Asianet Suvarna News Asianet Suvarna News

ಹಾಸನದಲ್ಲಿ ಸಿಂಹಾಸನಕ್ಕಾಗಿ ಕೈ - ಜೆಡಿಎಸ್ ಜಿದ್ದಾಜಿದ್ದಿ

 ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹೋರಾಟ ಕಂಡುಬಂದಿದ್ದರೆ, ಹಾಸನ ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಮೂರೂ ಪಕ್ಷಗಳ ನಡುವೆ ಗೆಲುವಿಗಾಗಿ
ಸೆಣಸಾಟ ನಡೆಯುತ್ತಿದೆ. 2013 ರ ಚುನಾವಣೆಯಲ್ಲಿ ಜೆಡಿಎಸ್ 5, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಈ ಬಾರಿ ಹಾಸನ ಮತ್ತು ಸಕಲೇಶಪುರ ಕ್ಷೇತ್ರಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾ ಜಿದ್ದಿ ಜೋರಾಗಿದೆ.

Hassan Assembly Election

ಹಾಸನ :  ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹೋರಾಟ ಕಂಡುಬಂದಿದ್ದರೆ, ಹಾಸನ ಮತ್ತು ಸಕಲೇಶಪುರ ತಾಲೂಕುಗಳಲ್ಲಿ ಮೂರೂ ಪಕ್ಷಗಳ ನಡುವೆ ಗೆಲುವಿಗಾಗಿ
ಸೆಣಸಾಟ ನಡೆಯುತ್ತಿದೆ. 2013 ರ ಚುನಾವಣೆಯಲ್ಲಿ ಜೆಡಿಎಸ್ 5, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಈ ಬಾರಿ ಹಾಸನ ಮತ್ತು ಸಕಲೇಶಪುರ ಕ್ಷೇತ್ರಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾ ಜಿದ್ದಿ ಜೋರಾಗಿದೆ.

ಹೊಳೆನರಸೀಪುರ : ಮಾಜಿ ಸಚಿವ ಎಚ್.ಡಿ. ರೇವಣ್ಣ ಆರನೇ ಬಾರಿ ಜೆಡಿಎಸ್ ಅಭ್ಯರ್ಥಿ ಆಗಿದ್ದಾರೆ. ಪಕ್ಕದ ಚನ್ನರಾಯಪಟ್ಟಣ ತಾಲೂಕಿನವರಾದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡ ಕಾಂಗ್ರೆಸ್ ಅಭ್ಯರ್ಥಿ. ಆರ್ಥಿಕವಾಗಿ ಪ್ರಬಲರಾಗಿರುವ ಹಿನ್ನೆಲೆಯಲ್ಲಿ ಮಂಜೇಗೌಡರು, ರೇವಣ್ಣನವರಿಗೆ ಸ್ಪರ್ಧೆ ಒಡ್ಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಒಕ್ಕಲಿಗ ಸಮುದಾಯದ ಜನಸಂಖ್ಯೆ ಹೆಚ್ಚಿರುವ ಈ ಕ್ಷೇತ್ರದಲ್ಲಿ ಒಕ್ಕಲಿಗರೇ
ನಿರ್ಣಾಯಕರು. ರೇವಣ್ಣನವರು ತಮ್ಮ ಪಕ್ಷ ರಾಜ್ಯದಲ್ಲಿ 10 ವರ್ಷಗಳಿಂದ ಅಧಿಕಾರದಲ್ಲಿ ಇಲ್ಲದಿದ್ದರೂ ಕ್ಷೇತ್ರ ಅಭಿವೃದ್ಧಿಗೆ ಗಮನಹರಿಸುವುದನ್ನು ಕಡಿಮೆ ಮಾಡಿಲ್ಲ. ಜಿಲ್ಲೆಯ ಒಕ್ಕಲಿಗರ ಸಂಘದ ನಿರ್ದೇಶಕರೂ ಆಗಿರುವ
ಮಂಜೇಗೌಡರು, ಚುನಾವಣೆಯಲ್ಲಿ ತಮಗೆ ಬಲ್ಲ ಎಲ್ಲಾ ತಂತ್ರ ಮತ್ತು ಶಕ್ತಿಯನ್ನು ಪ್ರಯೋಗ ಮಾಡಬಹುದು. ಹೀಗಾಗಿ ಪೈಪೋಟಿ ಇದೆ.


ಅರಸೀಕೆರೆ: ಈ ಕ್ಷೇತ್ರದಿಂದ ಮಾಜಿ ಸಚಿವ ವಿ. ಸೋಮಣ್ಣ ಅಥವಾ ಅವರ ಪುತ್ರ ಡಾ. ಅರುಣ್ ಅಖಾಡಕ್ಕೆ ಇಳಿದಿದ್ದರೆ ಖದರ್ ಬೇರೆ ಆಗಿರುತ್ತಿತ್ತು. ಆದರೆ ಈಗ ಬಿ.ಎಸ್. ಯಡಿಯೂರಪ್ಪ ಅವರ ಬೀಗರಾದ ಮರಿಸ್ವಾಮಿ ಅವರಿಗೆ ಟಿಕೆಟ್
ನೀಡಲಾಗಿದೆ. ಇವರಿಗೆ ಕ್ಷೇತ್ರದ ಪರಿಚಯ ಸಂಪೂರ್ಣ ತಿಳಿದಿಲ್ಲ. ಈ ಕಾರಣದಿಂದ ಜೆಡಿಎಸ್‌ಗೆ ಕಾಂಗ್ರೆಸ್ ಪೈಪೋಟಿ ನೀಡಬಹುದು. ಹಾಲಿ ಶಾಸಕ ಕೆ.ಎಂ. ಶಿವಲಿಂಗೇಗೌಡರೇ ಜೆಡಿಎಸ್ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಜಿ.ಬಿ. ಶಶಿಧರ್ ಹುರಿಯಾಳು. ಇವರು ಪಕ್ಷದಲ್ಲಿ ಹೇಳಿಕೊಳ್ಳುವಷ್ಟೇನೂ ಗುರುತಿಸಿಕೊಂಡಿಲ್ಲ. ಆದರೆ ಉತ್ತಮ ವ್ಯಕ್ತಿ ಎಂಬ ಅಭಿಪ್ರಾಯವಿದೆ. ಶಿವಲಿಂಗೇಗೌಡರು, ಕ್ಷೇತ್ರದಲ್ಲಿ ಕುಡಿಯುವ ನೀರು ಸೇರಿದಂತೆ ಆನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ ಗೌಡರನ್ನು ಸೋಲಿಸುವುದು ಸುಲಭದ ಮಾತಾಗದು. 

ಸಕಲೇಶಪುರ : ಜೆಡಿಎಸ್‌ನಿಂದ ಹಾಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರೇ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಕನಕಪುರ ತಾಲೂಕು ಹಾರೋಹಳ್ಳಿಯವರಾದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಕಣಕ್ಕಿಳಿದಿದ್ದಾರೆ. ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಟಿಕೆಟ್ ವಂಚಿತರು ಅಸಮಾಧಾನಗೊಂಡಿದ್ದು, ಅವರನ್ನು ಸಮಾಧಾನಪಡಿಸುವುದು ಸಿದ್ದಯ್ಯಗೆ ಸವಾಲಾಗಿದೆ. ಇಲ್ಲಿ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ.
ಸೋಮಶೇಖರ್ ಅವರು ಬೋವಿ ಜನಾಂಗಕ್ಕೆ ಸೇರಿದ ಸ್ಪಶ್ಯರು. ಆದರೆ ಈ ಸಮುದಾಯದವರ ಸಂಖ್ಯೆ ಹೆಚ್ಚೇನೂ ಇಲ್ಲ. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ದಲಿತ ಬಲಗೈ ಸಮುದಾಯದವರು (ಅಸ್ಪಶ್ಯರು).
ಬಲಗೈ ಸಮುದಾಯದ ಮತದಾರರು ೬೨ ಸಾವಿರದಷ್ಟಿದ್ದಾರೆ. ಎರಡನೇ ಸ್ಥಾನದಲ್ಲಿ ಒಕ್ಕಲಿಗರು. ಇದು ಅವರಿಗೆ ವರದಾನವಾಗಬಹುದು.

ಅರಕಲಗೂಡು : ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಸಚಿವ ಎ. ಮಂಜು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಜೆಡಿಎಸ್ಸಿಂದ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಹುರಿಯಾಳು. ಬಿಜೆಪಿಯಿಂದ ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾರಮೇಶ್ ಅಭ್ಯರ್ಥಿ. ಇವರು ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ಗಳಿಸಿ ಅಚ್ಚರಿ ಮೂಡಿಸಿದ್ದರು. ಇದು ಪರೋಕ್ಷವಾಗಿ ರಾಮಸ್ವಾಮಿ ಸೋಲಿಗೆ ಮತ್ತು ಮಂಜು
ಗೆಲುವಿಗೂ ಕಾರಣವಾಗಿತ್ತು. ಸದ್ಯದ ಪರಿಸ್ಥಿತಿ ಅವಲೋಕಿಸಿದರೇ ಸಚಿವ ಮಂಜು ಅವರಿಗೆ ಈ ಕ್ಷೇತ್ರ ಸುಲಭದ ತುತ್ತೇನು ಅಲ್ಲ. ಕುರುಬ ಸಂಘದ ಅನಿಲ್ ಕುಮಾರ್, ಕೆಲ ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಇಲ್ಲಿ ಒಕ್ಕಲಿಗರೇ ಹೆಚ್ಚಿದ್ದರೂ ಹಳ್ಳಿಮೈಸೂರು ಹೋಬಳಿಯಲ್ಲಿ ಕುರುಬ ಮತ್ತು ವೀರಶೈವರು ಗಮನಾರ್ಹವಾಗಿದ್ದಾರೆ. ಇವೆರಡು ಜನಾಂಗದವರು ಯಾವ ಕಡೆ ಒಲಿಯುತ್ತಾರೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. 


ಹಾಸನ :ಹಾಲಿ ಶಾಸಕ ಎಚ್.ಎಸ್. ಪ್ರಕಾಶ್ ಅವರೇ ಜೆಡಿಎಸ್ ಅಭ್ಯರ್ಥಿ. ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಎಚ್.ಕೆ. ಮಹೇಶ್ ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿ. ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತಂಗೌಡ, ಜೆಡಿಎಸ್‌ಗೆ ತೀವ್ರ ಹೋರಾಟ ನೀಡುವ ಸಾಧ್ಯತೆಗಳಿವೆ. ಹಾಗಾಗಿ ಪ್ರಥಮ ಬಾರಿಗೆ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಹಾಸನ ನಗರದಲ್ಲಿ 1.40 ಲಕ್ಷ ಮತಗಳಿದ್ದು ನಗರದ ಹೊರಗಡೆ ಇರುವ ಗ್ರಾಮೀಣ ಭಾಗದಲ್ಲಿ 80 ರಿಂದ 90 ಸಾವಿರ ಮತಗಳಿವೆ. ಗ್ರಾಮೀಣ ಭಾಗದ ಜೆಡಿಎಸ್ ಓಟುಗಳಿಗೆ ಬಿಜೆಪಿ ಅಭ್ಯರ್ಥಿ ಕೈ ಹಾಕಿದ್ದಾರೆ. ಕಾಂಗ್ರೆಸ್‌ಗೆ ಎಂದಿನಂತೆ ಸಾಂಪ್ರದಾಯಿಕ ಮತಗಳಿವೆ. ಜೆಡಿಎಸ್‌ಗೆ ಬಿಜೆಪಿ ಸ್ಪರ್ಧೆ ಒಡ್ಡುತ್ತಿದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಜೆಡಿಎಸ್ ಅಭ್ಯರ್ಥಿಗೆ ಈ ಬಾರಿ ಗೆಲವು ಸುಲಭ ತುತ್ತಲ್ಲ. ನಗರದ ಒಳಗಿರುವ ಮುಸ್ಲಿಂ ಓಟುಗಳು ಜೆಡಿಎಸ್‌ನತ್ತ ವಾಲುವ ಸಂಭವ ಅಧಿಕವಾಗಿದೆ. ಗ್ರಾಮಾಂತರ ಪ್ರದೇಶದ ಒಕ್ಕಲಿಗರ ನಡೆ ಮಹತ್ವದ್ದಾಗಿದೆ.


ಬೇಲೂರು :ಹಾಲಿ ಶಾಸಕರಾಗಿದ್ದ ವೈ.ಎನ್. ರುದ್ರೇಶ್ ಗೌಡ ನಿಧನರಾದ ಕಾರಣ ಅವರ ಪತ್ನಿ ಕೀರ್ತನಾ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ವೀರಶೈವ ಸಮುದಾಯಕ್ಕೆ ಸೇರಿದ ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್. ಲಿಂಗೇಶ್ ಇಲ್ಲಿ ಆ ಪಕ್ಷದ ಅಭ್ಯರ್ಥಿ. ಲಿಂಗೇಶ್ ಕಳೆದ ಬಾರಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದರು. ಅವರಿಗಿದ್ದ ಏಕಮಾತ್ರ ಪುತ್ರ ತೀರಿಕೊಂಡಿದ್ದಾರೆ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಅವರ ಪತಿ ಕೂಡ ನಿಧನರಾಗಿದ್ದಾರೆ. ಇಬ್ಬರಿಗೂ ಅನು
ಕಂಪದ ಅಲೆ ಇದೆ. ಹುಲ್ಲಹಳ್ಳಿ ಸುರೇಶ್ ಅವರು ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿ ಪೈಪೋಟಿ ಒಡ್ಡಬಹುದು ಎನ್ನಲಾಗುತ್ತಿದ್ದರೂ ಅಂತಿಮವಾಗಿ ಜೆಡಿಎಸ್- ಕಾಂಗ್ರೆಸ್ ನಡು ವೆಯೇ ಹೋರಾಟ ನಡೆಯಬಹುದು. ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಒಕ್ಕಲಿಗರು. ಜೆಡಿಎಸ್ ಅಭ್ಯರ್ಥಿ ವೀರಶೈವ ಸಮಾಜದವರು. ಒಕ್ಕಲಿಗರ ಮತಗಳು ವಿಭಜನೆಯಾಗಿ, ವೀರಶೈವ ಮತಗಳನ್ನು ಲಿಂಗೇಶ್ ಪಡೆದರೆ ಜೆಡಿಎಸ್ ಹಾದಿಗೆ ಕಷ್ಟವಾಗದು. 

ಶ್ರವಣಬೆಳಗೊಳ : ಹಾಲಿ ಶಾಸಕ ಸಿ.ಎನ್. ಬಾಲಕೃಷ್ಣ ಅವರೇ ಜೆಡಿಎಸ್ ಅಭ್ಯರ್ಥಿ.ಬಿಜೆಪಿಯಿಂದ ಶಿವನಂಜೇಗೌಡ ಸ್ಪರ್ಧಿಸಿದ್ದಾರಾದರೂ, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ನೇರ ಫೈಟ್. ಕಳೆದ ಬಾರಿ ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡರೇ ಈ ಬಾರಿಯೂ ಅಭ್ಯರ್ಥಿ ಆಗಿದ್ದಾರೆ. ಕಾಂಗ್ರೆಸ್ ಮುಖಂಡರಾದ ಜಿತೇನಹಳ್ಳಿ ರಾಮಚಂದ್ರ, ಶಂಕರ್, ಮೇಲ್ಮನೆ ಸದಸ್ಯ ಎಂ.ಎ. ಗೋಪಾಲಸ್ವಾಮಿ ಮತ್ತಿತರರು ತಮ್ಮ ಪಕ್ಷದ ಅಭ್ಯ ರ್ಥಿಯ ಪರ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್‌ನ ಬಾಲಕೃಷ್ಣ ಕೂಡ ಹಿಂದೆ ಬಿದ್ದಿಲ್ಲ. ಐದು ವರ್ಷಗಳಿಂದ ಸುಮ್ಮನೆ ಕುಳಿತಿಲ್ಲ. ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಜ್ಞಾವಂತ ಮತದಾರರು ಹೆಚ್ಚು. ಹಣಕ್ಕಿಂತ ಹೆಚ್ಚಾಗಿ ತಾವು ಒಪ್ಪಿ ಅಪ್ಪಿರುವ ಪಕ್ಷಕ್ಕೆ ಬದ್ಧತೆಯನ್ನು ಮೆರೆಯುತ್ತಾರೆ. ಈ ಬಾರಿ ಕಾಂಗ್ರೆಸ್ ಹೊಸ ಮುಖವನ್ನು ಪರಿಚಯಿಸಿದ್ದರೆ ಸೂಕ್ತವಾಗುತ್ತಿತ್ತು ಎಂದು ಹೇಳಲಾಗುತ್ತಿದೆಯಾದರೂ ಪುಟ್ಟೇಗೌಡರೂ ಕ್ಷೇತ್ರವನ್ನು ಬಲ್ಲವರು. 

Follow Us:
Download App:
  • android
  • ios