ಹುಬ್ಬಳ್ಳಿ(ಮೇ.04): ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದು ಅವಕಾಶ ಸಿಕ್ಕರೆ ಖರ್ಗೆಯವರನ್ನು ಸಿಎಂ ಮಾಡಲಾಗುತ್ತದೆ ಎಂದು ಮಾಜಿ ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನೂ ದಲಿತ, ಸೋನಿಯಾ ಗಾಂಧಿ ನನ್ನನ್ನು ಮುಖ್ಯಮಂತ್ರಿ ಮಾಡಿದರು. ಖರ್ಗೆಯವರನ್ನು ಸಿಎಂ ಮಾಡಲು ಚರ್ಚಿಸುತ್ತೇವೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು ಡಾ. ಅಂಬೇಡ್ಕರ್ ಬರೆದ ಸಂವಿಧಾನ ಬದಲಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲ ಇದೇ ಅಜೆಂಡಾ ಇಟ್ಟುಕೊಂಡು ಕೆಲಸ ಮಾಡುತ್ತದೆ. 
ದೌರ್ಜನ್ಯ ಕಾನೂನು ಸಡಿಲಗೊಳಿಸುವುದರ ಹಿಂದೆ ಇದೇ ಅಜೆಂಡಾ ಕೆಲಸ ಮಾಡಿದೆ. ಬಿಜೆಪಿಯವರು ಒಂದುಕಡೆ ಸಂವಿಧಾನ ಗೌರವಿಸುವ ಮಾತನಾಡುತ್ತಾರೆ,ಇನ್ನೊಂದೆಡೆ ದಲಿತರನ್ನು ಹೀನಾಯವಾಗಿ ಕಾಣುತ್ತಾರೆ, ದೌರ್ಜನ್ಯವೆಸಗುತ್ತಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್‌ಸಿಎಸ್‌ಟಿ ಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ.ದಲಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಹೇಳಿದರು.