ನಾಳೆ ಕೃಷಿ ಸಾಲ ಮನ್ನಾ ಮಾಡ್ತಾರಾ ಕುಮಾರಸ್ವಾಮಿ..?

First Published 22, May 2018, 7:52 AM IST
JD(S) leader H D Kumaraswamy to take oath as Karnataka CM  Tomorrow
Highlights

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವುದು ಪಕ್ಕಾ ಆಗುತ್ತಿದ್ದಂತೆಯೇ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಭರವಸೆ ಈಡೇರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. 

ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುವುದು ಪಕ್ಕಾ ಆಗುತ್ತಿದ್ದಂತೆಯೇ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿದ್ದ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಭರವಸೆ ಈಡೇರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಪೂರ್ಣ ಬಹುಮತದೊಂದಿಗೆ ತಮ್ಮ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆ ಗಳನ್ನು ಈಡೇರಿಸುತ್ತೇನೆ. 

ಒಂದು ವೇಳೆ ಪೂರ್ಣ ಬಹುಮತದ ಸರ್ಕಾರ ಆಗದಿದ್ದರೆ ಎಲ್ಲ ಭರವಸೆಗಳನ್ನು ಈಡೇರಿಸುವುದು ಕಷ್ಟಸಾಧ್ಯ ಎಂಬ ಮಾತನ್ನು  ಪ್ರಚಾರದ ವೇಳೆಯೇ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದರೂ ಈಗ ರೈತರ ಸಾಲ ಮನ್ನಾ ಮಾಡುವ ಭರವಸೆ ಶತಾಯಗತಾಯ ಅನು ಷ್ಠಾನಕ್ಕೆ ತರಬೇಕು ಎಂಬ ನಿಲುವಿಗೆ ಬಂದಿದ್ದಾರೆ.

ಮುಖ್ಯಮಂತ್ರಿಯಾದ 24  ಗಂಟೆಗಳಲ್ಲಿಯೇ ರೈತರ ಸಾಲ ಮನ್ನಾ ಘೋಷಣೆ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಅವರು ಇದೀಗ ಕಾಂಗ್ರೆಸ್ ಜತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡುತ್ತಿರುವು ದರಿಂದ ತಮ್ಮ ಮಾತನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳುತ್ತಾರೆ  ಎಂಬುದನ್ನು ಕಾದು ನೋಡಬೇಕಿದೆ. ಜತೆಗೆ ಕಾಂಗ್ರೆಸ್ ಪಕ್ಷದ ವಿಶ್ವಾಸ ಪಡೆಯದೆ ಅಥವಾ ಚರ್ಚಿಸದೆ ಈ ತೀರ್ಮಾನ ಕೈಗೊಳ್ಳುವುದು ಸಾಧ್ಯವೇ ಇಲ್ಲ. ಮೇಲಾಗಿ ಕಾಂಗ್ರೆಸ್ ಪಕ್ಷ ಕೂಡ ಸಾಲ ಮನ್ನಾದ ಹೆಗ್ಗಳಿಗೆ ಕೇವಲ ಜೆಡಿಎಸ್‌ಗೆ ಬಿಟ್ಟುಕೊಡಲು ಒಪ್ಪುವುದಿಲ್ಲ ಎನ್ನಲಾಗಿದೆ.

ಕಳೆದ ಜೂನ್ ತಿಂಗಳಿಗೆ ಅನ್ವಯವಾಗುವಂತೆ ರಾಜ್ಯದ ಎಲ್ಲ ರೈತರ ಎಲ್ಲ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲದ ಮೊತ್ತ ಸುಮಾರು 53 ಸಾವಿರ ಕೋಟಿ ರು.ಗಳಾಗಲಿದೆ. ಹೆಚ್ಚೂಕಡಿಮೆ ರಾಜ್ಯದ ಬಜೆಟ್‌ನ ಕಾಲು ಭಾಗ ಇದು. ಇಷ್ಟೊಂದು ದೊಡ್ಡ ಮೊತ್ತಕ್ಕೆ ಒಂದೇ ಬಾರಿಗೆ  ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಲು ತೀರಾ ಕಷ್ಟ.  

ಹಾಗೆ ಮಾಡಿದಲ್ಲಿ ಸರ್ಕಾರದ ಬಜೆಟ್‌ನ ಒಟ್ಟಾರೆ ಗುರಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕಾಗಿ ಕುಮಾರಸ್ವಾಮಿ ಅವರು ತಮ್ಮದೇ ಆದ ರೀತಿಯ ಅನುಷ್ಠಾ ನದ ರೂಪುರೇಷೆಗಳನ್ನು ಸಿದ್ಧ ಪಡಿಸುತ್ತಿದ್ದಾರೆ. ಆ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಏಕಕಾಲದಲ್ಲಿ ಎಲ್ಲ ರೈತರ ಸಾಲ ಮನ್ನಾ ಮಾಡುವ ಪ್ರಸ್ತಾಪ ಮಂಡಿಸು ವುದು. ಆದರೆ, ಆ ಸಾಲದ ಮೊತ್ತವನ್ನು ಸರ್ಕಾರದಿಂದ ಒಂದೇ ಬಾರಿಗೆ ಬ್ಯಾಂಕುಗಳಿಗೆ ಕಟ್ಟುವುದಿಲ್ಲ. 

ಅದಕ್ಕಾಗಿ  ಕಾಲಾವಕಾಶ ಮತ್ತು ಕಂತುಗಳ ಮರುಪಾವತಿಗೆ ಅವಕಾಶ ಕೋರಲಾಗುವುದು ಎಂದು ತಿಳಿದುಬಂದಿದೆ. ಸಹಕಾರ  ಬ್ಯಾಂಕ್‌ ಗಳಲ್ಲಿ ರೈತರು ಮಾಡಿರುವ ಸಾಲದ ಪೈಕಿ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗಾಗಲೇ ಸುಮಾರು ಎಂಟು ಸಾವಿರ ಕೋಟಿ ರು.ಗಳನ್ನು ಮನ್ನಾ ಮಾಡಿದೆ. ರೈತರ ಸಾಲದ ಪೈಕಿ 50 ಸಾವಿರ ರು.ಗಳವರೆಗೆ ಮನ್ನಾ ಮಾಡಲಾಗಿತ್ತು. ಈಗ ಮನ್ನಾ ಆಗಬೇಕಾಗಿರುವ ಮೊತ್ತ ಮೂರು ಸಾವಿರ ಕೋಟಿ ರು. 

ಈ ಮೊತ್ತ ಕುಮಾರಸ್ವಾಮಿ ಅವರ ಸರ್ಕಾರಕ್ಕೆ ದೊಡ್ಡದಲ್ಲ. ಆದರೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲದ ಮೊತ್ತ ಇರುವುದು ೪೨ ಸಾವಿರ ಕೋಟಿ ರು. ಜತೆಗೆ ಗ್ರಾಮೀಣ ಬ್ಯಾಂಕುಗಳಲ್ಲಿನ ರೈತರ ಸಾಲದ ಮೊತ್ತ 8 ಸಾವಿರ ಕೋಟಿ ರು. ಈ ಎಲ್ಲ ಸಾಲ ಮನ್ನಾ ಮಾಡುವುದಕ್ಕೆ ಸಾಕಷ್ಟು ಮನವಿ, ಒತ್ತಡ ಬಂದರೂ ಹಿಂದಿನಸರ್ಕಾರ ಒಪ್ಪಿರಲಿಲ್ಲ. ಈಗ ಕುಮಾರಸ್ವಾಮಿ ಸರ್ಕಾರವೂ ಏಕಾಏಕಿ ಇಷ್ಟೊಂದು ದೊಡ್ಡ ಮೊತ್ತದ ಸಾಲ ಮನ್ನಾ ಘೋಷಿಸುವುದು ಸುಲಭದ ಮಾತಲ್ಲ. ಇದಕ್ಕೆ ಇಚ್ಛಾಶಕ್ತಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರನ್ನು ಮನವೊಲಿಸುವ ಅಗತ್ಯವಿದೆ ಎಂದು ಜೆಡಿಎಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

loader