Asianet Suvarna News Asianet Suvarna News

ಕಾಂಗ್ರೆಸ್ ಮಾಸ್ಟರ್ ಮೈಂಡ್ ಡಿ.ಕೆ ಶಿವಕುಮಾರ್ ಪ್ಲಾನ್ ಹೇಗಿತ್ತು..?

 ಬಹುಮತ ಸಾಬೀತಿಗೆ ಬೇಕಿದ್ದ ಶಾಸಕರನ್ನು ಹೊಂದಿಸಿ ಕೊಳ್ಳಲು ಕಾಂಗ್ರೆಸ್‌ನ ಬುಟ್ಟಿಗೆ ಕೈಹಾಕಿದ್ದ ಬಿಜೆಪಿ ನಾಯಕರ ಎಲ್ಲಾ ಪ್ರಯತ್ನಗಳು ವಿಫಲಗೊಳ್ಳುವಂತೆ ಹದ್ದಿನ ಕಣ್ಣಿನಿಂದ ಶಾಸಕರನ್ನು ಕಾಯ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕ್ಲಿಷ್ಟ ಹಾಗೂ ಸಮಸ್ಯಾತ್ಮಕ ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸುವ ಕಾಂಗ್ರೆಸ್ ಪಾಲಿನ ಆಪ್ತರಕ್ಷಕ ತಾವು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. 
 

How DK Shivakumar planned 'lock and load' to keep BJP away

ಬೆಂಗಳೂರು (ಮೇ 20 ) : ಬಹುಮತ ಸಾಬೀತಿಗೆ ಬೇಕಿದ್ದ ಶಾಸಕರನ್ನು ಹೊಂದಿಸಿ ಕೊಳ್ಳಲು ಕಾಂಗ್ರೆಸ್‌ನ ಬುಟ್ಟಿಗೆ ಕೈಹಾಕಿದ್ದ ಬಿಜೆಪಿ ನಾಯಕರ ಎಲ್ಲಾ ಪ್ರಯತ್ನಗಳು ವಿಫಲಗೊಳ್ಳುವಂತೆ ಹದ್ದಿನ ಕಣ್ಣಿನಿಂದ ಶಾಸಕರನ್ನು ಕಾಯ್ದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಕ್ಲಿಷ್ಟ ಹಾಗೂ ಸಮಸ್ಯಾತ್ಮಕ ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸುವ ಕಾಂಗ್ರೆಸ್ ಪಾಲಿನ ಆಪ್ತರಕ್ಷಕ ತಾವು ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. 

ಅದು ಮಹಾರಾಷ್ಟ್ರ, ಗುಜರಾತ್ ಮುಂತಾದ ರಾಜ್ಯಗಳ ಶಾಸಕರು ಕರ್ನಾಟಕಕ್ಕೆ ಬಂದಾಗ ಅವರಿಗೆ ಆತಿಥ್ಯ ನೀಡುವುದಿರಲಿ ಅಥವಾ ಉಪ ಚುನಾವಣೆಗಳ ಹೊಣೆ ಹೊರುವುದಾಗಿರಲಿ ಶಿವಕುಮಾರ್ ಅವರು ತಮ್ಮ ಸಹೋದರ ಡಿ.ಕೆ. ಸುರೇಶ್ ಹಾಗೂ ತಂಡದ ಜತೆ ಸೇರಿ ಅವೆಲ್ಲವನ್ನು ಬಹುತೇಕ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕಾಂಗ್ರೆಸ್ ಸರಳ ಬಹುಮತ ಪಡೆಯುವುದು ಕಷ್ಟ ಎಂಬ ಸಾಧ್ಯತೆ ಕಂಡ ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ತ್ವರಿತ ಕಾರ್ಯಾಚರಣೆ ನಡೆಸಿ ಜೆಡಿಎ ಸ್‌ನೊಂದಿಗೆ ಹೊಂದಾಣಿಕೆ ಸ್ಥಾಪಿಸಿದರು. ಇದೇ ವೇಳೆ ರಾಜ್ಯ ನಾಯಕರ ಸೂಚನೆ ಮೇರೆಗೆ ಡಿ.ಕೆ.ಶಿವಕುಮಾರ್ ಖುದ್ದಾಗಿ ತೆರಳಿ ಮುಳಬಾಗಿಲು ಶಾಸಕ ನಾಗೇಶ್ ಅವರನ್ನು ಕೈವಶ ಮಾಡಿಕೊಂಡರು. ಆದರೆ, ರಾಜ್ಯಪಾಲರು ಯಡಿಯೂರಪ್ಪ ಅವರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡುತ್ತಿದ್ದಂತೆಯೇ ಕಾಂಗ್ರೆಸ್ ಹೈಕಮಾಂಡ್ ಜಾಗೃತವಾಯಿತು.

104  ಸಂಖ್ಯೆ ಹೊಂದಿರುವ ಬಿಜೆಪಿ ಅಧಿಕಾರ ರಚಿಸಬೇಕು ಎಂದರೆ ಜೆಡಿಎಸ್‌ಗಿಂತ ಕಾಂಗ್ರೆಸ್ ಬುಟ್ಟಿಗೆ ಕೈಹಾಕುವ ಸಾಧ್ಯತೆ ಹೆಚ್ಚು ಎಂಬ ಅರಿವಿನ ಹಿನ್ನೆಲೆಯಲ್ಲಿ ಹೈಕಮಾಂಡ್ ಈ ಸೂಚನೆ ನೀಡಿದ್ದು, ಅದರಂತೆ ರಾಜ್ಯ ನಾಯಕರು ಶಾಸಕರನ್ನು ಸುಭದ್ರಗೊಳಿಸುವ ಹೊಣೆಗಾರಿಕೆಯನ್ನು ಡಿ.ಕೆ.ಶಿವಕುಮಾರ್ ಸಹೋದರರ ಹೆಗಲಿಗೆ ಹಾಕಿದರು. ಅದರಂತೆ ಶಿವಕುಮಾರ್ ಸಹೋದರರು ಎಲ್ಲಾ ಶಾಸಕರನ್ನು ಈಗಲ್‌ಟನ್ ರೆಸಾರ್ಟ್ ಗೆ ಒಯ್ದರು. 

ಸಿಎಂ ಆಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡ ಕೂಡಲೇ ರೆಸಾರ್ಟ್‌ಗೆ ಇದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಯಿತು. ಕೂಡಲೇ ಕನಕಪುರದತಮ್ಮ ಕಾರ್ಯಕರ್ತರನ್ನು ಕರೆಸಿ ರೆಸಾರ್ಟ್ ಸುತ್ತ ಭದ್ರ ಕಾವಲು ಹಾಕಿಸಿದರು. ರಾಜ್ಯದಲ್ಲಿದ್ದರೆ ಶಾಸಕರನ್ನು ಉಳಿಸಿಕೊಳ್ಳುವುದು ಕಷ್ಟ ಎಂಬ ಅರಿವು ಬರುತ್ತಿದ್ದಂತೆಯೇ ಶಾಸಕರನ್ನು ಹೊರರಾಜ್ಯಕ್ಕೆ ಸಾಗಿಸಲು ಕಾಂಗ್ರೆಸ್ ತೀರ್ಮಾನಿಸಿತು. 

ಅದನ್ನು ಜಾರಿಗೆ ತಂದಿದ್ದು ಕೂಡ ಶಿವಕುಮಾರ್ ಸಹೋದರರು. ಮತ್ತೆ ಶಾಸಕರನ್ನು ನಗರಕ್ಕೆ ಕರೆತಂದು ಅವರು ಮತ ಚಲಾಯಿಸುವವರೆಗೂ ಅವರ ಮೇಲೆ ಕಣ್ಗಾವಲಿಟ್ಟಿದ್ದು, ಯಾರೂ ಬಿಜೆಪಿಯ ಸಂಪರ್ಕಕ್ಕೆ ಬರದಂತೆ ತಡೆದಿದ್ದು ಹಾಗೂ ಬಿಜೆಪಿಯ ವಶದಲ್ಲಿದ್ದ ಕಾಂಗ್ರೆಸ್ ಶಾಸಕ ಆನಂದ್‌ಸಿಂಗ್ ಅವರು ಪಕ್ಷದ ತೆಕ್ಕೆಗೆ  ಹಿಂತಿರುಗಿದಾಗ ಅವರನ್ನು ಕರೆತಂದಿದ್ದು ಹಾಗೂ ವಿಪ್ ಜಾರಿಗೊಳಿಸಿದ್ದು ಕೂಡ ಶಿವಕುಮಾರ್.

Follow Us:
Download App:
  • android
  • ios