Asianet Suvarna News Asianet Suvarna News

ರಾಜ್ಯಕ್ಕೆ ಮತ್ತೆ ರಾಮನಗರದ ಸಿಎಂ

ನಾಡಿನ ರಾಜಕೀಯ ರಂಗದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯು ಅದೃಷ್ಟ ರೂಪದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಎರಡನೇ ಬಾರಿಗೆ ರಾಜ್ಯಾಡಳಿತದ ಚುಕ್ಕಾಣಿ ಹಿಡಿಯುವ ಅವಕಾಶ ಕಲ್ಪಿಸಿಕೊಟ್ಟಿದ್ದು, ಬುಧವಾರದಿಂದ ನಾಡಿನಲ್ಲಿ ‘ಕುಮಾರ ಪರ್ವ’ ಶುರುವಾಗಲಿದೆ. 

JDS Leader Kumaraswamy takes oath as Karnataka chief minister today

ರಾಮನಗರ : ನಾಡಿನ ರಾಜಕೀಯ ರಂಗದಲ್ಲಿ ಉಂಟಾದ ರಾಜಕೀಯ ಅಸ್ಥಿರತೆಯು ಅದೃಷ್ಟ ರೂಪದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಎರಡನೇ ಬಾರಿಗೆ ರಾಜ್ಯಾಡಳಿತದ ಚುಕ್ಕಾಣಿ ಹಿಡಿಯುವ ಅವಕಾಶ ಕಲ್ಪಿಸಿಕೊಟ್ಟಿದ್ದು, ಬುಧವಾರದಿಂದ ನಾಡಿನಲ್ಲಿ ‘ಕುಮಾರ ಪರ್ವ’ ಶುರುವಾಗಲಿದೆ. ಎರಡು ದಶಕಗಳ ಹಿಂದೆ ಸಿನಿಮಾ ಲೋಕ ದಲ್ಲಿ ಬಣ್ಣ ಬಣ್ಣದ ಕನಸು ಕಂಡಿದ್ದ ಕುಮಾರ ಸ್ವಾಮಿ ಅವರ ರಾಜಕೀಯ ಪ್ರವೇಶವೂ ಅನಿರೀಕ್ಷಿತ ಪ್ರಸಂಗವಾಗಿದೆ. ಅವರ ಬದುಕಿನ ಪಯಣದಲ್ಲಿ ಆಗಾಗ್ಗೆ ಸಂಭವಿಸುತ್ತಿರುವ ತಲ್ಲಣಗಳು ಅದೃಷ್ಟ ಹೊತ್ತೇ ಬರುತ್ತಿದ್ದು, ಸಿನಿಮಾ ಜಗತ್ತಿನಿಂದ ರಾಜಕೀಯ ರಂಗದಲ್ಲಿ ಅವರು ಉತ್ತುಂಗಕ್ಕೇರಿದ್ದು ಇದಕ್ಕೆ ಸಾಕ್ಷಿಯಾಗಿದೆ.

ತಂದೆ ವಿರುದ್ಧ ಬಂಡೆದ್ದು ಸೈದ್ಧಾಂತಿಕ ವಿರೋಧಿಗಳ ಜತೆ ಸ್ನೇಹ ಬೆಳೆಸಿ ಪ್ರಥಮ ಬಾರಿಗೆ ಮುಖ್ಯಮಂತ್ರಿ ಪದವಿ ಅಲಂಕರಿಸಿದ್ದ ಕುಮಾರಸ್ವಾಮಿ ಅವರು, ಇಂದು ಅದೇ ಹಳೆಯ ಮಿತ್ರನನ್ನು ರಾಜಕೀಯ ತಂತ್ರಗಾರಿಕೆ ಯಲ್ಲಿ ಮಣಿಸಿ ತಂದೆ ಪ್ರೀತಿಗೆ ಪಾತ್ರರಾಗಿದ್ದಾರೆ.  ರಾಜಕೀಯ ಭೀಷ್ಮ ಎಂದೇ ಕರೆಯುವ ದೇವೇಗೌಡರ ಉತ್ತರಾಧಿಕಾರಿಯೂ ಆಗಿದ್ದಾರೆ. ಬಸನವಗುಡಿ ನ್ಯಾಷನಲ್ ಕಾಲೇಜಿನಲ್ಲಿ
ಬಿಎಸ್ಸಿ ಪದವೀಧರರಾದ ಕುಮಾರಸ್ವಾಮಿ ಅವರು, ಗುತ್ತಿಗೆದಾರ, ಚಿತ್ರ ಪ್ರದರ್ಶಕ, ವಿತರಕ ಹಾಗೂ ನಿರ್ಮಾಪಕ ಹೀಗೆ ತಮ್ಮ ಇಷ್ಟದ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. 1990 ರ ದಶದಲ್ಲಿ ರಾಜಕೀಯ ರಂಗದಲ್ಲಿ ಅಂತರ ಕಾಯ್ದುಕೊಂಡಿದ್ದ ಅವರು, ಅಂದು ತಂದೆ ದೇವೇಗೌಡರ ರಾಜಕೀಯ ಹೋರಾಟದ ವೀಕ್ಷಕರಾಗಿದ್ದರು.

1996 ರಲ್ಲಿ ಕನಕಪುರ ಲೋಕಸಭಾ ಕ್ಷೇತ್ರ ದಲ್ಲಿ ಪಕ್ಷದ ಹಿರಿಯ ನಾಯಕರ ಒತ್ತಡಕ್ಕೆ ಮಣಿದು ಸ್ಪರ್ಧಿಸುವ ಮೂಲಕ ಕುಮಾರಸ್ವಾಮಿ ಅವರ ರಾಜಕೀಯ ಯುಗ ಆರಂಭವಾಯಿತು. 2004 ರಲ್ಲಿ ರಾಮನಗರದಿಂದ ಶಾಸಕರಾಗಿ ಆಯ್ಕೆಯಾದ ಅವರು, 2006 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಆಡಳಿತ ನಡೆಸಿದರು. ಕುಮಾರ ಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಸಹ ರಾಜಕೀಯದಲ್ಲಿ ಸಕ್ರಿಯವಾಗಿದ್ದು, ಮಧುಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರು. ಈಗ ಪತಿಯಿಂದ ತೆರವಾಗಿರುವ ರಾಮನಗರ ಕ್ಷೇತ್ರದಿಂದ ಎರಡನೇ ಬಾರಿಗೆ ವಿಧಾನಸೌಧ ಪ್ರವೇಶಿಸುವ ಕನಸು ಹೊತ್ತಿದ್ದಾರೆ. 

ಸಿನಿಮಾದ ನಂಟು: 1987- 88 ನೇ ಸಾಲಿನಲ್ಲಿ ದೇವೇಗೌಡರು ರಾಜ್ಯರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದರು. ಚಿತ್ರರಂಗದೆಡೆಗೆ ಒಲವು ಹೊಂದಿದ್ದ ಕುಮಾರಸ್ವಾಮಿ, ಮನೆಯ ವರ ವಿರೋಧದ ನಡುವೆಯೂ ಗಾಂಧಿನಗರಕ್ಕೆ ಕಾಲಿಟ್ಟರು. ಸಿನಿಮಾ ಪ್ರದರ್ಶಕರಾಗಿದ್ದ ಅವರು, ಹೊಳೆನರಸೀಪುರದಲ್ಲಿ ತಾಯಿ ಚೆನ್ನಮ್ಮರ ಹೆಸರಿನಲ್ಲಿ ಚೆನ್ನಾಂಬಿಕಾ ಚಿತ್ರ ಮಂದಿರ ನಿರ್ಮಿಸಿದರು. ಚಿತ್ರರಂಗದಲ್ಲಿ ‘ಪಂಚಮವೇದ’ ಚಿತ್ರದ ಮೂಲಕ ವಿತರಕರಾ ದರು. ಆ ಚಿತ್ರ ಸೂಪರ್‌ಹಿಟ್ ಕೂಡ ಆಯಿತು. ‘ಸೂರ್ಯವಂಶ’ ಮೂಲಕ ಸಿನಿಮಾ ನಿರ್ಮಾಣ ಆರಂಭಿಸಿದ ಕುಮಾರಸ್ವಾಮಿ ಅವರು, ‘ಗಲಾಟೆ ಅಳಿಯಂದಿರು’, ‘ಚಂದ್ರ ಚಕೋರಿ’ ಯಂತಹ ಹಿಟ್ ಚಿತ್ರಗಳನ್ನು ಚಿತ್ರರಂಗಕ್ಕೆ ನೀಡಿದರು. ಬಳಿಕ ತಮ್ಮ ಪುತ್ರನನ್ನು  ಚಿತ್ರಜಗತ್ತಿಗೆ ಪರಿಚಯಿಸಿದ್ಧ ಅವರು, ತಮ್ಮ ಬ್ಯಾನರ್‌ನಲ್ಲೇ ಪುತ್ರ ನಿಖಿಲ್‌ಗೆ ‘ಜಾಗ್ವಾರ್’ ಸಿನಿಮಾ ಮಾಡಿದರು.

ರಾಮನಗರ ಕ್ಷೇತ್ರ ಕರ್ಮಭೂಮಿ: 1996 ರ ಲೋಕಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಜನತಾದಳದ ಅಭ್ಯರ್ಥಿಯಾಗಿ  ವಿಜಯ ಪತಾಕೆ ಹಾರಿಸುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. 1999 ರ ವಿಧಾನಸಭೆ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಎದುರು ಪರಾಭವಗೊಂಡ ನಂತರ ರಾಮನಗರ ಕ್ಷೇತ್ರವು ಅವರ ರಾಜಕೀಯ ಕರ್ಮಭೂಮಿಯಾಗಿದೆ. ರಾಮನಗರ ಕ್ಷೇತ್ರದಿಂದ ಗೆದ್ದವರು ಮುಖ್ಯ ಮಂತ್ರಿ ಹುದ್ದೆ ಅಲಂಕರಿಸುತ್ತಾರೆ ಎಂಬ ಪ್ರತೀತಿ ಇದೆ. ಈ ಕ್ಷೇತ್ರದಿಂದ ಶಾಸಕ ರಾದ ಕೆಂಗಲ್ ಹನುಮಂತಯ್ಯ, ಎಚ್.ಡಿ. ದೇವೇ ಗೌಡ ಅವರು ಮುಖ್ಯಮಂತ್ರಿ ಪದವಿ ಅಲಂಕರಿ ಸಿದ್ದರು. 2004 ರ ಚುನಾವಣೆಯಲ್ಲಿ ಈ ಕ್ಷೇತ್ರ ದಿಂದ ಕುಮಾರಸ್ವಾಮಿ ಆಯ್ಕೆಯಾಗಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ತಂದೆಯ ವಿಶ್ವಾಸಕ್ಕೆ ವಿರುದ್ಧವಾಗಿ ಬಿಜೆಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚಿಸಿ, 2006 ರ ಫೆಬ್ರವರಿ 3ರಂದು ಕರ್ನಾಟಕದ 18 ನೇ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದರು. ಅತ್ಯಂತ ಕಿರಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 

ಜನರ ಬಳಿಗೆ ಸಿಎಂ: ಮುಖ್ಯಮಂತ್ರಿಯೇ ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸುವ ಜನತಾ ದರ್ಶನವನ್ನು ಜನಪ್ರಿಯಗೊಳಿಸಿದರು. ನಂತರ ಜನತಾದರ್ಶನವನ್ನು ಜಿಲ್ಲೆಗಳಿಗೆ ವಿಸ್ತರಿಸಿ ಜಿಲ್ಲಾ ದರ್ಶನ ಕಾರ್ಯಕ್ರಮವನ್ನಾಗಿ ಮಾಡಿದರು. ಹಳ್ಳಿಗಾಡಿನ ಸಮಸ್ಯೆಗಳನ್ನು ಹತ್ತಿರದಿಂದ ಅರಿಯಲು ಗ್ರಾಮ ವಾಸ್ತವ್ಯ ಎಂಬ ಪರಿಕಲ್ಪನೆಗೆ ಚಾಲನೆ ನೀಡಿದರು. ರಾಜ್ಯದಲ್ಲಿ ಸಾರಾಯಿ ನಿಷೇಧ, ಭ್ರೂಣ ಹತ್ಯೆ ತಡೆಗೆ
ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ಸುವರ್ಣಸೌಧಕ್ಕೆ ಅಡಿಗಲ್ಲು: ಕೆಂಗಲ್ ಹನುಮಂತಯ್ಯ ಮತ್ತು ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದಲೇ ಆರಿಸಿ ಬಂದವರು. ಕೆಂಗಲ್ ಹನುಮಂತಯ್ಯನವರು ಬೆಂಗಳೂರಿ ನಲ್ಲಿ ವಿಧಾನಸೌಧ ನಿರ್ಮಿಸಿದಂತೆ, ಕುಮಾರ ಸ್ವಾಮಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲು ಅಡಿಗಲ್ಲು ಹಾಕಿದರು.

ಇವರಿಬ್ಬರಿಂದಾಗಿ ರಾಮನಗರ ಕ್ಷೇತ್ರದ ಕೀರ್ತಿ ಮತ್ತಷ್ಟು ಹೆಚ್ಚಿತು. 2008 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಪುನರಾಯ್ಕೆಯಾದ ಕುಮಾರಸ್ವಾಮಿ, 2009 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಎರಡನೇ ಬಾರಿಗೆ ಸಂಸತ್ ಪ್ರವೇಶಿಸಿದರು.

Follow Us:
Download App:
  • android
  • ios