ಕಲಬುರಗಿ: ತೊಗರಿ ನಾಡಲ್ಲಿ ಯಾರಿಗೆ ಸಿಗಲಿದೆ ಬಂಪರ್ ಫಸಲು

Kalaburagi Constituency Election
Highlights

ತೊಗರಿ ಕಣಜ ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಸೇಡಂ, ಚಿಂಚೋಳಿ ಹಾಗೂ ಚಿತ್ತಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಕಂಡುಬರುತ್ತಿದ್ದರೆ, ಉಳಿದ 6 ಅಸೆಂಬ್ಲಿ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಯಿದೆ.

ಕಲಬುರಗಿ : ತೊಗರಿ ಕಣಜ ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಸೇಡಂ, ಚಿಂಚೋಳಿ ಹಾಗೂ ಚಿತ್ತಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಹಣಾಹಣಿ ಕಂಡುಬರುತ್ತಿದ್ದರೆ, ಉಳಿದ 6 ಅಸೆಂಬ್ಲಿ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆಯಿದೆ. ಕಳೆದ ಬಾರಿ ಜಿಲ್ಲೆಯ 7 ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್, ತಲಾ ಒಂದು ಕ್ಷೇತ್ರಗಳಲ್ಲಿ ಬಿಜೆಪಿ, ಕೆಜೆಪಿ ಗೆಲುವು ಸಾಧಿಸಿದ್ದವು. ಈ ಬಾರಿ ಕಾಂಗ್ರೆಸ್ ಹಾಲಿ ಶಾಸಕರನ್ನೇ ಕಣಕ್ಕಿಳಿಸಿ ಎಲ್ಲಾ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ತಂತ್ರ ರೂಪಿಸಿದ್ದರೆ ಬಿಜೆಪಿ, ಜೆಡಿಎಸ್ ಈ ಕ್ಷೇತ್ರಗಳನ್ನು ಕಿತ್ತುಕೊಳ್ಳಲು ಹರಸಾಹಸಕ್ಕಿಳಿದಿವೆ.

ಶೇಷಮೂರ್ತಿ ಅವಧಾನಿ

ಅಫಜಲ್ಪುರ 

ಇದು ವ್ಯಕ್ತಿ ಪ್ರತಿಷ್ಠೆಯ ಕಣ. ಕಾಂಗ್ರೆಸ್ ಹಾಗೂ ಖರ್ಗೆ ಕುಟುಂಬವನ್ನು ನಿಂದಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಈಡಿಗ ಸಮುದಾಯದ ಮಾಲೀಕಯ್ಯ ಗುತ್ತೇದಾರ್ ಅವರು
ಪರಿಶಿಷ್ಟ ಜಾತಿ, ಕುರುಬ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತ ಲಿಂಗಾಯತ ಪಂಚಮಸಾಲಿ ಒಳಪಂಗಡದ ಎಂ.ವೈ. ಪಾಟೀಲ್ ಬಿಜೆಪಿ ಮತಬ್ಯಾಂಕ್ ಜೊತೆಗೇ ಗುತ್ತೇದಾರ್ ವಿರೋಧಿ ಮತಗಳನ್ನು ಕಲೆ ಹಾಕುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ಲಿಂಗಾಯತ ಆದಿ ಒಳಪಂಗಡದ ರಾಜೇಂದ್ರಗೌಡ ಪಾಟೀಲ್ ರೇವೂರ್ ಯಾರ ಮತಬುಟ್ಟಿಗೆ ಕೈ ಹಾಕುವರೋ ಎಂಬುದರ ಮೇಲೆ ಬಿಜೆಪಿ-ಕಾಂಗ್ರೆಸ್ ಗೆಲುವು ಅವಲಂಬಿಸಿದೆ. ಬಿಜೆಪಿಯ ಜಿ.ಪಂ., ತಾ.ಪಂ. ಸದಸ್ಯರು ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೊತೆಗೇ ಇರುವು ದರಿಂದ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಒಂದು ವೇಳೆ ಗುತ್ತೇದಾರ್ ಸಹೋದರರು ಸಂಘಟಿತರಾಗಿ ಚುನಾವಣೆ ಮಾಡಿದರೆ ಎಂ.ವೈ. ಪಾಟೀಲ್‌ರಿಗೆ ತುಸು ಕಷ್ಟವಾಗಲಿದೆ.

ಜೇವರ್ಗಿ
ತ್ರಿಕೋನ ಸ್ಪರ್ಧೆ ಇದೆ. ಕ್ಷೇತ್ರದ ಜತೆ ತಮ್ಮ ತಂದೆ ಮಾಜಿ ಸಿಎಂ ದಿ. ಧರಂ ಸಿಂಗ್ ಹೊಂದಿದ್ದ ಸಂಬಂಧ, ತಮ್ಮ ಸಾಧನೆ ಮುಂದಿಟ್ಟು ಕಾಂಗ್ರೆಸ್ಸಿನ ಡಾ| ಅಜಯ್ ಸಿಂಗ್ 
ಮತ ಕೇಳುತ್ತಿದ್ದಾರೆ. ಬಿಜೆಪಿಯ ದೊಡ್ಡಪ್ಪಗೌಡರು ಮೋದಿ ಹವಾ ನಂಬಿದ್ದಾರೆ. ಒಂದು ಅವಕಾಶ ನೀಡಿ ಎಂದು ರೈತ ಹೋರಾಟಗಾರ ಜೆಡಿಎಸ್‌ನ ಕೇದಾರಲಿಂಗಯ್ಯ
ಹಿರೇಮಠ ಮತ ಯಾಚಿಸುತ್ತಿದ್ದಾರೆ. ಜಿಪಂ ಮಾಜಿ ಸದಸ್ಯೆ ಶೋಭಾ ಬಾನಿ ಸೇರ್ಪಡೆ ಯಿಂದ ಬಿಜೆಪಿಗೆ ಬಲ ಬಂದಿದ್ದರೆ, ಅಜಯ್ ಸಿಂಗ್ ಅವರ ಆರೋಗ್ಯ ದಾಸೋಹ ಜನ
ಮನಗೆದ್ದಿದೆ. ಕೇದಾರಲಿಂಗಯ್ಯರ ಬೆಳೆವಿಮೆ ಹೋರಾಟ ಚರ್ಚೆಯಾಗುತ್ತಿದೆ. 30 ಸಾವಿರದಷ್ಟಿರುವ ಲಿಂಗಾಯತ ಪಂಚಮಸಾಲಿ ಮತಗಳನ್ನು ಬಿಜೆಪಿ ನೆಚ್ಚಿದೆ. ಎಸ್ಸಿ, ಕುರುಬ, ಒಬಿಸಿ ಮತ ಕಾಂಗ್ರೆಸ್ಸಿನತ್ತ ಹರಿವ ಸಾಧ್ಯತೆ ಇದೆ. ವೀರಶೈವ ಸಮುದಾಯದ ಹಿರೇಮಠ ಯಾವ ಕೋಮಿನ ಮತ ಸೆಳೆವರು ಎಂಬುದರ ಮೇಲೆ ಗೆಲುವು ನಿಂತಿದೆ.

ಚಿತ್ತಾಪುರ
ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಈ ಕ್ಷೇತ್ರದಲ್ಲಿ ‘ಹಳೇ ಹುಲಿ’ ವಾಲ್ಮೀಕಿ ನಾಯಕರನ್ನು
ಬಿಜೆಪಿ ಕಣಕ್ಕಿಳಿಸಿದೆ. ಕಳೆದ ಬಾರಿ ಪ್ರಿಯಾಂಕ್ ಜತೆಗಿದ್ದ ಹೆಬ್ಬಾಳ್, ಲಿಂಗಾರೆಡ್ಡಿ ಮತ್ತವರ ತಂಡ ಈಗ ಬಿಜೆಪಿ ಸೇರಿದೆ. ಜತೆಗೆ ಮಾಲೀಕಯ್ಯ ಗುತ್ತೇದಾರ್ ಕೂಡ ಪ್ರಿಯಾಂಕ್ ಬೆನ್ನುಬಿದ್ದಿದ್ದಾರೆ. ಕ್ಷೇತ್ರಕ್ಕೆ ತಂದಿರುವ ಸಾವಿರಾರು ಕೋಟಿ ರು. ಅನುದಾನ ಪ್ರಸ್ತಾಪಿಸಿ ಪ್ರಿಯಾಂಕ್ ಮತ ಕೇಳುತ್ತಿದ್ದಾರೆ. ಕೋಲಿ, ಅಲ್ಪಸಂಖ್ಯಾತ ಸಮುದಾಯ, ಪರಿಶಿಷ್ಟ ಜಾತಿ ಸಮುದಾಯದ ಮತಗಳು ಕೈ ಹಿಡಿದರೆ ಪ್ರಿಯಾಂಕ್‌ಗೆ ಅನುಕೂಲ. ಬಿಜೆಪಿಗಿಲ್ಲಿ ಮೋದಿ ಹವಾ, ಲಂಬಾಣಿ ಸಮಾಜದ ಮತಗಳೇ ಆಸರೆ. ಜೆಡಿಎಸ್ ಪಕ್ಷ ಮೈತ್ರಿ ಹಿನ್ನೆಲೆಯಲ್ಲಿ ಬಿಎಸ್ಪಿಗೆ ಈ ಕ್ಷೇತ್ರ ಬಿಟ್ಟುಕೊಟ್ಟಿದ್ದು ದೇವರಾಜ ಕಣದಲ್ಲಿದ್ದಾರೆ. ವೀರಶೈವ-ಲಿಂಗಾಯತ ಮತಗಳಲ್ಲಿನ ವಿಭಜನೆ ಕುತೂಹಲ ಕೆರಳಿಸಿದೆ.

ಸೇಡಂ
ಸಚಿವ ಶರಣಪ್ರಕಾಶ್ ಹಾಗೂ ಬಿಜೆಪಿಯ ರಾಜಕುಮಾರ್ ತೇಲ್ಕೂರ 4ನೇ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ. ಈಗಾಗಲೇ ಹ್ಯಾಟ್ರಿಕ್ ಸಾಧಿಸಿರುವ ಶರಣಪ್ರಕಾಶ್,
4ನೇ ಬಾರಿ ಗೆಲ್ಲಲು ಯತ್ನಿಸುತ್ತಿದ್ದಾರೆ. ಅಭಿವೃದ್ಧಿ ಅಜೆಂಡಾದೊಂದಿಗೆ ಡಾ.ಶರಣ ಮತ ಕೇಳುತ್ತಿದ್ದರೆ, ಮೋದಿ ಹವಾ, ಬಿಜೆಪಿ ಸರ್ಕಾರ ಎಂದು ತೇಲ್ಕೂರ ಮತ ಕೇಳುತ್ತಿ ದ್ದಾರೆ. ಮೂರು ಚುನಾವಣೆಗಳಲ್ಲಿ ಗಮನಾರ್ಹ ಮತ ಪಡೆದಿದ್ದ ಮುಕ್ರಂ ಖಾನ್ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ರಾಜಗೋಪಾಲ ರೆಡ್ಡಿ ಕಾಂಗ್ರೆಸ್‌ಗೆ ಜಿಗಿದಿದ್ದಾರೆ.
ವೀರಶೈವ-ಲಿಂಗಾಯತ ಧರ್ಮದ ವಿಚಾರದ ಚರ್ಚೆ ಸಾಗಿದೆ. ಸೇಡಂನಲ್ಲಿ ಬಿಜೆಪಿ ಪರ ಒಲವು ಕಂಡುಬರುತ್ತಿದೆ ಎನ್ನಲಾಗುತ್ತಿದೆ. ಗ್ರಾಮಾಂತರದಲ್ಲಿ ಕಾಂಗ್ರೆಸ್- ಬಿಜೆಪಿ
ನಡುವೆ ಪೈಪೋಟಿ ಇದೆ. ಜೆಡಿಎಸ್‌ನಿಂದ ಸುನಿತಾ ತಳವಾರ್, ಎಂಇಪಿಯಿಂದ ರೇಖಾ ಕೊಡಂಬಲ್ ಸ್ಪರ್ಧಿಸಿದ್ದರೂ ಕಾಂಗ್ರೆಸ್-ಬಿಜೆಪಿ ನಡುವೆಯೇ ಹಣಾಹಣಿ ಏರ್ಪಟ್ಟಿದೆ.

ಚಿಂಚೋಳಿ 
ಕಾಂಗ್ರೆಸ್ಸಿನಿಂದ ಪುನರಾಯ್ಕೆ ಬಯಸಿರುವ ಶಾಸಕ ಉಮೇಶ್ ಜಾಧವ್ ವಿರುದ್ಧ ಮಾಜಿ ಸಚಿವ ಸುನೀಲ ವಲ್ಯಾಪೂರೆ ಅವರನ್ನು ಬಿಜೆಪಿ ಅಖಾಡಕ್ಕಿಳಿಸಿದೆ. ಜೆಡಿಎಸ್‌ನ
ಸುಶೀಲಾಬಾಯಿ ಕೊರವಿ ಕಣದಲ್ಲಿದ್ದರೂ ವಾಸ್ತವದಲ್ಲಿ ಪೈಪೋಟಿ ಇರುವುದು ಕಾಂಗ್ರೆಸ್- ಬಿಜೆಪಿ ನಡುವೆ. ಜನ ಕರೆದಾಗ ಹಾಜರಾಗುವ ಡಾ.ಉಮೇಶ ಜಾಧವ್
ಅವರು ರಾಜ್ಯ ಸರ್ಕಾರದ ಸಾಧನೆ, ತಾವು ಮಾಡಿದ ಕೆಲಸಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ವಲ್ಯಾಪೂರೆ ಅವರು ಮೋದಿ ಹವಾ ಹಾಗೂ ತಮ್ಮ ಸಾಧನೆ ಮೆಲುಕು ಹಾಕುತ್ತಿದ್ದಾರೆ. ಲಂಬಾಣಿ ಮತಗಳು ಕಾಂಗ್ರೆಸ್‌ಗೆ, ಭೋವಿ ಸಮಾಜ, ವೀರಶೈವ ಮತಗಳು ಬಿಜೆಪಿಗೆ ಪೂರಕವಾಗಿವೆ. ಇನ್ನು ಪರಿಶಿಷ್ಟ ಜಾತಿ ಮತ ಹೆಚ್ಚು ಸೆಳೆಯಲು ಜೆಡಿಎಸ್‌ನ ಸುಶೀಲಾ ಬಾಯಿ ಕೊರವಿ ಯತ್ನಿಸುತ್ತಿದ್ದು, ಇವರು ಪಡೆವ ಮತಗಳ ಮೇಲೆ ಗೆಲುವು ನಿರ್ಧಾರ ವಾಗಲಿದೆ. ಕ್ಷೇತ್ರದಲ್ಲಿ 40 ಸಾವಿರದಷ್ಟಿರುವ ಪರಿಶಿಷ್ಟ ಜಾತಿ ಮತಗಳೇ ನಿರ್ಣಾಯಕ.

ಕಲಬುರಗಿ ದಕ್ಷಿಣ
ಬಿಜೆಪಿ ಭದ್ರಕೋಟೆಗೆ ಈ ಬಾರಿ ಕಾಂಗ್ರೆಸ್, ಜೆಡಿಎಸ್ ಲಗ್ಗೆ ಇಟ್ಟಿವೆ. ಹಾಲಿ ಶಾಸಕ ಬಿಜೆಪಿಯ ದತ್ತಾತ್ರೇಯ ಪಾಟೀಲ್ ರೇವೂರ್ ಪುನರಾಯ್ಕೆ ಬಯಸಿ ಕಣದಲ್ಲಿದ್ದರೆ
ಹೊಸಮುಖ ಬಸವರಾಜ ಡಿಗ್ಗಾವಿಗೆ ಜೆಡಿಎಸ್, ಅಲ್ಲಂಪ್ರಭು ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ರೇವೂರ್, ಡಿಗ್ಗಾವಿ, ಅಲ್ಲಂಪ್ರಭು ಮೂವರು ಲಿಂಗಾಯತ ಸಮುದಾ
ಯದವರೇ. ಬ್ರಾಹ್ಮಣ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮತಗಳೇ ನಿರ್ಣಾಯಕ. ಜೆಡಿಎಸ್- ಬಿಎಸ್ಪಿ ಮೈತ್ರಿ ಇಲ್ಲಿ ಮುರಿದಿದ್ದು, ಎರಡೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿ ದ್ದಾರೆ. ಮೂರೂ ಪಕ್ಷಗಳಿಂದ ಪ್ರಬಲ ಪೈಪೋಟಿ ಇದೆ. ಪ್ರತಿ ಬಾರಿ ಬ್ರಾಹ್ಮಣ ಸಮಾಜದ ಮತಗಳು ಬಿಜೆಪಿ ಪಾಲಾಗುತ್ತಿದ್ದವು. ಈ ಬಾರಿ ವಿಪ್ರ ಮತ ಬ್ಯಾಂಕ್ ವಿಭಜನೆಯಾಗುವ ಸಾಧ್ಯತೆ ಇದ್ದು, ಸಾಧ್ಯವಾದಷ್ಟನ್ನು ಸೆಳೆಯಲು ಮೂರೂ ಪಕ್ಷಗಳು ಪ್ರಯತ್ನಿಸುತ್ತಿವೆ. ವಿಪ್ರರ ಮತ ಯಾರಿಗೆ ಹೆಚ್ಚು ಸಿಗುತ್ತವೋ ಅವರಿಗೆ ಹಾದಿ ಸುಗಮ ಎನ್ನಲಾಗುತ್ತಿದೆ.

ಕಲಬುರಗಿ ಉತ್ತರ
ಮಾಜಿ ಮಂತ್ರಿ ದಿ. ಖಮರುಲ್ ಇಸ್ಲಾಂ ಪತ್ನಿ ಕನೀಜ್ ಫಾತೀಮಾ ಬೇಗಂ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಪತಿಯ ಅಕಾಲಿಕ ಸಾವಿನ ಅನುಕಂಪದ ಅಲೆ ಬೇಗಂ ಬೆನ್ನಿಗಿದೆ.
ಇನ್ನು ಜೆಡಿಎಸ್‌ನಿಂದ ಉಸ್ತಾದ್ ನಾಸೀರ್ ಹುಸೇನ್, ಬಿಜೆಪಿಯಿಂದ ಚಂದ್ರಕಾಂತ  ಪಾಟೀಲ್ ಕಣದಲ್ಲಿರುವ ಕಾರಣ ತ್ರಿಕೋನ ಸ್ಪರ್ಧೆ ಇದೆ. ಶೇ.57 ರಷ್ಟು ಮುಸ್ಲಿಂ,
ಶೇ.47ರಷ್ಟು ಹಿಂದು ಮತಗಳಿವೆ. ಕಾಂಗ್ರೆಸ್ ಅಭ್ಯರ್ಥಿ ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆಗೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಸಮಾಜದ ಮತ ಸೆಳೆದಲ್ಲಿ ಗೆಲುವು
ಸುಲಭ. ಜೆಡಿಎಸ್‌ನಿಂದ ಮುಸ್ಲಿಂ ಸಮಾಜದ ನಾಸೀರ್ ಹುಸೇನ್ ಕಣದಲ್ಲಿದ್ದರೂ ಮುಸ್ಲಿಮರ ಮತ ಎಷ್ಟರಮಟ್ಟಿಗೆ ವಿಭಜನೆಯಾಗುತ್ತವೆ ಎಂದು ಹೇಳುವುದು ಕಷ್ಟ.
ಬಿಜೆಪಿ ಅಭ್ಯರ್ಥಿ ಹಿಂದುಗಳ ಮತ ನೆಚ್ಚಿದ್ದಾರೆ. ಮುಸ್ಲಿಮರ ಮತವೂ ಒಲಿದರೆ ಸ್ಪರ್ಧೆ ಜೋರಾಗಲಿದೆ. ಜೆಡಿಎಸ್‌ನಿಂದ ಮತ ವಿಭಜನೆಯಾದರೆ ಬಿಜೆಪಿಗೆ ಲಾಭ.

ಕಲಬುರಗಿ ಗ್ರಾಮೀಣ
ಬಿಜೆಪಿಯಿಂದ ಹೊಸಮುಖ ಬಸವರಾಜ ಮತ್ತಿಮೂಡ್, ಕಾಂಗ್ರೆಸ್‌ನಿಂದ ಹಾಲಿ ಶಾಸಕ ರಾಮಕೃಷ್ಣ ಪುತ್ರ ವಿಜಯಕುಮಾರ್, ಜೆಡಿಎಸ್‌ನಿಂದ ಮಾಜಿ ಮಂತ್ರಿ ರೇವುನಾಯಕ ಬೆಳಮಗಿ ಕಣದಲ್ಲಿದ್ದು, ತ್ರಿಕೋನ ಸ್ಪರ್ಧೆ ಇದೆ. ಟಿಕೆಟ್ ಸಿಗದ ಕಾರಣ ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಕುಸ್ತಿಪಟು ರೇವುನಾಯಕ ಇಲ್ಲಿ ನಿಜವಾಗಿಯೂ ರಾಜಕೀಯ ಜಂಗಿಕುಸ್ತಿಗೆ ಮುಂದಾಗಿದ್ದಾರೆ. ಲಂಬಾಣಿ ಸಮಾಜದ 25 ಸಾವಿರ ಮತಗಳು ಬೆಳಮಗಿಗೆ ಪೂರಕ. ೪೫ ಸಾವಿರ ಎಸ್ಸಿ ಹಾಗೂ ೫೫ ಸಾವಿರದಷ್ಟಿರುವ ವೀರ ಶೈವ- ಲಿಂಗಾಯತ ಮತಗಳನ್ನು ಒಲಿಸಿಕೊಳ್ಳಲು ಮೂರೂ ಪಕ್ಷಗಳು ಯತ್ನಿಸುತ್ತಿವೆ. ಬಿಜೆಪಿ ತಮ್ಮ ಸಮಾಜಕ್ಕೆ ಪ್ರಾತಿನಿಧ್ಯ ನೀಡಿಲ್ಲವೆಂಬ ಕೋಪ ಬಂಜಾರಾ ಸಮಾಜವನ್ನು
ಕಾಡುತ್ತಿರುವುದರಿಂದ ಬಿಜೆಪಿಗೆ ಅಲ್ಪ ಅನಾನುಕೂಲ ನಿಶ್ಚಿತ. ಪಜಾ ಎಡ-ಬಲ ಮತಗಳ ಕಟ್ಟು ಯಾರಿಗೆ ಒಲಿಯಲಿದೆ ಎಂಬುದು ಈ ಬಾರಿ ಕುತೂಹಲದ ವಿಚಾರ.

ಆಳಂದ
ಜಿದ್ದಾಜಿದ್ದಿ ರಾಜಕೀಯಕ್ಕೆ ಸಾಕ್ಷಿಯಾಗಿರುವ ಆಳಂದದಲ್ಲಿ ಈ ಬಾರಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಸಮರ. ಹಾಲಿ ಶಾಸಕ ಬಿ.ಆರ್. ಪಾಟೀಲ್ ಕಾಂಗ್ರೆಸ್‌ನಿಂದ
ಸುಭಾಷ್ ಗುತ್ತೇದಾರ್ ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್ ಸ್ಪರ್ಧೆ  ಇಲ್ಲಿ ಹೆಸರಿಗಷ್ಟೇ ಎಂಬಂತಿದ್ದು ಸೂರ‌್ಯಕಾಂತ ಕೋರಳ್ಳಿ ಕಣದಲ್ಲಿದ್ದಾರೆ. ವೀರಶೈವ-ಲಿಂಗಾ
ಯತ ಮತಗಳೇ ಅಧಿಕ. ಅದರಲ್ಲೂ ಪಂಚಮ, ಆದಿ ಲಿಂಗಾಯತ ಒಳಪಂಗಡ ರಾಜಕೀಯ ಬಲು ಜೋರಾಗಿದೆ. ಈ ಸಮುದಾಯದ ನಾಯಕರಾಗಿ ಬಿ.ಆರ್. ಪಾಟೀಲ್ ಇದ್ದು ಸಿಂಹಪಾಲು ಮತ ಕಾಂಗ್ರೆಸ್ಸಿಗೆ ಸಿಗುವ ನಿರೀಕ್ಷೆ ಇದೆ. ಆದರೆ  ಆದಿ ಲಿಂಗಾಯತ ಒಳಪಂಗಡದ ವೀರಣ್ಣ ಮಂಗಾಣೆ ಸೇರಿ ಪ್ರಮುಖರಲ್ಲಿ ಕೆಲವರು ಗುತ್ತೇದಾರ್ ಬೆಂಬಲಿಗರಾಗಿರುವುದರಿಂದ ಬಿಜೆಪಿಯೂ ಸಾಕಷ್ಟು ಮತ ಸೆಳೆವ ಸಾಧ್ಯ ತೆಗಳಿವೆ. ಗುತ್ತೇದಾರ್ ಬೆಂಬಲಿಸುತ್ತಿದ್ದ ಮುಸ್ಲಿಮರು ಈ ಬಾರಿ ದ್ವಂದ್ವದಲ್ಲಿದ್ದಾರೆ.

loader