ಬೆಂಗಳೂರು : ವಿಧಾನಸಭಾ ಚುನಾವಣೆಗೆ ಈ ಬಾರಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಸಚಿವ ಕಾಗೋಡು ತಿಮ್ಮಪ್ಪ ಅತ್ಯಂತ ಹಿರಿಯ ಅಭ್ಯರ್ಥಿ. ಅವರಿಗೆ 87 ವರ್ಷ ವಯಸ್ಸು. ನಂತರದ ಸ್ಥಾನದಲ್ಲಿ ಶಾಮನೂರು ಶಿವಶಂಕರಪ್ಪ, ಡಾ.ಎ.ಬಿ.ಮಾಲಕರಡ್ಡಿ ಮತ್ತಿತರರು ಇದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ಕ್ಷೇತ್ರದಿಂದ ಕಾಗೋಡು ತಿಮ್ಮಪ್ಪ ಅವರು ಚುನಾವಣಾ ಕಣಕ್ಕಿಳಿದಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ (86) ಎರಡನೇ ಹಿರಿಯ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯಾದಗಿರಿ ಕ್ಷೇತ್ರದಿಂದ ಕಣಕ್ಕಿಳಿದಿರುವ ಡಾ.ಎ.ಬಿ.ಮಾಲಕರೆಡ್ಡಿ (82) ಮೂರನೇ ಹಿರಿಯರು.

ಹಾವೇರಿ ಜಿಲ್ಲೆ ಹಾನಗಲ್‌ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿಯ ಸಿ.ಎಂ.ಉದಾಸಿ ಮತ್ತು ವಿಜಯಪುರ ಜಿಲ್ಲೆ ಸಿಂಧಗಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಮಲ್ಲಪ್ಪ ಚನ್ನವೀರಪ್ಪ ಮನಗೊಳಿ ಚುನಾವಣಾ ಕಣದಲ್ಲಿರುವ ನಾಲ್ಕನೇಯ ಹಿರಿಯ ಅಭ್ಯರ್ಥಿಗಳು. ಅವರಿಗೆ 82 ವರ್ಷ ವಯಸ್ಸು. 81-90 ವರ್ಷದೊಳಗಿನ ಐದು ಮಂದಿ ನಾಮಪತ್ರ ಸಲ್ಲಿಸಿರುವವರಲ್ಲಿ ಕಾಂಗ್ರೆಸ್‌ನ ಮೂವರು, ಬಿಜೆಪಿ ಮತ್ತು ಜೆಡಿಎಸ್‌ನ ತಲಾ ಒಬ್ಬ ಅಭ್ಯರ್ಥಿಗಳಾಗಿದ್ದಾರೆ.