ಬೆಂಗಳೂರು : ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಜನರಿಗೆ ಸಾವಿರಾರು ಕೋಟಿ ರು. ವಂಚಿಸಿ ತಲೆ ಮರೆಸಿಕೊಂಡಿರುವ ಮಲೇಷ್ಯಾ ಉದ್ಯಮಿ ವಿಜಯ್ ಈಶ್ವರನ್ ವಂಚನೆ ಜಾಲಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಹಾಯ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ.ಸಂಬಿತ್ ಪಾತ್ರ ಆರೋಪ ಮಾಡಿದ್ದಾರೆ. 

ಆ ಉದ್ಯಮಿಯಿಂದ ಸಿದ್ದರಾಮಯ್ಯ ಅವರು ಬೆಲೆ ಬಾಳುವ ಉಡುಗೊರೆ ಪಡೆದಿದ್ದಾರೆ ಎನ್ನಲಾಗಿದ್ದು, ಅದು ಹ್ಯೂಬ್ಲೋ ವಾಚ್ ಇರಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿಜಯ್ ಈಶ್ವರನ್ ಮತ್ತು ಸಿದ್ದರಾಮಯ್ಯ ಭೇಟಿಯಾಗಿರುವ ಫೋಟೋಗಳನ್ನು ಬಿಡುಗಡೆ ಮಾಡಿದ ಅವರು, ಹಗರಣಗಳ ಸರಮಾಲೆಯನ್ನೇ ಕೊರಳಿಗೇರಿಸಿಕೊಂಡಿರುವ ಕಾಂಗ್ರೆಸ್ ಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು. 

2013ರಲ್ಲಿ ಚೀನಾದಲ್ಲಿ ನಡೆದ ವಿಶ್ವ ಆರ್ಥಿಕ ಒಕ್ಕೂಟ, ಐಎಂಎಫ್ ಶೃಂಗಸಭೆ ವೇಳೆ ವಿಜಯ್ ಈಶ್ವರನ್ ಅವರನ್ನು ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಭೇಟಿಯ ವೇಳೆ ಪೆಟ್ಟಿಗೆಯೊಂದನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಭಾರತದಲ್ಲಿ ಕ್ಯು-ನೆಟ್ ಹೆಸರಲ್ಲಿ ವ್ಯವಹಾರ ನಡೆಸುತ್ತಿರುವ ಕ್ಯುಐ ಕಂಪನಿ ತಮಿಳುನಾಡು ಸೇರಿದಂತೆ ಅನೇಕ ರಾಜ್ಯಗಳಲ್ಲಿ ಚಿಟ್‌ಫಂಡ್ ಹಾಗೂ ಹಲವು ವ್ಯವಹಾರಗಳ ಮೂಲಕ ಲಕ್ಷಾಂತರ ಜನರಿಂದ 20 ಸಾವಿರ ಕೋಟಿ ರು.ಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಿ ವಂಚಿಸಿದೆ ಎಂದು ಟೀಕಿಸಿದರು.  

ಜಾಗತಿಕ ಮಾರುಕಟ್ಟೆಯಲ್ಲಿ ಈ ಸಂಸ್ಥೆ ಉಬರ್ ಲಕ್ಷುರಿ ವಾಚ್‌ಗಳನ್ನು ಮಾರಾಟ ಮಾಡುತ್ತಿದೆ. ಸಂಸ್ಥೆಯ ಮುಖ್ಯಸ್ಥ ವಿಜಯ್ ಈಶ್ವರನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ವಿಜಯ್ ಈಶ್ವರನ್ ಸಂಸ್ಥೆಯ ಯೋಜನೆಗಳು ದೇಶದ ಭದ್ರತೆಗೆ ಬೆದರಿಕೆಯಾಗಿವೆ ಎಂದು ಗಂಭೀರ ವಂಚನೆಗಳ ತನಿಖಾ ಸಂಸ್ಥೆ ಹೇಳಿದೆ. 2009ರಲ್ಲಿ ವಿಜಯ್ ಈಶ್ವರನ್ ಅವರನ್ನು ತಲೆತಪ್ಪಿಸಿಕೊಂಡಿರುವ ಆರೋಪಿ ಎಂದು ಘೋಷಿಸಲಾಗಿತ್ತು. ಆತನಿಂದ ವಂಚನೆಗೊಳಗಾದ ಜನರು ಪೊಲೀಸ್ ಠಾಣೆ  ಮೆಟ್ಟಿಲೇರಿದರೂ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. 

ಇದರ ವಿರುದ್ಧ ಸಂತ್ರಸ್ತರು ಬೆಂಗಳೂರಿನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ನಂತರ ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಸಂಬಿತ್ ತಿಳಿಸಿದರು. ರಾಹುಲ್ ಗಾಂಧಿ ಯಡಿಯೂರಪ್ಪ ವಿರುದ್ಧ  ಭ್ರಷ್ಟಾಚಾರದ ಆರೋಪ ಸಾಬೀತಾದ ಯಾವುದೇ ಪ್ರಕರಣಗಳು ಇಲ್ಲ. ಯಡಿಯೂರಪ್ಪ ಕರ್ನಾಟಕದ ಹೆಮ್ಮೆಯಾಗಿದ್ದಾರೆ ಎಂದರು.