Asianet Suvarna News Asianet Suvarna News

ಬಾದಾಮಿಯಲ್ಲಿ ನನ್ನ ಗೆಲುವು ಖಚಿತ : ಸಿಎಂ ಸಿದ್ದರಾಮಯ್ಯ

ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ನನ್ನ ಗೆಲುವು ಖಚಿತವಾಗಿದ್ದು, ಬಹುಮತ ನಿಶ್ಚಿತ. ರಾಜ್ಯಾದ್ಯಂತ ಕಾಂಗ್ರೆಸ್ ಪರ ಉತ್ತಮ ಮತದಾನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

I Will Definitely Win In Badami Constituency` Says CM Siddaramaiah

ಬೆಂಗಳೂರು : ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ನನ್ನ ಗೆಲುವು ಖಚಿತವಾಗಿದ್ದು, ಬಹುಮತ ನಿಶ್ಚಿತ. ರಾಜ್ಯಾದ್ಯಂತ ಕಾಂಗ್ರೆಸ್ ಪರ ಉತ್ತಮ ಮತದಾನವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ತಾಲೂಕಿನ ಸಿದ್ದರಾಮನ ಹುಂಡಿಯಲ್ಲಿ ಶನಿವಾರ ಮತದಾನ ಮಾಡಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 10, 000 ಮತಗಳ ಅಂತರದಿಂದ ಗೆಲ್ಲುತ್ತೇನೆ. ವರುಣದಲ್ಲಿ ಯತೀಂದ್ರ 20,000 ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯವರು ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಅಲ್ಲದೇ, ಜೆಡಿಎಸ್‌ಗೆ ಬಹಿರಂಗವಾಗಿಯೇ ಮತ ಹಾಕಿಸುತ್ತಿದ್ದಾರೆ. ಜತೆಗೆ ಹಣದ ಹೊಳೆ ಹರಿಸಿ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಸೊಸೈಟಿ ಅಧ್ಯಕ್ಷನಾಗಿದ್ದವನು ಇಷ್ಟು ದುಡ್ಡು ಖರ್ಚು ಮಾಡುತ್ತಿರುವುದು ನೋಡಿದರೆ ಆಶ್ಚರ್ಯವಾಗುತ್ತಿದೆ. ಆದರೂ ನಾನು ಒಳ್ಳೆಯ ಅಂತರದಿಂದ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕ್ಷುಲ್ಲಕ ಕಾರಣಕ್ಕೆ ಮುಂದೂಡಿಕೆ: ಬೆಂಗಳೂರಿನ ಆರ್‌ಆರ್ ನಗರದಲ್ಲಿ ಕೇವಲ ಮತದಾರರ ಗುರುತಿನ ಚೀಟಿ ಸಿಕ್ಕಿರುವ ಕ್ಷುಲ್ಲಕ ಕಾರಣಕ್ಕೆ ಚುನಾವಣೆ ಮುಂದೂಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು, ಶಾಸಕರು ಮನೆ ಮೇಲೆ ಐಟಿ ದಾಳಿಯನ್ನು ನಾನು ವಿರೋಧಿಸುತ್ತಿಲ್ಲ. ಆದರೆ, ಚುನಾವಣಾ ಸಂದರ್ಭದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಐಟಿ ದಾಳಿ  ನಡೆಸುತ್ತಿದ್ದಾರೆ. ಇದನ್ನು ಮುಂದಿನ ದಿನಗಳಲ್ಲಿ ನಾವು ಪ್ರಶ್ನಿಸುವುದಾಗಿ ತಿಳಿಸಿದರು.

ಮುಂದಿನ ಪ್ರಧಾನಿ ಸಿದ್ದರಾಮಯ್ಯಗೆ ಜೈ!: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ವಂತ ಊರಾದ ವರುಣ ಕ್ಷೇತ್ರ ವ್ಯಾಪ್ತಿಯ ಸಿದ್ದರಾಮನಹುಂಡಿಯಲ್ಲಿ ಶನಿವಾರ ಮತ ಚಲಾಯಿಸಿದರು. ಮಧ್ಯಾಹ್ನ ಸುಮಾರು 1 ಗಂಟೆ ಸುಮಾರಿಗೆ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಜತೆ  ತಮ್ಮ ಹುಟ್ಟೂರಿಗೆ ಆಗಮಿಸಿ, ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. 

ಬಳಿಕ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಿದ್ದರಾಮನಹುಂಡಿ ಮತಗಟ್ಟೆ 2ರಲ್ಲಿ ಮಧ್ಯಾಹ್ನ 1.13 ಗಂಟೆಗೆ ಮತದಾನ ಮಾಡಿದರು. ಸಿದ್ದರಾಮಯ್ಯ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಮತ್ತು ಅಭಿಮಾನಿಗಳು ನೆರೆದಿದ್ದರಿಂದ ನೂಗುನುಗ್ಗಲು ಉಂಟಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಪರದಾಡಬೇಕಾಯಿತು. 

ಮತದಾನ ಮಾಡಿ ಹೊರಬಂದಾಗ ಸ್ಥಳದಲ್ಲಿ ನೆರೆದಿದ್ದ ನೂರಾರು ಅಭಿಮಾನಿಗಳು, ಸೋಲಿಲ್ಲದ ಸರದಾರ, ಮೈಸೂರು ಹುಲಿ, ಮುಂದಿನ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ ಕೂಗಿದರು.

Follow Us:
Download App:
  • android
  • ios