ಕಾಂಗ್ರೆಸ್ ತಂತ್ರಗಾರಿಕೆ ಯಶಸ್ವಿಯಾಗಿದ್ದು ಹೇಗೆ..?

How Congress Plan Success In State Politics
Highlights

ಬಲು ಅಪರೂಪಕ್ಕೆ ಕಾಂಗ್ರೆಸ್ ನಾಯಕ ಪಡೆ ಒಗ್ಗೂಡಿ ಪಕ್ಕಾ ತಂತ್ರಗಾರಿಕೆ ರೂಪಿಸಿ ಅದನ್ನು ಶೇ. 100ರಷ್ಟು ನಿಖರವಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಶಾಸಕರನ್ನು ಬಿಜೆಪಿಯ ಆಪರೇಷನ್ ಕಮಲದಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಬೆಂಗಳೂರು (ಮೇ 20) : ಬಲು ಅಪರೂಪಕ್ಕೆ ಕಾಂಗ್ರೆಸ್ ನಾಯಕ ಪಡೆ ಒಗ್ಗೂಡಿ ಪಕ್ಕಾ ತಂತ್ರಗಾರಿಕೆ ರೂಪಿಸಿ ಅದನ್ನು ಶೇ. 100ರಷ್ಟು ನಿಖರವಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಶಾಸಕರನ್ನು ಬಿಜೆಪಿಯ ಆಪರೇಷನ್ ಕಮಲದಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಸ್ವಲ್ಪ ಯಡವಟ್ಟಾಗಿದ್ದರೂ ಯಡಿಯೂರಪ್ಪ ಅವರ ವಿಶ್ವಾಸಮತ ಪ್ರಸ್ತಾಪ ಪ್ರಕರಣವೂ ಬೇರೆಯೇ ತಿರುವು ಪಡೆಯುವ ಎಲ್ಲಾ ಸಾಧ್ಯತೆಯಿತ್ತು.

ಆದರೆ, ಕಾಂಗ್ರೆಸ್ ನಾಯಕರು ಅತ್ಯಂತ ಮುಂಜಾಗ್ರತೆ ವಹಿಸಿದ್ದು ಮತ್ತು ಪ್ರತಿದಾಳಗಳನ್ನು ನಿಖರವಾಗಿ ಉರುಳಿಸಿದ್ದರಿಂದ ಬಹುಮತಕ್ಕೆ ಶಾಸಕರನ್ನು ಹೊಂದಿಸಲಾಗದೇ ಬಿಜೆಪಿ ನಾಯಕರು ಕೈಚೆಲ್ಲುವಂತೆ ಮಾಡಿದರು. ಕಾಂಗ್ರೆಸ್‌ಗೆ ಸರಳ ಬಹುಮತ ಸಾಧ್ಯವಿಲ್ಲ ಎಂಬ ಸಂದೇಶ ದೊರೆತ ದಿನದಿಂದ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಾಗದೆ ರಾಜೀನಾಮೆ ನೀಡುವ ಕ್ಷಣದವರೆಗೆ ಕಾಂಗ್ರೆಸ್ ಒಂದು ತಂಡವಾಗಿ ಒಗ್ಗೂಡಿ ಕೆಲಸ ಮಾಡಿತು. 

ಶುಕ್ರವಾರವಂತೂ ಈ ಕಾರ್ಯತತ್ಪರತೆ ಪರಾಕಾಷ್ಠೆ ಮುಟ್ಟಿತ್ತು. ಒಂದು ಕಡೆ ಶಾಸಕರು ಬಿಜೆಪಿಯ ವಶವಾಗದಂತೆ ಎಚ್ಚರವಹಿಸುವುದು ಹಾಗೂ ಮತ್ತೊಂದು ಕಡೆ ಬಿಜೆಪಿಯು ನಡೆಸಿದ ಆಪರೇಷನ್ ಕಮಲ ಪ್ರಯತ್ನದ ಆಡಿಯೋಗಳನ್ನು ಸಮರ್ಪಕ ಮಧ್ಯಂತರದಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಮೇಲೆ ಒತ್ತಡ ನಿರ್ಮಾಣವಾಗುವಂತೆ ನೋಡಿ ಕೊಳ್ಳಲಾಯಿತು.

ಹಿರಿಯ ನಾಯಕರಾದ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ತಂತ್ರಗಾರಿಕೆ ರೂಪಿಸಿದರು. ಅದನ್ನು  ಕಾರ್ಯಗತ ಗೊಳಿಸಲು ಡಿ.ಕೆ.ಶಿವಕುಮಾರ್, ವಿ.ಎಸ್. ಉಗ್ರಪ್ಪ ಹಾಗೂ ತಂಡ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿತು. ಅದರಲ್ಲೂ ನಿರ್ಣಾಯಕ ದಿನವಾದ ಶುಕ್ರವಾರ ಹಿರಿಯ ನಾಯಕರು ಮಾತ್ರವಲ್ಲ, ಪಕ್ಷದ ಕಿರಿಯ ನಾಯಕರು, ಮೊದಲ ಬಾರಿ ಶಾಸಕರಾದವರು, ಅಷ್ಟೇ ಏಕೆ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರವರೆಗೂ ಕಾಂಗ್ರೆಸ್‌ನ ಪ್ರತಿಯೊಬ್ಬರೂ ತಮಗೆ ವಹಿಸಿದ ಕೆಲಸವನ್ನು ಅತ್ಯಂತ ನಿಖರವಾಗಿ ನಿರ್ವಹಿಸಿದ್ದು ಕಂಡುಬಂತು.

ಹೈದರಾಬಾದ್‌ನಿಂದ ವಿಧಾನಸಭೆಗೆ ಶಾಸಕರನ್ನು ಕರೆತಂದ ನಂತರ ಅವರು ಬಿಜೆಪಿಯ ಶಾಸಕರು ಹಾಗೂ ನಾಯಕರ ನೇರ ಸಂಪರ್ಕಕ್ಕೆ ಬರುವ ಸಾಧ್ಯತೆ ದಟ್ಟವಾಗಿತ್ತು. ಹೈದರಾಬಾದ್ ಹಾಗೂ ರೆಸಾರ್ಟ್‌ಗಳಲ್ಲಿ ಶಾಸಕರ ಮೇಲೆ ಕಣ್ಗಾವಲಿಡಲು ಕಾರ್ಯಕರ್ತರನ್ನು  ಬಳಸಬಹುದಾಗಿತ್ತು.

ಆದರೆ, ವಿಧಾನಸಭೆ ಹಾಗೂ ಮೊಗಸಾಲೆಗೆ ಕಾರ್ಯಕರ್ತರು ಬರಲು ಅವಕಾಶವಿರಲಿಲ್ಲ. ಹೀಗಾಗಿ ಕಾಂಗ್ರೆಸ್ ನಾಯಕರು ಸಂಸದರು  ಹಾಗೂ ವಿಧಾನಪರಿಷತ್ ಸದಸ್ಯರನ್ನು ಈ ಕಾರ್ಯಕ್ಕೆ ಬಳಸಿದರು. ಎಲ್ಲಾ ಸಂಸದರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ನಿರ್ದಿಷ್ಟವಾಗಿ ಇಂತಿಂತಹ ಶಾಸಕರ ಮೇಲೆ ಕಣ್ಗಾವಲಿಡಬೇಕು ಎಂದು ನಿರ್ದೇಶನ ನೀಡಲಾಗಿತ್ತು.

ಈ ನಾಯಕರು ಶಾಸಕರ ಮೇಲೆ ಕಣ್ಣಿಟ್ಟು ಅತ್ಯಂತ ಕ್ರಿಯಾಶೀಲವಾಗಿ ಓಡಾಡಿದರು. ಬಿಜೆಪಿ ನಾಯಕರೊಂದಿಗೆ ಅವರು  ಮಾತ ನಾಡದಂತೆ, ಯಾರ ಆಮಿಷಕ್ಕೂ ಬಲಿಯಾಗದಂತೆ ನೋಡಿಕೊಂಡರು. 

loader