Asianet Suvarna News Asianet Suvarna News

ಒಕ್ಕಲಿಗ ಕೋಟೆ ವಶಕ್ಕೆ ಪಡೆಯಲು ಕೈ ತಂತ್ರ

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಭವಿಷ್ಯವನ್ನು ಮಡಿಲಲ್ಲಿ ಇಟ್ಟುಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ಒಟ್ಟು 4 ಕ್ಷೇತ್ರಗಳಿವೆ. ಈ ಬಾರಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದರೆ, ಮೂರು ಕ್ಷೇತ್ರದಲ್ಲಿ ಜಯಿಸುವ ಅದಮ್ಯ ವಿಶ್ವಾಸವನ್ನು ಜೆಡಿಎಸ್ ಹೊಂದಿದೆ. ಚನ್ನಪಟ್ಟಣದಲ್ಲಿ ಬಿಜೆಪಿ ಉತ್ಸಾಹದಲ್ಲಿ ಇದೆ.

JDS Congress Big Fight In Ramanagara

ಅಫ್ರೋಜ್ ಖಾನ್

ರಾಮನಗರ : ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಭವಿಷ್ಯವನ್ನು ಮಡಿಲಲ್ಲಿ ಇಟ್ಟುಕೊಂಡಿರುವ ರಾಮನಗರ ಜಿಲ್ಲೆಯಲ್ಲಿ ಒಟ್ಟು 4 ಕ್ಷೇತ್ರಗಳಿವೆ. ಈ ಬಾರಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದರೆ, ಮೂರು ಕ್ಷೇತ್ರದಲ್ಲಿ ಜಯಿಸುವ ಅದಮ್ಯ ವಿಶ್ವಾಸವನ್ನು ಜೆಡಿಎಸ್ ಹೊಂದಿದೆ. ಚನ್ನಪಟ್ಟಣದಲ್ಲಿ ಬಿಜೆಪಿ ಉತ್ಸಾಹದಲ್ಲಿ ಇದೆ.

ರಾಮನಗರ
ರಾಮನಗರ ತಾಲೂಕಿನ ಎರಡು ಮತ್ತು ಕನಕಪುರ ತಾಲೂಕಿನ ಎರಡು ಹೋಬಳಿಗಳನ್ನು ಒಳಗೊಂಡಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್‌ನಿಂದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಇಕ್ಬಾಲ್ ಹುಸೇನ್, ಬಿಜೆಪಿಯಿಂದ ಲೀಲಾವತಿ ಕಣದಲ್ಲಿದ್ದಾರೆ. ಜೆಡಿಎಸ್‌ಗೆ  ಘಟನೆ ಬಲ ಇದೆಯಾದರೂ ಕುಮಾರಸ್ವಾಮಿ ಬಗ್ಗೆ ಮತದಾರರಲ್ಲಿ ಅಲ್ಪ ಬೇಸರವೂ ಇದೆ. ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾರೋಹಳ್ಳಿ ಮತ್ತು ಮರಳವಾಡಿಯಲ್ಲಿ ಇಂಧನ ಸಚಿವ ಡಿಕೆಶಿ ಸಹೋದರರು ತಮ್ಮ ಕರಾಮತ್ತು ಪ್ರದರ್ಶಿಸಿ ಒಕ್ಕಲಿಗರ ಮತಗಳನ್ನು ವಿಭಜಿಸಿದರೆ, ದಲಿತರು ಮತ್ತು ಅಲ್ಪಸಂಖ್ಯಾತ ಮತಗಳು ಒಗ್ಗಟ್ಟು ಪ್ರದರ್ಶಿಸಿದರೆ ಇಕ್ಬಾಲ್‌ಗೆ ಅನುಕೂಲವಾಗುತ್ತದೆ. ಆದರೆ ಒಕ್ಕಲಿಗರು ಕೈ ಹಿಡಿದರೆ ಕುಮಾರಸ್ವಾಮಿಗೆ ಹಾದಿ ಸುಗಮವಾಗುತ್ತದೆ.

ಚನ್ನಪಟ್ಟಣ
ಅತ್ಯಂತ ಜಿದ್ದಾಜಿದ್ದಿನ ಕ್ಷೇತ್ರವಿದು. ಜೆಡಿಎಸ್‌ನಿಂದ ಪಕ್ಷದ  ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನಿಂದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ, ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ ಸ್ಪರ್ಧಿಸಿದ್ದಾರೆ. ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪಕ್ಷ ಯಾವುದಾದರೇನು ಕ್ಷೇತ್ರದ ಕೆಲಸ ಮಾಡಿದ್ದೇನೆ ವೋಟು ಕೊಡಿ ಎಂದು ಯೋಗೇಶ್ವರ್ ಜನರ ಮುಂದೆ ಹೋಗುತ್ತಿದ್ದಾರೆ. ಚನ್ನಪಟ್ಟಣವನ್ನು ಒಟ್ಟಾರೆ ಅಭಿವೃದ್ಧಿ ಮಾಡುವುದಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಹೇಳುತ್ತಿವೆ. ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಒಕ್ಕಲಿಗರಾಗಿರುವುದರಿಂದ ಆ ಸಮುದಾಯದ ಮತಗಳು ವಿಭಜನೆ ಆಗುವ ಸಂಭವ ನಿಚ್ಚಳವಾಗಿದೆ. ಹೀಗಾಗಿ ಅಹಿಂದ ಮತಗಳ ಮೇಲೆ ಆ ಇಬ್ಬರೂ ಕಣ್ಣಿಟ್ಟಿದ್ದಾರೆ. ಅಹಿಂದ ಮತಗಳು ಸರಾಗವಾಗಿ ಬುಟ್ಟಿಗೆ ಬರುತ್ತವೆ ಎಂಬ ಲೆಕ್ಕಾಚಾರದಲ್ಲಿರುವ ಸಚಿವ ರೇವಣ್ಣ ಒಕ್ಕಲಿಗ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸುತ್ತಿದ್ದಾರೆ. 

ಕನಕಪುರ
ಇಂಧನ ಸಚಿವ ಡಿ.ಕೆ. ಶಿವಕುಮಾರ್ ಕನಕಪುರ ಕ್ಷೇತ್ರದ ಕಾಂಗ್ರೆಸ್  ಅಭ್ಯರ್ಥಿ. ಇವರ ವಿರುದ್ಧ ಜೆಡಿಎಸ್‌ನಿಂದ ನಾರಾಯಣ ಗೌಡ ಮತ್ತು ಬಿಜೆಪಿಯಿಂದ ನಂದಿನಿ ಗೌಡ ಸ್ಪರ್ಧಿಸಿದ್ದಾರೆ. ಹಿಂದಿನಿಂ ದಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ಹಣಾಹಣಿ. ಡಿಕೆಶಿ ವಿರುದ್ಧ ಜೆಡಿಎಸ್ 2008ರಲ್ಲಿ ಡಿ.ಎಂ. ವಿಶ್ವ  ನಾಥ್ ಹಾಗೂ 2013ರಲ್ಲಿ ಪಿ.ಜಿ.ಆರ್. ಸಿಂಧ್ಯಾ ಅವರನ್ನು ಕಣಕ್ಕಿಳಿಸಿತ್ತು. ಹಾಲಿ ಜೆಡಿಎಸ್ ಅಭ್ಯರ್ಥಿ ನಾರಾಯಣ ಗೌಡರು ಕೂಡ  ಪಿ.ಜಿ.ಆರ್. ಸಿಂಧ್ಯಾ ಮತ್ತು ಡಿ.ಎಂ. ವಿಶ್ವನಾಥ್‌ರಂತೆ ತಂತ್ರಗಾರಿಕೆಗಳನ್ನು  ರೂಪಿಸಿದರೆ ಬಹುಶಃ ಕನಕಪುರ ಜಿದ್ದಾಜಿದ್ದಿನ ಕ್ಷೇತ್ರವಾಗು  ವುದರಲ್ಲಿ ಅನುಮಾನವಿಲ್ಲ. ಕಳೆದ ೫ ವರ್ಷಗಳಲ್ಲಿ ಕನಕಪುರದಲ್ಲಿ ಸಾವಿರಾರು ಕೋಟಿ ರು. ಮೌಲ್ಯದ ಅಭಿವೃದ್ಧಿ ಕೆಲಸಗಳಾಗಿವೆ. ಹೀಗಾಗಿ ತಮಗೆ ಮತ ಕೊಡಿ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಮತ ಯಾಚಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾ ರಕ್ಕಿಂತ ಅಭ್ಯರ್ಥಿಗಳ ವರ್ಚಸ್ಸೇ ಹೆಚ್ಚು ಪ್ರಮುಖವಾಗಿದೆ. 

ಮಾಗಡಿ
ಜಿಲ್ಲೆಯ ಮತ್ತೊಂದು ಜಿದ್ದಾಜಿದ್ದಿನ ಕ್ಷೇತ್ರ ಮಾಗಡಿ. ನಾಲ್ಕು ಬಾರಿ ಗೆದ್ದಿರುವ ಎಚ್.ಸಿ. ಬಾಲಕೃಷ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ, ಎ. ಮಂಜು ಜೆಡಿಎಸ್ ಅಭ್ಯರ್ಥಿಯಾಗಿ ಹಾಗೂ ಹನುಮಂತರಾಜು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. 2013ರಲ್ಲೂ ಇದೇ ಪಕ್ಷಗಳ ನಡುವೆ ಸ್ಪರ್ಧೆ ಇತ್ತು. ಆಗ ಜೆಡಿಎಸ್ ಅಭ್ಯರ್ಥಿಯಾಗಿದ್ದ ಎಚ್.ಸಿ. ಬಾಲಕೃಷ್ಣ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಎ. ಮಂಜು ಸೋಲು ಕಂಡಿದ್ದರು. ಆದರೆ, ಈ ಬಾರಿ ಇಬ್ಬರೂ ಅಭ್ಯರ್ಥಿಗಳು ಅದಲು-ಬದಲು ಪಕ್ಷಾಂತರ ಮಾಡಿದ್ದಾರೆ. ಹೀಗಾಗಿ ಇಲ್ಲಿ ಕದನ ಕುತೂಹಲ ಏರ್ಪಟ್ಟಿದೆ. ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ವಿಭಜನೆ  ಆಗುವ ಕಾರಣ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಲಿದೆ. ಜೆಡಿಎಸ್ ವರಿಷ್ಠರಿಗೆ ಈ ಕ್ಷೇತ್ರ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

Follow Us:
Download App:
  • android
  • ios