ಸಕ್ಕರೆ ನಾಡಲ್ಲಿ ಜೆಡಿಎಸ್‌- ಕಾಂಗ್ರೆಸ್‌ ಜಿದ್ದಾಜಿದ್ದಿ

JDS And Congress Fight In Mandya
Highlights

‘ಸಕ್ಕರೆ ನಾಡು’ ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆ. ಇಲ್ಲಿನ ಮನೆ, ಮನಗಳಲ್ಲಿ ರಾಜಕೀಯ ತುಂಬಿ ತುಳುಕುತ್ತಿದೆ. ಕಾಂಗ್ರೆಸ್‌ ಮುನ್ನಡೆಸಲು ಚಲುವರಾಯಸ್ವಾಮಿಯನ್ನು ಅಖಾಡಕ್ಕೆ ಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಬದ್ಧ ಎದುರಾಳಿ ಎಚ್‌.ಡಿ. ದೇವೇಗೌಡರು ಹೊಂದಿರುವ ಪ್ರಾಬಲ್ಯಕ್ಕೆ ಪೆಟ್ಟು ಕೊಡುವ ತಂತ್ರ ಮಾಡಿದ್ದಾರೆ.

ಕೆ.ಎನ್‌.ರವಿ

 ಮಂಡ್ಯ :  ‘ಸಕ್ಕರೆ ನಾಡು’ ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆ. ಇಲ್ಲಿನ ಮನೆ, ಮನಗಳಲ್ಲಿ ರಾಜಕೀಯ ತುಂಬಿ ತುಳುಕುತ್ತಿದೆ. ಕಾಂಗ್ರೆಸ್‌ ಮುನ್ನಡೆಸಲು ಚಲುವರಾಯಸ್ವಾಮಿಯನ್ನು ಅಖಾಡಕ್ಕೆ ಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಬದ್ಧ ಎದುರಾಳಿ ಎಚ್‌.ಡಿ. ದೇವೇಗೌಡರು ಹೊಂದಿರುವ ಪ್ರಾಬಲ್ಯಕ್ಕೆ ಪೆಟ್ಟು ಕೊಡುವ ತಂತ್ರ ಮಾಡಿದ್ದಾರೆ. ಜೆಡಿಎಸ್‌, ಕಾಂಗ್ರೆಸ್‌ ಜಿದ್ದಾಜಿದ್ದಿ ನಡುವೆ ಮಂಡ್ಯ ಕ್ಷೇತ್ರದ ಅಭ್ಯರ್ಥಿ ಚಂದಗಾಲು ಶಿವಣ್ಣ ಅವರ ವರ್ಚಸ್ಸಿನಿಂದ ಬಿಜೆಪಿಗೆ ಹೊಸ ಭರವಸೆ ಬಂದಿದೆ.

ಎಂ ಶ್ರೀನಿವಾಸ್‌​​​- ಜೆಡಿಎಸ್‌

ರವಿ ಕುಮಾರ್‌ ಗೌಡ(ಗಣಿಗ)- ಕಾಂಗ್ರೆಸ್‌

ಚಂದಗಾಲು ಶಿವಣ್ಣ- ಬಿಜೆಪಿ

‘5 ರು. ಡಾಕ್ಟರ್‌’ರಿಂದ ಯಾರಿಗೆ ಹೊಡೆತ?

ಕಾಂಗ್ರೆಸ್‌ ನಾಯಕರೊಂದಿಗೆ ಮುನಿಸಿಕೊಂಡಿರುವ ಚಿತ್ರ ನಟ ಅಂಬರೀಶ್‌ ಅವರು ಅನಾರೋಗ್ಯ ಮತ್ತು ವಯಸ್ಸಿನ ಕಾರಣ ನೀಡಿ ಕಣದಿಂದ ಹಿಂದೆ ಸರಿದಿರುವುದರಿಂದ ರವಿಕುಮಾರ್‌ ಗಣಿಗ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕಿದೆ. ಜೆಡಿಎಸ್‌ನಿಂದ ಮಾಜಿ ಶಾಸಕ ಎಂ. ಶ್ರೀನಿವಾಸ್‌ ಮತ್ತೊಮ್ಮೆ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಚಂದಗಾಲು ಶಿವಣ್ಣ ಬಿಜೆಪಿಯಿಂದ ಅಖಾಡಕ್ಕೆ ಧುಮುಕಿದ್ದಾರೆ. ಶಿವಣ್ಣ ವರ್ಚಸ್ಸಿನಿಂದಾಗಿ ಬಿಜೆಪಿಯಲ್ಲಿ ಹೊಸ ಹುಮ್ಮಸ್ಸು ಕಾಣುತ್ತಿದೆ. ಟಿಕೆಟ್‌ ಹಂಚಿಕೆ ವಿಚಾರವಾಗಿ ಭುಗಿಲೆದ್ದ ಅಸಮಾಧಾನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳಿಗೆ ಬಾಧಿಸುತ್ತಿದೆ. ಕಣದಲ್ಲಿರುವ ಮೂವರೂ ಅಭ್ಯರ್ಥಿಗಳು ಒಕ್ಕಲಿಗರಾಗಿರುವುದರಿಂದ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಒಕ್ಕಲಿಗ ಮತಗಳು ವಿಭಜನೆಯಾಗುವ ಸಂಭವವಿದೆ. ಪರಿಶಿಷ್ಟಜಾತಿ, ಪಂಗಡ, ಕುರುಬ, ಹಿಂದುಳಿದ ವರ್ಗ, ವೀರಶೈವ ಮತದಾರರು ನಿರ್ಣಾಯಕರಾಗಲಿದ್ದಾರೆ. ಜಿಲ್ಲಾ ಕೇಂದ್ರವಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಮಂಡ್ಯದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ. ‘5 ರು. ಡಾಕ್ಟರ್‌’ ಎಂದೇ ಪ್ರಸಿದ್ಧರಾಗಿರುವ ಚರ್ಮರೋಗ ತಜ್ಞ ಡಾ. ಶಂಕರೇಗೌಡರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಗೆಲುವಿನ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಅವರು ತೊಡಕಾಗುವ ಸಂಭವವೂ ಇದೆ.


ಮದ್ದೂರು

ಡಿ.ಸಿ.ತಮ್ಮಣ್ಣ-ಜೆಡಿಎಸ್‌

ಮಧು ಮಾದೇಗೌಡ- ಕಾಂಗ್ರೆಸ್‌

ಸತೀಶ್‌- ಬಿಜೆಪಿ

ತಮ್ಮಣ್ಣ ವರ್ಸಸ್‌ ಜಿ. ಮಾದೇಗೌಡ ಪುತ್ರ

6ನೇ ಬಾರಿ ಚುನಾವಣೆ ಎದುರಿಸುತ್ತಿರುವ ಜೆಡಿಎಸ್‌ ಅಭ್ಯರ್ಥಿ ಡಿ.ಸಿ. ತಮ್ಮಣ್ಣ ಹಾಗೂ 3ನೇ ಬಾರಿ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಮಧು ಜಿ. ಮಾದೇಗೌಡ ನಡುವೆಯೇ ನೇರ ಹಣಾಹಣಿ ನಿರೀಕ್ಷಿಸಲಾಗಿದೆ. ಹೊಸ ಮುಖ ಸತೀಶ್‌ಗೆ ಬಿಜೆಪಿ ಅವಕಾಶ ನೀಡಿದೆ. ಆ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಲಕ್ಷ್ಮಣ್‌ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಸಣ್ಣಮಟ್ಟಿನ ಲಾಭ ತರಬಹುದೆಂಬ ಲೆಕ್ಕಾಚಾರವಿದೆ. ಇದೇ ವೇಳೆ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ದಿಢೀರ್‌ ಜೆಡಿಎಸ್‌ಗೆ ಮರಳಿರುವುದು ಕಾಂಗ್ರೆಸ್‌ಗೆ ಹೊಡೆತ ನೀಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ನಾಯಕರು, ಕಾರ್ಯಕರ್ತರನ್ನು ಒಗ್ಗಟ್ಟಿನಿಂದ ಸೇರಿಸಿಕೊಂಡು ಮಧು ಗೆಲ್ಲುವ ತಂತ್ರ ಮಾಡುತ್ತಿದ್ದಾರೆ. ಅದೇ ರೀತಿ ತಮ್ಮಣ್ಣ ಸಹ ಸಾಕಷ್ಟುತಂತ್ರಗಳನ್ನು ಮಾಡುತ್ತಿರುವುದು ಗುಟ್ಟಾದ ಸಂಗತಿ ಅಲ್ಲ. ಈ ಕ್ಷೇತ್ರದ ಘಟಾನುಘಟಿ ರಾಜಕಾರಣಿಗಳಾದ ಜಿ. ಮಾದೇಗೌಡ, ಎಸ್‌.ಎಂ. ಕೃಷ್ಣ , ಎಸ್‌.ಎಂ. ಶಂಕರ್‌, ಅಂಬರೀಶ್‌ ಸದ್ಯ ಚುನಾವಣಾ ರಾಜಕಾರಣದ ನೇಪಥ್ಯಕ್ಕೆ ಸರಿದಿರುವುದು ಮತದಾರರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ಕುತೂಹಲದ ಸಂಗತಿ. 1 ಲಕ್ಷ ಒಕ್ಕಲಿಗ ಮತದಾರರ ಜೊತೆಗೆ ಪರಿಶಿಷ್ಟಜಾತಿ, ವರ್ಗ, ಮುಸ್ಲಿಮರು, ಕುರುಬರು ವೀರಶೈವ ಮತಗಳೂ ನಿರ್ಣಾಯಕವಾಗಿದ್ದು, ಯಾವ ಪಕ್ಷದ ಕಡೆ ವಾಲುತ್ತವೆ ಎಂಬುದರ ಮೇಲೆ ಚುನಾವಣಾ ಫಲಿತಾಂಶ ನಿಂತಿದೆ.

ಮಳವಳ್ಳಿ

ಪಿ.ಎಂ. ನರೇಂದ್ರ ಸ್ವಾಮಿ- ಕಾಂಗ್ರೆಸ್‌

ಕೆ. ಅನ್ನದಾನಿ- ಜೆಡಿಎಸ್‌

ಬಿ. ಸೋಮಶೇಖರ್‌- ಬಿಜೆಪಿ

ಕಾಂಗ್ರೆಸ್‌, ಜೆಡಿಎಸ್‌ ಮಧ್ಯೆ ಫೈಟ್‌

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿಯಿರುವ ಎಸ್ಸಿ ಮೀಸಲು ವಿಧಾನ ಸಭಾ ಕ್ಷೇತ್ರವಾದ ಮಳವಳ್ಳಿಯಲ್ಲಿ 9ನೇ ಬಾರಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬಿ. ಸೋಮಶೇಖರ್‌ ಇದು ನನ್ನ ಕೊನೆಯ ಚುನಾವಣೆ ಎಂಬ ಅಸ್ತ್ರ ಪ್ರಯೋಗಿಸಿದ್ದಾರೆ. ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಿಂದ ಜನರಿಗೆ ಯಾವ ರೀತಿ ಲಾಭವಾಗಿದೆ ಎಂಬುದನ್ನು ತಿಳಿಸಿಕೊಟ್ಟು ಮತಯಾಚನೆ ಮಾಡುತ್ತಿದ್ದಾರೆ. ಇದೇ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ಪಿ.ಎಂ. ನರೇಂದ್ರಸ್ವಾಮಿ ನೀರಾವರಿ, ಕೃಷಿ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಯ ದಿವ್ಯ ಮಂತ್ರ ಪಠಿಸುತ್ತಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕೆ. ಅನ್ನದಾನಿ ಅವರು ಕುಮಾರಸ್ವಾಮಿ- ದೇವೇಗೌಡರ ಶ್ರೀರಕ್ಷೆಯಲ್ಲೇ ಮತಯಾಚನೆಗೆ ಮುಂದಾಗಿದ್ದಾರೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಏಕೈಕ ಉದ್ದೇಶದಿಂದ ತಮ್ಮನ್ನು ಆಯ್ಕೆ ಮಾಡುವಂತೆ ಮತದಾರರಲ್ಲಿ ಕೋರಿದ್ದಾರೆ. ಕಳೆದ ಚುನಾವಣೆಯಲ್ಲಿ ಕೇವಲ 500 ಮತಗಳ ಅಂತರದಿಂದ ಅವರು ಸೋತಿದ್ದರು. ಹೀಗಾಗಿ ಈ ಬಾರಿ ಅನುಕಂಪ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. 70 ಸಾವಿರ ಪರಿಶಿಷ್ಟಜಾತಿ ಮತ್ತು ಪಂಗಡ, 68 ಸಾವಿರ ಒಕ್ಕಲಿಗರು, 30 ಸಾವಿರ ವೀರಶೈವರು, 25 ಸಾವಿರ ಕುರುಬರು, 10 ಸಾವಿರ ಮುಸ್ಲಿಂ, 15 ಸಾವಿರ ಬೆಸ್ತರ ಮತಗಳಿವೆ. ಪರಿಶಿಷ್ಟಜಾತಿಯ ಮತಗಳು ವಿಭಜನೆಯಾಗುವುದರಿಂದ ಇತರೆ ವರ್ಗದ ಮತಗಳು ಯಾರ ಕೈಹಿಡಿಯುತ್ತವೋ ಅವರೇ ಗೆಲ್ಲುತ್ತಾರೆ.

ಮೇಲುಕೋಟೆ

ಸಿ.ಎಸ್‌. ಪುಟ್ಟರಾಜು- ಜೆಡಿಎಸ್‌

ದರ್ಶನ್‌ ಪುಟ್ಟಣ್ಣಯ್ಯ- ಸ್ವರಾಜ್‌ ಇಂಡಿಯಾ

ಸುಂಡಹಳ್ಳಿ ಸೋಮಶೇಖರ್‌- ಬಿಜೆಪಿ

ಅನುಕಂಪ ನಿರೀಕ್ಷೆಯಲ್ಲಿ ಪುಟ್ಟಣ್ಣಯ್ಯ ಪುತ್ರ

ರೈತ ನಾಯಕ ಕೆ.ಎಸ್‌. ಪುಟ್ಟಣ್ಣಯ್ಯ ಪ್ರತಿನಿಧಿಸುತ್ತಿದ್ದ ಕ್ಷೇತ್ರ. ಅವರ ನಿಧನದ ಹಿನ್ನೆಲೆಯಲ್ಲಿ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಅವರು ಸ್ವರಾಜ್‌ ಇಂಡಿಯಾ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಅಭ್ಯರ್ಥಿ ಹೂಡದೇ ದರ್ಶನ್‌ ಅವರಿಗೆ ಕಾಂಗ್ರೆಸ್‌ ಬೆಂಬಲ ಘೋಷಣೆ ಮಾಡಿದೆ. ಜೆಡಿಎಸ್‌ನಿಂದ ಹಾಲಿ ಮಂಡ್ಯ ಸಂಸದ ಸಿ.ಎಸ್‌. ಪುಟ್ಟರಾಜು ಸ್ಪರ್ಧೆಗಿಳಿದಿದ್ದಾರೆ. ಇದು ಅವರಿಗೆ ಐದನೆಯ ಚುನಾವಣೆ. ಮಂಡ್ಯ ಜಿಲ್ಲಾ ಜೆಡಿಎಸ್‌ ಹೊಣೆ ಹೊತ್ತಿರುವ ಪುಟ್ಟರಾಜು ಅವರಿಗೆ ಜೆಡಿಎಸ್‌ ಅಧಿಕಾರಕ್ಕೇರಿದರೆ ಮಂತ್ರಿ ಸ್ಥಾನ ನೀಡುವುದಾಗಿ ದೇವೇಗೌಡ, ಕುಮಾರಸ್ವಾಮಿ ಘೋಷಿಸಿದ್ದಾರೆ. ಪುಟ್ಟಣ್ಣಯ್ಯ ನಿಧನದಿಂದಾಗಿ ಅನುಕಂಪ ಕೈಹಿಡಿಯಬಹುದು ಎಂಬ ನಿರೀಕ್ಷೆಯಲ್ಲಿ ದರ್ಶನ್‌ ಇದ್ದಾರೆ. ಜತೆಗೆ ಕಾಂಗ್ರೆಸ್‌ ಬೆಂಬಲ ಘೋಷಣೆಯಿಂದಲೂ ಲಾಭವಾಗಬಹುದು ಎಂಬ ವಿಶ್ವಾಸದಲ್ಲಿದ್ದಾರೆ. ಇನ್ನು ಬಿಜೆಪಿಯು ಮಾಜಿ ಶಾಸಕ ಹಲಗೇಗೌಡರ ಪುತ್ರ ಎಚ್‌. ಮಂಜುನಾಥ್‌ಗೆ ಟಿಕೆಟ್‌ ಘೋಷಿಸಿತ್ತು. ಅವರು ಕಡೇಕ್ಷಣದಲ್ಲಿ ಹಿಂದೆ ಸರಿದಿದ್ದರಿಂದ ಸುಂಡಹಳ್ಳಿ ಸೋಮಶೇಖರ್‌ ಕಣದಲ್ಲಿದ್ದಾರೆ. ಇಲ್ಲಿ ಆ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. 95 ಸಾವಿರ ಒಕ್ಕಲಿಗರು, 30 ಸಾವಿರ ಪರಿಶಿಷ್ಟರು, 15 ಸಾವಿರ ವೀರಶೈವರು, 12 ಸಾವಿರ ಕುರುಬರು, 10 ಸಾವಿರ ಮುಸ್ಲಿಮರು ಗೆಲುವಿನ ಅಭ್ಯರ್ಥಿಗೆ ನಿರ್ಣಾಯಕರಾಗುತ್ತಾರೆ.

ಶ್ರೀರಂಗಪಟ್ಟಣ

ರವೀಂದ್ರ ಶ್ರೀಕಂಠಯ್ಯ​- ಜೆಡಿಎಸ್‌

ರಮೇಶ್‌ ಬಾಬು ಬಂಡಿಸಿದ್ದೇಗೌಡ- ಕಾಂಗ್ರೆಸ್‌

ಕೆ.ಎಸ್‌. ನಂಜುಂಡೇಗೌಡ- ಬಿಜೆಪಿ

ಜೆಡಿಎಸ್‌, ಕಾಂಗ್ರೆಸ್‌ ಜಿದ್ದಾಜಿದ್ದಿ ಕದನ

ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 41 ಸಾವಿರಕ್ಕೂ ಅಧಿಕ ಮತ ಗಳಿಸಿದ್ದ ರವೀಂದ್ರ ಶ್ರೀಕಂಠಯ್ಯ ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದಾರೆ. ಜೆಡಿಎಸ್‌ನಿಂದ ಆಯ್ಕೆಯಾಗಿ, ಬಳಿಕ ಬಂಡಾಯವೆದ್ದು ಕಾಂಗ್ರೆಸ್‌ ಸೇರಿರುವ ರಮೇಶ್‌ ಬಾಬು ಬಂಡಿಸಿದ್ದೇಗೌಡ ಆ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇವರಿಬ್ಬರ ನಡುವೆ ರೈತರ ಹೋರಾಟಗಾರ ಕೆ.ಎಸ್‌. ನಂಜುಂಡೇಗೌಡ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಈ ಕ್ಷೇತ್ರ ಜೆಡಿಎಸ್‌ ವರಿಷ್ಠರಿಗೆ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಈ ಬಾರಿ ರೋಚಕ ಫಲಿತಾಂಶ ನಿರೀಕ್ಷಿಸಲಾಗಿದೆ. ವೈಯಕ್ತಿಕ ವರ್ಚಸ್ಸಿನ ಜತೆಗೆ ಜೆಡಿಎಸ್‌ ಬಲವನ್ನು ರವೀಂದ್ರ ನೆಚ್ಚಿಕೊಂಡಿದ್ದರೆ, ಅಹಿಂದ ಮತಗಳ ಮೇಲೆ ರಮೇಶ್‌ ಕಣ್ಣಿಟ್ಟಿದ್ದಾರೆ. 7 ಬಾರಿ ಚುನಾವಣೆಗೆ ಸ್ಪರ್ಧಿಸಿ, ಆರು ಬಾರಿ ಸೋತಿರುವ ನಂಜುಂಡೇಗೌಡರು ಅನುಕಂಪ ಕೈಹಿಡಿಯಬಹುದು ಎಂದು ನಂಬಿದ್ದಾರೆ. ಅವರ ಮೂಲಕ ಜಿಲ್ಲೆಯಲ್ಲಿ ಖಾತೆ ತೆರೆಯಲು ಬಿಜೆಪಿ ಉತ್ಸುಕವಾಗಿದೆ. ಒಕ್ಕಲಿಗ ಬಾಹುಳ್ಯದ ಕ್ಷೇತ್ರ ಇದಾಗಿದ್ದು, ಈ ಮೂವರೂ ಅಭ್ಯರ್ಥಿಗಳು ಅದೇ ಸಮುದಾಯದವರು. 96 ಸಾವಿರದಷ್ಟಿರುವ ಒಕ್ಕಲಿಗರ ಮತಗಳು ವಿಭಜನೆಯಾಗುವ ಸಂಭವವಿದೆ. ಹೀಗಾಗಿ ಪರಿಶಿಷ್ಟರು, ಬೆಸ್ತರು, ಕುರುಬರು, ವೀರಶೈವರು, ಮುಸ್ಲಿಮರು ನಿರ್ಣಾಯಕರಾಗಿದ್ದಾರೆ. ತ್ರಿಕೋನ ಸ್ಪರ್ಧೆ ಸಾಧ್ಯತೆ ಇದೆ.

ನಾಗಮಂಗಲ

ಎನ್‌. ಚಲುವರಾಯಸ್ವಾಮಿ- ಕಾಂಗ್ರೆಸ್‌

ಕೆ. ಸುರೇಶ್‌ಗೌಡ- ಜೆಡಿಎಸ್‌

ಡಾ. ವಿ. ಪಾರ್ಥಸಾರಥಿ- ಬಿಜೆಪಿ

ಸಿದ್ದು, ದೇವೇಗೌಡ ಪರೋಕ್ಷ ಸಮರ

ಮಾಜಿ ಶಾಸಕ, ಕಾಂಗ್ರೆಸ್‌ ಅಭ್ಯರ್ಥಿ ಚಲುವರಾಯಸ್ವಾಮಿ ಅವರನ್ನು ಸೋಲಿಸಲೇಬೇಕೆಂಬ ಹಠ ದೇವೇಗೌಡರ ಕುಟುಂಬದ್ದಾಗಿದೆ. ಆದರೆ ಅದಕ್ಕೆ ಜಗ್ಗದೆ ಗೆದ್ದೇ ಗೆಲ್ಲುವ ಛಲ ಚಲುವರಾಯಸ್ವಾಮಿ ಅವರದ್ದಾಗಿದೆ. ದೇವೇಗೌಡರಿಗೆ ಸಡ್ಡು ಹೊಡೆದು ಅವರು ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ. ಚಲುವರಾಯಸ್ವಾಮಿ ಪಕ್ಷಾಂತರದಿಂದ ಕ್ಷೇತ್ರದ ರಾಜಕೀಯ ಅಖಾಡವೇ ಬದಲಾಗಿದೆ. ಚಲುವರಾಯಸ್ವಾಮಿ ಕಾಂಗ್ರೆಸ್‌ಗೆ ಬರುವುದು ಪಕ್ಕಾ ಆಗುತ್ತಿದ್ದಂತೆ ಅವರ ರಾಜಕೀಯ ವಿರೋಧಿಗಳಾಗಿದ್ದ ಮಾಜಿ ಶಾಸಕ ಸುರೇಶ್‌ ಗೌಡ ಹಾಗೂ ಎಲ್‌.ಆರ್‌. ಶಿವರಾಮೇಗೌಡ ಜೆಡಿಎಸ್‌ ಸೇರ್ಪಡೆಗೊಂಡಿದ್ದಾರೆ ಮತ್ತು ಜತೆಗೂಡಿದ್ದಾರೆ. ಸುರೇಶ್‌ಗೌಡರನ್ನು ಆ ಪಕ್ಷ ಅಭ್ಯರ್ಥಿ ಮಾಡಿದೆ. ಈ ಬಾರಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಜಿದ್ದಾಜಿದ್ದಿ ಕದನವೇ ನಡೆಯುವ ನಿರೀಕ್ಷೆ ಇದೆ. ಮೇಲ್ನೋಟಕ್ಕೆ ಇದು ಚಲುವರಾಯಸ್ವಾಮಿ- ಸುರೇಶ್‌ಗೌಡ ನಡುವಣ ಹಣಾಹಣಿಯಾದರೂ ಸಿದ್ದರಾಮಯ್ಯ- ದೇವೇಗೌಡರ ಅವರ ಪ್ರತಿಷ್ಠೆ ಅಡಗಿದೆ. ಕಳೆದ ಬಾರಿ ಠೇವಣಿ ಕಳೆದುಕೊಂಡಿದ್ದ ಡಾ

ವಿ. ಪಾರ್ಥಸಾರಥಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಕ್ಷೇತ್ರದಲ್ಲಿ 98 ಸಾವಿರದಷ್ಟಿರುವ ಒಕ್ಕಲಿಗರು ಬಹುಸಂಖ್ಯಾತರಾಗಿದ್ದಾರೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿ ಅದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಹೀಗಾಗಿ 33 ಸಾವಿರದಷ್ಟಿರುವ ಪರಿಶಿಷ್ಟರು, 28 ಸಾವಿರದಷ್ಟಿರುವ ಕುರುಬರು ಹಾಗೂ 10 ಸಾವಿರದಷ್ಟಿರುವ ಮುಸ್ಲಿಮರು ಪ್ರಮುಖ ಪಾತ್ರ ವಹಿಸುತ್ತಾರೆ.

ಕೆ.ಆರ್‌. ಪೇಟೆ

ಕೆ.ಬಿ.ಚಂದ್ರಶೇಖರ್‌​-ಕಾಂಗ್ರೆಸ್‌

ಕೆ.ಸಿ.ನಾರಾಯಣಗೌಡ- ಜೆಡಿಎಸ್‌

ಬೂಕನಹಳ್ಳಿ ಮಂಜುನಾಥ್‌-ಬಿಜೆಪಿ

ಜೆಡಿಎಸ್‌ ಮನೆಯೊಂದು ಮೂರು ಬಾಗಿಲು

ಕಳೆದ ಬಾರಿ ಜೆಡಿಎಸ್‌ನಿಂದ ನಾರಾಯಣಗೌಡ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಅಭ್ಯರ್ಥಿ ಆಯ್ಕೆ, ನಾಮಪತ್ರ ಸಲ್ಲಿಕೆ ವೇಳೆ ಆದ ಎಡವಟ್ಟುಗಳಿಂದಾಗಿ ಜೆಡಿಎಸ್‌ ಸದ್ಯ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ನಾರಾಯಣಗೌಡರಿಗೆ ಆರಂಭದಲ್ಲಿ ಟಿಕೆಟ್‌ ಘೋಷಣೆ ಮಾಡಲಾಯಿತಾದರೂ, ನಾಮಪತ್ರ ಸಲ್ಲಿಕೆ ವೇಳೆ ಬಿ.ಎಲ್‌. ದೇವರಾಜು ಅವರಿಗೂ ಪಕ್ಷ ಟಿಕೆಟ್‌ ನೀಡಿತು. ಕೊನೆ ಕ್ಷಣದ ಈ ಅವಾಂತರದಲ್ಲಿ ನಾರಾಯಣಗೌಡ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಪ್ರಬಲ ಆಕಾಂಕ್ಷಿಗಳಾಗಿದ್ದ ಬಿ. ಪ್ರಕಾಶ್‌ ಹಾಗೂ ಬಿ.ಎಲ್‌. ದೇವರಾಜ್‌ ನಾಮಪತ್ರ ಹಿಂಪಡೆದಿದ್ದಾರೆ. ಆದಾಗ್ಯೂ ಟಿಕೆಟ್‌ ಹಂಚಿಕೆಯಲ್ಲಿ ಸೃಷ್ಟಿಯಾದ ಈ ಅಸಮಾಧಾನ ಜೆಡಿಎಸ್‌ಗೆ ಮುಳುವಾಗುವ ಅಪಾಯವೂ ಇದೆ. ಇನ್ನು ಕಾಂಗ್ರೆಸ್ಸಿನಿಂದ ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್‌ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲೂ ಟಿಕೆಟ್‌ ವಂಚಿತರ ಅಸಮಾಧಾನವಿದೆ. ಬಿಜೆಪಿಯಿಂದ ಬೂಕನಹಳ್ಳಿ ಮಂಜುನಾಥ್‌ ಅಖಾಡದಲ್ಲಿದ್ದಾರೆ. ಕೆ.ಆರ್‌. ಪೇಟೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ತವರು ತಾಲೂಕು. ಕ್ಷೇತ್ರದಲ್ಲಿ 93 ಸಾವಿರದಷ್ಟಿದ್ದು ಒಕ್ಕಲಿಗರಿದ್ದು, ಆ ಮತಗಳು ವಿಭಜನೆಯಾಗುವ ಸಂಭವವಿದೆ. ಇತರ ವರ್ಗಗಳು ಕೈಹಿಡಿದವರು ಗೆಲ್ಲುತ್ತಾರೆ. ಕಾಂಗ್ರೆಸ್‌ ಅಭ್ಯರ್ಥಿ ಒಕ್ಕಲಿಗರ ಜತೆಗೆ ಅಹಿಂದ ಮತಗಳ ನಿರೀಕ್ಷೆಯಲ್ಲಿದ್ದಾರೆ. ಒಕ್ಕಲಿಗರ ಜತೆಗೆ ಇತರೆ ವರ್ಗಗಳನ್ನು ಸೆಳೆಯಲು ಜೆಡಿಎಸ್‌ ಯತ್ನಿಸುತ್ತಿದೆ.

loader