ಜಮೀರ್ ಮಣಿಸಲು ದೇವೇಗೌಡರ ರಣತಂತ್ರ : ಮತ ವಿಂಗಡಣೆಗೆ ಮಾಸ್ಟರ್ ಪ್ಲಾನ್

HD Deve Gowda Master Plan To Against Zameer
Highlights

ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಕೆ.ಆರ್. ಮಾರುಕಟ್ಟೆ ಸಮೀಪದ ಕೋಟೆ. ಈ ಪ್ರದೇಶದ ವ್ಯಾಪ್ತಿಯಲ್ಲಿದ್ದ ಬೆಂದಕಾಳೂರು, ಬೆಂಗಳೂರು ಆಗಿ ಬದಲಾಗುವ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಮೊಟ್ಟ ಮೊದಲ ಬಡಾವಣೆ ಚಾಮರಾಜಪೇಟೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಮೀರ್ ಮಣಿಸಲು ಜೆಡಿಎಸ್ ಮುಖಂಡ ದೇವೇಗೌಡರು ಮಾಡಿದ್ದಾರೆ ಮಾಸ್ಟರ್ ಪ್ಲಾನ್.

ಬೆಂಗಳೂರು: ಕೆಂಪೇಗೌಡ ರಸ್ತೆಯ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಕೆ.ಆರ್. ಮಾರುಕಟ್ಟೆ ಸಮೀಪದ ಕೋಟೆ. ಈ ಪ್ರದೇಶದ ವ್ಯಾಪ್ತಿಯಲ್ಲಿದ್ದ ಬೆಂದ ಕಾಳೂರು, ಬೆಂಗಳೂರು ಆಗಿ ಬದಲಾಗುವ ಪ್ರಕ್ರಿಯೆಯಲ್ಲಿ ಹುಟ್ಟಿಕೊಂಡ ಮೊಟ್ಟ ಮೊದಲ ಬಡಾವಣೆ ಚಾಮರಾಜಪೇಟೆ. 1894 ರಲ್ಲಿ ನಿರ್ಮಾಣವಾಗಿದ್ದ ಬಡಾವಣೆಯಿದು. ಅದೇ ಸಮಯದಲ್ಲಿ ಮೈಸೂರು ಮಹಾರಾಜ ಚಾಮರಾಜ ಒಡೆಯರ್ ನಿಧನರಾದರು. ಅವರ ಗೌರವಾರ್ಥ ಈ ಬಡಾವಣೆಗೆ ಚಾಮರಾಜೇಂದ್ರ ಪೇಟೆ ಎಂದು ಹೆಸರಿಡಲಾಯಿತು. ರಾಜ ಪ್ರಭುತ್ವ ಹೋಗಿ ಪ್ರಜಾಪ್ರಭುತ್ವ ಬಂದ ನಂತರ ಚಾಮರಾಜಪೇಟೆ ಹಾಗೂ ಸುತ್ತಲ ಪ್ರದೇಶಗಳು ಸೇರಿ ಚಾಮರಾಜಪೇಟೆ ವಿಧಾನಸಭೆ ಅಸ್ತಿತ್ವಕ್ಕೆ ಬಂತು.
ಐತಿಹಾಸಿಕವಾಗಿ ಮಹತ್ವ ಪಡೆದಿರುವ ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಟಿಪ್ಪು ಅರಮನೆ, ಬೆಂಗಳೂರು ಕೋಟೆ, ರಾಣಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ನಾನಾ ಐತಿಹಾಸಕ ಹಾಗೂ ಪಾರಂ ಪರಿಕ ತಾಣಗಳಿವೆ. ಮುಸ್ಲಿಮರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಒಕ್ಕಲಿಗರ, ಲಿಂಗಾಯತ, ಬ್ರಾಹ್ಮಣ, ಕುರುಬ, ಅಗಸ ಸೇರಿದಂತೆ ಇನ್ನೂ ಹಲವು ಸಮುದಾಯಗಳು,  ತಮಿಳು, ತೆಲುಗು ಸೇರಿದಂತೆ ಅನ್ಯ ಭಾಷಿಕರೂ ಇಲ್ಲಿದ್ದಾರೆ. 
ಕ್ಷೇತ್ರದಲ್ಲಿ 112728 ಪುರುಷ ಮತದಾರರು, 104150 ಮಹಿಳಾ ಮತದಾರರು, 18 ಜನ ಇತರರು ಸೇರಿ ಒಟ್ಟು 2,16, 896 ಮತದಾರರಿದ್ದು, ಮುಸ್ಲಿಂ ಮತ್ತು ದಲಿತ ಮತದಾರರು ನಿರ್ಣಾಯಕರಾಗಿದ್ದಾರೆ. ಇಂತಿಪ್ಪ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಈ ಬಾರಿಯ ಚುನಾವಣಾ ಕದನದಿಂದಾಗಿ ರಾಜ್ಯದ ಗಮನ ತನ್ನತ್ತ ಸೆಳೆದಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಈ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಭಾರೀ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಪ್ರಮುಖವಾದುದು. ಅದಕ್ಕೆ ಮುಖ್ಯ ಕಾರಣ- ಜೆಡಿಎಸ್ ನಾಯಕತ್ವದ ವಿರುದ್ಧ ಬಂಡೆದ್ದು ಕಾಂಗ್ರೆಸ್ ಸೇರಿದ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಜಮೀರ್ ಅವರನ್ನು ಹಣಿಯಲು ತಮ್ಮ ಎಲ್ಲಾ ತಂತ್ರಗಾರಿಕೆ ಪ್ರಯೋಗಕ್ಕೆ ಮುಂದಾಗಿರುವ ದೇವೇಗೌಡ ಕುಟುಂಬ. 3 ಬಾರಿ ಜೆಡಿಎಸ್‌ನಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಜಮೀರ್  ಅಹಮದ್ ಖಾನ್ ಈ ಬಾರಿ ಆ ಪಕ್ಷದ ವಿರುದ್ಧವೇ ಬಂಡಾಯ ಸಾರಿ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹಾಗಾಗಿ ಸ್ವ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಜಮೀರ್‌ಗೆ ಅನಿವಾರ್ಯ. ಜಮೀರ್ ಸೋಲಿಸಲು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರೇ ಪಣತೊಟ್ಟು ನಿಂತಿದ್ದಾರೆ.

ಜಮೀರ್ ಹೊರತಾಗಿಯೂ ಚಾಮರಾಜಪೇಟೆ ಜೆಡಿಎಸ್ ಭದ್ರಕೋಟೆಯೇ ಎಂಬುದನ್ನು ನಿರೂಪಿಸುವುದು ದೇವೇಗೌಡ ಕುಟುಂಬ ಪ್ರತಿಷ್ಠೆಯ ಪ್ರಶ್ನೆ. ಈ ಕ್ಷೇತ್ರದ ರಾಜಕೀಯ ಇತಿಹಾಸ ಗಮನಿಸಿದರೆ, ಈವರೆಗೂ ನಡೆದಿರುವ 14 ಚುನಾವಣೆಗಳಲ್ಲಿ ಕಾಂಗ್ರೆಸ್ 6 ಬಾರಿ, ಜೆಡಿಎಸ್ 3 ಬಾರಿ, ಜನತಾ ಪಕ್ಷ 3 ಬಾರಿ, ಬಿಜೆಪಿ 1 ಬಾರಿ ಗೆಲುವು ಸಾಧಿಸಿದೆ.

ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಕ್ಷೇತ್ರದ ಏಳು ವಾರ್ಡುಗಳ ಪೈಕಿ ಕಾಂಗ್ರೆಸ್ ಮೂರು, ಬಿಜೆಪಿ ಮತ್ತು ಜೆಡಿಎಸ್ ತಲಾ ಎರಡೆರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಮೊದಲು ಕಾಂಗ್ರೆಸ್ ಭದ್ರಕೋಟೆ
ಎನಿಸಿದ್ದ ಕ್ಷೇತ್ರ 2005 ರಲ್ಲಿ ಎಸ್.ಎಂ.ಕೃಷ್ಣ ರಾಜೀನಾಮೆಯಿಂದ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಪಾಲಾಯಿತು. ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಜಮೀರ್ ಅಹಮದ್ ಖಾನ್ ಕಾಂಗ್ರೆಸ್‌ನ  ಆರ್.ವಿ.ದೇವರಾಜ್ ವಿರುದ್ಧ 19943 ಮತಗಳನ್ನು ಪಡೆದು 3,678 ಮತಗಳ ಅಂತರದಿಂದ ಗೆಲುವು ಸಾಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ನಂತರ ೨೦೦೮ರ ಚುನಾವಣೆಯಲ್ಲಿ 43004 ಮತ ಪಡೆದು ಬಿಜೆಪಿಯ ಶ್ಯಾಮ ಸುಂದರ್ ವಿರುದ್ಧ ಹಾಗೂ 2013 ರ ಚುನಾವಣೆಯಲ್ಲಿ 56,339 ಮತ ಪಡೆದು ಕಾಂಗ್ರೆಸ್‌ನ ಜಿ.ಎ.ಬಾವಾ ವಿರುದ್ಧ ಜೆಡಿಎಸ್‌ನಿಂದಲೇ 3ನೇ ಅವಧಿಗೆ ವಿಧಾನಸಭೆ ಪ್ರವೇಸಿದ್ದರು.

3 ಬಾರಿ ಜೆಡಿಎಸ್ ನಿಂದಲೇ ಸ್ಪರ್ಧಿಸಿ ಜಮೀರ್ ಅಹಮದ್ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದ್ದರು. ಆದರೂ, ನಿರಾಶ್ರಿತರು, ಕೊಳಗೇರಿಗಳು, ಸಣ್ಣ ಉದ್ಯಮಗಳ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಕಿರಿದಾದ ರಸ್ತೆ, ಫುಟ್‌ಪಾತ್‌ಗಳ ಸಮಸ್ಯೆ, ಸಂಚಾರ ದಟ್ಟಣೆ, ಮೂಲಸೌಕರ್ಯ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆ ಜೀವಂತವಾಗಿವೆ.

ಜಮೀರ್-ಜೆಡಿಎಸ್ಸಾ?:  ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ಭಾರೀ ಕುತೂಹಲ ಮೂಡಿಸಿದೆ. ಮುಸ್ಲಿಂ ಸಮುದಾಯದ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಜಮೀರ್ ಅಹಮ್ಮದ್ ಖಾನ್ ಈ ಬಾರಿ ಜೆಡಿಎಸ್ ವಿರುದ್ಧ ಬಂಡಾಯ ಸಾರಿ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಜಮೀರ್ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದರಿಂದ ದೇವೇಗೌಡರ ಕುಟುಂಬ ಕಾಂಗ್ರೆಸ್ಸಿನಲ್ಲಿದ್ದ ಬಿ.ಕೆ. ಅಲ್ತಾಫ್ ಖಾನ್ ಅವರನ್ನು ಕರೆತಂದು ಜಮೀರ್ ವಿರುದ್ಧ ನಿಲ್ಲಿಸಿದ್ದಾರೆ.

ಹಾಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಜಮೀರಾ? ಜೆಡಿಎಸ್ಸಾ ಎಂಬ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಹಾಲಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಖಾನ್ 2008 ರ ಚುನಾವಣೆಯಲ್ಲಿ ಜಮೀರ್ ಅಹಮದ್ ಖಾನ್ ವಿರುದ್ಧ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 59 ಮತಗಳನ್ನು ಪಡೆದಿದ್ದು ಇತಿಹಾಸ. ಆದರೆ, ಪ್ರಸ್ತುತ ಕ್ಷೇತ್ರದ ಹಲವೆಡೆ ಒಂದಷ್ಟು ವರ್ಚಸ್ಸು ಬೆಳೆಸಿಕೊಂಡಿರುವ ಅವರು ತಮ್ಮದೇ ಆದ ಒಂದಷ್ಟು ಮುಸ್ಲಿಂ ಮತಗಳನ್ನು ಪಡೆಯಲಿದ್ದಾರೆ. ಜತೆಗೆ ಜಮೀರ್ ಸೋಲಿಸಿ ಸೇಡು ತೀರಿಸಿಕೊಳ್ಳಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೃಪಾಕಟಾಕ್ಷದಿಂದ ಜನರ ಆಶೀರ್ವಾದ ದೊರೆಯಬಹುದು.ಆದರೆ, ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಇಮ್ರಾನ್‌ಪಾಷಾ ಬಂಡೆದ್ದು ಇದೀಗ ಜಮೀರ್ ಖಾನ್ ಪರ ನಿಂತಿದ್ದಾರೆ.

loader