ಹಾವೇರಿ : ಕಾಂಗ್ರೆಸ್ - ಬಿಜೆಪಿಗೆ ಕಾಲೆಳೆಯುವವರ ಕಾಟವೇ ಅಧಿಕ

Harvey Constituency Fight
Highlights

ಏಲಕ್ಕಿ ಕಂಪಿನ ನಾಡು ಹಾವೇರಿಯಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ಕೂಡ ಕೆಲ ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಬಂಡಾಯದ ಬಿಸಿಯೂ ತಗಲಿದ್ದು, ಇದರ ಲಾಭ ಮತ್ತು ನಷ್ಟದ ಲೆಕ್ಕಾಚಾರ ಶುರುವಾಗಿದೆ. 

ನಾರಾಯಣ ಹೆಗಡೆ
ಏಲಕ್ಕಿ ಕಂಪಿನ ನಾಡಿನಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ಕೂಡ ಕೆಲ ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಗೆ ಬಂಡಾಯದ ಬಿಸಿಯೂ ತಗಲಿದ್ದು, ಇದರ ಲಾಭ ಮತ್ತು ನಷ್ಟದ ಲೆಕ್ಕಾಚಾರ ಶುರುವಾಗಿದೆ. 2008ರಲ್ಲಿ ಬಿಜೆಪಿ 5 ಸ್ಥಾನ ಗೆದ್ದಿದ್ದರೆ, ಕಳೆದ ಬಾರಿ ಕಾಂಗ್ರೆಸ್ 4 ಕಡೆ ಜಯಭೇರಿ ಬಾರಿಸಿತ್ತು. ಈ ಬಾರಿ ಯಾವ ಪಕ್ಷಕ್ಕೆ ಎಷ್ಟು ಸೀಟು ಒಲಿಯುತ್ತವೆಯೋ ನೋಡಬೇಕು. 


ಹಾವೇರಿ
ಎಸ್ಸಿ ಮೀಸಲು ಕ್ಷೇತ್ರ ಇದಾಗಿದ್ದು, ಸಚಿವ ರುದ್ರಪ್ಪ ಲಮಾಣಿ ಮತ್ತೊಮ್ಮೆ ಕಾಂಗ್ರೆಸ್ಸಿನಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿ ಪೈಪೋಟಿ ನೀಡಿದ್ದ ನೆಹರು ಓಲೇಕಾರ ಬಿಜೆಪಿ ಅಭ್ಯರ್ಥಿ. ಜೆಡಿಎಸ್‌ನಿಂದ ಡಾ| ಸಂಜಯ ಡಾಂಗೆ ಹುರಿಯಾಳು. ಕ್ಷೇತ್ರದಲ್ಲಿ ಸದ್ಯ ಲಮಾಣಿ-ಓಲೇಕಾರ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಜೆಡಿಎಸ್ ಸಂಘಟನೆ ಅಷ್ಟಾಗಿ ಇಲ್ಲದಿರುವುದರಿಂದ 
ಸಂಜಯ ಡಾಂಗೆ ತೀವ್ರ ಹೋರಾಟ ನಡೆಸುವಂತಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರಾಗಿ ಕೈಗೊಂಡ ಅಭಿವೃದ್ಧಿ ಕೆಲಸಗಳು ಹಾಗೂ ಅಹಿಂದ ಮತಗಳು ಲಮಾಣಿಗೆ ಶ್ರೀರಕ್ಷೆ. ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಡಜನ್ ಆಕಾಂಕ್ಷಿಗಳಿದ್ದರು. ಓಲೇಕಾರ ಟಿಕೆಟ್‌ಗೆ ಬಿಜೆಪಿ ಜಿಲ್ಲಾಧ್ಯಕ್ಷರೇ ವಿರೋಧ ವ್ಯಕ್ತಪಡಿಸಿದ್ದರು. ಈಗ ಒಂದಾಗಿದ್ದಾರೆ. ಬಿಜೆಪಿ ಭಿನ್ನಮತ ಕೆಲಸ ಮಾಡಿದರೆ ಓಲೇಕಾರ ಬೆವರು ಹರಿಸಬೇಕಾಗುತ್ತದೆ. ಓಲೇಕಾರ 
ದಲಿತ ಬಲಗೈ ಪಂಗಡದವರು. ಎಡಗೈ ಪಂಗಡ ಬೆಂಬಲ ಸಿಗುತ್ತಾ ಎಂಬುದು ಪ್ರಶ್ನೆ. 


ಶಿಗ್ಗಾಂವಿ
ಬಸವರಾಜ ಬೊಮ್ಮಾಯಿ ಅವರು ಹ್ಯಾಟ್ರಿಕ್ ಗೆಲುವು ಪಡೆದು ಬಿಜೆಪಿ ಬಾವುಟ ಹಾರಿಸುವ ತವಕದಲ್ಲಿದ್ದಾರೆ. ಮೂರು ಬಾರಿ ಪರಾಭವಗೊಂಡಿದ್ದರೂ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸೈಯದ್ ಅಜ್ಜಂಪೀರ್  ಖಾದ್ರಿ ಯಶಸ್ವಿಯಾಗಿದ್ದಾರೆ. ಕ್ಷೇತ್ರದಲ್ಲಿ ಬಿ ಪಿಗೆ ಬಂಡಾಯದ ಬಿಸಿಯೂ ಇದೆ. ಸೋಮಣ್ಣ ಬೇವಿನಮರದ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ಅಶೋಕ ಬೇವಿನಮರದ ಪೈಪೋಟಿ 
ನಡೆಸುತ್ತಿದ್ದಾರೆ. ಮುಸ್ಲಿಂ ಹಾಗೂ ಪಂಚಮಸಾಲಿ ಮತಗಳು ಕ್ಷೇತ್ರದಲ್ಲಿ ಹೆಚ್ಚಿದ್ದು, ಜಾತಿ ಸಮೀಕರಣದ ಲೆಕ್ಕಾಚಾರ ನಡೆದಿದೆ. ಸೋಮಣ್ಣ ಬೇವಿನಮರದ ಬಂಡಾಯವಾಗಿ ಸ್ಪರ್ಧಿಸಿದರೂ ಇದರ ಪರಿಣಾಮ  ಬೊಮ್ಮಾಯಿಗೆ ಹೆಚ್ಚಾಗಿ ಆಗುತ್ತಿಲ್ಲ. ಆದರೆ, ಮುಸ್ಲಿಂ ಮತಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ವಿಭಜನೆಯಾದರೆ ಬೊಮ್ಮಾಯಿಗೆ ಅನುಕೂಲ. ಮಂಜುನಾಥ ಕುನ್ನೂರ ಸೇರ್ಪಡೆ ಬಿಜೆಪಿಗೆ ಬಲ ತಂದಿದೆ. ಖಾದ್ರಿ ಅನುಕಂಪದ ಮತಕ್ಕೆ ಪ್ರಯತ್ನಿಸುತ್ತಿದ್ದಾರೆ.


ಹಿರೆಕೆರೂರು
ಕಳೆದ ಬಾರಿ ಕೆಜೆಪಿಯಿಂದ ಗೆದ್ದಿದ್ದ ಶಾಸಕ ಯು.ಬಿ. ಬಣಕಾರ ಈ ಸಲ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಳೆದ ಸಲ ಅಲ್ಪ ಮತಗಳಿಂದ ಪರಾಜಿತರಾಗಿದ್ದ ‘ಕೌರವ’ ಸಿನಿಮಾ ಖ್ಯಾತಿಯ ಬಿ.ಸಿ. ಪಾಟೀಲ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಜೆಡಿಎಸ್‌ನಿಂದ ಸಿದ್ದಪ್ಪ ಗುಡದಪ್ಪನವರ ಅಖಾಡಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಹಣಾಹಣಿ ಇದೆ. ಜೆಡಿಎಸ್‌ಗೆ ಸಂಘಟನೆ ಬಲವಿಲ್ಲ. ಪರಾಭವಗೊಂಡಿದ್ದರೂ ಹಲವಾರು ನೀರಾವರಿ ಯೋಜನೆಗಳನ್ನು ತಂದಿರುವ ಬಿ.ಸಿ. ಪಾಟೀಲ್, ಅದರ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಬಣಕಾರ ಅವರಿಗೆ ಅವರ ಸರಳತೆ ಹಾಗೂ 
ಕೆಲಸಗಳೇ ಶ್ರೀರಕ್ಷೆ. ಬಣಕಾರ ಹಾಗೂ ಬಿ.ಸಿ. ಪಾಟೀಲ ಇಬ್ಬರೂ ಸಮಬಲದ ಪೈಪೋಟಿ ನೀಡುತ್ತಿದ್ದಾರೆ. ಬಿ.ಎಚ್. ಬನ್ನಿಕೋಡ ಕಾಂಗ್ರೆಸ್ ಸೇರಿರುವುದು ಪಾಟೀಲರಿಗೆ ಬಲ ತಂದಿದೆ. ಕ್ಷೇತ್ರದಲ್ಲಿ ಸಾದರ ಲಿಂಗಾಯತ ಮತಗಳು ಹೆಚ್ಚಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಅದೇ ಸಮುದಾಯದವರು.

ರಾಣೆಬೆನ್ನೂರು
ವಿಧಾನಸಭೆ ಸ್ಪೀಕರ್ ಕೆ.ಬಿ. ಕೋಳಿವಾಡ ಅವರು ಕಾಂಗ್ರೆಸ್ ಟಿಕೆಟ್ ಪಡೆದು 10ನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಹತ್ತಕ್ಕೂ ಹೆಚ್ಚು ಬಿಜೆಪಿ ಆಕಾಂಕ್ಷಿಗಳ ಪೈಕಿ ಡಾ. ಬಸವರಾಜ ಕೇಲಗಾರ ಟಿಕೆಟ್ ಗಿಟ್ಟಿಸಿಕೊಂಡು ಪ್ರಚಾರ ನಡೆಸುತ್ತಿದ್ದಾರೆ. ಕೋಳಿವಾಡರ ಸಂಬಂಧಿ ಶ್ರೀಪಾದ ಸಾವುಕಾರ ಜೆಡಿಎಸ್‌ನಿಂದ ಕಣಕ್ಕಿಳಿದು ಪೈಪೋಟಿ ನೀಡುತ್ತಿದ್ದಾರೆ. ಕಳೆದ ಬಾರಿ ಪಕ್ಷೇತರರಾಗಿ ಸ್ಪರ್ಧಿಸಿ ಕೋಳಿವಾಡರಿಗೆ ನೇರ ಸ್ಪರ್ಧೆಯೊಡ್ಡಿದ್ದ ಬಿಬಿಎಂಪಿ ಮಾಜಿ ಉಪಮೇಯರ್ ಆರ್. ಶಂಕರ್ ಈ ಸಲ ಕೆಪಿಜೆಪಿಯಿಂದ ಅಭ್ಯರ್ಥಿ. ಇಲ್ಲಿ  ಬಿಜೆಪಿ ಟಿಕೆಟ್ ನೀಡುವಲ್ಲಿ ಎಡವಿದಂತೆ ಕಾಣುತ್ತಿದೆ. ಆದ್ದರಿಂದ ಕೋಳಿವಾಡ ಮತ್ತು 
ಆರ್. ಶಂಕರ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಕುರುಬ ಸಮುದಾಯದ ಮತಗಳ ಮೇಲೆ ಶಂಕರ್ ಕಣ್ಣಿಟ್ಟು ಪ್ರಚಾರ ನಡೆಸುತ್ತಿದ್ದಾರೆ. ರುಕ್ಮಿಣಿ ಸಾವುಕಾರ ಪಕ್ಷೇತರರಾಗಿ ಕಣಕ್ಕಿಳಿದಿದ್ದು, ಕಾಂಗ್ರೆಸ್‌ಗೆ ಹೊಡೆತ ಬೀಳುವ ಸಾಧ್ಯತೆಯಿದೆ. ಬಿಜೆಪಿ ಬಂಡುಕೋರರಾಗಿ ವೀರನಗೌಡ ಪಾಟೀಲ (ಪಕ್ಷೇತರ) ಸ್ಪರ್ಧಿಸಿದ್ದಾರೆ. 

ಹಾನಗಲ್
ಮಾಜಿ ಸಚಿವ ಸಿ.ಎಂ. ಉದಾಸಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಈ ಸಲ ಕಾಂಗ್ರೆಸ್ ನಿಂದ ಮೇಲ್ಮನೆ ಸದಸ್ಯ ಶ್ರೀನಿವಾಸ ಮಾನೆ ಕಣಕ್ಕಿಳಿದಿದ್ದಾರೆ. ಟಿಕೆಟ್ ತಪ್ಪಿದ ಕಾರಣ  ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ಸಿನ ಹಾಲಿ ಶಾಸಕ ಮನೋಹರ ತಹಶೀಲ್ದಾರ್ ಕಾಂಗ್ರೆಸ್ ಅಭ್ಯರ್ಥಿಯೊಂದಿಗೆ ಕೈಜೋಡಿಸಿದ್ದಾರೆ. ಜೆಡಿಎಸ್‌ನಿಂದ ಪಿ.ಎಸ್. ಅಯೂಬ್ (ಬೊಮ್ಮನಹಳ್ಳಿ ಬಾಬು) ಸ್ಪರ್ಧಿಸಿದ್ದಾರೆ. ೪ ದಶಕಗಳಿಂದ
ಉದಾಸಿ ಹಾಗೂ ತಹಶೀಲ್ದಾರ್ ನಡುವೆ ನಡೆಯುತ್ತಿದ್ದ ಸ್ಪರ್ಧೆ ಈ ಬಾರಿ ಬದಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಹೊರಗಿನವರು ಹಾಗೂ ಜೆಡಿಎಸ್ ಅಭ್ಯರ್ಥಿಗಳು ಹೊಸ ಮುಖ ಗಳಾಗಿರುವುದರಿಂದ ಉದಾಸಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ. ಜೆಡಿಎಸ್ ಅಭ್ಯರ್ಥಿ ಮುಸ್ಲಿಂ. ಮುಸ್ಲಿಂ ಮತ ವಿಭಜನೆಯಾದರೆ ಕಾಂಗ್ರೆಸ್‌ಗೆ ನಷ್ಟ ಎಂಬ ಲೆಕ್ಕಾ ಚಾರ ನಡೆದಿದೆ. ಇದೇ ಅಂಶ ಉದಾಸಿ ಅವರಿಗೆ ವರವಾಗುವ ಹಾಗೂ ಗಂಗಾಮತಸ್ಥ ಚಂದ್ರಪ್ಪ ಜಾಲಗಾರ ಪಕ್ಷೇತರರಾಗಿದ್ದು ಕಾಂಗ್ರೆಸ್‌ಗೆ ಹಿನ್ನಡೆ ತರುವ ಸಾಧ್ಯತೆ ಇದೆ. 


ಬ್ಯಾಡಗಿ
ಕಳೆದ ಸಲ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿರೂಪಾಕ್ಷಪ್ಪ ಬಳ್ಳಾರಿ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಹಾಲಿ ಶಾಸಕ ಬಸವರಾಜ ಶಿವಣ್ಣನವರ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದು, ಮತ್ತೊಬ್ಬ ಮುಖಂಡ ಎಸ್.ಆರ್. ಪಾಟೀಲ ಟಿಕೆಟ್ ಪಡೆದು ಪ್ರಚಾರ ನಡೆಸುತ್ತಿದ್ದಾರೆ. ಕುರುಬ ಸಮುದಾಯದ ಮತಗಳು ಹೆಚ್ಚಿರುವ ಬ್ಯಾಡಗಿ ಕ್ಷೇತ್ರದಲ್ಲಿ ಶಿವಣ್ಣನವರಗೆ ಟಿಕೆಟ್ ಕೈತಪ್ಪಿರುವುದು ಕಾಂಗ್ರೆಸ್‌ಗೆ ಮುಳುವಾಗುವ
ಸಾಧ್ಯತೆಯಿದೆ. ಜೆಡಿಎಸ್ ಒಪ್ಪಂದದಂತೆ ಬಿಎಸ್ಪಿಯಿಂದ ಶಿವಬಸಪ್ಪ ಬಾಗಮ್ಮನವರ ಸ್ಪರ್ಧಿಸುತ್ತಿದ್ದಾರೆ. ವರ್ತಕರು ಕಾಂಗ್ರೆಸ್ ಕಡೆ ವಾಲಿದ್ದರೆ, ಗ್ರಾಮೀಣದಲ್ಲಿ ಬಿಜೆಪಿ ಪರ ಅಲೆಯಿದೆ. ಪಂಚಮಸಾಲಿ ಮತಗಳು ಹೆಚ್ಚಿರುವುದು ಅದೇ ಸಮುದಾಯದ ವಿರೂಪಾಕ್ಷಪ್ಪ ಬಳ್ಳಾರಿಗೆ ಅನುಕೂಲಕರವಾಗಿದೆ. ಆದರೆ, ಎಸ್ಸಿ, ಎಸ್ಟಿ ಮತಗಳ ಸಂಖ್ಯೆ ಕ್ಷೇತ್ರದಲ್ಲಿ ಹೆಚ್ಚಿರುವುದರಿಂದ ಅವರು ಕಾಂಗ್ರೆಸ್ ಕೈ ಹಿಡಿಯುವ  ಲೆಕ್ಕಾಚಾರವಿದೆ. ಟಿಕೆಟ್ ವಂಚಿತ ಶಿವಣ್ಣನವರ ನಡೆ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ. 

loader