ ತಕ್ಷಣ ನಿರೀಕ್ಷಿಸುವುದಕ್ಕೆ ಆಗುವುದಿಲ್ಲ. ನಿಧಾನವಾಗಿಯೇ ಆಗುತ್ತದೆ. ನಮ್ಮದು ಬೇರೆ ದಾರಿಯೇ ಆಗಿದ್ದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದೊಂದು ರೀತಿಯಲ್ಲಿ ಮೌನ ಕ್ರಾಂತಿ ಇದ್ದಂತೆ. ತಾಳ್ಮೆ ಬೇಕು ಎಂಬುದನ್ನು ನಾನು ಪಕ್ಷದ ಕಾರ್ಯಕರ್ತರಿಗೆ ಹೇಳುತ್ತಿದ್ದೆ. ಇದನ್ನು ಆರಂಭಿಸಿದಾಗ ನಮ್ಮಲ್ಲೇ ಕೆಲವರಿಗೆ ಅನುಮಾನವಿತ್ತು. ಎಲ್ಲಿಯೂ ಸುದ್ದಿ ಆಗುತ್ತಿಲ್ಲ ಎಂಬ ಕಳವಳವೂ ಇತ್ತು. ಸುದ್ದಿ ಮಾಡುವುದೇ ನಮ್ಮ ಉದ್ದೇಶವಾಗಿರಲಿಲ್ಲ.

* ಬೇರೊಬ್ಬರ ಪಕ್ಷದ ಹೊಣೆ ಹೊತ್ತುಕೊಳ್ಳುವ ಬದಲು ನೀವೇ ಆರಂಭದಲ್ಲಿ ಹೊಸ ಪಕ್ಷ ಮಾಡಬಹುದಿತ್ತಲ್ಲ?

-ನಾವು ಹೊಸ ಪಕ್ಷ ಮಾಡುವ ಉದ್ದೇಶವನ್ನೇ ಹೊಂದಿದ್ದೆವು. ಆದರೆ, ನಮ್ಮ ಜತೆಯಲ್ಲಿ ಬಂದ ಕೆಲವರು ನಮ್ಮಲ್ಲಿ ಗೊಂದಲ ಹುಟ್ಟಿಸಿದರು. ಆರು ತಿಂಗಳಲ್ಲಿ ಹೊಸ ಪಕ್ಷ ಸ್ಥಾಪನೆ ಸಾಧ್ಯವಿಲ್ಲ. ಏನೇನೋ ದಾಖಲೆಗಳು ಬೇಕಾಗುತ್ತವೆ. ಅದನ್ನೆಲ್ಲ ಕಡಮೆ ಅವಧಿಯಲ್ಲಿ ಒದಗಿಸುವುದು ಕಷ್ಟಎಂಬ ಮಾತನ್ನು ಹೇಳಿದರು. ನಾವು ಸಾರ್ವಜನಿಕ ಸೂಚನೆ ನೀಡಿದ ವೇಳೆ ಯಾರಾದರೂ ಆಕ್ಷೇಪಣೆ ಸಲ್ಲಿಸಬಹುದು. ಆಗ ಮತ್ತಷ್ಟುವಿಳಂಬವಾಗುತ್ತದೆ ಎಂಬಿತ್ಯಾದಿ ಮಾತುಗಳನ್ನೇ ಹೇಳಿದರು. ಹೀಗಾಗಿ ಹೊಸ ಪಕ್ಷ ಸ್ಥಾಪನೆ ಪ್ರಯತ್ನ ಆಗ ಕೈಗೆತ್ತಿಕೊಳ್ಳಲಿಲ್ಲ.

* ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಎಂಬ ಹೆಸರಿನ ಆಕರ್ಷಣೆಯಿಂದ ಆ ಪಕ್ಷವನ್ನು ನಿಮ್ಮ ಪ್ರಯಾಣಕ್ಕೆ ವಾಹನವನ್ನಾಗಿ ಆಯ್ಕೆ ಮಾಡಿಕೊಂಡಿರಾ?

-ಅಯ್ಯೋ. ನಿಜ ಹೇಳಬೇಕು ಎಂದರೆ ಆ ಹೆಸರು ನನಗೆ ಒಪ್ಪಿಗೆಯೇ ಆಗಿರಲಿಲ್ಲ. ಆ ಹೆಸರು ಸರಿಯಾಗಿ ನನ್ನ ಬಾಯಿಗೇ ಬರುತ್ತಿರಲಿಲ್ಲ. ನಾವು ಹೊಸ ಪಕ್ಷ ಸ್ಥಾಪನೆ ಮಾಡುವುದು ಕಷ್ಟಎಂಬ ಸನ್ನಿವೇಶದಲ್ಲಿದ್ದಾಗ ಕೆಪಿಜೆಪಿ ಪಕ್ಷದ ಸಂಸ್ಥಾಪದ ಅಧ್ಯಕ್ಷರೇ ಮುಂದೆ ಬಂದು ನಾವು ಮಾಡಿರುವುದೇ ನೀವು ಇಟ್ಟುಕೊಂಡಿರುವಂಥ ಉದ್ದೇಶಕ್ಕಾಗಿ. ನಿಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ನೀವು ಹೇಗೆ ಹೇಳುತ್ತೀರೋ ಹಾಗೆ ನಡೆಸಿಕೊಂಡು ಹೋಗಿ ಎಂದರು. ನನಗೆ ಅಧ್ಯಕ್ಷಗಿರಿಯನ್ನೇ ನೀಡುವುದಾಗಿ ಹೇಳಿದ್ದರಿಂದ ಒಪ್ಪಿಕೊಂಡೆ.

* ಸಿನಿಮಾ ರಂಗದಲ್ಲಿ ಮಾಡಿರುವಂತೆ ರಾಜಕೀಯದಲ್ಲೂ ವಿಭಿನ್ನ ಪ್ರಯೋಗ ಮಾಡಲು ಮುಂದಾಗಿ ಎಡವಿ ಬಿದ್ದಿರಿ ಎಂದು ಅನಿಸುವುದಿಲ್ಲವೇ?

-ಇಲ್ಲ. ಮುಂಚೆ ಇರುವುದಕ್ಕಿಂತ ಹೆಚ್ಚು ವಿಶ್ವಾಸ ನನಗೆ ಬಂದಿದೆ. ಈ ಅನುಭವ ಆಗಿದ್ದರಿಂದ ನನ್ನಲ್ಲಿ ವಿಶ್ವಾಸ ಮತ್ತು ನಿರೀಕ್ಷೆ ಹೆಚ್ಚಿದೆ. ನನ್ನ ಜೊತೆ ಬಂದವರ ಪೈಕಿ ಶೇ.80ರಷ್ಟುಜನ ನನ್ನೊಂದಿಗೆ ಇರುವುದಾಗಿ ನಿರ್ಧರಿಸಿದ್ದಾರೆ. ಇನ್ನೂ ಐದು ವರ್ಷಗಳ ಕಾಯಲು ಸಿದ್ಧರಾಗಿದ್ದಾರೆ. ಅವರೆಲ್ಲರಿಗೂ ಬದಲಾವಣೆ ಬೇಕಾಗಿದೆ.

* ನಿಮ್ಮ ಚಿಂತನೆಗಳು ವಾಸ್ತವಕ್ಕೆ ಹತ್ತಿರವಾಗಿಲ್ಲ. ಭ್ರಮಾಲೋಕದಲ್ಲಿ ಸಂಚರಿಸುವಂತಿದೆ ಎಂಬ ಮಾತುಗಳು ಕೇಳಿಬಂದಿವೆ?

-ಇರಬಹುದು. ನನಗೆ ಭ್ರಮೆಯೇ ಇಷ್ಟ. ಸುಂದರವಾದ ವ್ಯವಸ್ಥೆ ನೋಡಬೇಕಾದ ಆಸೆಯಿದೆ. ಈಗಿರುವ ವಾಸ್ತವವೇ ಸರಿ ಎನ್ನುವುದಾದರೆ ಅದರೊಂದಿಗೇ ಹೋಗಿ ಎನ್ನುವುದು ನನ್ನ ಸಲಹೆ. ಇದೇ ಮಾತನ್ನು ನನ್ನ ಜೊತೆ ಬಂದವರಿಗೂ ಹೇಳಿದ್ದೇನೆ. ಬದಲಾವಣೆ ಮಾಡಬೇಕು ಎಂಬ ಉದ್ದೇಶದಿಂದಲೇ ನಾನು ಈ ಹಾದಿ ಆಯ್ಕೆ ಮಾಡಿದ್ದು. ಇದು ಸುಲಭವಲ್ಲ ಎನ್ನುವುದೂ ನನಗೆ ಗೊತ್ತಿದೆ. ನನಗೆ ಅಧಿಕಾರದ ಆಸೆಯಿಲ್ಲ. ವ್ಯವಸ್ಥೆ ಸುಧಾರಿಸಬೇಕು ಎಂಬುದಷ್ಟೇ ನನ್ನ ಕಾಳಜಿ. ಎಲ್ಲರೂ ಒಂದೇ ದಾರಿಯಲ್ಲಿ ಹೋದರೆ ಹೇಗೆ? ಅಧಿಕಾರವೊಂದೇ ಮುಖ್ಯವಾಗಿದ್ದಲ್ಲಿ ಈ ಮಾರ್ಗದಲ್ಲಿ ಹೋಗುತ್ತಿರಲಿಲ್ಲ.

* ಕೆಪಿಜೆಪಿಯಿಂದ ಸ್ಪರ್ಧಿಸುವುದಕ್ಕಾಗಿ ಅನೇಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಿರಿ. ಕನಿಷ್ಠ ಪಕ್ಷ ನೀವೊಬ್ಬರಾದರೂ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬಹುದಿತ್ತಲ್ಲ?

-ನನಗೆ ನಾನೊಬ್ಬನೇ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಉದ್ದೇಶ ಇದ್ದಿದ್ದರೆ ಮುಂಚೆಯೇ ಮಾಡುತ್ತಿದ್ದೆ. ಈಗಿರುವ ವ್ಯವಸ್ಥೆಯನ್ನು ಬದಲಾಯಿಸಬೇಕು, ಕ್ರಾಂತಿ ಮಾಡಬೇಕು ಎಂಬುದು ನನ್ನ ಆಶಯ. ಈಗ ಒಂದು ವ್ಯವಸ್ಥೆಯಿದೆ. ನಾನೊಬ್ಬನೇ ಚುನಾವಣೆಗೆ ಸ್ಪರ್ಧಿಸಿದ್ದರೆ, ಗೆಲುವು ಸಾಧಿಸಿದರೆ ನಾನು ಆ ವ್ಯವಸ್ಥೆಯ ಭಾಗವಾಗುತ್ತೇನೆ ಅಷ್ಟೆ. ನಾನೊಬ್ಬನೇ ಹೋಗಿ ವ್ಯವಸ್ಥೆ ಬದಲಾಯಿಸಲು ಆಗುವುದಿಲ್ಲ.

* ನೀವು ಇಡೀ ವ್ಯವಸ್ಥೆಯ ಪ್ರತಿ ಹಂತದಲ್ಲೂ ಪಾರದರ್ಶಕತೆ ಇರಬೇಕು ಎಂಬ ಪ್ರತಿಪಾದನೆ ಮಾಡುತ್ತಿದ್ದೀರಿ. ಇದು ಜನರ ಮನಸ್ಸಿನಲ್ಲಿ ಸುಲಭವಾಗಿ ಇಳಿಯುವುದು ಕಷ್ಟವಲ್ಲವೇ?

-ನಾನೇನೊ ಸಾಧಿಸಿಬಿಡುತ್ತೇನೆ ಎಂಬ ಭ್ರಮೆ ಇಲ್ಲ. ಇದು ಯುದ್ಧವೂ ಅಲ್ಲ. ನಾನು ಏನಾದರೂ ಗೆಲ್ಲಲೇ ಬೇಕಾಗಿಲ್ಲ. ಬದಲಾವಣೆ ಆಗಬೇಕು ಎಂಬ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎನ್ನುವುದು ನನ್ನ ನಿಲುವು. ನಾನು ಆಶಾವಾದಿ. ಐದು ವರ್ಷವಾಗಲಿ. ಈ ಐದು ವರ್ಷವಾಗದಿದ್ದರೆ ಹತ್ತು ವರ್ಷಗಳಾಗಲಿ. ಅದೂ ಆಗದಿದ್ದರೆ ಇಪ್ಪತ್ತು ವರ್ಷಗಳಾಗಲಿ ಎಂಬ ನಿರೀಕ್ಷೆ ಇಟ್ಟುಕೊಂಡವನು ನಾನು. ಎಲ್ಲವೂ ಒಂದೇ ದಿನದಲ್ಲಿ ಬದಲಾವಣೆ ಆಗಬೇಕು ಎಂಬ ಆತುರ ಇಲ್ಲ.

* ಪ್ರಮುಖ ರಾಜಕೀಯ ಪಕ್ಷಗಳು ನಿಮ್ಮನ್ನು ಸೆಳೆಯುವ ಪ್ರಯತ್ನ ಮಾಡಿದರೂ ನೀವು ಜಗ್ಗಲಿಲ್ಲ?

-ಈ ಬದಲಾವಣೆಯ ಪ್ರಯತ್ನದ ಹಿಂದೆ ನಾನೊಬ್ಬನೇ ಅಲ್ಲ. ಪ್ರತಿ ಊರಿನಲ್ಲೂ ಎಷ್ಟೋ ಜನರಿದ್ದಾರೆ. ಅದನ್ನೆಲ್ಲ ನಾನು ಪ್ರಚಾರ ಮಾಡಿಲ್ಲ. ನನಗೇ ನನ್ನನ್ನು ಬಿಟ್ಟು ಹೊರಗೆ ಬರುವುದಕ್ಕೆ ಆಗುವುದಿಲ್ಲ. ಇನ್ನು ಅವರನ್ನೆಲ್ಲ ಬಿಟ್ಟು ಹೇಗೆ ಬರಲಿ.

* ಅಂದರೆ, ಈಗ ಇಟ್ಟಿರುವ ಹೆಜ್ಜೆಯಿಂದ ನೀವು ಹಿಂದೆ ಸರಿಯುವುದಿಲ್ಲ?

-ಹೌದು. ಹಿಂದೆ ಸರಿಯುವುದಿಲ್ಲ. ಹಾಗೆ ನಾನೊಬ್ಬನೇ ರಾಜಕೀಯ ಪ್ರವೇಶಿಸಬೇಕು, ಅಧಿಕಾರ ಅನುಭವಿಸಬೇಕು ಎಂಬ ಉದ್ದೇಶ ನನಗಿದ್ದಿದ್ದರೆ ಮೊದಲೇ ಮಾಡುತ್ತಿದ್ದೆ. ಇದೊಂದು ರಾಜಕೀಯ ಪಕ್ಷವಾದರೂ ಸತ್ಯವನ್ನು ಹರಡುವಂಥ ಧ್ಯೇಯ ಹೊಂದಿದೆ. ಇದೊಂದು ಚಳವಳಿ ಇದ್ದಂತೆ. ಇದರಿಂದ ಒಳ್ಳೆಯದು ಆಗದಿದ್ದರೂ ಕೆಟ್ಟದಂತೂ ಆಗುವುದಿಲ್ಲ. ನಾವು ಹೇಳುತ್ತಿರುವುದರಿಂದ ನಾಲ್ಕು ಜನ ಮಾತನಾಡಬಹುದು. ನಿಧಾನವಾಗಿ ಬದಲಾಗಬಹುದು.

‘ಅಯ್ಯೋ.... ನಿಜ ಹೇಳಬೇಕು ಎಂದರೆ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ’ ಎಂಬ ಹೆಸರು ನನಗೆ ಒಪ್ಪಿಗೆಯೇ ಆಗಿರಲಿಲ್ಲ. ಆ ಹೆಸರು ಸರಿಯಾಗಿ ನನ್ನ ಬಾಯಿಗೇ ಬರುತ್ತಿರಲಿಲ್ಲ.’

- ಉಪೇಂದ್ರ

loader