ಬಿಜೆಪಿ ಟೇಕಾಫ್ ಆಯ್ತು, ‘ಕೈ’ ಹೋಳಾಯ್ತು; ಪ್ರಕಾಶ್ ಜಾವಡೇಕರ್ ಜೊತೆ ವಿಶೇಷ ಸಂದರ್ಶನ

Interview With Prakash Javadekar
Highlights

ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಕಳೆದ ಆರೇಳು ತಿಂಗಳಿನಿಂದ ಕರ್ನಾಟಕದಲ್ಲಿ  ಚುನಾವಣಾ ಸಿದ್ಧತೆಗಾಗಿ ಓಡಾಡುತ್ತಿದ್ದಾರೆ. ಅವರು ಹೆಚ್ಚಾಗಿತೆರೆಮರೆಯಲ್ಲೇ  ಇದ್ದು ಸಿದ್ಧತಾ ಕಾರ‌್ಯಗಳಲ್ಲಿ ತೊಡಗಿಕೊಂಡಿದ್ದಾರೆ. 

ಬೆಂಗಳೂರು (ಮೇ. 09): ರಾಜ್ಯ ಬಿಜೆಪಿಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಕಳೆದ ಆರೇಳು ತಿಂಗಳಿನಿಂದ ಕರ್ನಾಟಕದಲ್ಲಿ  ಚುನಾವಣಾ ಸಿದ್ಧತೆಗಾಗಿ ಓಡಾಡುತ್ತಿದ್ದಾರೆ. ಅವರು ಹೆಚ್ಚಾಗಿತೆರೆಮರೆಯಲ್ಲೇ  ಇದ್ದು ಸಿದ್ಧತಾ ಕಾರ‌್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಮೋದಿ ಸಂಪುಟದ ಪ್ರಭಾವಿ ಸಚಿವರೂ ಆಗಿರುವ ಅವರು ಕರ್ನಾಟಕದಲ್ಲಿ ‘ಟೇಕಾಫ್’ ಆಗದೇ ಇದ್ದ ಬಿಜೆಪಿಯ  ಚುನಾವಣಾ ಸಿದ್ಧತೆಯನ್ನು ‘ಟೇಕಾಫ್’ ಮಾಡಿಸಿದ  ನಾಯಕರಲ್ಲೊಬ್ಬರು ಎಂದು ಹೇಳಲಾಗುತ್ತದೆ. ಅವರ ಜತೆ ಕನ್ನಡಪ್ರಭ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ನವೆಂಬರ್‌ನಲ್ಲಿ ಅಮಿತ್ ಶಾ ಕರ್ನಾಟಕಕ್ಕೆ ಪರಿವರ್ತನಾ  ಯಾತ್ರೆಯ ಉದ್ಘಾಟನೆಗೆ  ಬಂದಿದ್ದಾಗ ಜನ ಕಡಿಮೆಯಾದರು ಅಂತ ಸಿಟ್ಟು ಮಾಡಿಕೊಂಡಿದ್ದರಂತೆ. ಈಗ ಅವರೇ ತಮ್ಮ  ರೋಡ್ ಶೋಗಳಿಗೆ - ರ‌್ಯಾಲಿಗಳಿಗೆ ಜನ ಬರುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಕೂಡ ಖುಷಿಯಾದಂತಿದೆ. ಏನಾಯಿತು 5 ತಿಂಗಳಲ್ಲಿ?

ಕರ್ನಾಟಕದಲ್ಲಿ ಮೊದಲಿನಿಂದಲೂ ಜನ ಕಾಂಗ್ರೆಸ್  ಸರ್ಕಾರದ ವಿರುದ್ಧ ಹತಾಶೆ ಹಾಗೂ ನಿರಾಶೆಯ ಭಾವನೆ  ಹೊಂದಿದ್ದಾರೆ.  ಅದಕ್ಕಿಂತಲೂ ದೊಡ್ಡ ಪ್ರಮಾಣದ ಸಿಟ್ಟಿದೆ. ನವೆಂಬರ್‌ನಲ್ಲಿ ಪರಿವರ್ತನಾ ಯಾತ್ರೆಯ ಮೂಲಕ ಆ ಭಾವನೆ ಒಗ್ಗೂಡಿಸುವ ಕೆಲಸ ಆರಂಭವಾಯಿತು. ಅದರ ಪರಿಣಾಮವನ್ನು ನೀವು ಈಗ ನೋಡುತ್ತಿದ್ದೀರಿ. ಹಾಗೆ ನೋಡಿದರೆ ಕಾಂಗ್ರೆಸ್ ವಿರುದ್ಧದ ಸಿಟ್ಟು ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ. ಅದು ದೇಶದಾದ್ಯಂತ ಇದೆ. 2014 ರಲ್ಲಿ ನರೇಂದ್ರ ಮೋದಿ ಹವಾ ಶುರುವಾದ ನಂತರ ನಡೆದ ಅಷ್ಟೂ ಚುನಾವಣೆಗಳನ್ನು ನೀವು ಗಮನಿಸಿ ನೋಡಿ. ಹನ್ನೆರಡು ರಾಜ್ಯಗಳನ್ನು ಕಾಂಗ್ರೆಸ್ ಕಳೆದುಕೊಂಡಿದೆ. ಕರ್ನಾಟಕ ಹದಿಮೂರನೆಯದ್ದಾಗಲಿದೆ.

ಆದರೆ, ಅಲ್ಲಿ ಆದಂತೆಯೇ ಕರ್ನಾಟಕದಲ್ಲಿ  ಆಗುತ್ತದೆ ಎಂದು ಹೇಗೆ ಹೇಳುತ್ತೀರಿ? ಆರೇಳು ತಿಂಗಳಿನಿಂದ ಸಿದ್ದರಾಮಯ್ಯ ನ್ಯೂಸ್  ಅಜೆಂಡಾ ಫಿಕ್ಸ್ ಮಾಡುತ್ತಿದ್ದರು. ಅವರು ಕೊಟ್ಟ ಹೇಳಿಕೆಗಳ ಮೇಲೆಯೇ ಮಾಧ್ಯಮಗಳಲ್ಲಿ ಪರ-ವಿರುದ್ಧ ಚರ್ಚೆಗಳಾಗುತ್ತಿದ್ದವು. ಬಿಜೆಪಿ -ಜೆಡಿಎಸ್‌ಗಳು ಪ್ರತಿಕ್ರಿಯೆ ಕೊಡುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆಯಾ?

ತುಂಬ ಬದಲಾಗಿದೆ. ಮುಖ್ಯವಾಗಿ ನಮ್ಮಲ್ಲೇ ಬದಲಾವಣೆ  ಆಗಿದೆ. ಆರು ತಿಂಗಳ ಹಿಂದೆ ನಾವು - ಅಮಿತ್ ಶಾ ಅವರೆಲ್ಲ ಬರುವುದಕ್ಕೆ ಶುರುಮಾಡಿದಾಗ ರಾಜ್ಯ ಬಿಜೆಪಿ ಮೂರು  ಹೋಳುಗಳಾಗಿ ಒಡೆದುಹೋಗಿತ್ತು. ಆರು ತಿಂಗಳ ಹಿಂದಿನಿಂದ ಅಮಿತ್ ಶಾ ನೇತೃತ್ವದಲ್ಲಿ ನಾವು ಆ ಒಡಕನ್ನು  ಸಂಪರ್ಣವಾಗಿ ತೊಡೆದುಹಾಕಿ ಒಂದು ಬಿಜೆಪಿಯನ್ನಾಗಿ ಮಾಡಿದೆವು. ಆನಂತರ ಕ್ರಮೇಣ ಪರಿಸ್ಥಿತಿ ಬದಲಾಗುತ್ತ ಬಂತು. ಅದಕ್ಕೆ ಸರಿಯಾಗಿ ಕಾಂಗ್ರೆಸ್‌ನ ಒಳಜಗಳಗಳು ಆರು ತಿಂಗಳಿಂದ ಕ್ರಮೇಣ ಉಲ್ಬಣಗೊಳ್ಳುತ್ತ ಹೋದವು. 

ನೀವೇ ಹೇಳಿ, ಈಗ ಕಾಂಗ್ರೆಸ್‌ನ ಯಾವ್ಯಾವ ನಾಯಕರು  ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ? ಕೆಪಿಸಿಸಿ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಉಸ್ತುವಾರಿಗಳು ಎಲ್ಲಿದ್ದಾರೆ? ನಮ್ಮ ಬೂತ್ ಕಾರ್ಯಕರ್ತರ ಸಮಾವೇಶಗಳು ಕಾಂಗ್ರೆಸ್‌ನವರ
ರ‌್ಯಾಲಿಗಳಿಗಿಂತ ದೊಡ್ಡದಾಗಿರುತ್ತವೆ. ಈಗ ಸೋನಿಯಾ ಗಾಂಧಿ ಬಂದಿದ್ದಾರೆ. ಏನಾದರೂ ವ್ಯತ್ಯಾಸ ಆಗಬಹುದಾ?

ಏನೇನೂ ಆಗುವುದಿಲ್ಲ. ಈ ಹಿಂದೆ 8 ರಾಜ್ಯಗಳಲ್ಲಿ ಚುನಾವಣೆ ನಡೆದಾಗ ಹೋಗದವರು ಇಲ್ಯಾಕೆ ಬಂದರೋ. ಅವರು ಬಂದು ಭಾಷಣ ಮಾಡಿದರೆ ಪ್ರತಿದಾಳಿ ನಡೆಸಲು ಒಂದಷ್ಟು ವಿಷಯ ಕೊಟ್ಟುಹೋಗುತ್ತಾರೆ ಅಷ್ಟೇ. ದೇಶಕ್ಕಿಂತ ಕುಟುಂಬವೇ ಮುಖ್ಯವಾದರೆ ಹೀಗೇ ಆಗುವುದು.

ಕುಟುಂಬ ರಾಜಕಾರಣಕ್ಕೆ ನಿಮ್ಮಲ್ಲೂ ಸಾಕಷ್ಟು ಉದಾಹರಣೆಗಳಿವೆ. ಈ ಸಲ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ತೆಗೆದು ನೋಡಿದರೆ ಅಪ್ಪ-ಮಕ್ಕಳು, ಗಂಡ-ಹೆಂಡತಿ, ಅಣ್ಣ-ತಮ್ಮಂದಿರಿಗೆ ನೀವೂ ಟಿಕೆಟ್ ಕೊಟ್ಟಿದ್ದೀರಿ?

ವಂಶಪಾರಂಪರ್ಯ ಆಡಳಿತದ ಮೂಲ ವಿಷಯ ನೀವು ಅರ್ಥ ಮಾಡಿಕೊಳ್ಳಬೇಕು. ಯಾರು ಮುಖ್ಯಮಂತ್ರಿ ಆಗಲಿದ್ದಾರೋ - ಯಾರು ಪ್ರಧಾನಿ ಆಗಲಿದ್ದಾರೋ, ಅವರ  ಕುಟುಂಬಸ್ಥರು ಅಭ್ಯರ್ಥಿಗಳಾಗದಿರುವುದು. ಅದೇ  ಕಾರಣಕ್ಕಾಗಿ ವರುಣಾ ವಿಷಯದಲ್ಲಿ ಪಕ್ಷ ಮತ್ತು  ಯಡಿಯೂರಪ್ಪ ಸೇರಿಕೊಂಡು ವಿಜಯೇಂದ್ರಗೆ ಟಿಕೆಟ್ ಕೊಡದಿರುವ ನಿರ್ಣಯಕ್ಕೆ ಬಂದಿದ್ದು. ಅವರು ಅಲ್ಲಿ ಕೆಲಸ  ಮಾಡಿರಬಹುದು, ಆದರೆ ಮುಖ್ಯಮಂತ್ರಿ ಅಭ್ಯರ್ಥಿಯ ಮಗನಿಗೆ ಟಿಕೆಟ್ ಕೊಡುವುದು ತಪ್ಪು ಸಂದೇಶ ಕಳಿಸುತ್ತದೆ. ಅದಕ್ಕಿಂತ ಮುಖ್ಯವಾಗಿ, ಸೋನಿಯಾ ಗಾಂಧೀಜಿಯವರ  ನಂತರ ಕಾಂಗ್ರೆಸ್‌ನ ಅಧ್ಯಕ್ಷರು ಯಾರಾಗಬೇಕು ಅನ್ನುವ ವಿಷಯದಲ್ಲಿ ಯಾವುದೇ ಗೊಂದಲಗಳಿರಲಿಲ್ಲ. ಅದು ಮೊದಲೇ ನಿರ್ಧರಿತವಾಗಿತ್ತು. ನಮ್ಮ ಪಕ್ಷದಲ್ಲಿ ರಾಜನಾಥ ಸಿಂಗ್ ನಂತರ ನಿತಿನ್ ಗಡ್ಕರಿ ಅಧ್ಯಕ್ಷರಾಗ್ತಾರೆ ಅನ್ನುವುದು  ಯಾರಿಗೆ ಗೊತ್ತಿತ್ತು? ಅಮಿತ್ ಶಾರಿಗೆ ತಾವು  ಅಧ್ಯಕ್ಷರಾಗುವುದು ಗೊತ್ತಿರಲಿಲ್ಲ. ಅಮಿತ್ ಶಾ ನಂತರ ಯಾರಾಗುತ್ತಾರೆ ಅನ್ನುವುದು  ಯಾರಿಗೂ ಗೊತ್ತಿಲ್ಲ. ನಮ್ಮಲ್ಲಿ ಶ್ರದ್ಧೆ, ಶ್ರಮ ಮತ್ತು ಪ್ರತಿಭೆಗಳೇ ಮಾನದಂಡ.

ಅಜೆಂಡಾ ಫಿಕ್ಸ್ ಮಾಡುವುದೇ  ಕ್ಷಮತೆ ಅನ್ನುವುದಾದರೆ, ಆ ಕೆಲಸವನ್ನು ಸಿದ್ದರಾಮಯ್ಯ ತುಂಬ ಪರಿಣಾಮಕಾರಿಯಾಗಿ ಮಾಡಿದರು ಅಲ್ಲವೇ?
ಮೂಲತಃ ಜನತಾ ಪರಿವಾರದಿಂದ ಬಂದಿರುವ  ಸಿದ್ದರಾಮಯ್ಯನವರಲ್ಲಿ ಆ ರಾಜಕೀಯ ಚಾಣಾಕ್ಷತೆ ಇದೆ. ಆದರೆ, ದುರದೃಷ್ಟವಶಾತ್ ಅವರು ಉರುಳಿಸಿದ ದಾಳಗಳೆಲ್ಲ ಅವರಿಗೇ ಉಲ್ಟಾ ಹೊಡೆದವು. ಉದಾಹರಣೆಗೆ- ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಡೆಯಲು ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯ ಎತ್ತಿದರು. 2013 ರಲ್ಲಿ ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ತಳ್ಳಿಹಾಕಿದ ಪ್ರಸ್ತಾಪದ ಬಗ್ಗೆ ನಾಲ್ಕು ವರ್ಷಗಳ ಕಾಲ  ಸುಮ್ಮನಿದ್ದು ಈಗ ಚುನಾವಣೆ ಹೊತ್ತಿನಲ್ಲಿ ಮತ್ತೆ ಕಳಿಸುತ್ತಾರೆ ಅಂದರೆ ಏನರ್ಥ? ಆದ್ದರಿಂದ ಸಿದ್ದು ವಿರುದ್ಧ ಲಿಂಗಾಯತರು ಒಂದಾಗಿದ್ದಾರೆ. ಇನ್ನೊಂದು ದಾಳ ಟಿಪ್ಪು ಜಯಂತಿ.  ಸ್ಮರಿಸಿಕೊಳ್ಳಬೇಕು ಅಂದರೆ ಇವರಿಗೆ ಯಾವುದೇ ದಲಿತ -ಬುಡಕಟ್ಟು ಜನಾಂಗದ ಆದರ್ಶ ವ್ಯಕ್ತಿ ಸಿಗಲಿಲ್ಲವೇ? ಎಲ್ಲಾ  ಬಿಟ್ಟು ಟಿಪ್ಪು ಜಯಂತಿ ಮಾಡಿದರು. ಈಗ ಎಲೆಕ್ಷನ್ ಟೈಮ್ನಲ್ಲಿ ಆ ಟಿಪ್ಪುವಿನ ಗುಣಗಾನವನ್ನು ಪಾಕಿಸ್ತಾನ ಮಾಡುತ್ತಿದೆ. ಇದೆಲ್ಲ ಜನಸಾಮಾನ್ಯರಿಗೆ ಅರ್ಥ ಆಗುವುದಿಲ್ಲವೇ?

ವಿಜಯೇಂದ್ರಗೆ ಟಿಕೆಟ್ ಕೊಡದೇ  ಇರುವುದರಿಂದ ವರುಣಾ ಮತ್ತು ಅಕ್ಕಪಕ್ಕದ ಕ್ಷೇತ್ರಗಳಲ್ಲಿ ಬಿಜೆಪಿಯ ಮೇಲೆ ವ್ಯತಿರಿಕ್ತ  ಪರಿಣಾಮ ಆಗಿಲ್ಲ ಅನ್ನುತ್ತೀರಾ?
ಖಂಡಿತ ಆಗಿಲ್ಲ. ಕೆಲ ದಿನದ ಹಿಂದೆ ಅಮಿತ್ ಶಾ ಅಲ್ಲಿಗೆ  ಹೋದಾಗ ಅವರ ರ‌್ಯಾಲಿಗಳಿಗೆ ಸಿಕ್ಕ ಪ್ರತಿಕ್ರಿಯೆ ಹೇಗಿತ್ತು ಅನ್ನುವುದನ್ನೊಮ್ಮೆ ನೋಡಿ. ಸಿದ್ದರಾಮಯ್ಯನವರ ಪರಿಸ್ಥಿತಿಯಂತೂ ಈ ಸಲ ಯಾರಿಗೂ ಬೇಡ ಅನ್ನುವಂತಾಗುತ್ತದೆ.
ಮೊದಲು ಚಾಮುಂಡೇಶ್ವರಿಗೆ ಪ್ರಚಾರಕ್ಕೆ ಹೋದರು. ಅಲ್ಲಿ ತಮ್ಮ ವಿರುದ್ಧ ಇರುವ ಅಲೆ ನೋಡಿ ಎರಡನೇ ಕ್ಷೇತ್ರ ಹುಡುಕಿಕೊಂಡರು. ಕೇಳಿದರೆ, ಮೋದಿ ಕೂಡ ಎರಡೆರಡು ಕ್ಷೇತ್ರಗಳಿಂದ ಎಲೆಕ್ಷನ್‌ಗೆ ನಿಂತಿರಲಿಲ್ಲವಾ ಅನ್ನುತ್ತಾರೆ.
ಮೋದಿ ತುಂಬ ಮೊದಲೇ ಎರಡು ಕ್ಷೇತ್ರಗಳ ಸ್ಪರ್ಧೆಯನ್ನು ಘೋಷಿಸಿ ಕಣಕ್ಕಿಳಿದರು. ಸಿದ್ದರಾಮಯ್ಯ ಮಾಡಿದ್ದೇನು? ಚಾಮುಂಡೇಶ್ವರಿಯಿಂದ ತಿರಸ್ಕೃತರಾದ ನಂತರ  ಓಡೋಡಿ ಬಾದಾಮಿಗೆ ಹೋದರು. ನಿಮಗೂ  ಗೊತ್ತಲ್ಲ, ಕೊನೆಯ ಕ್ಷಣದಲ್ಲಿ ಕೊಪ್ಪಳದಿಂದ  ನಾಮಪತ್ರ ಸಲ್ಲಿಸುವ ಯೋಚನೆ ಇತ್ತು ಅವರಿಗೆ. ನಾವು ಅಲ್ಲಿಯೂ ಫೀಲ್ಡಿಂಗ್ ಸೆಟ್  ಮಾಡಿಟ್ಟುಕೊಂಡಿದ್ದೆವು. ಸಿಎಂ ಕೊಪ್ಪಳದಿಂದ  ಸ್ಪರ್ಧಿಸಿದ್ದರೆ ಅಲ್ಲಿಯೂ ನಮ್ಮ ಒಬ್ಬ ಪ್ರಬಲ  ಅಭ್ಯರ್ಥಿ ಕಣಕ್ಕಿಳಿಯುವವರಿದ್ದರು. ಈಗ ನೋಡ್ತಿರಿ, ಎರಡೆರಡು ಕ್ಷೇತ್ರಗಳಲ್ಲಿ ಸೋತ ಮೊದಲ ಸಿಎಂ ಎಂಬ ದಾಖಲೆ ನಿರ್ಮಿಸುವ ಸಾಧ್ಯತೆ ಇದೆ.

ಶ್ರೀರಾಮುಲುರನ್ನು ಕಣಕ್ಕಿಳಿಸಿದ್ದರ ಹಿಂದಿನ  ಲೆಕ್ಕಾಚಾರವೇನು?
ತುಂಬ ಸಿಂಪಲ್. ರಾಮುಲು ಹಿಂದುಳಿದ ವರ್ಗಗಳ ದೊಡ್ಡ  ನಾಯಕ. ಯುವ ಜನತೆ ಅವರನ್ನು ತುಂಬ ಮೆಚ್ಚಿಕೊಳ್ಳುತ್ತಾರೆ. ಒಬ್ಬ ಸಂಸದರಾಗಿ ರಾಮುಲು ಮಾಡಿರುವ ಕೆಲಸ ತುಂಬ ಇದೆ. ಅದೇ ಕಾರಣಕ್ಕಾಗಿ ಅವರನ್ನು ಮುಖ್ಯ
ಮಂತ್ರಿಗಳ ವಿರುದ್ಧ ಕಣಕ್ಕಿಳಿಸಿದ್ದು. ಶ್ರೀರಾಮುಲುರನ್ನು  ಕಣಕ್ಕಿಳಿಸಿದ್ದು ಇಡೀ ಹೈದರಾಬಾದ್ ಕರ್ನಾಟಕದಲ್ಲಿ ನಮಗೆ  ಲಾಭ ತಂದುಕೊಡುತ್ತದೆ. ಬಾದಾಮಿಯಲ್ಲೂ ಅವರು  ತುಂಬ ಸುಲಭವಾಗಿ ಸಿದ್ದರಾಮಯ್ಯ ವಿರುದ್ಧ ಗೆಲ್ಲುತ್ತಾರೆ.

ಜನಸಾಮಾನ್ಯರು ರಾಮುಲುರನ್ನು ಜನಾರ್ದನ ರೆಡ್ಡಿಯವರ ಜತೆಗೇ ಗುರುತಿಸುತ್ತಾರೆ ಅಂತ  ಅನ್ನಿಸುವುದಿಲ್ಲವಾ ನಿಮಗೆ?
ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಜನಾರ್ದನ ರೆಡ್ಡಿ ನಮ್ಮ  ಅಭ್ಯರ್ಥಿ ಅಲ್ಲ, ಅವರೀಗ ನಮ್ಮ ಪಕ್ಷದಲ್ಲೂ ಇಲ್ಲ.  ಅಭ್ಯರ್ಥಿಗಳಾಗಿರುವವರು ಸೋಮಶೇಖರ ರೆಡ್ಡಿ ಮತ್ತು  ಕರುಣಾಕರ ರೆಡ್ಡಿ. ಅವರ ಮೇಲೆ ಯಾವುದೇ ಪ್ರಕರಣಗಳು
ದಾಖಲಾಗಿಲ್ಲ. ಎಫ್‌ಐಆರ್, ಚಾರ್ಜ್‌ಶೀಟ್ ಏನೂ ಇಲ್ಲ. ಕೇವಲ ಜನಾರ್ದನ ರೆಡ್ಡಿಯವರ ಸಹೋದರರು ಎನ್ನುವ ಕಾರಣಕ್ಕೆ ಟಿಕೆಟ್ ನಿರಾಕರಿಸುವುದು ನ್ಯಾಯ ಅಲ್ಲ. ಅವರು  ನಮ್ಮ ಶಾಸಕರಾಗಿದ್ದವರು.

ಕರ್ನಾಟಕದ ಚುನಾವಣೆಗಳ ಮೇಲೆ ರಾಹುಲ್  ಗಾಂಧಿ ಪ್ರಭಾವ ಏನು?
ಏನೂ ಇಲ್ಲ. ಅವರು ಅಡಿಪಾಯವನ್ನೇ ಕಳೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಮಾತುಗಳಿಗೂ - ನರೇಂದ್ರ ಮೋದಿ ಮಾತುಗಳಿಗೂ ವ್ಯತ್ಯಾಸ ಗಮನಿಸಿ ನೋಡಿ. ಮೋದಿ  ಹೋದಲ್ಲೆಲ್ಲ ಸಂವಾದ ಮಾಡುತ್ತಾರೆ. ಅಲ್ಲಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಅಲ್ಲಿನ ಅಭಿವೃದ್ಧಿಯ  ಮಾತನಾಡುತ್ತಾರೆ. ರಾಹುಲ್ ಗಾಂಧಿಯವರಿಗೆ ಆ ದೂರದೃಷ್ಟಿ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನರೇಂದ್ರ ಮೋದಿಯನ್ನು ಯಾಕೆ ವಿರೋಧಿಸುತ್ತಾರೆ ಎಂಬ ಬಗ್ಗೆ
ದೇಶದ ಎದುರಿಗೆ ಅವರು ಸ್ಪಷ್ಟೀಕರಣ ಕೊಡಬೇಕಿದೆ. ಯಾಕೆ ಈ ವಿರೋಧ? ಕೇವಲ ಸುಳ್ಳು ಹೇಳುವುದು, ಜೋರುಜೋರಾಗಿ ಸುಳ್ಳು ಹೇಳುವುದಷ್ಟೇ ಅವರ ಕೆಲಸ.

ಅವರು ಪ್ರಶ್ನೆಗಳನ್ನು ಕೇಳುತ್ತಿದ್ದಾರಲ್ಲ. ನೋಟು  ರದ್ದತಿಯ ಲೆಕ್ಕ ಕೇಳುತ್ತಿದ್ದಾರೆ, ಉದ್ಯೋಗ  ಸೃಷ್ಟಿಯ ಲೆಕ್ಕ ಕೇಳುತ್ತಿದ್ದಾರೆ?
ಎಲ್ಲದಕ್ಕೂ ಲೆಕ್ಕ ಇದೆ. ನೋಟು ರದ್ದತಿಯಿಂದ ಈ ದೇಶಕ್ಕೆ  ದೊಡ್ಡ ಲಾಭ ಆಗಿದೆ. ನಾವು ನಾಲ್ಕು ವರ್ಷಗಳಲ್ಲಿ  ಸೃಷ್ಟಿಸಿದಷ್ಟು ಉದ್ಯೋಗವನ್ನು ಯುಪಿಎ ಸರ್ಕಾರ ಹತ್ತು  ವರ್ಷಗಳಲ್ಲಿ ಸೃಷ್ಟಿಸಿಲ್ಲ. ನಾನು ಕೇವಲ ನನ್ನ ಇಲಾಖೆಯ ಮಾತು ಹೇಳುವುದಾದರೆ, ಎಲ್ಲ ರಾಜ್ಯಗಳಲ್ಲಿ ನಡೆದಿರುವ  ಶಿಕ್ಷಕರ ಒಟ್ಟು ನೇಮಕಾತಿಯ ಸಂಖ್ಯೆ ಹತ್ತು ಲಕ್ಷ ಮೀರುತ್ತದೆ. 300 ಹೊಸ ಖಾಸಗಿ ವಿವಿಗಳು ಆರಂಭವಾಗಿವೆ. ಹಾಗೆ  ಶುರುವಾದ ಹೊಸ ಶಿಕ್ಷಣ ಸಂಸ್ಥೆಗಳು ಎರಡು ಲಕ್ಷಕ್ಕಿಂತ
ಹೆಚ್ಚು ಜನರಿಗೆ ಉದ್ಯೋಗ ಕೊಟ್ಟಿವೆ. ಹೀಗೆ ಎಲ್ಲ ಇಲಾಖೆಗಳ ಲೆಕ್ಕ ತೆಗೆದುಕೊಂಡರೆ ಉದ್ಯೋಗ ಸೃಷ್ಟಿ ತುಂಬ ಆಗಿದೆ. 

ನಿಮ್ಮದೂ ಜೆಡಿಎಸ್‌ದು ವ್ಯವಹಾರ ಏನು?
ಏನೂ ಇಲ್ಲ. ಓವೈಸಿ, ಮಾಯಾವತಿಯಂಥವರ ಜತೆ  ಹೊಂದಾಣಿಕೆ ಮಾಡಿಕೊಂಡು ಎಸ್‌ಡಿಪಿಐನವರ ಜತೆ ಒಳ ಒಪ್ಪಂದಕ್ಕಿಳಿಯುವವರ ಜತೆ ನಮಗೇನು ಕೆಲಸ? ಅದನ್ನು ಹೊರತುಪಡಿಸಿ ಒಂದಷ್ಟು ಸಂಸ್ಕಾರಗಳಿರುತ್ತವೆ. ರಾಜಕಾರಣದ ರೀತಿ ರಿವಾಜುಗಳಿರುತ್ತವೆ. ಜೆಡಿಎಸ್‌ನ ರಾಷ್ಟ್ರಾಧ್ಯಕ್ಷರು  ಮಾಜಿ ಪ್ರಧಾನಿಗಳೂ ಹೌದು. ಅಂಥವರು ಮನೆಗೆ ಬಂದರೆ  ನಮ್ಮ ಪ್ರಧಾನಿಗಳು ಆದರ ತೋರಿಸುತ್ತಾರೆ. ಅದು  ಭಾರತೀಯ ಸಭ್ಯತೆ. ಅದನ್ನು ಹೊರತುಪಡಿಸಿ ಬೇರೆ  ಯಾವುದೇ ರೀತಿಯ ರಾಜಕೀಯ ಹೊಂದಾಣಿಕೆ ಇಲ್ಲ.

ನಿಮ್ಮ ಆತ್ಮವಿಶ್ವಾಸಕ್ಕೂ - ಸಮೀಕ್ಷೆಗಳ  ಅಂಕಿಸಂಖ್ಯೆಗಳೂ ಅಜಗಜಾಂತರ ವ್ಯತ್ಯಾಸ  ಇದೆಯಲ್ಲ?

ಸಮೀಕ್ಷೆ ಅನ್ನುವುದು ಇನ್ನೂ ಬೆಳೆಯುತ್ತಿರುವ ವಿಜ್ಞಾನ.  ಅವುಗಳನ್ನು ನಾನು ಪೂರ್ತಿಯಾಗಿ ಒಪ್ಪಿಕೊಳ್ಳುವುದೂ ಇಲ್ಲ- ತಳ್ಳಿ ಹಾಕುವುದೂ ಇಲ್ಲ. ವೈಜ್ಞಾನಿಕವಾಗಿ ನಡೆಸಿದಾಗ ಒಮ್ಮೊಮ್ಮೆ ಸಮೀಕ್ಷೆಗಳು ಸತ್ಯದ ಕಡೆ ಬೆರಳು ತೋರಿಸುತ್ತವೆ. ಇಂಥ ಸಮೀಕ್ಷೆಗಳನ್ನು ನಾವೂ ಮಾಡಿಸುತ್ತೇವೆ. ಅವುಗಳ  ಅಂಕಿಅಂಶಗಳನ್ನು ನಿಮಗೆ ಹೇಳುವುದಿಲ್ಲ, ಅಷ್ಟೇ. ಪ್ರತಿ  ಬೂತ್‌ನ ಮಾಹಿತಿಯನ್ನೂ ನಾವು ನಿರಂತರವಾಗಿ  ಪಡೆಯುತ್ತೇವೆ. ಇನ್ನು, ಉತ್ತರ ಪ್ರದೇಶದಲ್ಲೂ ಸಮೀಕ್ಷೆಗಳು  ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿದ್ದವು. ನಮಗೆ 180 ಸ್ಥಾನಗಳು ಸಿಗುತ್ತವೆ ಅಂದಿದ್ದವು. 325  ಕ್ಷೇತ್ರಗಳಲ್ಲಿ ನಾವು ಗೆದ್ದೆವು. 

ಸಂದರ್ಶನ: ಅಜಿತ್ ಹನಮಕ್ಕನವರ್ 

loader