ದಲಿತ ಸಿಎಂ ಚರ್ಚೆ ಹಿಂದಿದೆ ಭಾರೀ ಮರ್ಮ

karnataka-assembly-election-2018 | Monday, May 14th, 2018
Sujatha NR
Highlights

ರಾಜ್ಯದಲ್ಲಿ ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಗೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವ ಸಂದರ್ಭ ಬಂದರೆ ಮುಖ್ಯಮಂತ್ರಿ ಹುದ್ದೆ ಪಡೆಯುವ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದಲಿತ ಸಿಎಂ ಎಂಬ ತಡೆಗೋಡೆ ನಿರ್ಮಿಸುವುದು ಈ ಹೇಳಿಕೆ ಹಿಂದಿನ ಉದ್ದೇಶ ಎಂದು ಮೂಲಗಳು ಹೇಳುತ್ತವೆ.

ಬೆಂಗಳೂರು(ಮೇ 14) : ರಾಜ್ಯದಲ್ಲಿ ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಗೊಂಡು ಜೆಡಿಎಸ್ ಹಾಗೂ ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚಿಸುವ ಸಂದರ್ಭ ಬಂದರೆ ಮುಖ್ಯಮಂತ್ರಿ ಹುದ್ದೆ ಪಡೆಯುವ ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದಲಿತ ಸಿಎಂ ಎಂಬ ತಡೆಗೋಡೆ ನಿರ್ಮಿಸುವುದು ಈ ಹೇಳಿಕೆ ಹಿಂದಿನ ಉದ್ದೇಶ ಎಂದು ಮೂಲಗಳು ಹೇಳುತ್ತವೆ.

ಜತೆಗೆ, ದಲಿತ ಸಿಎಂ ಬೇಡಿಕೆಗೆ ಬಲ ಬಂದರೆ ಕಾಂಗ್ರೆಸ್ ನಿಂದ ತಮ್ಮ ಆಪ್ತ ಡಾ.ಎಚ್.ಸಿ. ಮಹದೇವಪ್ಪ ಅವರ ಹೆಸರನ್ನು ತೇಲಿಬಿಡುವ ಉದ್ದೇಶವೂ ಈ ಹೇಳಿಕೆಯ ಹಿಂದೆ ಇದೆ ಎನ್ನಲಾಗುತ್ತಿದೆ. ಬಹಿರಂಗವಾಗಿ ಕಾಂಗ್ರೆಸ್ ನಾಯಕರು ತಮ್ಮ ಪಕ್ಷ ಸ್ಪಷ್ಟ ಬಹುಮತ ಪಡೆಯುತ್ತದೆ ಎಂದು ಹೇಳುತ್ತಿದ್ದರೂ, ಕಾಂಗ್ರೆಸ್ 100ರ ಆಸುಪಾಸು ಬಂದು ನಿಲ್ಲುವ ಸಾಧ್ಯತೆಯನ್ನು ಹಿರಿಯ ಕಾಂಗ್ರೆಸ್ಸಿಗರು ತಳ್ಳಿಹಾಕುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಜತೆ ಹೊಂದಾಣಿಕೆ ಅನಿವಾರ್ಯವಾಗುತ್ತದೆ. ಹೇಗೆ ಕಾಂಗ್ರೆಸ್‌ಗೆ ಜೆಡಿಎಸ್  ಜತೆ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವ ಸಾಧ್ಯತೆಯಿರುತ್ತದೆಯೋ ಅಂತಹುದೇ ಅವಕಾಶ ಬಿಜೆಪಿಗೂ ಇರುತ್ತದೆ. 

ಬಿಜೆಪಿ ಈಗಾಗಲೇ ಈ ದಿಸೆಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಆದಿಚುಂಚನಗಿರಿ ಸ್ವಾಮೀಜಿ ಅವರ ಮಧ್ಯಸ್ಥಿಕೆಯಲ್ಲಿ ಕುಮಾರಸ್ವಾಮಿ ಅವರೊಂದಿಗೆ ನೇರ ಮಾತುಕತೆಯನ್ನು ಆರಂಭಿಸಿದೆ. ಈ ಸೂಚನೆ ದೊರೆತ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಗೆ ಕಾಂಗ್ರೆಸ್ ಕೂಡ ಸಿದ್ಧವಿದೆ ಎಂಬ ಸಂದೇಶವನ್ನು ರವಾನಿಸಿದೆ. ದೆಹಲಿ ಮಟ್ಟದ ನಾಯಕರು ಇಂತಹದೊಂದು ಸಂದೇಶವನ್ನು ಜೆಡಿಎಸ್‌ಗೆ ರವಾನಿಸಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ದಲಿತ ಸಿಎಂ ವಿಚಾರವನ್ನು ತೇಲಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಆಗ ಜೆಡಿಎಸ್ ತನ್ನ ಲಾಭವನ್ನೇ ನೋಡುತ್ತದೆ. ಅಂದರೆ, ಮಾರಸ್ವಾಮಿ ಅವರನ್ನು ಯಾವ ಪಕ್ಷ ಸಿಎಂ ಮಾಡಲು ಒಪ್ಪುತ್ತದೆಯೋ ಅತ್ತ ಬೆಂಬಲ ನೀಡುವ ಸಾಧ್ಯತೆಯಿದೆ ಅಥವಾ ಈ ರೀತಿಯ ಸನ್ನಿವೇಶ ಸೃಷ್ಟಿಸಿ ಮೈತ್ರಿಗೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪೈಪೋಟಿ ಹುಟ್ಟುಹಾಕುವ ಸಾಧ್ಯತೆಯಿದೆ. 

ಹೀಗಾದ ಪಕ್ಷದಲ್ಲಿ ಕಾಂಗ್ರೆಸ್ ಸಹ ಕುಮಾರಸ್ವಾಮಿ ಅವರಿಗೆ ಸಿಎಂ ಪದವಿ ಬಿಟ್ಟುಕೊಡುವ ಒತ್ತಡಕ್ಕೆ ಸಿಲುಕಬಹುದು. ಇಂತಹ ಸಂದರ್ಭದಲ್ಲಿ ದಲಿತ ಸಿಎಂ ಹುದ್ದೆ ಎಂಬ ವಿಚಾರವನ್ನು ಮುಂದಿಟ್ಟರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳಿಗೂ ಅದನ್ನು ನಿಭಾಯಿಸಲು ಕಷ್ಟವಾಗುತ್ತದೆ ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರ ಎನ್ನಲಾಗಿದೆ. 

ಏಕೆಂದರೆ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗುವ ಸಂದರ್ಭವಿಲ್ಲದ ಪಕ್ಷದಲ್ಲಿ ಸಹಜವಾಗಿಯೇ ದಲಿತರಿಗೆ ಸಿಎಂ ಹುದ್ದೆ ನೀಡಬೇಕು ಎಂಬ ಬೇಡಿಕೆ ಈಗಾಗಲೇ ಇದೆ. ಜೆಡಿಎಸ್ ತಾನು ಸಂಪೂರ್ಣ ಬಹುಮತ ಪಡೆದರೆ ಡಿಸಿಎಂ ಹುದ್ದೆಯನ್ನು ದಲಿತರಿಗೆ ನೀಡುವುದಾಗಿ ಘೋಷಣೆ ಮಾಡಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ದಲಿತ ಸಿಎಂ ಹುದ್ದೆ ನೀಡುವಂತೆ ಜೆಡಿಎಸ್ ಮೇಲೆ ಕಾಂಗ್ರೆಸ್ ನಾಯಕತ್ವದಿಂದ ಒತ್ತಡ ತರುವುದು ಸಿದ್ದರಾಮಯ್ಯ ಅವರ ಬಣದ ತಂತ್ರ ಎನ್ನಲಾಗುತ್ತಿದೆ.

ಈ ತಂತ್ರಕ್ಕೆ ಮೂಲ ಕಾರಣ ಡಾ.ಎಚ್.ಸಿ. ಮಹದೇವಪ್ಪ. ಒಂದು ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ದಲಿತ ಸಿಎಂ ಹುದ್ದೆಗೆ ಒಮ್ಮತ ಮೂಡಿದರೆ ಆಗ ಕಾಂಗ್ರೆಸ್‌ನಿಂದ ಆ ಹುದ್ದೆಗೆ ಕೇಳಿಬರುವ ಮೊದಲ ಹೆಸರು ಮಲ್ಲಿಕಾರ್ಜುನ ಖರ್ಗೆ. ಆದರೆ, ಹಿರಿಯ ನಾಯಕರಾದ ಖರ್ಗೆ ಅವರ ಗಟ್ಟಿತನಕ್ಕಾಗಿಯೇ ಅವರನ್ನು ಜೆಡಿಎಸ್ ಒಪ್ಪಲು ಸಾಧ್ಯವಿಲ್ಲ. 

ಪರಮೇಶ್ವರ್ ಹೆಸರು ಪರಿಗಣಿತವಾಗಬಹುದು. ಆದರೆ, ಜೆಡಿಎಸ್ ವರಿಷ್ಠ ದೇವೇಗೌಡ ಅವರೊಂದಿಗೆ ಉತ್ತಮ ಸಂಬಂಧ  ಹೊಂದಿರುವವರು ಮಹದೇವಪ್ಪ. ಇಂತಹದೊಂದು ಸಂದರ್ಭ ನಿರ್ಮಾಣ ವಾದರೆ ಮಹದೇವಪ್ಪ ಅವರು ದೇವೇಗೌಡರ ಆಯ್ಕೆ ಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳುತ್ತವೆ. ಇಂತಹ ದೂರದ ಒಂದು ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡೇ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರಿಗೆ ಸಿಎಂ ಹುದ್ದೆ ನೀಡುವುದಾದರೆ ನನ್ನ ಅಭ್ಯಂತರವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎಂದುವ್ಯಾಖ್ಯಾನಿಸಲಾಗುತ್ತಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Sujatha NR